ಮನುಷ್ಯ ಎಂಬ ಪ್ರಾಣಿಯನ್ನು ಹೊರತು ಪಡಿಸದೆ ಸಕಲ ಜೀವಸಂಕುಲಗಳ ಉಳಿವು ನಿರ್ಧಾರಿತವಾಗುವುದು ಯಾವುದೇ ಬೌದ್ಧಿಕನೆಲೆಯಲ್ಲಿ ಆಗಿರದೇ ‘ಅಡಾಪ್ಟಬಿಲಿಟಿ’ಯ ಮೇಲೆ ನಿಂತಿರುತ್ತದೆ ಎನ್ನುವುದು ಡಾರ್ವಿನ್ನಿನ ಉವಾಚ. ಇಂದ್ರಕುಮಾರ್ ಎಚ್.ಬಿ. ಅವರ ಹೊಸ ಕಾದಂಬರಿ ‘ಎತ್ತರ’ ಈ ಥಿಯರಿಯನ್ನು ಕೃತಿಕಾರನ ಕಲ್ಪನೆಯಲ್ಲಿ ಎಲ್ಲ ಪ್ರಯೋಗಗಳನ್ನು ಪಡೆದುಕೊಂಡು ಸೋದಾಹರಣವಾಗಿ ವಿವರಿಸುತ್ತದೆ ಎಂದು ನನಗೆ ಅನಿಸುತ್ತದೆ. ಪ್ರಕೃತಿ ಮತ್ತು ಪ್ರಕೃತಿಯ ಅಂತರ್ಗತ ಸತ್ವವಾದ ಮನಸ್ಸು ಎಂಬುದರ ಜೊತೆ ನಿರಂತರವಾಗಿ ಏರ್ಪಡುವ ಸಂಘರ್ಷವನ್ನು ನಿಭಾಯಿಸಿಕೊಳ್ಳಬೇಕು ಮತ್ತು ಸ್ವಸ್ಥವಾಗಿ ಬದುಕಲು ಬೇಕಾಗಿರುವ ಸಾಮರಸ್ಯವನ್ನು ಕಂಡುಕೊಳ್ಳಲೇ ಬೇಕಾಗಿರುತ್ತದೆ. (ಇಂದ್ರಕುಮಾರ್ ಎಚ್.ಬಿ.) ಇದು ಕೃಷ್ಣಮೂರ್ತಿ ಮತ್ತು ರವಿಕಿರಣ ಎಂಬ ಎರಡು ಹೆಸರಿರುವ ವ್ಯಕ್ತಿಯ ದಾವಣಗೆರೆ – ಚಿತ್ರದುರ್ಗ ಎಂಬ ನಾಗರೀಕ ಹಾಗೂ ಕತ್ಲೆಕಾನು ಎಂಬ ಪ್ರಾಕೃತಿಕ ಎಂಬ ಎರಡೆರಡು ಜಗತ್ತುಗಳ ನಡುವಿನ ತಾಕಲಾಟದ ವ್ಯಥೆ. ಇದನ್ನು ಕಥೆಯಾಗಿಸುವವರು ಪಾರ್ವತಿ, ಪುಟ್ಟ, ಲಲಿತಾ, ಕಾದಂಬರಿ, ಸರಿತಾ, ವಿಮಲಾ, ಕೌಸಲ್ಯಮ್ಮ, ಗಣಪಯ್ಯಜ್ಜ, ಸರಳಾ… ಇನ್ನಿತರರು. ಅದೃಶ್ಯ ವಿಕಿರಣವನ್ನು ಹೊರಸೂಸಬಲ್ಲ ಲಿಂಗ ಪ್ರಧಾನ ರೂಪಕ. ಹೈರಾರ್ಕಿಯನ್ನು ಕಣ್ಣಿಗೊತ್ತಿಕೊಂಡು ಆಚರಿಸುವ ವಿದ್ಯಾವಂತ ಸಮಾಜದ ಸಾಂಸ್ಥಿಕ ರೂಪವಾದ ಕಾಲೇಜೊಂದರಲ್ಲಿ ಶೋಷಿತನಾಗಿ, ಅಸಹಾಯಕನಾಗಿ, ವಂಚಿತನಾಗಿ ಅನ್ಯಾಯಕ್ಕೊಳಗಾಗಿದ್ದ ನಿರೂಪಕನನ್ನು ಅನ್ನ ನೀರಿನ ಜೊತೆ ಅಸ್ತಿತ್ವದ ಅರ್ಥವನ್ನು ಹುಡುಕಿಕೊಳ್ಳುವ ಸಮಯಾವಕಾಶ ನೀಡಿ ‘ಕತ್ಲೆಕಾನು’ ಪೊರೆಯುತ್ತದೆ. ಈ ಕಾನನದ ಬಹುಸ್ತರೀಯ ನಿವಾಸಿಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಲಿಂಗೀಯ ಹೈರಾರ್ಕಿಗಳನ್ನೆಲ್ಲ ಸಲೀಸಾಗಿ ಮತ್ತು ಸಹಜವಾಗಿ ಬದಿಗೆ ಸರಿಸಿ ಅಪರಿಚಿತನೊಡನೆ ಬಾಂಧವ್ಯ ಬೆಳೆಸಿಕೊಳ್ಳಬಲ್ಲವರಾಗಿದ್ದಾರೆ. ಹಾಗಂತ ಇದೇನು ಅಮಾಯಕವಾದ ಪ್ರಪಂಚವಲ್ಲ. ಇಲ್ಲೂ ಆಟವಿದೆ. ಯಾರು ಪ್ರಿಡೇಟರ್ ಯಾರು ಪ್ರೇ ಎಂದು ಕಂಡುಕೊಳ್ಳಲು ಹೆಣಗಾಡುವ ಆಟ. ನಿರೂಪಕ ಏನೆಲ್ಲ ಗೊಂದಲ ದ್ವಂದ್ವಗಳ ಜೊತೆಗೇ ಕತ್ಲೆಕಾನಿನ ಈ ಸೆಟ್ ಆಫ್ ಲೇಡೀಸ್ ಜೊತೆ ಸೆಣಸಾಡಬೇಕು. ಅವರೋ ಸ್ತ್ರೀ ಸಹಜ ಶಿಸ್ತು, ಸಂಯಮ, ಸಂಕಲ್ಪಶಕ್ತಿಗಳ ಗಟ್ಟಿತನದ ಜೊತೆ ಹಲವಾರು ಪಟ್ಟುಗಳನ್ನು ಕಲಿತವರು. ತಮ್ಮ ನಿಗೂಢತೆ, ಕೌಶಲ್ಯ, ತಂತ್ರಗಳಿಂದ ಮಾರ್ವೆಲ್ಲಿನ ಫ್ರಾಂಚೈಸಿಯ ಪಾತ್ರಗಳನ್ನು ನೆನಪಿಸುವಂಥವರು. ಇವರೆಲ್ಲರೂ ಕಥಾನಾಯಕನ ಅನಿಶ್ಚಿತತೆ, ಆ್ಯಂಕ್ಸೈಟಿ, ಆಗಾಗ ಆವರಿಸುವ ಅನಾಸಕ್ತಿ ಮತ್ತು ನಿಶ್ಯಕ್ತಿಯನ್ನು ಚಿತ್ತು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಈ ಅಂತಃಕರಣದ ಗುಣವೇ ಬದುಕಲು ಆಸರೆ ಆಗುವಂಥಹುದು. ಮನಸ್ಸಿನ ಮನೋವಿನ್ಯಾಸಗಳ ಪ್ರಕ್ರಿಯೆ ಮತ್ತು ಪರಿಸರದ ಪಾಲ್ಗೊಳ್ಳುವಿಕೆಯಿಂದ ಉಂಟಾಗುವ ತರ್ಕದ ಜೊತೆಗೆ ಊಹೆಗೂ ನಿಲುಕದ ಪರಿಸ್ಥಿತಿಗಳು ಪತ್ತೇದಾರಿಕೆಯಿಂದ ಮಾಂತ್ರಿಕ ವಾಸ್ತವವಾದ, ಅತಿವಾಸ್ತವವಾದದವರೆಗೂ ಶೈಲಿಯನ್ನು ವಿಸ್ತರಿಸುತ್ತವೆ. ಪಲಾಯನಗೈದು ಪರಸ್ಥಳಕ್ಕೆ ಬಂದಿರುವ ಕಥಾನಾಯಕ ಎದುರುಗೊಳ್ಳುವುದು ಗಟ್ಟಿಯಾಗಿ ನೆಲೆನಿಂತವರು ಮತ್ತು ಜಿಗುಟುತನದಲ್ಲಿ ಜೀವಿಸುತ್ತಿರುವವರು ಮತ್ತು ಅವರೆಲ್ಲರೂ ಕಥಾನಾಯಕ ಅವರು ಪ್ರತಿನಿಧಿಸುವ ಜೀವನಕ್ರಮದ ಮೇಲೆ ಕಟ್ಟಿಕೊಳ್ಳುವ ಸ್ಟೀರಿಯೋಟೈಪ್‌ಗಳಾಗಿರದೇ ಹಲವಾರು ತಿರುವುಗಳನ್ನು ಅಚ್ಚರಿಯನ್ನುಂಟುಮಾಡುವುದು ಕಥಾಹಂದರವಾಗಿದೆ. ತಾನು ತಯಾರಿಸಿದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲು ಸಿರ್ಸಿ ಯಲ್ಲಾಪುರ ಪೇಟೆಗಳಿಗೆ ಹೋಗಿ ಬಂದಷ್ಟೇ ಸಲೀಸಾಗಿ ಸರಿತಾ ನಿಗೂಢ ಚಕ್ರವ್ಯೂಹದೊಳಗೆ ಹೋಗಿ ಬಂದು ಮಾಡಬಲ್ಲಳು. ಕಾದಂಬರಿ, ಲಲಿತಾ ತಮ್ಮ ಬಗ್ಗೆ ಇತರರಿಗೆ ಅಭಿಪ್ರಾಯ ಮೂಡಿಸಿಕೊಳ್ಳಲು ಅನುವು ಮಾಡಿಕೊಡುತ್ತಲೇ ಹಿಂದಿನಿಂದ ಕೆಡವುತ್ತ ಬರಬಲ್ಲರು. ಪಾರ್ವತಿಯದು ಫೀನಿಕ್ಸ್ ಪ್ರತಿಭೆ. ಒಟ್ಟಾರೆ ಇವರೆಲ್ಲರೂ ಹಳೆಕಾಲದ ಟ್ರಂಕಿನೊಳಗೆ ಘಾತುಕ ರಹಸ್ಯವನ್ನು ತಣ್ಣಗೆ ಮಡಚಿಡಬಲ್ಲರು. ಹಾಗೆಯೇ ಮಡಿಲಿನಲ್ಲಿ ಮಲಗಿರುವ ಬೆಕ್ಕಿನ ಮರಿಯನ್ನು ಅತಿ ಅನೌಪಚಾರಿಕವಾಗಿ ಕೆಳಗಿಳಿಸುವಂತೆ ಗುಟ್ಟು ಬಿಟ್ಟುಕೊಡಬಲ್ಲವರು. ರಾಜಕಿಶೋರ, ಸರಳ, ಸುಗುಣೇಶ, ಮಾಧವ ಎಂಬ ಚುಕ್ಕಿಪಾತ್ರಗಳೆಲ್ಲ ಇವನನ್ನು ಸುಳಿಯ ಇನ್ನಷ್ಟು ಒಳಗೆ ಸೆಳೆಯಬಲ್ಲವರು. ಇವರೆಲ್ಲರಿಂದ ಸುತ್ತುವರೆದಿರುವ ಕಥಾನಾಯಕನಿಗೆ ಸಾವಯವ ಸಂಬಂಧದ ತಾದ್ಯಾತ್ಮ ಸಾಧ್ಯವಾಗುವುದು ‘ಒಂದು ಸುತ್ತು ಕಡಿಮೆ’ ಇರುವ ವಿಮಲಾಳೊಂದಿಗೆ. ನಾಣ್ಯ ಅವರ ನಡುವಿನ ಸಂವಾದದ ಭಾಷೆ. ವಿಮಲಾಳ ಕೈಯಲ್ಲಿ ನೇರವಾಗಿ ನಿಂತುಬಿಡುವ ನಾಣ್ಯ – ಈ ಕಥಾನಕದ ಅನಿಶ್ಚಿತ ಕ್ಲೈಮ್ಯಾಕ್ಸ್. ಮೀನುಸಾರಿನ ಘಮಲು, ಕ್ವಾಂಟಮ್ ಫಿಸಿಕ್ಸ್‌ನ ಜಿಜ್ಞಾಸೆ, ಫಲವತ್ತತೆಗೆ ಆದೀತು, ಚಿರಯೌವನಕ್ಕೆ ಆದೀತು, ಅಮರತ್ವಕ್ಕೆ ಆದರೆ ಆದೀತು ಎನ್ನುವ ‘ಟ್ರಯಲ್ ಅಂಡ್ ಎರರ್ ಮೋಡ್’ನಲ್ಲಿರುವ ಹಸಿರು ಜ್ಯೂಸ್‌ಗಳ ಲೋಕದಲ್ಲಿ ಅಂತಿಮವಾಗಿ ತಾನೇ ಪರಿಸರ, ಪ್ರಜ್ಞೆ, ವಿದ್ಯಮಾನ, ತಾನೇ ಕಾರ್ಯಕಾರಣ ಎಂಬ ತಲ್ಲಣದಿಂದ ‘ತತ್ವಮನೆ’ಯವರೆಗಿನ ರೂಪಾಂತರ ಈ ‘ಎತ್ತರ’. ಈ ಕಾದಂಬರಿಯು ಓಪನ್ ಎಂಡೆಡ್ ಆಗಿ ಮುಕ್ತಾಯಗೊಳ್ಳುತ್ತದೆ ಎನ್ನುವುದಕ್ಕಿಂತ ‘ಟು ಬಿ ಕಂಟಿನ್ಯೂಡ್…’ ಮಾದರಿಯದು ಎಂದು ಹೇಳಬಹುದು. ಸೃಜನಶೀಲ ಸಾಹಿತ್ಯದ ಬಗೆಗಿನ ಬದ್ಧತೆ ಮತ್ತು ಜೀವನದ ಡೈನಾಮಿಕ್ಸ್ ಬಗೆಗಿನ ತಣಿಯದ ಕೌತುಕ ಇಂದ್ರಕುಮಾರ್ ಅವರನ್ನು ತೀಕ್ಷ ಮತ್ತು ಸಮೃದ್ಧ ಬರಹಗಾರರನ್ನಾಗಿಸುತ್ತದೆ. ಎತ್ತರ ಎತ್ತರವಷ್ಟೇ ಅಲ್ಲದೇ ಆಳ, ಅಗಲ… ಎಲ್ಲ ಆಯಾಮಗಳಲ್ಲೂ ಸಮೃದ್ಧವಾಗಿದೆ. ವಿಶೇಷವಾಗಿ ಪ್ರಾಂತೀಯ ಭಾಷಾಬಳಕೆಯನ್ನು ಶ್ಲಾಘಿಸಲೇಬೇಕು. ಇಂದಿನ ಕನ್ನಡ ಸಾಹಿತ್ಯದ ಪ್ರಮುಖ ಕಥೆಗಾರರೆನಿಸಿಕೊಳ್ಳುತ್ತಿದ್ದ ಇಂದ್ರಕುಮಾರ್ ಎಚ್.ಬಿ. ಅವರು ಪ್ರಮುಖ ಕಾದಂಬರಿಕಾರರೂ ಎನ್ನುವ ಪಟ್ಟವನ್ನು ಗಳಿಸಿಕೊಂಡಿರುವುದಕ್ಕೆ ಅಭಿನಂದನೆಗಳು. ಮಮತಾ ಆರ್ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದವರು. ಇಂಗ್ಲಿಷ್ ಭಾಷಾ ಸಹಾಯಕ ಪ್ರಾಧ್ಯಾಪಕರು ಹಾಗೂ ಕವಿ, ಕಥೆಗಾರ್ತಿಯಾಗಿದ್ದಾರೆ. ಜಾಗತಿಕ ಸಾಹಿತ್ಯವನ್ನು ಅಪಾರವಾಗಿ ಓದಿಕೊಂಡಿರುವ ಇವರು, ತಮ್ಮ ಕಥೆಗಳಿಗಾಗಿ ಪ್ರಜಾವಾಣಿ, ವಿಜಯವಾಣಿ, ಇನ್ನೂ ಅನೇಕ ಬಹುಮಾನಗಳನ್ನು ಪಡೆದಿದ್ದು, ‘ಅತಿ ತಲ್ಲಣ ಅತಿ ನಿಶಬ್ದ’ ಎನ್ನುವ ಕಥಾಸಂಕಲನವನ್ನು, ‘ಒಂಚೂರು ಅಪಚಾರವೆಸಗದ ಅನುಭವಗಳು’ ಎನ್ನುವ ಕವನಸಂಕಲನವನ್ನು ಪ್ರಕಟಿಸಿದ್ದಾರೆ. ಭಾರತೀಯ ಸಿನಿಮಾಗಳ ಮೇಲೆ ಪಿಎಚ್‌ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ.