ಬೆಂಗಳೂರು: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದರೆ 'ಮೀಸಲಾತಿಗೆ ಇರುವ ಮಿತಿ'ಯನ್ನು ಕಿತ್ತೆಸೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಾರ್ಖಂ‌ಡ್‌ನಲ್ಲಿ 'ಭಾರತ ಜೋಡೊ ನ್ಯಾಯ ಯಾತ್ರೆ' ವೇಳೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ, ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಭಾಷಣದ ವಿಡಿಯೊ ಹಂಚಿಕೊಂಡಿರುವ ಸಿದ್ದರಾಮಯ್ಯ, 'ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡುವ ಮೊದಲ ಕೆಲಸವೇ 'ಮೀಸಲಾತಿಗೆ ಇರುವ ಮಿತಿ'ಯನ್ನು ಕಿತ್ತೆಸೆಯುವುದು. ಗುಡ್ಡಗಾಡುಗಳಲ್ಲಿ ಕಲ್ಲಿದ್ದಲು ಹೊರುವ ಜಾಗದಲ್ಲಿ ಕಾಣುವ ಆದಿವಾಸಿಗಳು ವಿಶ್ವವಿದ್ಯಾಲಯಗಳ, ಕೋರ್ಟ್‌ಗಳ, ಆಸ್ಪತ್ರೆಗಳ ಉನ್ನತ ಹುದ್ದೆಗಳಲ್ಲಿ ಕಾಣುವುದಿಲ್ಲ. ಅಗತ್ಯ ಪ್ರಮಾಣದ ಮೀಸಲಾತಿ ಸಿಗದಿರುವುದೂ ಇದಕ್ಕೆ ಕಾರಣ. ದೇಶದ ಆದಿವಾಸಿಗಳು, ದಲಿತರು, ಹಿಂದುಳಿದ ಸಮುದಾಯದ ಜನರ ಜೊತೆ ನಾವಿದ್ದೇವೆ, ಕಾಂಗ್ರೆಸ್ ಪಕ್ಷವಿದೆ. ಭಾರತದ ಪ್ರಜೆ ಪ್ರಜೆಗೂ ಘನತೆಯ ಬದುಕು ನಮ್ಮ ಗ್ಯಾರಂಟಿ' ಎಂದು ಹೇಳಿದ್ದಾರೆ. ಶೇಕಡ 50ರ ಮೀಸಲಾತಿ ಮಿತಿ ರದ್ದು: ರಾಹುಲ್ ಲೋಕಸಭಾ ಚುನಾವಣೆಯ ನಂತರ ‘ಇಂಡಿಯಾ’ ಮೈತ್ರಿಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ರಾಷ್ಟ್ರದಾದ್ಯಂತ ಜಾತಿ ಗಣತಿ ನಡೆಸಲಾಗುತ್ತದೆ ಮತ್ತು ಮೀಸಲಾತಿಗೆ ಇರುವ ಶೇಕಡ 50ರ ಮಿತಿಯನ್ನು ತೆಗೆಯಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.