ಹಾವೇರಿ: ನಗರದ ಇಜಾರಿಲಕಮಾಪುರದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರನ್ನು ‘ವೀರ ಸಾವರ್ಕರ್‌ ಸಂಸ್ಮರಣೆ’ ಖಾಸಗಿ ಕಾರ್ಯಕ್ರಮದ ಸಮೂಹಗಾಯನ ತರಬೇತಿಗೆ ಕಳುಹಿಸಿದ್ದ ಪ್ರಾಂಶುಪಾಲ ಕೆ.ಕೃಷ್ಣಪ್ಪ ವಿರುದ್ಧ ಶಿಸ್ತುಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ. ಡಿ.12ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಮತ್ತು ಹಾವೇರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್‌ ಅವರು ಕಾಲೇಜಿಗೆ ಭೇಟಿ ನೀಡಿದ ಸಂದರ್ಭ, ಹಾಜರಾತಿ ಅತ್ಯಂತ ಕಡಿಮೆ ಇರುವ ಬಗ್ಗೆ ಪ್ರಶ್ನಿಸಿದಾಗ, ಸುಮಾರು 95 ವಿದ್ಯಾರ್ಥಿನಿಯರು ‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿರುವ ಸಮೂಹ ಗಾಯನದ ತರಬೇತಿಗೆ ಹೋಗಿರುವುದಾಗಿ ಉಪನ್ಯಾಸಕರು ಮಾಹಿತಿ ನೀಡಿದ್ದರು. ವರದಿ ಸಲ್ಲಿಸಿ: ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇಲಾಖೆಗೆ ವರದಿ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದ್ದರು. ‘ಪ್ರಾಂಶುಪಾಲ ಕೆ.ಕೃಷ್ಣಪ್ಪ ಅವರು ಇಲಾಖೆಯಿಂದ ಆಯೋಜಿಸುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಖಾಸಗಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಲು ಅನುಮತಿ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾವೇರಿ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಪುತ್ರ ಕೆ.ಇ. ಕಾಂತೇಶ್‌ ಅವರ ಮುಖಂಡತ್ವದಲ್ಲಿ ಡಿ.17ರಂದು ಆಯೋಜಿದ್ದ ‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಮೂಹ ಗಾಯನ ಪ್ರಸ್ತುತಪಡಿಸಿದ್ದರು. ಅದರಲ್ಲಿ ಇಜಾರಿಲಕಮಾಪುರದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಇದ್ದರು ಎನ್ನಲಾಗಿದೆ. 2021ರಲ್ಲಿ ತುಮಕೂರು ಜಿಲ್ಲೆ ತಾವರೆಕೆರೆ ತಾಲ್ಲೂಕು ಸೀಗೆಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಪ್ಪ ಅವರು ಶಿಸ್ತುಕ್ರಮದ ಇಲಾಖೆ ವಿಚಾರಣೆ ಬಾಕಿ ಇದ್ದರೂ, ವಿಚಾರಣೆ ಬಾಕಿ ಇಲ್ಲವೆಂದು ತಪ್ಪು ಮಾಹಿತಿ ನೀಡಿ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೆ.ಕೃಷ್ಣಪ್ಪ ಅವರಿಗೆ ಪ್ರಾಂಶುಪಾಲ ಹುದ್ದೆಗೆ ಬಡ್ತಿ ನೀಡಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2023ರ ಸೆ.29ರಂದು ಆದೇಶ ನೀಡಿತ್ತು. 2023ರ ನ.20ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಇಲಾಖೆಯ ಆದೇಶವನ್ನು ಜಾರಿಗೊಳಿಸಿ ಸ್ವೀಕೃತಿ ಪತ್ರವನ್ನು ನಿರ್ದೇಶನಾಲಯಕ್ಕೆ ಸಲ್ಲಿಸಲು ಜ್ಞಾಪನ ಪತ್ರ ಹೊರಡಿಸಿದ್ದರು. ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಹಾಗೂ ಇಜಾರಿಲಕಮಾಪುರ ಕಾಲೇಜಿನ ಪ್ರಭಾರವನ್ನು ಹಿರಿಯ ಉಪನ್ಯಾಸಕರಿಗೆ ನೀಡಲು ಸೂಚಿಸಿದ್ದರು. ಡಿ.17ರವರೆಗೂ ಇಜಾರಿಲಕಮಾಪುರದ ಕಾಲೇಜಿನಲ್ಲೇ ಪ್ರಾಂಶುಪಾಲರಾಗಿ ಮುಂದುವರಿದಿದ್ದ ಕೆ.ಕೃಷ್ಣಪ್ಪ ಅವರು ಡಿ.18ರಂದು ಪ್ರಾಚಾರ್ಯರ ಹುದ್ದೆಯಿಂದ ಬಿಡುಗಡೆ ಹೊಂದಿದ್ದಾರೆ. ‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದ ಸಮೂಹ ಗಾಯನದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ, ಈ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಿದ ವೇಳೆಯಲ್ಲೇ ಕೃಷ್ಣಪ್ಪ ಅವರು ಹಿಂಬಡ್ತಿ ಪಡೆದಿರುವುದು ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.