ಕಾವ್ಯ ಸುಲಭವಾಗಿ ಕೈಗೆ ಸಿಕ್ಕುವ ಸಾಲುಗಳಂತೆ ಕಾಣಿಸುತ್ತದೆ. ಈ ಗ್ರಹಿಕೆಯನ್ನೇ ಹಿಡಿದು ಹೊರಡುವವರಿಗೆ ಕಾವ್ಯ ನಿತ್ಯವೂ ಎದುರಾದಂತೆ ಕಂಡರೂ ಅದು ಕೈಗೆ ಸಿಕ್ಕುವುದೇ ಇಲ್ಲ. ಸುಮ್ಮನೇ ತಿರುತಿರುಗಿ ದಣಿಯುವುದೇ ಅಂಥವರ ಕಾಯಕವಾಗುತ್ತದೆ. ಸುಮಿತ್‌ ಮೇತ್ರಿ ಕಾವ್ಯವನ್ನು ಹೀಗೆ ಭಾವಿಸಿದವರಲ್ಲ ಎನ್ನುವುದನ್ನು ಅವರ ಸಂಕಲನ – ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ತೋರಿಸಿಕೊಡುತ್ತದೆ. ಭಾಷೆಯೊಂದಿಗೆ, ಲಯಗಳ ಜೊತೆ, ರೂಪಕಗಳ ಸಾಮೀಪ್ಯದಲ್ಲಿ ಮೇತ್ರಿ ಸದಾ ನಡೆಸುವ ಸೆಣಸಾಟ ಅವರ ಕಾವ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಓದುಗರನ್ನು ಒತ್ತಾಯಿಸುತ್ತದೆ. ಹಾಗೆ ಓದದಿದ್ದರೆ ಮೇತ್ರಿಯವರ ಕಾವ್ಯ ಹತ್ತಿರವೂ ಬರುವುದಿಲ್ಲ. ಇದೆ ನಿಜ ಕಾವ್ಯದ ಸಹಜ ಗುಣ. (ಸುಮಿತ್‌ ಮೇತ್ರಿ) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕಾವ್ಯ ಎನ್ನುವುದು‘ಎದೆಗೆ ಚುಚ್ಚಿದ ಬಾಣಅದನ್ನು ಕೀಳ ಹೋದರೆಅದು ಎದೆಯಲ್ಲಿಯೇ ಮುರಿದುಕೊಳ್ಳುತ್ತ,ನೆತ್ತರು ಒಸರುತ್ತ,ಹಿತಯಾತನೆಯನ್ನು ನೀಡುತ್ತಲೇ ಇರುತ್ತದೆ.ಈ ಯಾತನೆಯಲ್ಲಿಯೇ‘ಪ್ರತಿದಿನವೂ ಉರಿಸಬೇಕು ಕಾರಿರುಳು’ ಇಲ್ಲಿನ ಕೆಲವು ಕವಿತೆಗಳಲ್ಲಿ ಸ್ಥಾಪಿತ ಗ್ರಹಿಕೆಗಳನ್ನು ಭಂಜಿಸುವ, ಹೊಸ ನೋಟದ ಕಡೆಗೆ ಬೆರಳು ತೋರಿಸುವ ಯತ್ನವಿದೆ. ಭಾಷೆಯೂ ಕೆಲವೆಡೆ ಇಂಥ ಕೆಲಸವನ್ನು ಮಾಡುತ್ತದೆ: ‘ಗಾಳಿ ತಳಿರೊಡೆಯುವುದು’‘ದೇಹದೊಳಗೆ ಆತ್ಮ ಕಾಲಿಳಿಬಿಟ್ಟು ಕೂರುವುದು’‘ಇರುವೆ ಸಾಲಿನ ಗೆಜ್ಜೆ ಕಿರುಗುಡುವುದು’‘ಮೌನ ಕತ್ತಲೆಯ ಬೆನ್ನೇರಿ ಬೆತ್ತಲಾಗುವುದು’ ‘ಬಿರುಕುಬಿಟ್ಟ ಸೂರ್ಯನೆದೆಗೆ ಬೆರಳು ತುರುಕಿ’ಇತ್ಯಾದಿ ಈ ಸಂಕಲನದಲ್ಲಿ ಫ್ರೆಷ್‌ ಎನಿಸುವ ಸಾಲುಗಳು ಧಂಡಿಯಾಗಿ ಸಿಗುತ್ತವೆ. (ಜಿ.ಪಿ. ಬಸವರಾಜು) ಇಲ್ಲಿಯೂ ಅವನ ಮತ್ತು ಅವಳ ನಡುವಿನ ಪ್ರೀತಿ, ಪ್ರೇಮ, ವಿರಹ ಇವೆ. ಪ್ರೀತಿಯ ಆಳ-ಅಗಲ, ವಿರಹದ ಸುಡುವ ಯಾತನೆ ಮತ್ತೆ ಮತ್ತೆ ಚಿತ್ರಿತವಾಗಿದೆ. ಹಾಗೆಯೇ ಇವರಿಬ್ಬರ ಸುತ್ತ ಇರುವ ಲೋಕವೂ ಇದೆ; ಭೂತ, ವರ್ತಮಾನಗಳೂ ಇವೆ. ಸುಮಿತ್‌ ಇವುಗಳನ್ನು ಈಗಾಗಲೇ ಬಳಕೆಯಾಗಿರುವ ಮಾತುಗಳಲ್ಲಿ, ಪ್ರತಿಮೆ ರೂಪಕಗಳಲ್ಲಿ ಚಿತ್ರಿಸುತ್ತ ಕಾವ್ಯವನ್ನು ಸವೆದ ದಾರಿಯಲ್ಲಿ ನಡೆಸುವುದಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಾಗಲೂ ಹೊಸ ರೀತಿಯಲ್ಲಿ, ಹೊಸ ದಾರಿಯಲ್ಲಿ ನಡೆಯಲು ಸಾಧ್ಯವೇ ಎಂದು ನೋಡುತ್ತಾರೆ. ಇದು ಕಾವ್ಯದ ಬಗ್ಗೆ ಅವರಿಗಿರುವ ಅಪಾರ ಪ್ರೀತಿಯನ್ನು ಮತ್ತು ಗಾಢ ಶ್ರದ್ಧೆಯನ್ನು ತೋರಿಸುತ್ತದೆ. ಹಾಗೆಯೇ ಅವರ ತಾಳ್ಮೆಯನ್ನೂ. ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಎನ್ನುವ ಹೆಸರೇ ವಿಭಿನ್ನ ನಡೆಯನ್ನು ತೋರಿಸುವುದರ ಜೊತೆಗೆ ಬೇರೆ ರೀತಿಯ ಓದಿಗೇ ಸಹೃದಯರನ್ನು ಬರಮಾಡಿಕೊಳ್ಳುತ್ತದೆ. ಹಾಗೆಯೇ ಅರ್ಥ ವ್ಯಾಪ್ತಿಯನ್ನೂ ಸೂಚಿಸುತ್ತದೆ. ಈ ಸಂಕಲನದ ‘ಧ್ಯಾನಕ್ಕೆ ಗುಹೆ ಬೇಕಿಲ್ಲ’ ಮತ್ತು ‘ಕಣ್ಣೂರು ಅಮೀನ್‌ ಸಾಬ್‌ ಹೇಳಿದ ಕತಿ’ ಕವಿತೆಗಳು ಸುಮಿತ್‌ ಅವರ ಕಾವ್ಯದ ಬಗ್ಗೆ ಮತ್ತು ಮುಂದಿನ ಅವರ ನಡೆಯ ಬಗ್ಗೆ ಆಸೆಯನ್ನು ಚಿಗುರಿಸುತ್ತವೆ. ಅವರು ಬಹುದೂರ ನಡೆಯಬಹುದಾದ ಸಾಧ್ಯತೆಯನ್ನೂ ಹೇಳುತ್ತವೆ. ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ