ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯಡಿ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಹಂತ–2ರಡಿ ₹2 ಸಾವಿರ ಕೋಟಿ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ₹2 ಸಾವಿರ ಕೋಟಿ ಯೋಜನಾ ಅಂದಾಜಿನಲ್ಲಿ ರಾಜ್ಯ ಸರ್ಕಾರದ ಪಾಲಿನ ಶೇ 7.5 ರಷ್ಟು ಮೊತ್ತ ಅಂದರೆ ₹ 150 ಕೋಟಿ, ಮಹಾನಗರ ಪಾಲಿಕೆಯ ಸ್ವಂತ ಸಂಪನ್ಮೂಲದಿಂದ ಶೇ 7.5 ರಷ್ಟು ಮೊತ್ತ ₹ 150 ಕೋಟಿ ಹಾಗೂ ಯುಐಡಿಎಫ್‌ನಿಂದ ಸಾಲದ ರೂಪದಲ್ಲಿ ಶೇ 85ರಷ್ಟು ಮೊತ್ತ ₹ 17,00 ಕೋಟಿಯಲ್ಲಿ 2024–25 ನೇ ಸಾಲಿನಿಂದ 2026–27ನೇ ಸಾಲಿನವರೆಗೆ ಮೂರು ವರ್ಷಗಳ ಅವಧಿಯಲ್ಲಿ ಪೌರಾಡಳಿತ ನಿರ್ದೇಶನಾಲಯದಿಂದ ರಾಜ್ಯ ಮಟ್ಟದಲ್ಲಿ ಟೆಂಡರ್‌ ಕರೆದು ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ ಎಂದರು. ಪಂಚಾಯತ್ ರಾಜ್‌ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಲು ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗ ಮಾಡಿರುವ ಶಿಫಾರಸು ಕೈಬಿಡಲು ಸಂಪುಟ ಒಪ್ಪಿಗೆ ನೀಡಿದೆ. ಹಾಲಿ ವ್ಯವಸ್ಥೆಯೇ ಮುಂದುವರೆಯಲಿದೆ. ಕೆಜಿಐಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018ರಿಂದ 2020 ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ₹80ರಂತೆ ಲಾಭಾಂಶ ಘೋಷಿಸಲು ಮತ್ತು 2020– 2022 ರ ಅವಧಿಯಲ್ಲಿ ಅವಧಿಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರಕ್ಕೆ ₹80ರಂತೆ ಮಧ್ಯಂತರ ಲಾಭಾಂಶ ಘೋಷಿಸಲು ಒಪ್ಪಿಗೆ 563 ನಗರ ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಪ್ರಯೋಗಾಲಯಗಳನ್ನು ಬಲಪಡಿಸಲು ಅವಶ್ಯವಿರುವ ಔಷಧಿಗಳು, ಉಪಕರಣಗಳನ್ನು ₹53.66 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ. ಆನೆಕಲ್‌, ಶಿರಹಟ್ಟಿ, ನೆಲಮಂಗಲ, ಶಿರಹಟ್ಟಿ, ಶೃಂಗೇರಿ, ಯಳಂದೂರು ತಾಲ್ಲೂಕುಗಳಲ್ಲಿ ತಲಾ 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ನಬಾರ್ಡ್‌ ನೆರವಿನಡಿ ₹256.15 ಕೋಟಿ ಭರಿಸಲು ತೀರ್ಮಾನ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆ ಕೇಂದ್ರಗಳನ್ನಾಗಿ ಮಾಡಲು ಅನುಮತಿ. ಗಣಿ ಬಾಧಿತ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಮಗ್ರ ಪರಿಸರ ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಸ್ಥಾಪಿಸಲು ಅನುಮೋದನೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ರೈತರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 2024–25ನೇ ಹಂಗಾಮಿನಿಂದ 30 ವರ್ಷ ಖಾಸಗಿಯವರಿಗೆ ಗುತ್ತಿಗೆ ನೀಡಲು ಒಪ್ಪಿಗೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.