ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮಕ್ಕೆ ಬಿಜೆಪಿ ಪ್ರತಿನಿಧಿಗಳು ನಗರದ ಬೈಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಭಾನುವಾರ ಸಂಜೆ ತೆರಳಿದರು. ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳೂ ಸೇರಿ ವಿವಿಧೆಡೆಯಿಂದ ಸಂಗ್ರಹಿಸಿರುವ ಮಣ್ಣಿನ ಅಮೃತ ಕಲಶಗಳೊಂದಿಗೆ ಪ್ರತಿನಿಧಿಗಳು ತೆರಳಿದರು. ಕೇಂದ್ರದ ಸಚಿವ ರಾಜೀವ್ ಚಂದ್ರಶೇಖರ್‌, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ರೈತಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭಾಗವಹಿಸಿ ದೆಹಲಿಗೆ ತೆರಳುವ ಪ್ರತಿನಿಧಿಗಳಿಗೆ ಶುಭ ಹಾರೈಸಿದರು.  ಪ್ರತಿನಿಧಿಗಳು, ಹುತಾತ್ಮರ ಗೌರವಾರ್ಥ ದೆಹಲಿಯ ಕರ್ತವ್ಯಪಥದಲ್ಲಿ ನಿರ್ಮಾಣವಾಗುವ ಅಮೃತ ಉದ್ಯಾನದ ಸ್ಥಳಕ್ಕೆ ನಮ್ಮ ರಾಜ್ಯದಿಂದ ಸಂಗ್ರಹಿಸಿದ ಮಣ್ಣಿನ ಅಮೃತ ಕಳಶವನ್ನು ಇದೇ 30 ರಂದು ‌ತಲುಪಿಸುವರು. ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ  ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ನಡೆದಿದ್ದು, ಪ್ರತಿ ಮನೆ, ಧಾರ್ಮಿಕ ಕೇಂದ್ರಗಳು, ವೀರಯೋಧರ ಮನೆ, ಸ್ವಾತಂತ್ರ್ಯ ಹೋರಾಟಗಾರರ ಮನೆ, ಮಹಾಪುರುಷರ ಸ್ಮಾರಕ ಸ್ಥಳ ಸಾಧು ಸಂತರ ಮಠಗಳಿಗೆ ಪುಣ್ಯ ಮಣ್ಣನ್ನು ಸಂಗ್ರಹಿಸಲಾಗಿತ್ತು. ಅಮೃತವನದಲ್ಲಿ ಮಣ್ಣನ್ನು ವಿಲೀನಗೊಳಿಸಲಾಗುವುದು ಎಂದು ಮುಖಂಡರು ತಿಳಿಸಿದರು. ದೆಹಲಿಯಲ್ಲಿ ಇದೇ 31 ರಂದು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಲಿದ್ದಾರೆ.  ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.