ಬೆಂಗಳೂರು: ಅರಣ್ಯಭೂಮಿ ಒತ್ತುವರಿ ಮಾಡಿದ ಪ್ರಕರಣದ ಆರೋಪ ಎದುರಿಸುತ್ತಿರುವ ಮತ್ತು ವನ್ಯಜೀವಿಗಳ ಶಾರ್ಪ್‌ ಶೂಟರ್‌ ಆಗಿರುವ ಗ್ಯಾನ್‌ಚಂದ್ ಸುಶೀಲ್ ಅವರನ್ನು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯದ ಅರಣ್ಯದ ಸಂಪತ್ತು ಮತ್ತು ವನ್ಯಜೀವಿ ಸಂಕುಲವನ್ನು ಉಳಿಸಿ, ಬೆಳೆಸಲು ಸರ್ಕಾರಕ್ಕೆ ಸಲಹೆ– ಸೂಚನೆಗಳನ್ನು ನೀಡಬೇಕಾದ ಜಾಗದಲ್ಲಿ ‘ಕುರಿಗಳನ್ನು ಕಾಯಲು ತೋಳ’ವನ್ನು ನೇಮಿಸಿದ ಹಾಗೆ ಆಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ವನ್ಯಜೀವಿ ಮಂಡಳಿಗೆ ಇತ್ತೀಚೆಗಷ್ಟೇ ಸದಸ್ಯರನ್ನು ನೇಮಕ ಮಾಡಲಾಗಿತ್ತು. ಈ ಪಟ್ಟಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಸಚಿವರು ಕೊಟ್ಟ ಹೆಸರುಗಳೂ ಸೇರ್ಪಡೆ ಆಗಲಿಲ್ಲ. ನೇರ ಮುಖ್ಯಮಂತ್ರಿ ಕಚೇರಿಯಿಂದಲೇ ಪಟ್ಟಿಯನ್ನು ಸಿದ್ಧಪಡಿಸಿ ಒಪ್ಪಿಗೆ ಪಡೆಯಲಾಗಿದೆ. ಆ ಪೈಕಿ ಗ್ಯಾನ್‌ಚಂದ್ ಸುಶೀಲ್‌ ಹೆಸರು ಕೂಡಾ ಒಂದು ಎಂದು ಅವರು ಹೇಳಿದರು. ‘ಅರಣ್ಯ ಇಲಾಖೆಯ ಕೋರಿಕೆ ಮೇರೆಗೆ ಸುಶೀಲ್ ಅವರು ಅರಣ್ಯಗಳಲ್ಲಿ ಮಾನವ ಭಕ್ಷಕ ಹುಲಿ, ಚಿರತೆಗಳನ್ನು ಕೊಂದಿದ್ದಾರೆ. ಆ ಕ್ಷೇತ್ರದಲ್ಲಿ ಅವರಿಗೆ ಪರಿಣತಿ ಇರುವುದರಿಂದ ಆ ಕೆಲಸಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಹಾಗೆಂದ ಮಾತ್ರಕ್ಕೆ ವನ್ಯಜೀವಿ ಮಂಡಳಿಗೇ ಪ್ರವೇಶ ನೀಡಬೇಕೆ’ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ. 2009 ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್‌ ಅವರ ಮೇಲೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲು ಮಾಡಿತ್ತು ಮತ್ತು ಒತ್ತುವರಿ ಮಾಡಿದ ಭೂಮಿಯನ್ನು ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಶೀಲ್ ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು. ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೆಳಹಂತದ ಅರಣ್ಯ ಅಧಿಕಾರಿಗಳಿಗೆ ಅಧಿಕಾರವಿಲ್ಲ. ಹೀಗಾಗಿ, ಎಫ್‌ಐಆರ್‌ ರದ್ದು ಮಾಡಬೇಕು ಎಂದು ರಿಟ್‌ ಅರ್ಜಿಯಲ್ಲಿ ಕೋರಿದ್ದರು. ರಿಟ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಅರಣ್ಯ ಕಾಯ್ದೆಯ ಸೆಕ್ಷನ್‌2(6) ರಲ್ಲಿ ‘ಅರಣ್ಯ ಅಧಿಕಾರಿಗಳು’ ಯಾರು ಎಂಬುದನ್ನು  ಸ್ಪಷ್ಟವಾಗಿ ತಿಳಿಸಿದೆ. ಅರಣ್ಯವಲಯ ಅಧಿಕಾರಿ, ಅರಣ್ಯಾಧಿಕಾರಿ, ಅರಣ್ಯ ಗಾರ್ಡ್‌ ಮತ್ತು ಅರಣ್ಯ ವಾಚರ್‌ ಕೂಡ ‘ಅರಣ್ಯ ಅಧಿಕಾರಿ’ ವ್ಯಾಪ್ತಿಗೆ ಬರುತ್ತಾರೆ. ಇವರು ಎಫ್‌ಐಆರ್ ದಾಖಲು ಮಾಡಲು ಅಧಿಕಾರ ಹೊಂದಿದ್ದಾರೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.