ಬೆಂಗಳೂರು: ದಕ್ಷಿಣ ಭಾರತದ ಬಲಿಜ ಸಮುದಾಯದ ಗುರುಪೀಠವನ್ನು ಹಂಪಿಯಲ್ಲಿ ಸ್ಥಾಪಿಸಲು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಚಿಂತನೆ ನಡೆಸಿದೆ. ದಕ್ಷಿಣ ಭಾರತ ಬಲಿಜ ಬಂಧುಗಳ ಮಹಾಸಂಗಮ ಸಭೆ ಶನಿವಾರ ನಡೆಯಿತು. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ‘ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಬಲಿಜ ಸಮುದಾಯದ ಮುಖಂಡರು ತಮ್ಮ ರಾಜ್ಯಗಳಲ್ಲಿ ಸಮುದಾಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಹಂಚಿಕೊಂಡರು. ದಕ್ಷಿಣ ಭಾರತದಲ್ಲಿ ಬಲಿಜ ಸಮುದಾಯವು ರಾಜಕೀಯವಾಗಿ ಅಸ್ಥಿರವಾಗಿದ್ದು, ಅವರೆಲ್ಲರನ್ನು ಒಂದುಗೂಡಿಸುವುದು ಸಭೆಯ ಮುಖ್ಯ ಉದ್ದೇಶವಾಗಿತ್ತು’ ಎಂದು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಅಧ್ಯಕ್ಷ ಮುನಿಕೃಷ್ಣ ತಿಳಿಸಿದರು. ‘ರಾಜ್ಯದಲ್ಲಿ ಬಲಿಜ ಸಮುದಾಯಕ್ಕೆ ಪೂರ್ಣಪ್ರಮಾಣದ 2ಎ ಮೀಸಲಾತಿ ಕಲ್ಪಿಸಬೇಕು. ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯನ 108 ಅಡಿಯ ಪ್ರತಿಮೆಯನ್ನು ರಾಜ್ಯದಲ್ಲಿ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹಿಂದಿನಿಂದಲೂ ಬಲಿಜ ಸಮುದಾಯಕ್ಕೆ ರಾಜಕೀಯವಾಗಿ ಅನ್ಯಾಯ ಮಾಡಲಾಗಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುವ ಕೆಲಸ ಮಾಡಲಾಗುತ್ತಿದೆ. ಆದ್ದರಿಂದ, ಎಲ್ಲ ರಾಜಕೀಯ ಪಕ್ಷಗಳು ಬಲಿಜರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. ಸಮುದಾಯದ ಮುಖಂಡ ಲಕ್ಷ್ಮೀಶ್ರೀನಿವಾಸ್, ‘ಸ್ವಾಮಿ ವಿವೇಕಾನಂದರು, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಸೇರಿದಂತೆ ಅನೇಕ ಮಹನೀಯರು ಬಲಿಜ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಲಿಜ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ‘ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ 2ಎ ಮೀಸಲಾತಿ ಕಲ್ಪಿಸಬೇಕೆಂದು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಭರವಸೆ ನೀಡಿದರು. ಖಜಾಂಚಿ ನಾಗರಾಜ ಭಾಗವಹಿಸಿದ್ದರು. ‘22 ಪ್ರಕರಣಗಳಿಂದಾಗಿ ಶಾಸಕನಾದೆ!’ ‘ನನ್ನ ಮೇಲೆ 22 ಪ್ರಕರಣಗಳು ದಾಖಲಾಗಿರುವ ಕಾರಣ ಇಂದು ಶಾಸಕನಾಗಿದ್ದೇನೆ. 50 ಪ್ರಕರಣಗಳು ದಾಖಲಾಗಿದ್ದರೇ ಏನಾಗುತ್ತಿದ್ದೆನೊ. ನೀವೇ ಯೋಚಿಸಿ’ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ‘ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಎಲ್ಲದಕ್ಕೂ ತಯಾರಾಗಬೇಕು. ಎಷ್ಟೇ ಪ್ರಕರಣಗಳು ದಾಖಲಾದಾರೂ ಅದನ್ನು ಎದುರಿಸಬೇಕು. ಯಾವುದಕ್ಕೂ ಹೆದರದೆ ಮುಂದೆ ಸಾಗಿದರೆ ಮಾತ್ರ ಜೀವನದಲ್ಲಿ ಯಶಸ್ವಿ ಆಗಬಹುದು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.