ಬೆಂಗಳೂರು: ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ‘ಸರ್ವರಿಗೂ ಸೂರು’ ಯೋಜನೆಯಡಿ ಬಡ ಕುಟುಂಬಗಳಿಗೆ ನಿರ್ಮಿಸುತ್ತಿರುವ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸಿ ಹಂತ– ಹಂತವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನೆ ಬುಧವಾರ ನಡೆಯಿತು. ನಿರ್ಮಾಣ‌ದ ವಿವಿಧ ಹಂತದಲ್ಲಿರುವ 1,29,457 ಮನೆಗಳಿಗೆ ಎಷ್ಟು ಹಣ ಬೇಕಾಗಬಹುದು. ಈ ವರ್ಷ ಗರಿಷ್ಠ ಎಷ್ಟು ಹಣ, ಮುಂದಿನ ವರ್ಷ ಎಷ್ಟು ಹಣ ಕೊಡಲು ಸಾಧ್ಯವಿದೆ ಎಂದು ಪರಿಶೀಲಿಸುವಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. ಅಲ್ಲದೆ, ಫಲಾನುಭವಿಗಳಿಂದ ₹1 ಲಕ್ಷ ಕಡ್ಡಾಯವಾಗಿ ಪಡೆಯಬೇಕು ಎಂದೂ ನಿರ್ದೇಶನ ನೀಡಿದರು.  ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಎರಡನೇ ಹಂತದಲ್ಲಿ 39,966 ಮನೆ ಹಂಚಿಕೆಗೆ ಸಿದ್ಧವಿದೆ. ಅದಕ್ಕೆ ₹862 ಕೋಟಿ ಅಗತ್ಯವಿದೆ. ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಮೊದಲ ಹಂತದಲ್ಲಿ ಹಂಚಿಕೆಗೆ 11,406 ಮನೆ ಸಿದ್ಧವಿದ್ದು, ಅದಕ್ಕೆ ₹1,879 ಕೋಟಿ ಅಗತ್ಯವಿದೆ. ಈ ಮನೆಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.  ಏನಿದು ಯೋಜನೆ: ‘ಸರ್ವರಿಗೂ ಸೂರು’ ಯೋಜನೆಯಡಿಯಲ್ಲಿ 2013ರಿಂದ 2023‌ರವರೆಗೆ ಮಂಜೂರು ಮಾಡಿದ್ದ ವಸತಿ ಯೋಜನೆಯಡಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿಸಲು ಸಾಧ್ಯವಾಗದೆ 2.32 ಲಕ್ಷ ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಈ ವಿಷಯವನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಪ್ರತಿ ಕುಟುಂಬದ ಫಲಾನುಭವಿಯ ವಂತಿಗೆ ₹4 ಲಕ್ಷವನ್ನು ಸರ್ಕಾರವೇ ಭರಿಸುವ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಹಿಂದೆಯೇ ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಫಲಾನುಭವಿಯ ವಂತಿಗೆ ಸರ್ಕಾರದಿಂದಲೇ ಭರಿಸಲು ಅನುಮತಿ ಸಿಕ್ಕಿತ್ತು. ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗೂ ಇದನ್ನು ಅನ್ವಯಿಸಲು ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದರು. ಸಭೆಯಲ್ಲಿ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕವಿತಾ ಮಣ್ಣಿಕೇರಿ, ಸುಶೀಲಮ್ಮ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.