ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ‘ಪದ್ಮಶ್ರೀ’ ಪುರಸ್ಕೃತ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆಬಾವಿ ಕೊರೆಯಲು ಭೂಗರ್ಭ ವಿಜ್ಞಾನಿಗಳು ಭಾನುವಾರ ಸೂಕ್ತ ಜಾಗ (ಪಾಯಿಂಟ್) ಗುರುತಿಸಿದರು.  ಆದಿ ಜಾಂಬವ ನಿಗಮ ಕಳೆದ ವರ್ಷ ಮುನಿವೆಂಕಟಪ್ಪ ಅವರಿಗೆ ಕೊಳವೆಬಾವಿ ಮಂಜೂರು ಮಾಡಿತ್ತು. ಆದರೆ ಒಂದೂವರೆ ವರ್ಷವಾದರೂ ಅವರಿಗೆ ಈ ಸೌಲಭ್ಯ ದೊರೆತಿರಲಿಲ್ಲ. ಈ ಹಿರಿಯ ಕಲಾವಿದ ನಿಗಮದ ಕಚೇರಿಗೆ ಅಲೆಯುತ್ತಲೇ ಇದ್ದರು. ಈ ಬಗ್ಗೆ ಗಂಗಾ ಕಲ್ಯಾಣಕ್ಕೆ ‘ತಬರ’ನಾದ ಕಲಾವಿದ ಎಂದು ಭಾನುವಾರ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.  ವರದಿಯಿಂದ ಎಚ್ಚೆತ್ತುಕೊಂಡ ಆದಿ ಜಾಂಬವ ನಿಗಮದ ಅಧಿಕಾರಿಗಳು ಭಾನುವಾರ ಬೆಳಗ್ಗೆಯೇ ಮುನಿವೆಂಕಟಪ್ಪ ಅವರ ಮನೆಗೆ ಧಾವಿಸಿ ಮಾಹಿತಿ ಪಡೆದರು. ಮಧ್ಯಾಹ್ನದ ವೇಳೆಗೆ ಭೂಗರ್ಭ ವಿಜ್ಞಾನಿಗಳನ್ನು ಕರೆಯಿಸಿ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಲು ಸೂಕ್ತ ಜಾಗ  (ಪಾಯಿಂಟ್) ಗುರುತಿಸಿದರು. ‘ಭಾನುವಾರ ರಾತ್ರಿ ಅಥವಾ ಸೋಮವಾರ ಕೊಳವೆಬಾವಿ ಕೊರೆಸಲು ಲಾರಿ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಮುನಿವೆಂಕಟಪ್ಪ ಅವರ ಪುತ್ರ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.