ಬೆಂಗಳೂರು: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1.40 ಕೋಟಿ ಮತಗಳನ್ನು ಪಡೆದಿರುವ ಬಿಜೆಪಿ, 1.50 ಕೋಟಿ ಸದಸ್ಯತ್ವ ಅಭಿಯಾನದ ಪುಂಗಿ ಊದುತ್ತಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ. ‘ಬಿ.ವೈ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಮೂರು ಗುಂಪುಗಳು ಸೃಷ್ಟಿಯಾಗಿವೆ. ವಿಜಯೇಂದ್ರ ಅವರ ವಿರೋಧಿ ಗುಂಪು ತಮ್ಮನ್ನು ತಾವು ಬಿಜೆಪಿಯಲ್ಲಿ ಜಗನ್ನಾಥ ಭವನದ ಗುಂಪೆಂದು ಗುರುತಿಸಿಕೊಂಡು, ವಿಜಯೇಂದ್ರ ಗುಂಪನ್ನು ಬಾಲಭವನದ ಗುಂಪೆಂದು ಅಪಹಾಸ್ಯ ಮಾಡುತ್ತಿದೆ’ ಎಂದು ಕುಟುಕಿದ್ದಾರೆ. ‘ಪಕ್ಷದಲ್ಲಿನ ಗುಂಪುಗಾರಿಕೆ ನಿಭಾಯಿಸಲು ವಿಫಲರಾಗಿರುವ ವಿಜಯೇಂದ್ರ ಅವರು ಪಕ್ಷದ ಸದಸ್ಯತ್ವ ಅಭಿಯಾನದ ನಾಟಕಕ್ಕೆ ಚಾಲನೆ ನೀಡಿದ್ದಾರೆ. ಕೇವಲ ಮೂರು ದಿನಗಳಲ್ಲಿ ಒಂದು ಕೋಟಿ ಸದಸ್ಯತ್ವ ಮಾಡಿರುವುದಾಗಿ ಡಂಗುರ ಸಾರುತ್ತಿರುವ ಅವರು, ರಾಜಕೀಯ ನಿವೃತ್ತಿ ಪಡೆದಿರುವ ತಮ್ಮ ಪಕ್ಷದ ಹಿರಿಯ ಚೇತನಗಳನ್ನು ಸದಸ್ಯತ್ವದ ಹೆಸರಿನಲ್ಲಿ ಕಾಡುವುದನ್ನು ನಿಲ್ಲಿಸಲಿ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.