ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶಿರಸಿಯ ಶೋಭಾ ಹಿರೇಕೈ ಅವರ ಚೊಚ್ಚಲ ಕವನ ಸಂಕಲನ ಈ ‘ಅವ್ವ ಮತ್ತು ಅಬ್ಬಲಿಗೆ’. ಸುಮಾರು ನಲವತ್ತು ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ಹಿರಿಯ ಕವಿ ವಿಷ್ಣು ನಾಯ್ಕರು ತಮ್ಮ ಸುದೀರ್ಘ ಮುನ್ನುಡಿಯ ಆರಂಭದಲ್ಲಿಯೇ ‘ಇದೊಂದು ದೇಸಿ ಚಿಂತನೆಯ ನೆಲ ಮೂಲದ ಕವನ ಗುಚ್ಛ’ ಎಂದು ಉಲ್ಲೇಖಿಸಿದ್ದಾರೆ. ಈ ಕೃತಿಯ ಶೀರ್ಷಿಕೆಯೇ ಅವರ ಮಾತನ್ನು ಅನುಮೋದಿಸುವಂತಿದೆ. ಕನಕಾಂಬರ ಹೂವನ್ನು ನಮ್ಮ ಆಡುಭಾಷೆಯಲ್ಲಿ ಅಬ್ಬಲಿಗೆ ಅಥವಾ ಅಬ್ಬಲಿ ಹೂವು ಎಂದು ಕರೆಯುತ್ತೇವೆ.ಈ ಅಬ್ಬಲಿಗೆ ಹೂವು ಯಾವುದೇ ರೀತಿಯ ಸುವಾಸನೆ ಇರದೇ, ಬಣ್ಣದ ಅಬ್ಬರವಿಲ್ಲದೇ ತನ್ನ ನಯವಾದ ಸ್ವಭಾವದಿಂದಲೇ ಎಲ್ಲರನ್ನೂ ಸೆಳೆಯಬಲ್ಲ ಹೂವು, ನಮ್ಮ ಹಳ್ಳಿಯ ಹೆಣ್ಣುಮಕ್ಕಳಿಗಂತೂ ಬಲು ಆಪ್ತವಾದ ಹೂವು ಈ ಅಬ್ಬಲಿಗೆ.ಉತ್ತರಕನ್ನಡ ಜಿಲ್ಲೆಯಲ್ಲಿ ಇಂದಿಗೂ ಅಬ್ಬಲಿಗೆ ಗಿಡಗಳ ನೆಟ್ಟು ಬೆಳೆಸಿ ಹೂ ಬಿಟ್ಟಾಗ ಅದನ್ನು ಕೊಯ್ದು ಚೆಂದದ ದಂಡೆಗಳ ಕಟ್ಟಿ ಮಾರಾಟಮಾಡಿ ತಮ್ಮ ಕೈಖರ್ಚಿಗೆ ಪುಡಿಗಾಸು ಕೂಡಿಹಾಕುವ ನನ್ನ ಅಮ್ಮನಂತಹ ನೂರಾರು ಅಮ್ಮಂದಿರನ್ನು ಕಾಣಬಹುದು.ಹೀಗಾಗಿ ಅವ್ವಳ ಆಪ್ತ ಸಖಿ ಅಬ್ಬಲಿಗೆ ನಮ್ಮ ಆಪ್ತ ಸಖಿಯೂ ಹೌದು. ಅವ್ವ ಮತ್ತು ಅಬ್ಬಲಿಗೆಯ ಒಡನಾಟದಲ್ಲಿ ಬೆಳೆದ ನಮಗೆ ಅಥವಾ ಈ ಕವಿಗೆ ಅವೆರಡೂ ಒಂದೇ ಚೌಕಟ್ಟಿನಲ್ಲಿ ಕಾಣುವ ಚಿತ್ರವಾಗಿ ಮನದಲ್ಲಿ ಅಚ್ಚೊತ್ತಿರುವುದು ಸಹಜವೇ ಆಗಿದೆ.. ಅನೇಕ ವರುಷಗಳಿಂದ ಶೋಭಾ ಹಿರೇಕೈ ಅವರ ಬಿಡಿ ಬಿಡಿ ಕವಿತೆಗಳನ್ನು ಓದುತ್ತಾ ಬಂದ ನನಗೆ ಅವರ ಕವಿತೆಗಳಲ್ಲಿ ಹಾಗೂ ಅವರ ವೈಯಕ್ತಿಕ ನಿಲುವುಗಳಲ್ಲಿ ಆದ ಪಲ್ಲಟವನ್ನು ಬಹಳ ಹತ್ತಿರದಿಂದ ನೋಡಲು ಸಾಧ್ಯವಾಗಿದೆ.ಇಲ್ಲಿರುವ ಕವಿತೆಗಳನ್ನೂ ಕೂಡ ಅವರ ಬರವಣಿಗೆಯ ಕಾಲಘಟ್ಟದ ಆಧಾರದ ಮೇಲೆ ವರ್ಗೀಕರಿಸಬಹುದಾಗಿದೆ ಮತ್ತು ಅವು ಕಾಲದ ಜೊತೆ ತನ್ನನ್ನು ಹಿಗ್ಗಿಸಿಕೊಳ್ಳುತ್ತಾ ಬಂದ ಬಗೆಯನ್ನು ಗಮನಿಸಬಹುದಾಗಿದೆ. ದಿನದಿಂದ ದಿನಕ್ಕೆ ಸಾಮಾಜಿಕ ನೆಮ್ಮದಿ ಕುಸಿಯುತ್ತಿರುವ ಹೊತ್ತಲ್ಲಿ ಲೇಖಕನೊಬ್ಬ ತನ್ನ ಜವಾಬ್ದಾರಿಗಳನ್ನು ಹೆಚ್ಚೆಚ್ಚು ಅರ್ಥೈಸಿಕೊಳ್ಳುತ್ತಾ, ಆ ಎಚ್ಚರವನ್ನು ತನ್ನ ಬರವಣಿಗೆಯ ಮೂಲಕ ವ್ಯಕ್ತಪಡಿಸುವುದು ಈ ಕಾಲದ ಅಗತ್ಯವಾಗಿದೆ ಮತ್ತು ಈ ಕವಿ ಆ ಎಚ್ಚರಿಕೆಯನ್ನು ತನ್ನೊಳಗೆ ಜಾಗೃತವಾಗಿಟ್ಟುಕೊಂಡಿದ್ದಾರೆ ಎಂಬುದನ್ನು ಅವರ ಕವಿತೆಗಳೇ ಸಾರಿ ಹೇಳುತ್ತವೆ.. ನನಗೆ ಕೊಂಚ ಆಶ್ಚರ್ಯವಾದ ಒಂದು ಸಂಗತಿಯೆಂದರೆ, ಸಾಮಾನ್ಯವಾಗಿ ಲೇಖಕನೊಬ್ಬ ತನ್ನ ಮೊದಲ ಕೃತಿಯನ್ನು ತಂದೆ-ತಾಯಿಯವರಿಗೋ, ಕುಟುಂಬದ ಆಪ್ತ ಜೀವಕ್ಕೋ ಅಥವಾ ತನ್ನನ್ನು ಪ್ರೋತ್ಸಾಹಿಸಿದ ಹಿರಿಯರಿಗೋ ಅರ್ಪಿಸುವುದನ್ನು ಗಮನಿಸುತ್ತೇವೆ.. ಆದರೆ ಇಲ್ಲಿ ಕವಿ ತನ್ನ ಕೃತಿಯನ್ನು ‘ಈ ನೆಲದ ಶ್ರಮಿಕರ ಬೆವರಿಗೆ’ ಅರ್ಪಿಸುವ ಮೂಲಕ ಶ್ರಮ ಸಂಸ್ಕ್ರತಿಗೆ ದೊಡ್ಡ ಗೌರವವನ್ನು ಸಲ್ಲಿಸಿದ್ದಾರೆ.ಅಂತೆಯೇ ಈ ಸಂಕಲನದ ಅನೇಕ ಕವಿತೆಗಳಲ್ಲಿ ಶ್ರಮ ಸಂಸ್ಕ್ರತಿಯನ್ನು ಬಿಂಬಿಸುವ, ದುಡಿಯುವರ ದನಿಯಾಗುವ ಪ್ರಾಮಾಣಿಕ ಪ್ರಯತ್ನವಿದೆ.. ಇನ್ನು ಒಬ್ಬ ಲೇಖಕ ತನ್ನ ಬರವಣಿಗೆಯ ಸ್ಪಷ್ಟ ಉದ್ದೇಶವನ್ನು ತಾನು ಯಾರಿಗಾಗಿ ಮತ್ತು ಯಾಕಾಗಿ ಬರೆಯುತ್ತಿರುವೆ ಎನ್ನುವ ಸ್ಪಷ್ಟ ಮುನ್ನೋಟವನ್ನು ಹೊಂದಿರುವ ಅಗತ್ಯತೆ ಖಂಡಿತವಾಗಿಯೂ ಇರುತ್ತದೆ.ಅಂತಹ ಒಂದು ಕವಿಯ ನಿಲುವನ್ನು ಸೂಚಿಸುವ ‘ನನ್ನ ಕವಿತೆ’ ಎಂಬ ಕವನದಲ್ಲಿ ನನ್ನ ಕವಿತೆ ರೂಪಕ ಪ್ರತಿಮೆಗಳ ಭಾರ ಹೊಂದಿಲ್ಲಾ ಎನ್ನುತ್ತಾ “ನನ್ನೀ ಕವಿತೆ ದಿನವಿಡಿ ಬೆವರ ಮಿಂದು ಜಗುಲಿ ಕಟ್ಟೆಗೊರಗಿ ಬಿಡುವ ನನ್ನಪ್ಪನಂಥ ಅಪ್ಪಂದಿರಿಗಾಗಿ, ಹಾಡು-ಹಸೆ, ಕಸ ಮುಸುರೆ ಮುಗಿಸಿ ಹಂಡೆ ನೀರು ಮಿಂದು ಹಗುರಾಗುವ ನನ್ನವ್ವನಂಥ ಅವ್ವಂದಿರಿಗಾಗಿ, ಎದೆ ಸಿಗಿದರೂ ನಾಲ್ಕಕ್ಷರ ಕಾಣದ ಅಣ್ಣ ಕರಿಯಣ್ಣನಂಥವರಿಗಾಗಿ..” ಎಂದು ತನ್ನ ಬರವಣಿಗೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಾರೆ. ಹೀಗಿದ್ದರೂ ಇವರ ಕವಿತೆಗಳಲ್ಲಿ ಬಹಳ ಸಶಕ್ತವಾದ ರೂಪಕ, ಪ್ರತಿಮೆಗಳು ಕಾಣಸಿಗುತ್ತವೆ.ಆದರೆ ಅವು ಎಲ್ಲಿಯೂ ಕವಿತೆಗೆ ಹೇರಿಕೆಯಾಗದೇ ಆಡುಮಾತಿನ ಪದಗಳಿಂದ ಸರಳವಾಗಿಯೂ, ಆಕರ್ಷಣೀಯವಾಗಿಯೂ ಮೂಡಿ ಬಂದಿವೆ.. ‘ಅವ್ವ ಮತ್ತು ಅಬ್ಬಲಿಗೆ’ ಕವಿತೆಯಲ್ಲಿ “ಅವ್ವ ನೆಟ್ಟ ಅಬ್ಬಲಿಗೆ ಓಣಿ ತಿಂಗಳ ಮೊದಲೇ ಮೈ ನೆರೆಯುತ್ತದೆ. ಮತ್ತು ಮಿಂದ ಹುಡುಗಿಯರ ಮುಡಿಯೇರಿ ರಂಗಾಗುತ್ತವೆ.” ಇಲ್ಲಿ ಅಬ್ಬಲಿಗೆ ಓಣಿ ಮೈನೆರೆಯುವ ರೂಪಕ ಸೊಗಸಾಗಿದೆ.ಹಾಗೆಯೇ ಈ ಕವಿತೆಯ ಕೊನೆಯಲ್ಲಿ “ಈಗೀಗ ಮಲ್ಲಿಗೆಯ ಕಂಪಿಗೆ ಮಾರು ಹೋದರೂ ಅಬ್ಬಲಿಗೆಯ ಕೆಂಪನ್ನು ಮರೆತಿಲ್ಲ.” ಎನ್ನುವ ಮೂಲಕ ತವರಿನ ಭಾವನಾತ್ಮಕ ನಂಟನ್ನು ಅಬ್ಬಲಿಗೆಯ ರೂಪಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ಮಾದರಿಯ ಇನ್ನೊಂದು ಕವಿತೆ ‘ಮೀಯುವುದೆಂದರೆ’ “ಮೀಯುವುದೆಂದರೆ ಬುರುಗು ನೊರೆಯಲ್ಲಿ ನೆಂದು ಮೈಯ್ಯುಜ್ಜಿ ಈಚೆ ಬರುವುದಲ್ಲ ನನಗೆ ಬದಲು ಹರಯವನ್ನೇ ಚಂಬು ಚಂಬಾಗಿ ಮೊಗೆದು ಮೈ ಮನಕ್ಕೆರೆದು ಕೊಳ್ಳುವುದು ಥೇಟ್ ಇವನ ಪ್ರೀತಿಯಂತೆ.” “ಆ ಬಚ್ಚಲೇ ಆಪ್ತ ಮತ್ತೆಲ್ಲವೂ ಅಲ್ಲಿ ಗುಪ್ತ ಗುಪ್ತ” ಹೀಗೆ ತವರಿನ ಹಂಡೆ ಒಲೆಯ ಬಿಸಿ ನೀರಿನ ಸ್ನಾನದ ಮೂಲಕ ತನ್ನ ಯವ್ವನದ ರೋಮಾಂಚಕತೆಗಳು ತೆರೆದುಕೊಳ್ಳುತ್ತಿದ್ದ ಬಗೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ.ಜೊತೆಗೆ ಈ ಕವಿತೆ ಹಂಡೆ ಒಲೆಯ ಬಚ್ಚಲನ್ನೂ ಹಾಗೂ ಈ ಕಾಲದ ಆಧುನಿಕ ವ್ಯವಸ್ಥೆಗಳುಳ್ಳ ‘ಬಾತ್ ರೂಮ್’ ಗಳನ್ನು ಅಕ್ಕಪಕ್ಕದಲ್ಲಿಟ್ಟು ಕಳೆದುಕೊಂಡ ಭಾವಗಳ ಹೆಕ್ಕುತ್ತಿದ್ದಾರೆ.. ಈ ಸಂಕಲನದ ಬಹಳ ಮುಖ್ಯವಾದ ಕವಿತೆಗಳಲ್ಲಿ ‘ಹೆಚ್ಚೆಂದರೇನು ಮಾಡಿಯೇನು’ ಎಂಬ ಕವಿತೆಯೂ ಒಂದು. ಹೆಣ್ಣಿನ ಮುಟ್ಟು ಮತ್ತು ಆ ಕಾರಾಣಕ್ಕಾಗಿ ಅಯ್ಯಪ್ಪನ ದೇಗುಲ ಪ್ರವೇಶ ನಿಷಿದ್ಧ ಎಂಬ ವಿಚಾರದ ಸುತ್ತ ನಡೆದ ರಾಜಕೀಯ ಪ್ರೇರಿತ ಹಿಂಸಾತ್ಮಕ ಘಟನೆಗಳನ್ನು ಕವಿ ತನ್ನದೇ ಆದ ತೀಕ್ಷ್ಣ ದ್ವನಿಯಲ್ಲಿ ಖಂಡಿಸುತ್ತಾರೆ. ತಾನೂ ಅಯ್ಯಪ್ಪನ ದೇಗುಲಕ್ಕೆ ಬಂದರೆ ಏನು ಮಾಡಬಲ್ಲೆ ಎಂಬುದನ್ನು ನೆನೆಸಿಕೊಳ್ಳುತ್ತಾ ಆರಂಭವಾಗುವ ಈ ಕವಿತೆ ಅಯ್ಯಪ್ಪನನ್ನು ತನ್ನ ಮಗುವಂತೆ ಕಂಡು ಅವನ ಜೊತೆ ಮಮಕಾರದಿಂದ ಮಾತನಾಡುವ ರೂಪದಲ್ಲಿ ಮುಂದುವರೆಯುತ್ತದೆ.. “ಹೆಚ್ಚೆಂದರೆ ನಾನಲ್ಲಿ ಏನು ಮಾಡಿಯೇನು? ನನ್ನ ಮಗನಿಗೂ ನಿನಗೂ ಯಾವ ಪರಕ್ಕೂ ಉಳಿದಿಲ್ಲ ನೋಡು ಬಾ ಮಲಗಿಕೋ ನನ್ನ ಮಡಿಲಲ್ಲಿ ನನ್ನ ಮುಟ್ಟಿನ ಕಥೆಯ ನಡೆಯುತ್ತಿರುವ ಒಳಯುದ್ಧಗಳವ್ಯಥೆಯ ನಿನಗೆ ಹೇಳಿಯೇನು” ಎನ್ನುತ್ತಾರೆ. ಹೀಗೆ ಅಯ್ಯಪ್ಪನೆಂಬ ಜಗತ್ತು ನಂಬುವ ದೇವನಿಗೂ ಈ ಕವಿ ತಾಯಿಯಾಗುತ್ತಾರೆ. ಕವಿತೆಯ ಕೊನೆಯಲ್ಲಿ ಈ ತಾಯಿ ಅಯ್ಯಪ್ಪನನ್ನೇ ನೇರವಾಗಿ ” ಹೇಳು ನನ್ನ ಮುಟ್ಟು ನಿನಗೆ ಮೈಲಿಗೆಯೇ” ಎಂದು ಕೇಳುವ ಮೂಲಕ ಬಂಡಾಯದ ಧ್ವನಿಯನ್ನು ಎತ್ತುತ್ತಾರೆ, ಅಲ್ಲದೇ ದೇವರೆಂಬ ನಂಬಿಕೆ ಮತ್ತು ಹೆಣ್ಣಿನ ನಡುವೆ ತಡೆಗೋಡೆಯಾಗಿ ನಿಂತಿರುವ ವೈದಿಕಶಾಹಿಯನ್ನು ಮೀರಿ ದೇವರ ಜೊತೆಗೇ ನೇರ ತರ್ಕಕ್ಕಿಳಿವ ಈ ಕವಿತೆಯ ಮಾದರಿ ಪರಿಣಾಮಕಾರಿಯಾಗಿದೆ.. ಒಬ್ಬ ಹೆಣ್ಣುಮಗಳಷ್ಟೇ ಬರೆಯಬಹುದಾದ ಕವಿತೆ ಎಂಬಷ್ಟು ತಾಯಿಯ ಅಂತಃಕರಣದಿಂದ ಕೂಡಿದೆ.. ಈ ಸಂಕಲನದ ‘ಕವನ ಹುಟ್ಟುವ ಹೊತ್ತು’ ಎಂಬ ಕವಿತೆ ನನಗೆ ಬಹಳ ಮೆಚ್ಚುಗೆಯಾದದ್ದು. ಕುಟುಂಬದೊಳಗೆ ಹೆಣ್ಣಿನ ಅಸಹಾಯಕ ಸ್ಥಿತಿಯನ್ನು ಮತ್ತದೇ ತಣ್ಣನೆಯ ದ್ವನಿಯಲ್ಲಿ ತೆರೆದಿಡುತ್ತದೆ. “ಎಲ್ಲಾ ದಿಕ್ಕು ಕೇಳಿಸಿ ಮಾಡಿಸಿದ್ದ” ಮನೆಯಲ್ಲಿ “ಬರೆಯಲು ಕುಳಿತರೆ ಜಾಗದ ಕೊರತೆ” ಮಗನ ಕೋಣೆಯಲ್ಲೋ, ಹಜಾರದಲ್ಲೋ, ಕೊನೆಗೆ “ರೂಮೊಳು ಬಂದರೆ ನನ್ನವನ ಧ್ವನಿ ಲೈಟಾರಿಸಿ ಮಲಗು ಬೆಳಿಗ್ಗೆ ಬೇಗನೆ ಏಳಬೇಕಲ್ಲ! ಕಾಳಜಿಯೋ? ಆಹ್ವಾನವೋ? ಪೆನ್ನು ಪಕ್ಕಕ್ಕಿರಿಸಿ ಒರಗುತ್ತೇನೆ,ನನ್ನ ಕವನಗಳು ಕಳೆಯುತ್ತವೆ ರಾತ್ರಿಯಲ್ಲಿ!” ಹೀಗೆ ಮನೆಯೊಡತಿ ಪಟ್ಟ ಹೊತ್ತಿರುವ ಹೆಣ್ಣು ಮಗಳಿಗೆ ಆ ಮನೆ ಹೇಗೆ ತನ್ನದಲ್ಲ ಎಂಬ ಅಪರಿಚಿತ ಬಾವ ತಂದುಬಿಡಬಲ್ಲದು; ತನ್ನ ಏಕಾಂತವ, ತನ್ನೊಳಗಿನ ತುಮುಲಗಳ ಬಿಡುಗಡೆಗೆ ಪುಟ್ಟ ಅವಕಾಶವೂ ಇಲ್ಲದೇ ನೋವುಗಳೆಲ್ಲಾ ಒಳಗೊಳಗೇ ಇಂಗಿಹೋಗುವ ಬಗೆಯನ್ನು ಈ ಕವಿತೆ ಹೇಳುತ್ತದೆ.. ಹಾಗೆಯೇ ಇಲ್ಲಿನ ಎರಡು ಬೇರೆ ಬೇರೆ ಕವಿತೆಗಳಲ್ಲಿ ವ್ಯಕ್ತವಾಗಿರುವ ಹೆಣ್ಣಿನ ಭಿನ್ನ ಧ್ವನಿಗಳು ಮತ್ತು ಆ ಮೂಲಕ ಆಕೆ ಸಂಬಂಧಗಳನ್ನು ಕೊನೆಯ ಹಂತದವರೆಗೂ ಕಾಪಾಡಿಕೊಳ್ಳಲು ಪ್ರಯತ್ನಿಸುವ ಬಗೆಯನ್ನು ಕಾಣಬಹುದಾಗಿದೆ. ‘ಕಲ್ಲಾದವಳಿಗೆ’ ಕವಿತೆಯಲ್ಲಿ ” ಒಬ್ಬನ ಮೋಸ ಇನ್ನೊಬ್ಬನ ಶಾಪಕ್ಕೆ ಗುರಿಯಾಗಿಯೂ ನೀ ಮೊಕ್ಷಕ್ಕೂ ಮತ್ತೊಬ್ಬನಿಗಾಗಿಯೇ ಕಾದೆಯಲ್ಲವೇ? ಅದಕ್ಕೇ ತಕರಾರಿದೆ ನಿನ್ನ ಬಗ್ಗೆ” ಎಂದು ತಕರಾರು ತೆಗೆಯುವ ಕವಿ ‘ಪಂಜರದ ಪಕ್ಷಿ’ ಕವಿತೆಯಲ್ಲಿ “ಸಿಹಿಮುತ್ತ ನೀಡಿ ಹಿತವಾಗಿ ಮೈ ಸವರಿ ಕಳಿಸುವ ಪರಿ ನಿನಗೆ ಬಾರದೇನು?” ಎಂದು ತಾನು ಗೂಡುಬಿಟ್ಟು ಹಾರಲು ಶಕ್ತವಾಗಿದ್ದರೂ ಆತನೇ ಪ್ರೀತಿಯಿಂದ ಹೊರ ಬಿಡಬಾರದೇಕೆ ಎಂದೂ ಹಂಬಲಿಸುತ್ತಾರೆ.. ಮತ್ತೆ ಮತ್ತೆ ಯುದ್ಧ ಈ ತಲೆಮಾರಿನ ಲೇಖಕರನ್ನು ಕಾಡುತ್ತಲೇ ಇದೆ.ಎಲ್ಲೆಲ್ಲೂ ಯುದ್ಧದ ಉನ್ಮಾದವೇ ತುಂಬಿಕೊಳ್ಳುತ್ತಿರುವ ಅಥವಾ ಕೃತಹ ಕಾರಣಗಳು ಯುದ್ಧವನ್ನು ಉತ್ತೇಜಿಸುತ್ತಿರುವ ಈ ಹೊತ್ತಲ್ಲಿ ಯುದ್ಧದ ನಿರರ್ಥಕತೆಯನ್ನೂ ಜನರೆದುರು ತೆರೆದಿಡುವ ಕೆಲಸ ಲೇಖಕನ ಕರ್ತವ್ಯವೂ ಹೌದು.. ಈ ಸಂಕಲನದ ‘ಯುದ್ಧ-ಬುದ್ಧ’ ಎಂಬ ಕವಿತೆಯಲ್ಲಿ ಕವಿ ಯುದ್ಧ ಶುರುವಾಗಿಯೇ ಬಿಡುವ ಭೀತಿಯಿಂದ ಬುದ್ಧನಲ್ಲಿ ವಿನಂತಿಸಿಕೊಳ್ಳುತ್ತಾರೆ “ನೀ ಬರಲು ಈಗಲೇ ಸರಿಯಾಗಿದೆ ಕಾಲ ಬಂದುಬಿಡು, ಬೆರಳೇ ಬೇಕೆಂದವನಿಗೆ ನೀ ಹೇಳಿದ ಕಥೆಯನ್ನೊಮ್ಮೆ ಹೇಳಿ ಬಿಡು ಯುದ್ಧ ನಿಂತಾದರೂ ನಿಲ್ಲಲಿ ಇಲ್ಲಿ” ಎನ್ನುತ್ತಾರೆ.. ಈ ಕವಿತೆಯ ಉದ್ಧಕ್ಕೂ ಯುದ್ಧದ ಕಾರಣಗಳನ್ನು, ಅಲ್ಲಿ ಬಲಿಯಾಗುವ ಅಮಾಯಕರ ನೋವನ್ನೂ ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ.. ಹೀಗೇ ಕಾಲದ ತಲ್ಲಣಗಳಿಗೆ ಪ್ರತಿಕ್ರಿಯೆಯಾಗಿ, ಪ್ರತಿರೋಧವಾಗಿ ಇಲ್ಲಿನ ಅನೇಕ ಕವಿತೆಗಳು ಧ್ವನಿಯೆತ್ತುತ್ತವೆ.. ‘ಗುರ್ ಮೆಹರ್ ನ ಅಂತರಂಗ’ ಕವಿತೆಯಲ್ಲಿ “ಹೇಳು ಅಶೋಕ ಕಳಿಂಗ ನಿನ್ನ ಕಾಡಿದಂತೆ ಕಾರ್ಗಿಲ್ ನನ್ನ ಕಾಡುತ್ತಿದೆ ಯುದ್ಧವನ್ನು ಯುದ್ಧವನ್ನದೇ ಇನ್ನೇನನ್ನಲ್ಲಿ?” ‘ನಾವು ಮತ್ತು ಅವರು’ ಕವಿತೆಯಲ್ಲಿ “ನಾವೋ… ದಿಂಬಿನ ಜೊತೆಗೆ ನಿದ್ದೆಯನ್ನೂ ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಇಲ್ಲಿ ಈ ಮಹಡಿ ಮನೆಯಲ್ಲಿ” ‘ಉಯಿಲೊಂದ ಬರೆದಿಡುವೆ’ ಕವಿತೆಯಲ್ಲಿ “ನನ್ನ ರಕ್ತವೇನಾದರೂ ಚೆಲ್ಲಿಬಿಟ್ಟರೆ ಸೇರಿಸಿ ಬಿಡಿ ಚಮಚ-ಚಮಚದಷ್ಟು ಎಲ್ಲಾ ಧರ್ಮಗಳ ಬಾಟಲಿಗಳ ಮೇಲೆ ಕಾಲಕಾಲಗಳಾಚೆಯಾದರೂ ‘ಪ್ರೇಮಧರ್ಮ’ವೊಂದು ಹುಟ್ಟಿ ಬಿಡಲಿ ನನ್ನ ರಕ್ತದಿಂದ” ಹೀಗೆ ವರ್ತಮಾನದ ಸಮಸ್ಯೆಗಳಿಗೆ ಸ್ಪಂಧಿಸುತ್ತಾ, ತನ್ನ ಬದುಕು ಬವಣೆಗಳನ್ನು, ತವರಿನ ಕಾಡುವ ಮಧುರ ನೆನಪುಗಳನ್ನು ಮತ್ತೆ ಮತ್ತೆ ಪೋಣಿಸುತ್ತಾ, ಮಲೆನಾಡಿನ ಪ್ರಕೃತಿಯ ಜೊತೆ ಜೊತೆಗೇ ಸಾಗುತ್ತಾ,ತನ್ನ ನೆಲದ ಭಾಷೆ ಸಂಸ್ಕ್ರತಿಗಳನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಾ ಈ ಕವಿ ತನ್ನ ಮೊದಲ ಸಂಕಲನವನ್ನು ಓದುಗರ ಕೈಗಿಟ್ಚಿದ್ದಾರೆ.. ಮೊದಲ ಸಂಕನದ ಕೆಲವು ಮಿತಿಗಳು ಇಲ್ಲಿಯೂ ಇವೆಯಾದರೂ ಅವು ಓದಿನ ಖುಷಿಗೆ ತಡೆಯಾಗುವುದಿಲ್ಲ.. ಕೆಲವು ಕಡೆ ಸೇರಿಹೋಗಿರುವ ಇಂಗ್ಲೀಷ್ ಪದಗಳು, ತುಸು ಎಳೆದಂತಾಯಿತೇನೋ ಎಂದೆನಿಸಿದ ಒಂದೆರಡು ಕವಿತೆಗಳು, ಹೆಚ್ಚಿನ ಕವಿತೆಗಳಲ್ಲಿ ಕಂಡುಬಂದ ಏಕತಾನತೆ ಹೀಗೇ ಸಣ್ಣ ಪುಟ್ಟ ದೋಷಗಳನ್ನು ಹುಡುಕಬಹುದಾದರೂ ಕವಿಯ ಮೊದಲ ಪ್ರಯತ್ನವಾಗಿ ಈ ಸಂಕಲನ ಬಹುತೇಕ ಓದುಗರ ಮನಸ್ಸನ್ನು ಗೆಲ್ಲಬಲ್ಲದು ಎಂದು ಭಾವಿಸುತ್ತೇನೆ.. ತನ್ನ ಸುತ್ತಲಿನ ಎಲ್ಲವನ್ನೂ ತಾಯಿಯ ಅಂತಃಕರಣದಿಂದಲೇ ನೋಡುವ ಈ ಸ್ವಸ್ಥ ಮನಸ್ಸಿಗೆ ಕವಿಗೆ ಶುಭವಾಗಲಿ ಎಂದು ಹಾರೈಸುತ್ತಾ, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳು ಇವರಿಂದ ಮೂಢಿಬರಲಿ ಎಂದು ಆಶಿಸುತ್ತೇನೆ…. “ಅವ್ವ ಮತ್ತು ಅಬ್ಬಲಿಗೆ” ನಿಮಗೂ ಆಪ್ತವಾಗಬಲ್ಲದು ಓದಿ… –ಸಚಿನ್ ಅಂಕೋಲಾ…