ಅಂದು “ದೂರದರ್ಶನ ವೀಕ್ಷಣೆ ಕಲಿಕೆಗೆ ಪೂರಕವೋ? ಮಾರಕವೋ? ಎಂಬ ವಿಷಯದ ಬಗ್ಗೆ ಡಿಬೆಟ್ ನಡೆಯುತ್ತಿತ್ತು. ಹೆಣ್ಣು ಮಕ್ಕಳು ‘ದೂರದರ್ಶನ ವೀಕ್ಷಣೆ ಕಲಿಕೆಗೆ ಮಾರಕ’ ಎಂದು ವಾದ ಮಂಡಿಸುತ್ತಿದ್ದರು. ಗಂಡು ಮಕ್ಕಳು ಇಲ್ಲ ಇಲ್ಲ ‘ದೂರದರ್ಶನ ಕಲಿಕೆಗೆ ಪೂರಕ’ ಎಂದು ವಾದಿಸುತ್ತಿದ್ದರು. ಈ ಮಕ್ಕಳ ವಾದ ಪ್ರತಿವಾದದ ಬಿಸಿ ಬೇಸಿಗೆ ಕಾಲದ ಬೇಗುದಿಯನ್ನು ಮತ್ತಷ್ಟು ಹೆಚ್ಚಿಸಿದ್ದು ತರಗತಿಯಲ್ಲಿ ಇವೆಲ್ಲವನ್ನು ವೀಕ್ಷಣೆ ಮಾಡುತ್ತಿದ್ದ ನನ್ನ ಅನುಭವಕ್ಕೆ ಬಾರದಿರಲಿಲ್ಲ. ಈ ದೂರದರ್ಶನ ವೀಕ್ಷಣೆ ಸರಿಯೋ ತಪ್ಪೋ ಎಂಬ ತೀರ್ಪಿಗಿಂತ ನನ್ನ ಮಕ್ಕಳು ವಿಷಯವನ್ನು ಎಷ್ಟು ಆಯಾಮಗಳಲ್ಲಿ ಚಿಂತಿಸುತ್ತಾರೆ ಎಂಬ ಅಚ್ಚರಿ ಮೂಡಿತು. ಆಗಾಗ ವಾದಗಳು ವಿವಾದಗಳಿಗೆ ತಿರುಗುತ್ತಿದ್ದವು. ಆಗೆಲ್ಲ ನಾನು ಮಕ್ಕಳಿಗೆ ವಿಷಯಾಂತರ ಆಗದಂತೆ, ವಸ್ತುವಿಗಿಂತ ವ್ಯಕ್ತಿಯನ್ನು ಟಾರ್ಗೆಟ್ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದೆ‌ನು. ಹುಡುಗಿಯರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವಾಗ ಆ ವಿಷಯ ನನ್ನ ಹೃದಯ ತಟ್ಟಿದರೆ ಚಪ್ಪಾಳೆ ಹಾಕಿ ಅಭಿನಂದಿಸುತ್ತಿದ್ದೆ. ಆಗ ಗಂಡು ಮಕ್ಕಳು “ಹೋಗಿ ಮಿಸ್, ನೀವು ಯಾವಾಗಲೂ ಹುಡುಗಿಯರ ಪರ ಎಂದು ಹುಸಿ ಮುನಿಸು ತೋರುತ್ತಿದ್ದರು. ಇಲ್ಲ ಕಣ್ರೋ ಮಕ್ಕಳಾ ನಾನು ನಿಮ್ಮಿಬ್ಬರ ಪರವು ಇರುವೆ ಎಂದು ಹೇಳುತ್ತಾ ಅದನ್ನು ಸಮರ್ಥಿಸಲು ಅವರು ಹೇಳಿದ ಪಾಯಿಂಟ್‌ಗಳಿಗೂ ಚಪ್ಪಾಳೆ ತಟ್ಟಿ ಬೆಂಬಲಿಸುವುದನ್ನು ಮರೆಯಲಿಲ್ಲ.ಅಂತಹ ವಿಚಾರಗಳು ಮಕ್ಕಳ ಮನಸ್ಸಿನಲ್ಲಿ ಉಳಿಯದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ. ಹಾಗೆ ನಾನು ಇವರನ್ನು ಪ್ರೋತ್ಸಾಹಿಸುತ್ತಾ ಡಿಬೆಟ್ ಮುಗಿಸಿದೆ. ಕೊನೆಗೆ ಮಕ್ಕಳು ಹೇಳಿದ ದೂರದರ್ಶನದ ಅನುಕೂಲಗಳು ಮತ್ತು ಅನಾನೂಕೂಲ ಎರಡನ್ನು ವಿಶ್ಲೇಷಿಸುತ್ತಾ ಪ್ರತಿಯೊಂದರಲ್ಲೂ ಒಳಿತು ಕೆಡುಕು ಎರಡು ಇರುತ್ತವೆ. ನಾವು ಅವುಗಳಲ್ಲಿ ಇರುವ ಧನಾತ್ಮಕ ಅಂಶಗಳನ್ನು ಬೆಂಬಲಿಸುತ್ತಾ, ಅವುಗಳನ್ನು ಪಾಲಿಸುತ್ತಾ ಹಾಡಬೇಕೆಂದು ಹೇಳಿದೆ. ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಅವರಿಗೆ ಸ್ಟೇಜ್ ಫಿಯರ್ ಕಡಿಮೆಯಾಗಿ ಆತ್ಮವಿಶ್ವಾಸ ಮೂಡುತ್ತದೆ. ಯಾವುದೇ ಒಂದು ವಿಷಯದ ಸುತ್ತಲಿನ ಸಾಧಕಬಾದಕಗಳ ಬಗ್ಗೆ ಚಿಂತಿಸುತ್ತಾರೆ. ಸರಿ ತಪ್ಪುಗಳ ಅರಿವು ಮೂಡುತ್ತದೆ. ತಾವು ಗೆಲ್ಲಲೇಬೇಕು ಎಂಬ ಆರೋಗ್ಯಯುತ ಸ್ಪರ್ಧೆಯಲ್ಲಿ ಹೊಸ ಹುಡುಕಾಟದಲ್ಲಿ ತೊಡಗುವರು. ಇದು ಇಂದಿನ ಶಿಕ್ಷಣದ ತುರ್ತು ಕೂಡ ಹೌದು. ಮತ್ತೊಂದು ದಿನ ನಾಟಕ ಅಭಿನಯ ಮಾಡಿಸಿದೆ. ಪಠ್ಯಪುಸ್ತಕದ ಸಂಭಾಷಣೆ ರೂಪದ ಪಾಠ ನೀಡಿ ನಾಟಕ ಅಭಿನಯ ಮಾಡುವ ಚಟುವಟಿಕೆ ನೀಡಿದೆನು. ಅದರಲ್ಲಿ ಗಂಡು ಮತ್ತು ಹೆಣ್ಣು ಪಾತ್ರಗಳೆರಡು ಇದ್ದವು. ಹೆಣ್ಣು ಮಕ್ಕಳು ಗಂಡು ಪಾತ್ರವನ್ನು, ಗಂಡು ಮಕ್ಕಳು ಗಂಡು ಪಾತ್ರವನ್ನು ಗಂಡು ಮಕ್ಕಳು ಮಾಡಿ ಎಂದೆನು. ಆಗ ಹುಡುಗಿಯರೆಲ್ಲ “ಇಲ್ಲ ಮಿಸ್, ನಾವು ಅವರ ಜೊತೆಯಲ್ಲಿ ಪಾತ್ರ ಮಾಡುವುದಿಲ್ಲ. ನಾವೇ ಬೇಕಾದರೆ ಪ್ರತ್ಯೇಕವಾಗಿ ಗಂಡು ಹೆಣ್ಣು ಎರಡು ಪಾತ್ರಗಳನ್ನು ಮಾಡುತ್ತೇವೆ” ಎಂದರು. ಆಗ ಹುಡುಗರು ಹಿಂದೆ ಬೀಳಲಿಲ್ಲ ಹೌದು ಮಿಸ್ ನಾವು ಅಷ್ಟೇ, ಈ ಹುಡುಗಿಯರನ್ನು ಸೇರಿಸಿಕೊಳ್ಳುವುದಿಲ್ಲ ನಾವೇ ಹುಡುಗಿಯರ ಪಾತ್ರವನ್ನು ಮಾಡುತ್ತೇವೆ ಎಂದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ತರ ಬೇಧ ಭಾವ ಏಕೆ ಎಂದು ಪ್ರಶ್ನಿಸಿದೆ. ಆಗ ಹುಡುಗಿಯರು ಹೇಳಿದ್ದು ಮಿಸ್ ಹಿಂದೆ ಒಮ್ಮೆ ನಮ್ಮ ಊರಿನಲ್ಲಿ ಹುಡುಗರು ಹುಡುಗಿಯರು ಸೇರಿ ನಾಟಕ ಮಾಡಿದ್ದರು. ಆಗ ಹೆಂಡತಿ ಪಾತ್ರ ಮಾಡಿದ ಹುಡುಗಿಯನ್ನು ಊರಿನವರೆಲ್ಲ ನಿನ್ನ ಗಂಡ ಎಲ್ಲಿ? ನಿನ್ನ ಗಂಡ ಚೆನ್ನಾಗಿದ್ದಾನಾ? ಎಂದು ತಮಾಷೆ ಮಾಡುತ್ತಾ ಹುಸಿ ಹುಸಿ ನಗುತ್ತಿದ್ದರು. ಆ ವಿಷಯ ಅವರ ಅಪ್ಪನಿಗೆ ಗೊತ್ತಾಗಿ ಆ ಅಕ್ಕನಿಗೆ ಚೆನ್ನಾಗಿ ಥಳಿಸಿದರು ಎಂದು ಅಂದರು. ಈ ಮಾತು ಕೇಳಿ ಸುಧಾರಿಸದ ನಮ್ಮ ಅಸ್ವಸ್ಥ ಸಮಾಜದ ಪೊರೆ ಬಂದ ಕಣ್ಣುಗಳಿಗೆ ಮನಸ್ಸು ಕಣ್ಣೀರಾಯಿತು. ಗಂಡು ಹೆಣ್ಣು ಇಬ್ಬರು ಪಾತ್ರಧಾರಿಗಳಾದರೂ ಸಮಾಜ ಹೆಣ್ಣನ್ನು ಮಾತ್ರ ದೂಷಿಸುವುದಕ್ಕೆ ಮನಸ್ಸು ಖೇದಗೊಂಡಿತು. ಈ ವಯಸ್ಸಿನಲ್ಲಿ ಅವರಿಗೆ ಅದರ ಕುರಿತು ಏನೆ ಬೋಧೆನೆ ಮಾಡಿದರು ಅರ್ಥವಾಗುವುದಿಲ್ಲ ಎಂದು ಅರಿತ ನಾನು ಮಕ್ಕಳ ಇಚ್ಛೆಯಂತೆ ನಾಟಕ ಮಾಡಲು ಹೇಳಿದೆ. ಇಬ್ಬರು ಎರಡು ಪಾಠಗಳನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ನಾಟಕ ಪ್ರಾಕ್ಟೀಸ್ ಮಾಡಿದರು. ಆ ನಾಟಕವನ್ನು ಗಣರಾಜ್ಯೋತ್ಸವ ದಿನಾಚರಣೆಯ ವೇದಿಕೆಯಲ್ಲಿ ಅಭಿನಯಿಸಿದರು. ನಿಜಕ್ಕೂ ನಾಟಕ ನೋಡಿ ನಾವು, ಕಾರ್ಯಕ್ರಮಕ್ಕೆ ಬಂದಿದ್ದ ಪೋಷಕರು, ಎಸ್ ಡಿ ಎಮ್ ಸಿ ಯವರು, ಗ್ರಾಮಸ್ಥರು ಭಾವುಕರಾದರು. ಸ್ತ್ರೀ ಪಾತ್ರಗಳಿಗೆ ಗಂಡು ಮಕ್ಕಳು, ಗಂಡು ಪಾತ್ರಗಳಿಗೆ ಹೆಣ್ಣು ಮಕ್ಕಳು ಅದೆಷ್ಟು ಜೀವ ತುಂಬಿದರು ಎಂದರೇ ಅವರು ವೇಷಭೂಷಣಗಳಲ್ಲಿ ವಿರುದ್ಧ ಲಿಂಗಗಳು ಅಭಿನಯಿಸುತ್ತಿದ್ದಾರೆ ಎಂದು ತಿಳಿಯಲು ಆಗಲಿಲ್ಲ. ಅಷ್ಟು ಸೊಗಸಾಗಿ ಸ್ತ್ರೀ ಮತ್ತು ಪುರುಷ ಸಂವೇದನೆಗಳನ್ನು ಮಕ್ಕಳು ಅನುಸಂದಾನಿಸಿದ್ದರು. ಇಂತಹ ನಾಟಕಗಳು ಮಕ್ಕಳ ಭಾಷಾ ಕಲಿಕೆಗೆ ಹಾಗೂ ಮೌಲ್ಯಮಾಪನಕ್ಕೆ ತುಂಬಾ ಸೂಕ್ತವಾದ ತಂತ್ರಗಳಾಗಿವೆ. ಇಲ್ಲಿ ಮಕ್ಕಳು ದೈರ್ಯ ಸಾಹಸದ ಪ್ರವೃತ್ತಿ ಬೆಳೆಸಿಕೊಳ್ಳುವರು. ಹತ್ತಾರು ಜನರ ಮುಂದೆ ಮಾತಾಡುವರು. ಆಗ ಅವರ ಮೌಖಿಕ ಅಭಿವ್ಯಕ್ತಿ ಬೆಳವಣಿಗೆ ಹೊಂದುವುದು. ಸಂಭಾಷಣೆಗಳನ್ನು ದ್ವನಿಯ ಏರಿಳಿತದೊಂದಿಗೆ, ಸೂಕ್ತ ಸ್ವರಬಾರಕ್ಕೆ ಅನುಗುಣವಾಗಿ ಹೇಳುವರು. ಆಂಗಿಕ ಹಾವ ಭಾವಗಳನ್ನು ಕಲಿಯುವರು. ಯೋಜನೆಗಳ ತಯಾರಿ, ನಿಯೋಜಿತ ಕಾರ್ಯಗಳನ್ನು ನೀಡಿದಾಗ ಮಕ್ಕಳ ಪರಸ್ಪರ ಸಹಕಾರ, ಹೊಂದಾಣಿಕೆ ಮನೋಭಾವ, ಗುಂಪಿನಲ್ಲಿನ ವರ್ತನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಇವು ಈಗ ಕೇವಲ ಮನೋರಂಜನೆ ಅಥವಾ ಪೂರಕ ಚಟುವಟಿಕೆಗಳಾಗಿ ಉಳಿದಿಲ್ಲ. ಇವು ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಮೌಲ್ಯ ಮಾಪನ ತಂತ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಚಿತ್ರಕಲೆ, ಪದ್ಯಗಳ ಹಾಡುಗಾರಿಕೆ ಒಂದು ರೀತಿಯಲ್ಲಿ ಮಕ್ಕಳನ್ನು ಅಳೆದರೆ, ಪ್ರಯೋಗಗಳು, ಕಲಿಕೋಪಕರಣ ತಯಾರಿಕೆಗಳು ಮಗುವಿನ ಸೃಜನಶೀಲತೆಯನ್ನು ಪ್ರತಿಫಲಿಸುತ್ತವೆ. ಶಾಲೆಯಲ್ಲಿ ಕನ್ನಡದ ಕೋಟ್ಯಧಿಪತಿ ಮಾದರಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಹೊಸತನ ಇರಲೆಂದು ಶಿಕ್ಷಕರು ಮಕ್ಕಳನ್ನು ಪ್ರಶ್ನಿಸುವುದು, ಮಕ್ಕಳು ಶಿಕ್ಷಕರನ್ನ ಪ್ರಶ್ನಿಸುವುದು ವಿಶೇಷವಾಗಿತ್ತು. ನಿಗದಿತ ಪಾಠಕ್ಕೆ ಸಂಬಂಧಿಸಿದಂತೆ ಅವರವರ ಪ್ರಶ್ನೆ ಪತ್ರಿಕೆಗಳನ್ನ ಅವರೇ ತಯಾರು ಮಾಡಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಪ್ರಶ್ನಿಸುವ ಹಾಗೂ ಪ್ರಶ್ನೆಗಳನ್ನು ತಯಾರಿಸುವ ಕೌಶಲ್ಯವನ್ನ ಬೆಳೆಸುವುದು ಇದರ ಪ್ರಮುಖ ಆಶಯವಾಗಿತ್ತು. ಇಂದಿನ ಮಕ್ಕಳು ಶಿಕ್ಷಕರನ್ನು ಪ್ರಶ್ನಿಸುತ್ತಿದ್ದಾರೆ. ಹಿಂದೆಲ್ಲ ಗುರುಗಳನ್ನು ಪ್ರಶ್ನೆ ಮಾಡುವಂತಿರಲಿಲ್ಲ. ಹಾಗೇನಾದರೂ ಟೀಚರನ್ನು ಪ್ರಶ್ನಿಸಿದರೆ ಅವನು ಆ ತರಗತಿಯಲ್ಲಿ ಒಬ್ಬ ಅವಿಧೇಯ ವಿದ್ಯಾರ್ಥಿ, ನೈತಿಕ ಮೌಲ್ಯಗಳೇ ಇಲ್ಲದವನು ಎಂಬ ಭಾವವಿತ್ತು. ಅದರಿಂದ ಸಿಸಿಇ ಮೌಲ್ಯ ಮಾಪನ ಪ್ರಕ್ರಿಯೆ ಬಂದ ಮೇಲೆ ಮಕ್ಕಳು ಪ್ರಶ್ನಿಸುವುದನ್ನು ಕಲಿಯುವುದೇ ಒಂದು ಕೌಶಲ್ಯವಾಗಿದೆ. ‘ಪ್ರಶ್ನೆಗಳು ಅನೇಕ ಸಮಸ್ಯೆಗಳ, ಸವಾಲುಗಳ, ಸಾಧನೆಗಳ ಕೀಲಿ ಕೈ’ ಗಳಾಗಿವೆ ಇಂತಹ ಹತ್ತು ಹಲವು ಅವಕಾಶಗಳು ಸಿಸಿಇ ಕೊಡುಗೆಗಳಾಗಿವೆ. ಇದು ಸಾಧ್ಯವಾಗಿರುವುದು ಹೊಸ ಮೌಲ್ಯಮಾಪನ ಪದ್ಧತಿಯಾದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದಿಂದ. ಸಿಸಿಇ ಯೋಜನೆಗೂ ಪೂರ್ವ ನಾವೆಲ್ಲ ಓದುವಾಗ ಇದ್ದ ಪರೀಕ್ಷಾ ಕ್ರಮಗಳ ಬಗ್ಗೆ ಯೋಚಿಸೋಣ. ಆಗೆಲ್ಲ ಅಂಕಗಳೇ ಪ್ರಧಾನವಾಗಿದ್ದವು. ಲಿಖಿತ ಮತ್ತು ಮೌಖಿಕ ಪರೀಕ್ಷೆಗಳೆರಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ನಿರ್ಧರಿಸುತ್ತಿದ್ದವು. ಆಗ ನಾವೆಲ್ಲ ಪಡುತ್ತಿದ್ದ ಕಷ್ಟ ಅಷ್ಟು ಇಷ್ಟಲ್ಲ. ಕಂಠಪಾಠ ಮಾಡುವುದು, ಪರೀಕ್ಷೆಗಳಲ್ಲಿ ಯಥಾವತ್ತಾಗಿ ಉತ್ತರಿಸಿ ಅಂಕ ಪಡೆಯುತ್ತಿದ್ದೆವು. ಏನಾದರೂ ಕಂಠಪಾಠ ಮಾಡಿದ್ದು ಅಲ್ಲಲ್ಲಿ ಮರೆತು ಹೋದರೆ ಆ ನೆನಪಿಸಿಕೊಳ್ಳುವ ಸಾಹಸ ವರ್ಣಿಸಲು ಸಾಧ್ಯವಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ವಲಯವನ್ನು ಪರೀಕ್ಷಿಸಬಹುದಾಗಿತ್ತು. ಆ ಮಕ್ಕಳು ಪುಸ್ತಕ ಜ್ಞಾನವನ್ನು ಮಾತ್ರ ಹೊಂದಿದ್ದು ಕಲಿಕಾ ಪ್ರಕ್ರಿಯೆಯಲ್ಲಿ ಮುಂದುವರೆಯುತ್ತಿದ್ದರು. ಆದರೀಗ ಮಕ್ಕಳ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳ ಜ್ಞಾನಾತ್ಮಕ ವಲಯದ ಪ್ರಗತಿ ಜೊತೆಗೆ ಅವರ ಭಾವನಾತ್ಮಕ, ಕ್ರಿಯಾತ್ಮಕ ವಲಯವನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಅವಕಾಶ ನೀಡಿದ್ದು ಇದೇ ಸಿಸಿಇ. ಲಿಖಿತ ಮತ್ತು ಮೌಖಿತ ಪರೀಕ್ಷೆಗಳೆ ಶೈಕ್ಷಣಿಕ ಪರೀಕ್ಷೆಯ ಮಹಾದಂಡಗಳಾಗಿದ್ದು ಶಿಕ್ಷಕರು ಮತ್ತು ಮಕ್ಕಳಿಗೆ ಇಬ್ಬರಿಗೂ ಕಷ್ಟ ಆಗುತ್ತಿತ್ತು. ಮಕ್ಕಳಿಗೆ ಅಷ್ಟು ಕಲಿಕಾಂಶಗಳನ್ನು ಕಲಿಸಲೇಬೇಕೆಂಬ ನಮ್ಮ ಧಾವಂತದಲ್ಲಿ ಇಬ್ಬರು ಅದೆಷ್ಟು ಪರದಾಡುತ್ತಿದ್ದೆವು. ಮಗ್ಗಿಗಳ ಕಂಠಪಾಠ ನಮ್ಮ ತಾಳ್ಮೆಯನ್ನು ಪರೀಕ್ಷಿಸಿ ಬಿಡುತ್ತಿತ್ತು. ಒಂದು ದಿನ ಹೀಗಾಯಿತು. ಆಗ ಸಮಯ ರಾತ್ರಿ 10.30. ಆಗಿ ಪೋಷಕರೊಬ್ಬರಿಂದ ಕಾಲ್ ಬಂತು. ತಡರಾತ್ರಿ ಬಂದ ಪೋನ್ ಕಾಲ್‌ಗೆ ಬಹಳ ಆತಂಕವಾಯಿತು. ಕಾಲ್ ರಿಸೀವ್ ಮಾಡಿದಾಗ ಮೇಡಂ ನನ್ನ ಮಗನಿಗೆ ನೀವು ಏನು ಹೇಳಿದ್ದೀರಿ? ಎಂದರು ಆ ಪೋಷಕರು. ನನಗೆ ಗಾಬರಿಯಾಯಿತು. “ಏನಮ್ಮ, ವಿಷಯ” ಅಂದೆ. ಏನಿಲ್ಲ ಮೇಡಮ್. ಇವತ್ತು ಶನಿವಾರ. ನನ್ನ ಮಗ ಮಧ್ಯಾಹ್ನ ಶಾಲೆಯಿಂದ ಬಂದಾಗಿಂದ ಪುಸ್ತಕಗಳನ್ನು ಬಿಟ್ಟಿಲ್ಲ ಅಂದರು. ನನಗೆ ಬಹಳ ಖುಷಿಯಾಯಿತು. ನಾಳೆ ಪರೀಕ್ಷೆ ಇದೆ ಅದಕ್ಕೆ ಬುಕ್ ಹಿಡಿದು ಓದುತ್ತಿದ್ದಾನೆ. ಸಂತೋಷದ ವಿಷಯವಲ್ಲವೇ ಎಂದಾಗ, ಅಯ್ಯೋ ಮೇಡಮ್ ಅವನು ಪುಸ್ತಕ ತೆರೆದು ಒಂದು ಅಕ್ಷರವನ್ನು ಓದಿಲ್ಲ. ಆದರೆ ಪುಸ್ತಕ ಮಾತ್ರ ಕೆಳಗೆ ಇಟ್ಟಿಲ್ಲ ಎಂದರು. ಅವರಪ್ಪ ಮತ್ತು ನಾನು ಎಷ್ಟು ಹೇಳಿದರು ಪುಸ್ತಕ ಕೆಳಗೆ ಮಡಗಿಲ್ಲ. ಆಟವಾಡಲು ಹೋಗಿದ್ದನು. ಆಗಲು ಪುಸ್ತಕ ಕೈಯಲ್ಲೇ ಇದೆ. ಊಟ ಮಾಡುವಾಗಲೂ ಕೈಯಲ್ಲೆ ಇದೆ. ಹೊಲದ ಬಳಿ ಬಂದಿದ್ದ ಆಗಲು ಪುಸ್ತಕ ಕೈಲೆ ಹಿಡಿದಿದ್ದನು. ಈಗ ನೋಡಿದರೆ ಮಲಗುವಾಗಲೂ ಕೈಯಲ್ಲಿ ಪುಸ್ತಕ ಹಿಡಿದುಕೊಂಡೆ ಮಲಗಿದ್ದಾನೆ. ಕೇಳಿದ್ದಕ್ಕೆ ನೀವೇನೋ ಹೇಳಿದ್ದೀರಂತೆ, ಪುಸ್ತಕ ಕೆಳಗೆ ಇಡಬಾರದು ಅಂತ ಅಂದಾಗ ನನಗೆ ಅರ್ಥವಾಯಿತು. ಅಂದು ನಾನು “ಇದು ಪರೀಕ್ಷಾ ಸಮಯ. ನೀವೆಲ್ಲ ಶಾಲೆಯಿಂದ ಹೋಗಿ ಪುಸ್ತಕ ಮೂಲೆಗೆಸೆದು ತಿರುಗಲು, ಆಡಲು ಹೋಗಬಾರದು. ಇನ್ನು ಪರೀಕ್ಷೆ ಮುಗಿಯುವವರೆಗೂ ಪುಸ್ತಕ ಕೆಳಗೆ ಇಡುವಂತಿಲ್ಲ. ಸದಾ ಕಾಲ ಪುಸ್ತಕವನ್ನು ಕೈಯಲ್ಲೇ ಹಿಡಿದಿರಬೇಕು” ಎಂದಿದ್ದೆ. ನನ್ನ ಮಾತಿನ ಸೂಕ್ಷ್ಮಾರ್ಥವನ್ನು ಗ್ರಹಿಸದ ಆ ಮಗು ಕೇವಲ ಪುಸ್ತಕವನ್ನು ಕೈಯಲ್ಲಿ ಹಿಡಿದು ನನ್ನ ಮಾತಿನ ಪರಿಪಾಲನೆ ಮಾಡಿದ್ದನು. ನನಗಾಗ ಅರ್ಥವಾಯಿತು. ಯಾವುದೇ ವಿಷಯವನ್ನು ಮಕ್ಕಳಿಗೆ ಮಾರ್ಮಿಕವಾಗಿ, ಗೂಡಾರ್ಥದಲ್ಲಿ ಅಸ್ವಷ್ಟವಾಗಿ ಹೇಳಬಾರದು ಎಂದು. ಇಂತಹ ಸವಾಲುಗಳನ್ನ ಎದುರಿಸುವಲ್ಲಿ ಸಿಸಿಇ ಮೌಲ್ಯಮಾಪನ ತಂತ್ರ ಸಾಕಷ್ಟು ಉಪಯುಕ್ತವಾಗುತ್ತದೆ. “ವಿದ್ಯಾರ್ಥಿಯ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿನ ಸಾಧನೆ, ಶಾಲಾ ಸನ್ನಿವೇಶದಲ್ಲಿ ವಿವಿಧ ಪಾತ್ರ ನಿರ್ವಹಣೆ, ಪಾಲ್ಗೊಳ್ಳುವಿಕೆ ಮತ್ತು ಪ್ರಗತಿಯನ್ನು ವಿವಿಧ ತಂತ್ರಗಳ ಮೂಲಕ ಸಮಗ್ರವಾಗಿ ದಾಖಲಿಸಿಕೊಂಡು ವಿಶ್ಲೇಷಿಸಿ ಪಡೆದ ಒಳ ನೋಟಗಳಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಅನುಕೂಲಿಸುವ ಪ್ರಕ್ರಿಯೆಗೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ” ಎನ್ನುತ್ತೇವೆ. ನಿರಂತರ ಮೌಲ್ಯಮಾಪನ ಎಂದರೆ “ವಿದ್ಯಾರ್ಥಿಗಳ ಶಾಲೆಯಲ್ಲಿನ ಕಲಿಕಾ ಸಂದರ್ಭಗಳು ಹಾಗೂ ತೊಡಗಿಸಿಕೊಳ್ಳುವ ವಿವಿಧ ಚಟುವಟಿಕೆಗಳಲ್ಲಿನ ಅವರ ಸಹಜ ವರ್ತನೆಗಳನ್ನು ನಿರಂತರವಾಗಿ ಗಮನಿಸಿ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳನ್ನು ಪೋಷಿಸುವುದು”.ವ್ಯಾಪಕ ಮೌಲ್ಯಮಾಪನ ಎಂದರೆ “ನಿರ್ದಿಷ್ಟ ಪಡಿಸಿದ ಪಠ್ಯಕ್ಕೆ ಸೀಮಿತವಾಗದೆ ಸಹಪಠ್ಯ ಚಟುವಟಿಕೆಗಳನ್ನು ಒಳಗೊಂಡಂತೆ ಮಗುವಿನ ಎಲ್ಲಾ ವರ್ತನೆಗಳನ್ನು ಅಭಿವೃದ್ಧಿಗೊಳಿಸುವುದಾಗಿದೆ”. ನಿರಂತರ ಮೌಲ್ಯಮಾಪನದಿಂದ ಮಗುವಿನ ದೈಹಿಕ, ಬೌದ್ಧಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಯನ್ನು ಗಮನಿಸಿ ಪ್ರಗತಿಯ ನಿರಂತರತೆಯಲ್ಲಿ ಅರ್ಥೈಸಿಕೊಳ್ಳುವುದು”. ಇದರಿಂದ ಮಗುವಿನ ವ್ಯಕ್ತಿತ್ವ ಯಾವ ರೀತಿಯಲ್ಲಿ ವಿಕಸನಗೊಳ್ಳುತ್ತಿದೆ ಎಂದು ಸುಲಭವಾಗಿ ಗುರುತಿಸಬಹುದು. ವ್ಯಾಪಕ ಮೌಲ್ಯಮಾಪನದಿಂದ ಪಠ್ಯ ಸಹಪಠ್ಯ ಸಂಯೋಜಿತ ಹಾಗೂ ಮಗುವಿನ ಸಹಜ ವರ್ತನೆಯ ಕ್ಷೇತ್ರಗಳನ್ನು ಗಮನಿಸಿ ಅವುಗಳನ್ನ ಅಭಿವೃದ್ಧಿ ಪಡಿಸಬಹುದು. ಒಟ್ಟಾರೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದಿಂದ ಮಗುವಿನ ಸರ್ವಾಂಗಣ ಬೆಳವಣಿಗೆಯನ್ನು ನಿರಂತರವಾಗಿ ಅನುಕೂಲಿಸಲು ಸಾಧ್ಯವಾಗುತ್ತದೆ. ಹಿಂದಿಗಿಂತ ಇಂದು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಇಂದಿನ ಸಾಂಪ್ರದಾಯಿಕ ಮೌಲ್ಯಮಾಪನ ಪದ್ಧತಿ, ಕೇವಲ ಪಠ್ಯಪುಸ್ತಕಗಳನ್ನು ಓದುವುದು ಕಂಠಪಾಠ ಮಾಡುವುದು ಪಠ್ಯ ವಿಷಯಗಳಿಗೆ ಮಾತ್ರ ಸೀಮಿತವಾಗಿದ್ದರೆ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿದ್ಯಾರ್ಥಿಗಳ ಕಲಿಕೆ ಮಟ್ಟವನ್ನ ಅರ್ಥೈಸಿಕೊಳ್ಳೋದಕ್ಕೆ ಸಹಕಾರ ನೀಡುತ್ತೆ. ಮಕ್ಕಳ ಪ್ರಗತಿಯನ್ನು ಅರ್ಥೈಸಿಕೊಳ್ಳುವ ಸಲುವಾಗಿ ಸಾಧನ ಸಲಕರಣೆಗಳನ್ನು ರಚಿಸಿಕೊಳ್ಳಲು ಮತ್ತು ಪರಿಷ್ಕೃತಗೊಳಿಸಲು ದಾರಿ ಮಾಡಿಕೊಡುತ್ತದೆ. ಸಕಾಲದಲ್ಲಿ ಪೋಷಕರಿಗೆ ಪ್ರಗತಿಯನ್ನು ಅರ್ಥೈಸಿಕೊಳ್ಳಬೇಕು. ನಾನು ಎಲ್ಲಿದ್ದೇನೆ ನಾನು ನೀಡಬೇಕಾದ ಕಲಿಕೆ ಅನುಭವಗಳು ಯಾವುವು? ಎಂದು ಅರಿಯಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗೆ ತನ್ನ ಕಲಿಕೆಯ ಬಗ್ಗೆ ಆತ್ಮ ವಿಶ್ವಾಸವನ್ನು ಮೂಡಿಸಲು ಹಾಗೂ ಅಪೇಕ್ಷಿತ ಬೆಳವಣಿಗೆ ಕಡೆಗೆ ಮಾರ್ಗದರ್ಶಿಸಲು ನೆರವಾಗುತ್ತದೆ. ಯಾವುದೇ ಭಯ ಆತಂಕಗಳಿಲ್ಲದೆ ಸ್ವಚ್ಛ ಪರಿಸರದಲ್ಲಿ ಕಲಿಯಲು ಸಹಕಾರ ನೀಡುತ್ತದೆ. ಅಪೇಕ್ಷಿತ ಶಾಲಾ ಸನ್ನಿವೇಶವನ್ನು ನಿರ್ಮಾಣ ಮಾಡುತ್ತದೆ. ಗುಣಮಟ್ಟದ ಶಿಕ್ಷಣ ಅಭಿವೃದ್ಧಿಯನ್ನ ಕಾಲಕಾಲಕ್ಕೆ ದಾಖಲಿಸುತ್ತದೆ. ನಿರಂತರ ವ್ಯಾಪಕ ಮೌಲ್ಯಮಾಪನವು ಭಾಷೆಗಳು, ಲಲಿತ ಕಲೆ, ಜೀವನ ಶಿಕ್ಷಣ, ಮೌಲ್ಯಗಳ ಅರಿವು, ಗುಂಪಿನಲ್ಲಿ ವರ್ತನೆ, ದೈಹಿಕ ಹಾಗೂ ಕ್ರೀಡೆ, ಶಾಲಾ ಚಟುವಟಿಕೆಗಳು, ಇವೆಲ್ಲವನ್ನು ಸಮಗ್ರವಾಗಿ ಒಳಗೊಂಡಿರುತ್ತದೆ. ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನವು ಸಂದರ್ಶನ, ಸಮೀಕ್ಷೆ, ಮೌಖಿಕ ಅಭಿವ್ಯಕ್ತಿ, ಸಹವರ್ತಿ ಪರೀಕ್ಷೆ, ಪ್ರತಿಫಲನ, ಅವಲೋಕನ, ವ್ಯಕ್ತಿ ವೃತ್ತಾಂತ ದಾಖಲೆ, ಅಭ್ಯಾಸ ಪುಸ್ತಕ, ಗೃಹ ಪಾಠ, ಘಟಕ ಪರೀಕ್ಷೆ, ಕಿರುಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ವಾರ್ಷಿಕ ಪರೀಕ್ಷೆ, ಆರೋಗ್ಯ ದಾಖಲೆ, ಮಕ್ಕಳ ಅವಲೋಕನ ಹಾಳೆ, ಪ್ರಗತಿಪತ್ರಗಳು, ಪ್ರಗತಿ ನೋಟ, ಸಂಚಿತ ದಾಖಲೆ, ಮಾಹಿತಿ ಹಂಚಿಕೊಳ್ಳುವಿಕೆ, ಗುಂಪು ಚರ್ಚೆ, ಪ್ರಶ್ನೋತ್ತರ, ಆಟ, ನ್ಯಾಯಾಮ, ಆರೋಗ್ಯ, ಕಥೆ ಹೇಳುವುದು, ಕೈಬರಹ ಓದುವುದು, ಸಂಭಾಷಣೆ, ಸಮೀಕ್ಷೆ, ಯೋಜನೆ, ಪ್ರಯೋಗಗಳು, ನಿಯೋಜಿತ ಕಾರ್ಯಗಳೆಲ್ಲವನ್ನು ಒಳಗೊಂಡಿರುತ್ತದೆ. ಒಟ್ಟಿನಲ್ಲಿ ಸಿಸಿಇ ಮೌಲ್ಯ ಮಾಪನ ಪದ್ಧತಿ ವಿನೂತನವಾಗಿದ್ದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ.‌ ಮಕ್ಕಳಿಗೆ‌ ಬರವಣಿಗೆಯ ಹೊರತಾಗಿ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಲು ಅವಕಾಶ ನೀಡುತ್ತದೆ. ಆ ಮೂಲಕ ಮಕ್ಕಳಲ್ಲಿ ಇರುವ ಪರೀಕ್ಷಾ ಭಯ, ಹಿಂಜರಿಕೆಯನ್ನು ಹೋಗಲಾಡಿಸಿ. ಭಯ ಮುಕ್ತ ಮೌಲ್ಯ ಮಾಪನ ಮಾಡುವ ಮೂಲಕ ಮಕ್ಕಳನ್ನು ಪ್ರೇರೇಪಿಸುತ್ತದೆ. ಪ್ರತಿಯೊಂದು ಮಗುವು ವಿಶಿಷ್ಟ ಹಾಗೂ ವಿಭಿನ್ನ. ಅವರವರ ಆಸಕ್ತಿಗೆ ಅನುಗುಣವಾಗಿ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಚಟುವಟಿಕೆಗಳು ಇದು ಪ್ರೋತ್ಸಾಹಿಸುತ್ತದೆ. ಪಠ್ಯದ ಜ್ಞಾನಕ್ಕಿಂತ ತೊಡಗಿಸಿಕೊಳ್ಳುವಿಕೆ ಬಹುಮುಖ್ಯವಾಗಿದ್ದು ಮಕ್ಕಳು ತಾವು ಶಾಲೆಯಲ್ಲಿ ಕಲಿತಿದ್ದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗುವ ಸಿಸಿಇ ಶಿಕ್ಷಣ ಕ್ಷೇತ್ರದ ಮಹತ್ವದ ಯೋಜನೆಯಾಗಿದೆ. ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.