ಬೆಂಗಳೂರು: ‘ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿರುವ ನಾಯಕ ಸಿಕ್ಕಿರಲಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸರಿಸಮ ನಾಯಕರಾಗಿ ಬಿಂಬಿತರಾಗಲಿದ್ದಾರೆ. ಮೋದಿ ವರ್ಸಸ್‌ ಖರ್ಗೆ ಎಂಬುದು ಖಂಡಿತ ಪರಿಣಾಮ ಬೀರಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು. ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‌‘ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸದಸ್ಯರು ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು. ‘ಖರ್ಗೆ ದಲಿತ ನಾಯಕ ಎನ್ನುವುದು ಮಾತ್ರವಲ್ಲ, ಅನುಭವದ ಆಧಾರದಲ್ಲಿಯೂ ಅವರ ಹೆಸರು ಮುನ್ನೆಲೆಗೆ ಬಂದಿದೆ. ದಲಿತ ನಾಯಕ ಎಂಬ ಲಾಭನಷ್ಟ ನಂತರದ್ದು, ಅದಕ್ಕೂ ಮೊದಲು ಖರ್ಗೆ ಒಬ್ಬ ಒಳ್ಳೆಯ ಸಂಸದೀಯ ಪಟು’ ಎಂದು ಬಣ್ಣಿಸಿದರು. ‘ಖರ್ಗೆ ಮತ್ತೊಮ್ಮೆ ಲೋಕಸಭೆ ಪ್ರವೇಶಿಸಬೇಕೆಂಬ ಆಸೆ ನಮಗೂ ಇದೆ. ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಮಗೆ ಎಲ್ಲೂ ಹೇಳಿಲ್ಲ. ದೇಶ ಇಡೀ ಓಡಾಡಿ ಪಕ್ಷ ಕಟ್ಟುತ್ತಿದ್ದಾರೆ. ಖರ್ಗೆಯವರು ಮಾಡಿದ ಕೆಲಸಗಳು ಈಗ ಜನರಿಗೆ ತಿಳಿಯುತ್ತಿವೆ’ ಎಂದರು. ಸಚಿವರು ಸಹಿ ಹಾಕಿದ್ದರಲ್ಲಿ ತಪ್ಪಿಲ್ಲ: ಜಾತಿ ಗಣತಿ ವರದಿ ವಿರೋಧಿಸಿ ಸಚಿವರು ಮನವಿ ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಚಿವರು ಸಹಿ ಹಾಕಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರ ಸಮುದಾಯದ ಪರವಾಗಿ ಸಚಿವರು ನಿಲ್ಲಬೇಕಾಗುತ್ತದೆ. ಯಾವ ಸಚಿವರೂ ಜಾತಿ ಗಣತಿಗೆ ವಿರೋಧ ಮಾಡುತ್ತಿಲ್ಲ. ಈಗಿನ ವರದಿಯಲ್ಲಿ ಲೋಪ ಇದೆ ಎನ್ನುತ್ತಿದ್ದಾರೆ. ವರದಿ ಸ್ವೀಕರಿಸಿದ ಬಳಿಕ ಚರ್ಚೆಯಾಗಲಿ. ಲೋಪ ಸರಿಮಾಡಲು ಅವಕಾಶವಿದೆ’ ಎಂದರು.  ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.