ಬೆಂಗಳೂರು: ‘ಆಗಾಗ್ಗೆ ನನಗೆ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ ಮಾಡಿ ಬೆದರಿಕೆ ಒಡ್ಡಿ ಬಟ್ಟೆ ಬಿಚ್ಚುವಂತೆ ಹೇಳುತ್ತಿದ್ದರು. ನಿನ್ನ ಗುಪ್ತಾಂಗ ತೋರಿಸು ಎಂದು ಒತ್ತಾಯಿಸುತ್ತಿದ್ದರು. ಈ ಸಮಯದಲ್ಲಿ ನೀನು ನಗುತ್ತಿರಬೇಕು ಎಂದು ಹೇಳಿ ಸತಾಯಿಸುತ್ತಿದ್ದರು...’ ಅತ್ಯಾಚಾರದ ಆರೋಪದಡಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆ ದಾಖಲಿಸಿರುವ ಮೂರನೇ ಪ್ರಕರಣದಲ್ಲಿ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಈ ವಿವರವನ್ನು ದಾಖಲಿಸಲಾಗಿದೆ. ಹಲವಾರು ಆಘಾತಕಾರಿ ಅಂಶಗಳನ್ನು ಒಳಗೊಂಡ 1,691 ಪುಟಗಳ ಮತ್ತು 120 ಸಾಕ್ಷ್ಯಗಳ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪಟ್ಟಿಯಲ್ಲಿ ಏನಿದೆ?: ‘2019–2024ರ ಅವಧಿಯಲ್ಲಿ ಪ್ರಜ್ವಲ್‌ ಲೋಕಸಭಾ ಸದಸ್ಯರಾಗಿದ್ದರು. ಆಗ ಅವರು ತಮ್ಮ ಅಜ್ಜ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಹಾಸನ ಟೌನ್‌ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹಂಚಿಕೆಯಾಗಿದ್ದ ರೇಸ್‌ ಕೋರ್ಸ್‌ ರಸ್ತೆಯಲ್ಲಿನ ಎಂ.ಪಿ. ವಸತಿ ಗೃಹವನ್ನು ತಮ್ಮ ಗೃಹ ಕಚೇರಿಯಾಗಿ ಬಳಸುತ್ತಿದ್ದರು. 2020ರ ಜನವರಿ–ಫೆಬ್ರುವರಿ ಮಧ್ಯದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆ ಸಮಯದಲ್ಲಿ ಅವರು ನನ್ನನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ದೇಹದ ಎಲ್ಲ ಭಾಗಗಳನ್ನೂ ಮುಟ್ಟಿದ್ದರು. ಬಟ್ಟೆ ಬಿಚ್ಚಲು ಹೇಳಿದ್ದರು. ನಿರಾಕರಿಸಿದರೆ ನನ್ನ ಬಳಿ ಇರುವ ಗನ್‌ನಿಂದ ನಿನ್ನ ಗಂಡನನ್ನು ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದರು... ‘ಹೊಳೆನರಸೀಪುರದಲ್ಲಿರುವ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಅವರ ಚೆನ್ನಾಂಬಿಕ ಹೆಸರಿನ ನಿವಾಸಕ್ಕೆ 2020ರ ಒಂದು ಮಧ್ಯಾಹ್ನ 12.30ರ ಸಮಯದಲ್ಲಿ ನನ್ನನ್ನು ಕರೆಸಿಕೊಂಡಿದ್ದ ಪ್ರಜ್ವಲ್‌, ಮೂರನೇ ಮಹಡಿಯ ಕೊಠಡಿಯಲ್ಲಿ ನನ್ನ ಮೇಲೆ ಬಲಾತ್ಕಾರ ಮಾಡಿರುತ್ತಾರೆ. ಈ ಕೃತ್ಯವನ್ನು ತಮ್ಮ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿರುತ್ತಾರೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ವಿಡಿಯೊಗಳನ್ನು ಬಹಿರಂಗ ಮಾಡಿ ನಿನ್ನ ಗಂಡ ಮತ್ತು ಮಕ್ಕಳಿಗೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿರುತ್ತಾರೆ... ‘ಪ್ರಜ್ವಲ್‌ ತಮ್ಮ ಕಾಮತೃಷೆ ತೀರಿಸಿಕೊಳ್ಳಲು ನನ್ನ ಮೇಲೆ 2023ರ ಡಿಸೆಂಬರ್‌ವರೆಗೂ ಈ ರೀತಿ ಹಲವಾರು ಬಾರಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ. ಅವರೊಬ್ಬ ಜವಾಬ್ದಾರಿಯುತ ಸಂಸದನಾಗಿ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದವರು. ಆರ್ಥಿಕವಾಗಿ ಪ್ರಾಬಲ್ಯ ಉಳ್ಳವರು. ಇಂತಹವರ ಬಳಿ ನಾನು ಕೆಲಸವೊಂದಕ್ಕೆ ಶಿಫಾರಸು ಪಡೆಯಲು ಹೋದಾಗ ನನ್ನನ್ನು ಬೆದರಿಸಿ ನನ್ನ ಇಚ್ಛೆಗೆ ವಿರುದ್ಧವಾಗಿ ಹೀಗೆಲ್ಲಾ ನಡೆದುಕೊಂಡಿರುತ್ತಾರೆ’ ಎಂದು ತಿಳಿಸಲಾಗಿದೆ. ‘ತನಿಖೆಯ ಕಾಲದಲ್ಲಿ ಸಂಗ್ರಹಿಸಿದ ತಾಂತ್ರಿಕ ವರದಿಗಳು, ತಜ್ಞರ ಪರೀಕ್ಷಾ ವರದಿಗಳಿಂದ ಆರೋಪಿಯು ಭಾರತೀಯ ದಂಡ ಸಂಹಿತೆ–1860ರ ಕಲಂ 376 (2) (ಎನ್‌), 506, 354, (ಎ), (1) (II) 354 (ಬಿ), 354 (ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66 (ಇ) ಅನುಸಾರ ಆರೋಪಿಯು ಅಪರಾಧ ಎಸಗಿರುವುದು ದೃಢಪಟ್ಟಿದೆ’ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.