‘ನಾನೇಕೆ ಬರೆಯುತ್ತೇನೆ’ ಎಂಬುದರ ಬಗ್ಗೆ ಹಲವಾರು ಸಾಹಿತಿಗಳು ಮಾತನಾಡುತ್ತಾರೆ. ಬರೆಯುವುದರ ಹಿಂದಿನ ಪ್ರೇರಣೆಯನ್ನು ವಿವರಿಸುತ್ತಾರೆ. ಮೊನ್ನೆಯಷ್ಟೇ ಜೋಗಿ ಸರ್ ಬರೆದ ಒಂದು ಲೇಖನದಲ್ಲಿ ಬೇಂದ್ರೆಯವರಿಂದ ಹಿಡಿದು ಗಾರ್ಸಿಯಾ ಮಾರ್‌ಕ್ವೆಜ್ ವರೆಗೂ ಬರವಣಿಗೆಯ ಬಗ್ಗೆ ಅನೇಕ ಲೇಖಕರು ಹಂಚಿಕೊಂಡಿದ್ದ ಮಾತುಗಳನ್ನು ಉಲ್ಲೇಖಿಸಿದ್ದರು. ಆದರೆ ‘ನಾನೇಕೆ ಬರೆಯುವುದನ್ನು ನಿಲ್ಲಿಸಿದೆ?’ ಎಂಬ ವಿಷಯದ ಬಗ್ಗೆ ಮಾತನಾಡಿದವರು ಕಡಿಮೆ. ನನ್ನ ತಿಳುವಳಿಕೆಯ ಪ್ರಕಾರ ಹಾಗೆ ಬರವಣಿಗೆಯನ್ನು ನಿಲ್ಲಿಸಿದವರೂ ಸಹ ಕಡಿಮೆಯೇ. ತೀರಾ ಮೊನ್ನೆಯವರೆಗೂ ನನಗೆ ಹೀಗೆ ಏಕಾಏಕಿಯಾಗಿ ಬರೆಯುವುದನ್ನು ನಿಲ್ಲಿಸಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಒಬ್ಬರಿದ್ದಾರೆ, ಒಂದು ಕಾಲಕ್ಕೆ ಅಮೋಘವಾಗಿ ಬರೆಯುತ್ತಿದ್ದವರು ಈಗ ಬರವಣಿಗೆಯನ್ನು ನಿಲ್ಲಿಸಿ ಬಿಟ್ಟಿದ್ದಾರೆ ಎಂದು ತಿಳಿದಾಗ ಹುಟ್ಟಿದ ಸೋಜಿಗ ಇನ್ನೂ ಜೀವಂತವಾಗಿದೆ. ರಾಜಲಕ್ಷ್ಮೀ ಎನ್.ರಾವ್ ಅವರ ಹೆಸರನ್ನು ನಾನು ಕೇಳಿಯೇ ಇರಲಿಲ್ಲ. ಇದು ನನ್ನ ಅಲ್ಪ ಜ್ಞಾನವೂ ಇರಬಹುದು ಜೊತೆಗೆ ತಲೆಮಾರುಗಳ ವ್ಯತ್ಯಾಸವೂ ಇರಬಹುದು. ಹೀಗೆ ಅಕಸ್ಮಾತ್ತಾಗಿ ಕಂಡ ರಾಜಲಕ್ಷ್ಮೀ ಅವರ ವಿಡಿಯೋ ನೋಡಿ ನನಗೆ ಎರಡು ದಿನಗಳ ಕಾಲ ತಲೆಯಲ್ಲಿ ಅವರದೇ ಗುಂಗು. ಅದು ಹೇಗೆ ಬರೆಯುವುದನ್ನು ನಿಲ್ಲಿಸಲಿಕ್ಕೆ ಸಾಧ್ಯ ಎಂದು ಅಚ್ಚರಿ ಪಡುತ್ತಲೇ ಇದ್ದೆ. ನಿಜ ಹೇಳ್ತೇನೆ, ಬಹಳ ದಿನಗಳ ಕಾಲ ಬರೆಯದೇ ಹೋದರೆ ನನಗೆ ವಿಚಿತ್ರ ಕನಸುಗಳು ಬೀಳುತ್ತವೆ. ಕತೆಯಾಗಿ ಕಟ್ಟಲು ನಾನು ಅವುಗಳನ್ನು ನೆನಪಿಟ್ಟುಕೊಳ್ಳಲು ಯತ್ನಿಸುತ್ತೇನೆ. ಎಷ್ಟು ನೆನಪಿದೆಯೋ ಅಷ್ಟಕ್ಕೆ ಉಪ್ಪು, ಖಾರ, ಮೆಣಸು, ಬೆಲ್ಲ ಸೇರಿಸಿ ಕತೆಯಾಗಿಸಲು ಯತ್ನಿಸುತ್ತೇನೆ. ಸಣ್ಣ ಪುಟ್ಟ ಲೇಖನ, ಕತೆಗಳನ್ನು ಬರೆಯುವ ನನಗೇ ಹೀಗಾಗುವಾಗ ದೊಡ್ಡವರ ಜೊತೆಗೆ ಒಡನಾಡಿದ, ಸಾಹಿತಿಗಳ ಜೊತೆಗೆನೇ ಬಹುಪಾಲು ಕಳೆಯುತ್ತಿದ್ದ, ಉತ್ತಮ ಕತೆಗಳು ಎಂದು ಓದಿದವರೆಲ್ಲರೂ ಹೇಳುವ ಹಾಗೆ ಕತೆಗಳನ್ನು ಬರೆದ ರಾಜಲಕ್ಷ್ಮಿಯವರಿಗೆ ಹೀಗೆಲ್ಲ ಅನ್ನಿಸಲೇ ಇಲ್ಲವೇ ಎಂದು ಯೋಚಿಸುತ್ತಲೇ ಇದ್ದೆ. ಅವರು ಅದೆಂತಹ ಕತೆಗಳನ್ನು ಬರೆದಿದ್ದರು ಎಂಬ ಕುತೂಹಲದಲ್ಲಿಯೇ ಅವರ ಕಥಾ ಸಂಕಲನ ‘ಸಂಗಮ’ ವನ್ನು ಓದಲು ಶುರು ಮಾಡಿದೆ. ಅದರಲ್ಲಿ ಮೊದಲ ಕಥೆಯೇ ಕೆಂಪು ಕಪ್ಪು ಬಿಳುಪು. ಕಪ್ಪು ಹುಬ್ಬಿನ, ಕೆಂಪು ಲಿಪಸ್ಟಿಕ್ಕಿನ, ಬಿಳಿ ಹಲ್ಲಿನ ಒಬ್ಬ ಹೆಂಗಸು. ನೂರಾರಿ ಜನರಾಡಿ ಬಿಸುಟ ಬೊಂಬೆ ಅವಳು. ನೂರಾ ಒಂದನೇ ಗಂಡಸು ಇವನು. ಪ್ರಯೋಗಕ್ಕಾಗಿ ಅವಳೊಡನೆ ಸೇರಿದ, ಕೂಡಿದ ಕತೆಯನ್ನು ಇನ್ನೊಂದು ಹೆಂಗಸಿನ ಮುಂದೆ ಹೇಳುತ್ತಿರುತ್ತಾನೆ. ಈ ಕತೆಯನ್ನು ಕೇಳುವ ಅವಳು ಯಾರು ಎಂಬುದು ಇಡೀ ಕತೆಯಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಯಾವುದೋ ಒಂದು ಹೋಟೆಲಿನಲ್ಲಿ ಈ ಕೆಂಪು ಕಪ್ಪು ಬಿಳುಪಿನ ಹೆಂಗಸಿನ ಜೊತೆಗೆ ಸೇರುವ ಕತೆಗಾರನಿಗೆ ಅವಳಿಂದ ಸಂತೃಪ್ತಿಯಾಗುವುದಿಲ್ಲ. ಆದರೆ ಕತೆ ಕೇಳುತ್ತಿದ್ದ ಹೆಂಗಸಿಗೆ ಕತೆಯ ಕೊನೆಯಲ್ಲಿ ಅವನ ಮೇಲೆ ಮೆಚ್ಚುಗೆ, ಗೌರವ ತೆರೆದಿತ್ತು ಎಂದು ಬರುತ್ತದೆ. ಅವನ ಕತೆಯನ್ನು ಕೇಳುತ್ತಿರುವ ಹೆಂಗಸು ಆ ಕೆಂಪು ಕಪ್ಪು ಬಿಳುಪಿನ ಹೆಂಗಸೇ ಆಗಿರಬಹುದೇ? ‘ಖೂಬ್ ಸೂರತ್ ಹೈ ಲಡಕೀ. ಬುಲಾವೂ?’ ಎಂದು ಹೋಟೆಲಿನಲ್ಲಿ ಕೆಲಸ ಮಾಡುವ ಆ ಪುಟ್ಟ ಹುಡುಗ ಹೇಳಿದಾಗ ಕತೆಗಾರ ‘ಬುಲಾವ್’ ಎನ್ನುತ್ತಾನೆ. ಅವನು ಹೀಗೆ ಹೇಳಿದಾಗ ಕತೆ ಕೇಳುತ್ತಿರುವ ಹೆಂಗಸಿಗೆ ನೋವಾಗುತ್ತದೆ. ಕಣ್ಣು, ಮುಖದಲ್ಲಿ ವೇದನೆ ಕಾಣಿಸುತ್ತದೆ. ಅದನ್ನು ನೋಡಿದ ಕತೆಗಾರ ಮೃದುವಾಗಿ ‘ಹಾಗೇಕೆ ಉತ್ತರ ಕೊಟ್ಟೆನೆಂದು ಗೊತ್ತಿಲ್ಲವೇ ನಿನಗೆ?’ ಎಂದು ಕೇಳುತ್ತಾನೆ. ಈ ಎರಡೇ ಎರಡು ಸಾಲಿನ ಸಂಭಾಷಣೆ ಆಕೆ ಅವಳೇ ಆಗಿರುವ ಸಾಧ್ಯತೆಗೆ ಪುರಾವೆ ನೀಡಿದಂತಿದೆ. ‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ. ಎಂಟು ವರ್ಷಗಳ ಸತತ ಪ್ರಯತ್ನದಿಂದ ಅವನ ಪ್ರಯೋಗ ಕೊನೆಗೂ ಫಲಕಾರಿಯಾಗುತ್ತದೆ. ಆದರೆ ಮುಂದೇನು? ಚಿನ್ನದ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು ಆದರೆ ಚಿನ್ನದ ಅನ್ನವನ್ನು ತಿನ್ನಲಿಕ್ಕಾಗುತ್ತದೆಯೇ? ಹೀಗೆ ಒಂದು ಆಡು ಮಾತನ್ನು ಸಹ ಕತೆಯಾಗಿ ಕಟ್ಟಬಹುದು ಎಂದು ರಾಜಲಕ್ಷ್ಮಿಯವರು ತೋರಿಸಿ ಕೊಟ್ಟಿದ್ದಾರೆ. ಇದರ ಮೂಲಕ ಅವರು ಪ್ರತಿಯೊಂದು ವಿಷಯದ ಬಗ್ಗೆಯೂ ಹೇಗೆಲ್ಲ ಆಳವಾಗಿ ಯೋಚಿಸುತ್ತಿದ್ದರು ಎಂದು ಅರಿಯಬಹುದಾಗಿದೆ. ‘ಆವೇ ಮರಿಯಾ’ ದಲ್ಲಿ ಮದುವೆ ಮಾಡಿಕೊಳ್ಳುವುದೋ ಬೇಡವೋ ಎಂಬ ಸಂದಿಗ್ಧದಲ್ಲಿರುವ ಯುವಕನ ತಳಮಳ ಕತೆಯಾಗಿ ಬಂದಿದೆ. ಸಂಸಾರದ ತಾಪತ್ರಯ, ರೇಗುವ ಸಿಡುಕುವ ಬಿಗು ಮಾರಿಯ ಯುವಕರು, ಬೇಸತ್ತ ಹೆಂಗಸರು, ತಿಂಗಳ ಮೊದಲ ವಾರದ ಕನಸುಗಳು, ಒಲವಿನ ಮೊದಲ ತಿಂಗಳ ಕನಸುಗಳು ಎಲ್ಲವೂ ಇಲ್ಲಿವೆ. ಸಂದರ್ಶನದಲ್ಲಿ ರಾಜಲಕ್ಷ್ಮೀಯವರು ತಾವು ಈಗ ಪ್ರಕೃತಿಯ ಜೊತೆಗೆ ಕಾಲ ಕಳೆಯುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಹೂವುಗಳನ್ನು ನೋಡುವ, ಚಿಗುರೆಲೆಗಳನ್ನು ಗಮನಿಸುವ ಈಗಿರುವ ನಿಸರ್ಗ ತನ್ಮಯತೆ ಮೊದಲಿನಿಂದಲೂ ಇತ್ತು ಎಂದು ಎಲ್ಲಾ ಕತೆಗಳಲ್ಲೂ ಕಾಣಿಸುತ್ತದೆ. ಕತೆಗಳು ಎಷ್ಟು ಕಾವ್ಯಾತ್ಮಕವಾಗಿವೆಯೆಂದರೆ ಒಂದೊಂದು ಸಾಲು ಒಂದೊಂದು ಕವನ ಎಂಬಂತಿವೆ. ಪಾದದ ಬಳಿ ಸುಟ್ಟು ಬಿಸುಡುವ ಸಿಗರೇಟಿನ ಬಿಳಿ ತುಂಡುಗಳನ್ನು ಪೂಜೆಗೆ ಸುರಿದ ಹೂವುಗಳಿಗೆ ಹೋಲಿಸುತ್ತಾರೆ. ಮತ್ತೊಂದು ಕಡೆಗೆ ಅವೇ ತುಂಡುಗಳನ್ನು ಸತ್ತ ಬಿಳಿ ಪತಂಗಗಳಿಗೂ ಹೋಲಿಸುತ್ತಾರೆ. ಕಂದು ಬಣ್ಣದ ಎಲೆಗಳನ್ನು ಚಾಚಿ ನಿಂತಿರುವ ಮರವನ್ನು ಬಟ್ಟೆ ಹರಿದು ಹೋದ ಕೊಡೆಗೆ, ವಸಂತ ಕಾಲವನ್ನು ಬಳೆಗಾರನಿಗೆ, ನೆನಪನ್ನು ಬಳ್ಳಿಗೆ, ಬಿಕ್ಕುಗಳನ್ನು ಬಿರುಕುಗಳಿಗೆ, ಮನಸ್ಸಿನ ಖುಷಿಯನ್ನು ಎಳೆ ಗರಿಕೆ ಹುಲ್ಲಿಗೆ, ಸ್ಪರ್ಶವನ್ನು ಹೂದಳಕ್ಕೆ, ನಿಂಬೆ ಹೂವನ್ನು ಉಸಿರಿಗೆ, ದೇವಕಣಗಿಲೆಯ ಮೊಗ್ಗನ್ನು ಉಗುರಿಗೆ ಹೀಗೆ ಹಲವಾರು ಹೋಲಿಕೆಗಳು ಕಾಣಿಸುತ್ತಲೇ ಹೋಗುತ್ತವೆ. ಅವುಗಳನ್ನು ಓದುವುದೇ ಒಂದು ಸೊಬಗು. ಹೂದೋಟದಲ್ಲಿ ಒಂದು ಸುತ್ತು ಹಾಕಿ ಬಂದಂತೆ. ‘ನನಗೊಂದು ಬಿಳಿ ಗುಲಾಬಿ’ ಕತೆಯಲ್ಲಿ ಗುಲಾಬಿಯನ್ನು ವರ್ಣಿಸುವ ಏಳೆಂಟು ಸಾಲುಗಳಿವೆ. ಇದನ್ನು ಓದಿದಾಗ ಗುಲಾಬಿ ಹೂವು ಹೊಸದೇ ರೂಪದಲ್ಲಿ ನಮ್ಮ ಕಣ್ಮುಂದೆ ಕಾಣಿಸಿಕೊಳ್ಳುತ್ತದೆ. ಮುಂದಿನ ಸಲ ಗುಲಾಬಿಯನ್ನು ನೋಡಿದಾಗ ಅದರೊಳಗಿನ ಕೇಸರ ಮಗುವಿನ ಗುಂಗುರು ಕೂದಲಿನಂತೆ ಕಾಣಿಸದೇ ಇರಲಾರದು. ಕಂದು ಬಣ್ಣಕ್ಕೆ ತಿರುಗಿದ ಆ ಗುಲಾಬಿ ದಳದ ನರಗಳನ್ನು ನಕಾಶೆಯ ಮೇಲಿನ ನದಿಗಳಿಗೆ ಹೋಲಿಸುತ್ತಾರೆ ಲೇಖಕಿ. ಅದನ್ನು ಓದಿದ ತಕ್ಷಣ ವಾವ್ ಎಷ್ಟು ಅದ್ಭುತ ಪರಿಕಲ್ಪನೆ ಎನ್ನಿಸದೇ ಇರಲಾರದು. ‘ಸಂಗಮ’ ಕತೆಯಲ್ಲಿ ಪತ್ರಿಕೆಯಲ್ಲಿರುವ ಕಪ್ಪು ಅಕ್ಷರಗಳ ಮೇಲೆ ಕಣ್ಣಾಡಿಸುವುದನ್ನು ಜಪಾನಿ ಆಟಗಾರ ತಂತಿಯ ಮೇಲೆ ನಡೆಯುವುದಕ್ಕೆ ಹೋಲಿಸುತ್ತಾರೆ. ಹೀಗೆ ಎತ್ತಣ ಮಾಮರ ಎತ್ತಣ ಕೋಗಿಲೆಗೆ ಸಂಬಂಧ ಕಲ್ಪಿಸಿ ಹೊಸ ಬೆರಗನ್ನು ಸೃಷ್ಟಿಸುವ ರಾಜಲಕ್ಷ್ಮಿಯವರ ಜಾಣ್ಮೆಗೆ ನಾನು ಬೆರಗಾಗಿದ್ದೇನೆ. ‘ಕಲ್ಯಾಣಿ’ ಕತೆಯಲ್ಲಿ ಪ್ರಪಂಚದಲ್ಲಿರುವ ಗಂಡಸರನ್ನು ಮೂರು ವಿಧಗಳಾಗಿ ವಿಂಗಡಿಸುತ್ತಾರೆ. ಆ ವಯಸ್ಸಿಗೇ ಜಗತ್ತನ್ನು ಇಷ್ಟು ಸ್ಪಷ್ಟವಾಗಿ ಅವಲೋಕಿಸಿದ ರಾಜಲಕ್ಷ್ಮಿಯವರ ಸೂಕ್ಷ್ಮ ಮನಸ್ಸಿಗೆ ಬರೆಯುವುದನ್ನು ಯಾಕೆ ನಿಲ್ಲಿಸಬೇಕು ಎಂಬುದರ ಬಗ್ಗೆಯೂ ಸ್ಪಷ್ಟತೆಯಿತ್ತು ಮತ್ತು ಆ ಸ್ಪಷ್ಟತೆಯಿಂದಲೇ ಅಷ್ಟು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವಾಯಿತು ಎಂದು ಅರ್ಥವಾಗುತ್ತದೆ. ‘ಇಲ್ಲ ಇಲ್ಲಿ..’ ಇದು ಕಮ್ಯುನಿಷ್ಟ್‌ ಆದವನ ಕತೆ. ‘ಫೀಡ್ರಾ’ ಕತೆಯಲ್ಲಿ ತನಗಿಂತ ಎರಡು ವರ್ಷ ದೊಡ್ಡ ಮಗನಿರುವ ಗಂಡಸಿನೊಂದಿಗೆ ಮದುವೆಯಾಗುವ ತರುಣಿಗೆ ಆ ಹುಡುಗನ ಮೇಲೆ ಮೋಹವಾಗುತ್ತದೆ. ಆ ಕಾಲದಲ್ಲಿಯೇ ಖಿನ್ನತೆಯನ್ನು ಗುರುತಿಸಿ ಅದರ ಲಕ್ಷಣಗಳ ಬಗ್ಗೆ ಸರಿಯಾಗಿ ಬರೆದಿದ್ದಾರೆ. ಒಂದೊಂದು ಕತೆಯೂ ಒಂದೊಂದು ಜಗತ್ತು. ಲಾರ್ಡ್ ಲೇಟನ್ನಿನ ಹೇಲನ್, ಎಲೆಕ್ಟ್ರಾ, ಆಂಟಿಗೊನೆ ಎಂಬ ಇಂಗ್ಲೀಷ್ ನಾಟಕಗಳ ಪಾತ್ರಗಳು. ಮಾರ್ಕ್ಸ್, ರೂಸೋ, ಬ್ರಿಡ್ಜಸ್, ರಸೆಲ್, ಗಾಂಧಿ, ಪ್ಲೆಟೋ ಎಂಬೆಲ್ಲ ವ್ಯಕ್ತಿತ್ವಗಳ ಉಲ್ಲೇಖ. ಭಿನ್ನ ಕಥಾವಸ್ತು. ಸಶಕ್ತ ನಿರೂಪಣೆ. ಬಗೆ ಬಗೆಯ ರೂಪಕಗಳು. ಎಲ್ಲವೂ ರಾಜಲಕ್ಷ್ಮಿಯವರಿಗಿದ್ದ ಅನುಭವದ ಆಳವನ್ನು, ಸೂಕ್ಷ್ಮ ಒಳನೋಟವನ್ನು, ಓದಿನ ವಿಸ್ತಾರವನ್ನು ಸಾರಿ ಹೇಳುತ್ತವೆ. ಅವರೊಳಗೆ ಕತ್ತಲಿನಂತಹ ಮೌನವೊಂದಿದೆ. ಹೂ ದಳಗಳನ್ನು ನೋಡಿ ಕಣ್ಣುಗಳಲ್ಲಿ ಚಂದ್ರಬಿಂಬ ಮೂಡುತ್ತದೆ. ಅವರ ಬೆರಗನ್ನು ಮತ್ತೊಮ್ಮೆ ನಮ್ಮೊಂದಿಗೆ ಹಂಚಿಕೊಳ್ಳುವಂತಾಗಲಿ. ಮತ್ತೆ ಬರೆಯಬೇಕು ಎಂಬ ಆಸೆಯೊಂದು ಅವರೊಳಗೆ ಮೊಳೆಯಲಿ ಎಂಬುದಷ್ಟೇ ಸಾಹಿತ್ಯದ ವಿದ್ಯಾರ್ಥಿಯಾಗಿ ನನ್ನ ಆಶಯ. ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ.