ಮೊದಲ ಕೋಳಿ ಕೂಗಿತು. “ಅಯ್ಯೋ ಬೆಳಕ ಆತು. ಇಂದ ಬ್ಯಾರೆ ಅಮವಾಸಿ ಐತಿ ಹಾರಿಗೆಡಿಲಿ, ಈ ನಿದ್ದಿ ಒಂದ ನನಗ ದೆವ್ವ ಕಾಡಿದಂಗ ಕಾಡ್ತೈತಿ ನೋಡ, ಅಮವಾಸಿ ಅಡಗಿ ಮಾಡಬೇಕಾದ್ರ ಸೂರ್ಯಾ ನೆತ್ತಿ ಮ್ಯಾಲ ಬರ್ತಾನ” ಎಂದು ಗಡಬಡಿಸಿ ಹಾಸಗಿಯಿಂದ ಮ್ಯಾಲೆದ್ದು ನೀಲವ್ವ ಕಣ್ಣುಜ್ಜತೊಡಗಿದಳು. ತನ್ನ ಮಗ್ಗಲ ಮಲಿಗಿದ್ದ ಲಕ್ಕಪ್ಪ ಇನ್ನ ‘ಗೊರ್.. .. ಗೊರ್’ ಗೊರಕಿ ಹೊಡಿತಿದ್ದ. ಹಿಂದಿನ ಜನ್ಮದಾಗ ಇಂವ ರಾಕ್ಷಿಯಾಗಿ ಇಟ್ಟದ್ನೋ ಏನೋ ಎಂದು ಗಂಡನ ಗೊರಕಿ ಶಬ್ದಾ ಕೇಳಿ ವಟಗುಡುತ್ತ ಮೆಲ್ಲಕ ಮ್ಯಾಲೆದ್ದು ಚಿಮನಿಗೆ ಒಂದ ಕಡ್ಡಿ ಗೀರಿ ಅದರ ಮೋತಿಗೆ ಇಟ್ಟಳು. ಮಲ್ಲಿಯ ಗಗ್ಗರಿ ಮಣಕಾಲ ದಾಟಿ ಮ್ಯಾಲ ಹೋಗಿತ್ತು. ದೌಳಾಕಿ ಹೆಂಗ ಮಲಗ್ಯಾಳ ನೋಡ ಮದಿವಿ ಮಾಡಿ ಕೊಟ್ಟರ ವರ್ಷಒಪ್ಪತ್ನ್ಯಾಗ ಮಕ್ಕಳಾ ಹಡಿತಾಳ ಮೈಮ್ಯಾಲ ಅರಬಿ ಕಬರಿಲ್ಲದ ಮಲಗ್ಯಾಳ ತಂದಿ ಇದ್ದಂಗ ಮಕ್ಕಳು ಅಂತ ನೀಲವ್ವ ಮಗಳ ಗಗ್ಗರಿ ಸರಿ ಪಡಿಸುತ್ತ ಒಟಗುಡಿದಳು. ಮಗಳ ನುಣುಪಾದ ತೊಡೆ ಕಂಡು ತನ್ನ ಹರೆಯದ ನೆನಪು ಎದೆಯಿಂದ ಚಿಮ್ಮಿ ಬಂತು. ತನ್ನ ದೇಹದ ಮೀಸಲಾ ಮೂರಿದ ಕಿವುಡ ರಂಗ ನೆನಪಾದ. ರಂಗನಿಗೂ ತನ್ನ ಗಂಡನಿಗೂ ಎಷ್ಟೊಂದು ವ್ಯಾತ್ಯಾಸ ಇದೆ. ರಂಗ ತನ್ನ ದೇಹ ಸಾಗರದಲ್ಲಿ ಸುಸ್ತಾಗುವರೆಗೂ ಈಜಾಡಿ ದಡ ಸೇರುತ್ತಿದ್ದ. ಆದ್ರೆ ಗಂಡ ಎನ್ನುವ ಈ ಪ್ರಾಣಿ ಮೂರ ಹೊತ್ತು ಕೂಳು ತಿಂದು ಹುಣ್ಣಿಗೆ ಅಮವಾಸಿಗೊಮ್ಮೆ ಸವಾರಿ ನೆಡುಸುತ್ತದ್ದ. ಅದು ಇವನದು ಹೆಂತಾ ಸವಾರಿ? ಎರಡ ನಿಮಷನ್ಯಾಗ ಸುಸ್ತಾಗಿ ಗೊರಕಿ ಹೊಡೆಯೋ ಅಸಾಯಕ ಶೂರ. ಎಂದು ತನ್ನ ಮನದನ್ನ ರಂಗ ಮತ್ತು ತನ್ನ ಗಂಡನ ಪುರುಷತ್ವ ಮನಸ್ನ್ಯಾಗ ತೂಗಿ ನೋಡುತ್ತಿದ್ದಳು. ಆಗ ಇವಳ ಮನದಾಗಿನ ಮಾತ ಆಲಿಸುತ್ತ ಚಿಮನಿ ನಗತೊಡಗಿತು. ದಂದಕ್ಯಾಗ ಕಟ್ಟಿದ ಎಮ್ಮಿಗೊಡ್ಡ ಮಲಕ ಆಡಸ್ಕೋತ ಮಲಗಿತ್ತು. ಒಳಚಿಲಕಾ ತಗದ ಹೊರಗ ಒಂದಹೆಜ್ಜಿ ಮುಂದ ಹೋಗಿ ಗ್ವಾಡಿ ಮಗ್ಗಲ ಕುಳಿತು ಕಾಲಮಡದ ಮ್ಯಾಲೆದ್ದು ಥೂ ಥೂ ಥೂ ಅಂತ ಮೂರ ಸಾರ್ತಿ ಉಗಳಿ ಅತ್ತಾಗ ಇತ್ತಾಗ ನೋಡಿದ್ಳು. ಇನ್ನ ಯಾವ ಮನಿಯಾಗೂ ದೀಪ ಹೊತ್ತಿಕೊಂಡಿದ್ದಿಲ್ಲ. ‘ಈ ಹಾಳಾದ ಕೋಳಿ ಇಷ್ಯಾಕ ಲಗೂನ ಕೂಗೇತಿ’ ಎಂದು ಕೂಗಿದ ಕೋಳಿ ಬೈಯುತ್ತ ಒಳಗ ಬಂದು ಮತ್ತೆ ಮಲಗ ಬೇಕನಿಸಿತು. ಇನ್ನ ಮ್ಯಾಲ ಮಲಗಿದ್ರು ಕಳ್ಳ ನಿದ್ದಿ ಹತ್ತೈತಿ ಅನ್ನೂದ ಗೊತ್ತಾಗಿ ಒಲಿಕಡೆ ಹೋಗಿ ಒಲಿ ಬೂದಿ ತಗದು ನೀರು ಕಾಸಾಕ ಒಂದ ಗುಂಡಗಿ ಒಲಿಮ್ಯಾಗ ಇಟ್ಟಳು. ಮತ್ತೆ ರಂಗನ ನೆನಪು ಗಾಣದೆತ್ತಿನಂತೆ ಅವಳ ಮನತುಂಬ ಸುತ್ತತೊಡಗಿತು. ***** ಅಂದು ಮಟಮಟ ಮದ್ಯಾನ ಪಡಸಾಲ್ಯಾಗ ಕುಂತ ನೀಲವ್ವ ಒಬ್ಬಾಕೆ ಮನಿಯಾಗ ಅಕ್ಕಿ ಹಸಣ ಮಾಡುತ್ತ ಕುಂತಿದ್ಳು. ಎದರು ಮನಿ ಗೌಡರ ಆಳು ಕಿವುಡ ರಂಗ ದೆವ್ವಿನಂತ ಕೊಡ್ಡದ ತೆಲಿಮ್ಯಾಲ ‘ದಿಪ್ಪ.. ದಿಪ್ಪ’ ಅಂತ ಕೊಡಲಿಯಿಂದ ಏಟ ಹಾಕುತ್ತಿದ್ದ. ಆಗ ದೊಡ್ಡಾಕಿ ಆದ ನೀಲಿಗೆ ಕಿವುಡ ರಂಗನ ಕಟ್ಟಮಸ್ತವಾದ ತೋಳು, ವಿಶಾಲವಾದ ಎದೆ, ಚಿಗರು ಮೀಸೆ ಅವನ ಎರಿ ಹೊಲದಂತ ಮೈ ಬಣ್ಣ ಅವಳ ಮನಸಿನಲ್ಲಿ ಗುಮಾನಿ ಗದ್ದಲ ನಡಿಸಿತ್ತು. ಅವನು ಕಟಗಿ ಒಡೆಯುವುದನ್ನು ಅಕ್ಕಿ ಹಸಣು ಮಾಡುತ್ತ ವಾರೆಗಣ್ಣಿನಿಂದ ಕದ್ದು ಕದ್ದು ನೋಡುತ್ತಿದ್ದಳು. ದೊಡ್ಯಾಕಿ ಆಗಿ ಒಂದು ವರ್ಷ ತುಂಬಿದ ಅವಳ ದೇಹ ಅನ್ಯ ಲಿಂಗದ ಆಲಿಂಗನಕ್ಕೆ ತೈಯಾರಾಗಿ ಕುಳತಿತ್ತು. ಇದರಿಂದ ನೀಲವ್ವನ ನೋಟಗಳು ತೀಕ್ಷ್ಣವಾಗಿದ್ದವು. ದೊಡ್ಯಾಕಿ ಆಗುವ ಮೋದಲಿನಿಂದಲೂ ಕಿವುಡ ರಂಗ ಅವಳ ಸತಾಯಿಸುತ್ತಿದ್ದ, ಕಟ್ಟಿಮ್ಯಾಲ ಕುಂತು ತೆಲಿ ಹಿಕ್ಕೊಳುವಾಗ ಸುಮ್ಮ ಸುಮ್ಮನೆ ಜಡೆ ಜಗ್ಗಿ ಹೋಗುತ್ತಿದ್ದ, ಮನಿಮುಂದ ಕುಳಿತು ಮುಸರಿ ತಿಕ್ಕುವಾಗ ತಾನು ಕೊಡ ಹೊತ್ತು ನೀರು ತರುತ್ತಿದ್ದ ಕೊಡದಾಗಿನ ನೀರು ನೀಲಿಯ ಮೋತಿಗೆ ಗೊಜ್ಜಿ ನಕ್ಕೊಂತ ಹೋಗುತ್ತಿದ್ದ. “ಯವ್ವಾ ಈ ಕಿವುಡ ನನಗ ನೀರ ಗೊಜ್ಜಿದ” ಎಂದು ನೀಲಿವ್ವ ತನ್ನ ತಾಯಿ ದುಂಡವ್ವಗ ಪಿರ್ಯಾದಿ ಹೇಳಿದರೆ ದುಂಡವ್ವ ನಕ್ಕೋತ ಅಂವಗ ಕಿವಡಾ ಅಚಿತಿ ಅದಕ ಅಂವ ಹಂಗ ಮಾಡ್ತಾನ ಎಂದು ಇವರ ಕುಚೆಷ್ಟೆಯತ್ತ ಬಾಳ ತೆಲಿ ಕೆಡಿಸಿಕೊಳ್ಳುತ್ತಿರಲಿಲ್ಲ. ನೀಲಿ ಎದುರಿಗೆ ಬಂದರೆ ದಾರಿ ಕಟ್ಟಿ ಗಲ್ಲ ಹಿಂಡುತ್ತಿದ್ದ. ಆ ನೋವು ತಾಳದೆ ‘ಕಿವುಡಾ.. ಬಾಡ್ಯಾ’ ಎಂದು ಇಡೀ ಊರೆ ಕೇಳುವ ಹಾಗೆ ನೀಲವ್ವ ರಂಗನನ್ನು ಬೈಯುತ್ತಿದ್ದಳು. ಓನ್ಯಾಗ ಅಲ್ಲಲ್ಲಿ ಕುಳಿತ ಮುದುಕ್ಯಾರು “ಬಿಡಬ್ಯಾಡಲಾ ಅಕೀನ ಬೇರಕಿ ಎಣ್ಣೀನ ಎತ್ತಾಗ ಓಡಸ್ಕೊಂಡ ಹೋಗು” ಎಂದು ಚಾಷ್ಟಿ ಮಾಡುತ್ತಿದ್ದರು. ನೀಲವ್ವನ ತಾಯಿ ದುಂಡವ್ವ “ನನ್ನ ಮಗಳ ಓಡಸ್ಕೊಂಡ ಹೋಗಬೇಕಾದ್ರ ಅಂವನ ಚೆನ್ನ ಬಾಳ ಗಟ್ಟಿ ಇರಬೇಕು” ಎಂದು ನಕಲಿ ಮಾಡಿ ಓನಿಯ ಎಲ್ಲ ಮುದಿಕಿಯರೊಟ್ಟಿಗೆ ತಾನೂ ನಗುತ್ತಿದ್ದಳು. ಕಿವುಡ ರಂಗನಿಗೂ ನೀಲಿಗೂ ಆಗಾಗ ಒಂದಿಷ್ಟು ಕೋಳಿ ಜಗಳ ಇದ್ದೇ ಇತ್ತು. ಓನಿಯ ಮಂದಿ ಮಳ್ಳ ಹುಡುಗ್ರತ್ತ ತೆಲಿ ಕೆಡಸ್ಕೊತಿದ್ದಿಲ್ಲ. ನೋಡಿ ನೋಡದಂತೆ, ಕೇಳಿ ಕೇಳದಂತೆ ಇರುತ್ತಿದ್ದರು. ಕಿವುಡ ರಂಗ ಆ ಓನಿ ಮಂದಿ ಮನಸ್ಸ ಗೆದ್ದಿದ್ದ. ಅದರಾಗ ಊರ ಗೌಡರ ಮನೆ ಆಳ ಮನಷ್ಯಾ ಅನ್ನು ಗೌರವ ಅವನಿಗಿತ್ತು. ಅತ್ತಾಗ ಹ್ವಾದ್ರು ರಂಗಾ ಇತ್ತಾಗ ಹ್ವಾದ್ರು ರಂಗ ಅಂತ ಕರಿತಿದ್ರು. ಹಿರ್ಯಾರಿಗೆ ಕಿರ್ಯಾರ್ಗೆ ನೆಡತಿ ಹಚ್ಚಿ ಕಾಕಾ, ದೊಡ್ಡಪ್ಪ, ಅಕ್ಕಾ, ದೊಡ್ಡವ್ವ, ಚೀಗವ್ವಾ, ಮಾಂವಾ ಅಂತ ಕರಿತಿದ್ದ. ಹಿಂಗಾಗಿ ರಂಗನ ಮ್ಯಾಲ ಆ ಓನಿ ಮಂದಿ ಅಷ್ಟ ಅಲ್ಲ ಊರ ಮಂದಿನೂ ಬಾಳ ಜಿಂವ ಜಿಂವ ಮಾಡ್ತಿದ್ರು. ನಡತೆಯಿಂದ ದುಂಡವ್ವಗ ಅಕ್ಕಾ ಅಂತ ರಂಗ ಕರೀತಿದ್ದ. ರಂಗ ಜಾತಿಯಿಂದ ವಾಲಿಕಾರನಾದರೂ ಅವನ ನಡೆ ನುಡಿ ಸ್ವಭಾವ ಚಲೋ ಇರುದ್ರಿಂದ ದುಂಡವ್ವ ತಮ್ಮನ ಸ್ಥಾನ ಕೊಟ್ಟಿದ್ಳು. ರಂಗ ಹುಟ್ಟ ಪರದೇಸಿ ಮಗಾ ಆಗಿದ್ದ. ‘ದಿಕ್ಕಿಲ್ಲದವ್ರಿಗೆ ದೇವ್ರ ಗತಿ’ ಅನ್ನುವಂಗ ಇಡೀ ಓನಿ ಮಂದಿ, ರಂಗನ್ನ ಮಗನತರಾ ಕಾಣತಿದ್ರು. ಒಂದಿನ ಜೋರಾಗಿ ಹೊಡೆದ ಮಳಿಗೆ ಊರ ಮುಂದಿನ ಬಗಸಿ ಹಳ್ಳ ತುಂಬಿ ಬರಟಾ ಹರಿತಿತ್ತು. ಹೊಲದಿಂದ ಮನಿಕಡೆ ಬರ್ತಿದ್ದ ರಂಗನ ಅವ್ವ ಅಪ್ಪನ ಆ ಬಗಸಿ ಹಳ್ಳ ನುಂಗಿತ್ತು. ಆಗ ರಂಗ ಮೂರ ವರ್ಷದ ಹುಡಗ. ರಂಗನ ಅಜ್ಜಿ ಯಮನವ್ವ ಊರಾಗ ಅವರಿವ ಮನೆ ಕಸಾ ಮುಸರಿ ಬೆಳಗಿ ಅವರ ಇವರ ಕೊಟ್ಟ ತಂಗಳನ್ನ ಸೀರಿ ಸೆರಗನ್ಯಾಗ ಮುಚಗೊಂದ ಬಂದು ರಂಗಗ ಉಣಸಿ ತಿನಿಸಿ ದೊಡ್ಡಾಂವನ್ನ ಮಾಡಿದ್ಳು. ಊರ ಗೌಡರಿಗೆ ದೈನಾಸ ಪಟ್ಟ ಮೊಮ್ಮಗನ್ನ ನಿಮ್ಮನ್ಯಾ ದನಾ ಕಾಯಾಕ ಇಟಗೊರ್ರೀ.. ನಾ ಇಂದೋ ನಾಳೆನೋ ಉದರಿ ಹೋಗೋ ಮರಾ.. ಎಂದು ಒಂದಿನ ಮಲ್ಲನ ಗೌಡರ ಮುಂದ ಯಮನವ್ವ ಕಣ್ಣೀರಿಟ್ಟಾಗ ಮಲ್ಲನಗೌಡರ ಮನಸು ಕರಗಿತು. ಆಯ್ತು ನಾಳಿಯಿಂದ ಕಳಿಸಿಕೊಡು ನಿನ್ನ ಮೊಮ್ಮಗನ್ನ ಎಂದು ಗೌಡ್ರು ಹೇಳಿದಾಗ ಯಮನವ್ವಗ ತನ್ನ ಮೊಮ್ಮಗಗ “ಸರಕಾರಿ ನೌಕರಿ” ಸಿಕ್ಕಷ್ಟು ಸಂತೋಷವಾಯ್ತು. ರಂಗನೂ ಗೌಡರ ಮನಿ ಕೆಲಸಕ್ಕ ಹೋಗು ಮೊದಲ ಊರ ಹನಮಪ್ಪಗ ಎರಡ ಜೋಡಗಾಯಿ ಒಡಸ್ಕೊಂಡ “ನನ್ನಿಂದ ಗೌಡರ ಮನಿಯ್ಯಾಗ ಯಾವ ತಪ್ಪು ಆಗದಂಗ ನೀನ ಕಾಯಪೋ” ಎಂದು ಹನಮಪ್ಪನ ಕಿವಿಮ್ಯಾಲ ಇಟ್ಟಿದ್ದ. ಯಮನವ್ವ ಯಾವಾಗಲೂ ಸಿಂಧೂರ ಲಕ್ಷ್ಮಣನ ಕತಿ ಹೇಳಿ ರಂಗನ ಬೆಳಸಿದ್ಳು. ರಂಗಗ ಸಿಂಧೂರ ಲಕ್ಷ್ಮಣ್ಣ ಅಂದ್ರ ಒಂದು ರೀತಿ ಅಭಿಮಾನ. ಊರಗ ಹನಮಪ್ಪನ ಗುಡಿಯಾಗ ಕಪ್ಪು ಬಿಳಪಿನ ಚೌಕಟ್ಟಿನಲ್ಲಿ ಬಂದಿಯಾಗಿದ್ದ ಸಿಂಧೂರ ಲಕ್ಷ್ಮಣನ ಪೋಟೋ ಆಗಾ ನೋಡಿ ತಾನೂ ಇವನಂಗ ಆಗ ಬೇಕು ಅಂತ ಚಿಗರು ಮೀಸಿಮ್ಯಾಲ ಕೈ ಇಟ್ಟು ಕೊಳ್ಳುತ್ತಿದ್ದ. ಸಿಂಧೂರ ಲಕ್ಷ್ಮಣನ ನಾಕಾ ಯಾವೂರಾಗರ ಆಡಾಕತ್ಯಾರ ಅಂತ ಸುದ್ದಿ ತಿಳದ್ರ ಸಾಕ ಬಂವ್ ಅಂತ ಸೈಕಲ್ಲ ಹತ್ತಿ ಹೊಕ್ಕಿದ್ದ. ಮುಂದಿನ ಸಾಲಗ ಕುಂತ ಇಡೀ ರಾತ್ರಿ ನಾಟಕ ನೋಡಿ ಬಂದು ಊರಾಗ ಅಲ್ಲಲ್ಲಿ ತನ್ನ ವಾರಿಗೆ ಗೆಳಿಯರಾದ ಕೋತರ ಬಸ್ಯಾ, ಹೂಗಾರ ಶರಣಯ್ಯನ ಮುಂದ ನಾಟಕದ ಡೈಲಾಗ ಹೊಡೆಯುತ್ತ ಚಿಗರು ಮೀಸಿ ತಿರಿಯುತ್ತ ಗಹಗಹಿಸಿ ನಗುತ್ತಿದ್ದ. ಇವನ ಡೈಲಾಗ ಕೇಳಿದ ಗೆಳಿಯಾರು ಚಪ್ಪಾಳಿ ತಟ್ಟಿ ನೀ ಸೇಮಟು ಸೇಮ ಸಿಂದೂರ ಲಕ್ಷ್ಮಣನ ಹಂಗ ಅದಿ ಅಂತ ಶರಣಯ್ಯ ಹೇಳಿದಾಗಂತು ರಂಗಗ ಆಕಾಶ ಬಾಳ ದೂರೇನ ಉಳದಿರ್ಲಿಲ್ಲ. ಸಾಲಿ ಹಿಂದು ಮುಂದ ಹಾಯದ ರಂಗನ ಬದುಕು ಮಲ್ಲನಗೌಡರ ದನದ ಕೊಟ್ಟಿಗೆಯಲ್ಲಿ ಮುಂದು ವರದಿತ್ತು. ತನ್ನ ಸಾಕಿ ಬೆಳಸಿದ ಯಮನವ್ವ ಸತ್ತ ಮೇಲಂತೂ ಖಾಯಂ ಗೌಡರ ದನದ ಮನಿಯೇ ಅವನ ಅರಮನಿಯಾಯಿತು. ತಂದಿ ತಾಯಿ ಪ್ರೀತಿ ಕಾಣದ ರಂಗ ಯಮನವ್ವಜ್ಜಿನ ತಂದಿ ತಾಯಿ ಎಂದು ನಂಬಿತ್ತು. ಅಕೀನೂ ಸತ್ತ ಮ್ಯಾಲ ರಂಗಗ ಯಾರಂದ್ರ ಯಾರೂ ದಿಕ್ಕಿಲ್ಲದಂಗಾತು. ಇದ್ದ ಒಂದ ಹಾಳಮಣ್ಣಿನ ಕೋಣಿ ಮಳೆಗೆ ಮುಗ್ಗರಿ ಬಿದ್ದು ನೆಲಸಮವಾಗಿತ್ತು. ಗೌಡ್ರ ಮನೆ ದನಾ,ಕೊಟ್ಟಿಗೆ ಬಿಟ್ರೆ ರಂಗನಿಗೆ ಮುಂದಿನೂರು ಗೊತ್ತಿರಲಿಲ್ಲ. ರಂಗನ ಸಂಬಾಯಿತ ಬುದ್ದಿಗೆ ಗೌಡತಿ ಮನೆ ಮಗನಂತೆ ಕಾಣುತ್ತಿದ್ದಳು. ಆದ್ರೆ ಮಲ್ಲನ ಗೌಡರಿಗೆ ಇದು ಹಿಡಿಸುತ್ತಿರಲಿಲ್ಲ. “ಚಪ್ಪಲ್ಲು ಬಂಗಾರದ್ದು ಎಂದು ಜಗಲಿ ಮ್ಯಾಲ ಇಡಾಕ ಅಕೈತೇನು” ಒಂದು ಸಾರಿ ಗೌಡತಿಯನ್ನು ಹಚ್ಚಿ ಜಾಡಿಸಿದ್ದ. ಅಂದಿನಿಂದ ರಂಗ ಬರೀ ಕಟಗಿ ಒಡಿಯೋದಿದ್ರೆ ಅಷೇ ಗೌಡರ ಮನಿಕಡೆ ಬರ್ತಿದ್ದ. ಉಳಿದ ಸಮಯ ಅದೆ ದನದ ಕೊಟ್ಟಿಗೆಯಲ್ಲಿ ದನಕ್ಕೆ ನೀರು ಕುಡಿಸುವುದು, ಹೆಂಡಿಮಾಡುವುದು. ಕೆಲಸ ಇಲ್ಲದಿದ್ದಾಗ ತನ್ನ ವಾರಿಗೆ ಗೆಳೆಯರೊಂದಿಗೆ ಅಲ್ಲಿಲ್ಲಿ ಕಟ್ಟಿಗೆ ಕುಳಿತು ಹರಟೆ ಹೊಡೆಯುವುದು ಮಾಡುತ್ತಿದ್ದ. ರಂಗ ಹರಟೆ ಹೊಡೆಯುವುದನ್ನು ಸಹಿಸದ ಸೆಟ್ಟರ ಸುಭಾಷ ಕುದ್ದಾಗಿ ಗೌಡರ ಕಿವಿಯಲ್ಲಿ ಊದಿ ರಂಗನಿಗೆ ಚಾಸ್ತಿ ಮಾಡಿಸಿ ನಕ್ಕಿದ್ದ. ಅಂದಿನಿಂದ ತಾನಾತು ತನ್ನ ಕೆಲಸಾತು ಯಾವ ಗೊಡವಿಗೂ ಹೋಗದೆ ರಂಗ ಸುಮ್ಮನಿದ್ದ. ಅಂದು ಗೌಡತಿ ಮನಿಯಾಗ ಒಂದೂ ಕಟಿಗಿಲ್ಲ ಒಂದಿಷ್ಟ ಕಟಗಿ ಒಡದ ಕೊಟ್ಟ ಹೋಗಬಾ ಎಂದು ರಂನನ್ನು ಕರಸಿದ್ದಳು. ಗೌಡರ ಮನಿಯಂಗಳದಲ್ಲಿ ಉರುಉರು ಬಿಸಿಲಿಲ್ಲಿ ರಂಗ ದೆವ್ವಿನಂತ ಕೊಡ್ಡದ ಜೋಡಿ ತಳಕಿಗೆ ಬಿದ್ದಿದ್ದ. ರಂಗ ಕಟಗಿ ವಡೆಯುವುದನ್ನು ಕದ್ದು ಕದ್ದು ನೀಲಿ ನೋಡುತ್ತ ಅಕ್ಕಿಯಲ್ಲಿ ಹಳ್ಳ ಹುಡುಕುತ್ತಿದ್ದಳು. ಆಗಷ್ಷೆ ಹತ್ತನೇತೆ ಪಾಸಗಿದ್ದ ನೀಲಿಯ ಮನಸ್ಸು ಹಕ್ಕಿಯಂತೆ ಎಲ್ಲಂದರಲ್ಲಿ ಹಾರಾಡಬೇಕು ಅಂತ ಅನಿಸುತ್ತಿತ್ತು. ರಂಗ ಮೊದಲಿನ ಗತೆ ನನ್ಯಾಕ ಕಾಡಸ್ತಿಲ್ಲ, ಜಡಿಹಿಡಿದು ಜಗ್ಗುತ್ತಿಲ್ಲ, ಕೊಡಹೊತ್ತು ನೀರುತರುವಾಗ ನನಗೇಕೆ ಮಾರಿಗೆ ನೀರು ಚಿಮುಕಿಸುತ್ತಿಲ್ಲ, ದಾರಿಗಟ್ಟಿ ನನ್ನ ಗಲ್ಲ ಏಕೆ ಹಿಂಡುತ್ತಿಲ್ಲ ಎಂದು ನೀಲಿಯ ಮನದಲ್ಲಿ ಚಡಪಡಿಸಿದಳು. ರಂಗನ ಕಬ್ಬಿನದಂತ ಕೈ ಸ್ಪರ್ಶ ನೀಲಿಗೆ ಈಗ ಬೇಕೆನಿಸುತ್ತಿತ್ತು. ದಬ್ ದಬ್ ಕಟ್ಟಿಗೆ ಒಡೆಯುತ್ತಿದ್ದ ರಂಗನ ಎದೆಯಲ್ಲಿ ಬೆವರು ಹರಿಯುತ್ತಿತ್ತು. ಮೈಯಲ್ಲ ತೈಲಮಯವಾಗಿತ್ತು. ತುಂಬಿದ ತೋಳುಗಳು ಮಿರಮಿರನೆ ಮಿನಗುತ್ತಿದ್ದವು. ಅವನ ಚಿಗುರು ಮೀಸಯಲ್ಲಿ ಬೇವರ ಹನಿ ಜಿನಗುತ್ತಿತ್ತು. ಯಾವಾಗೂ ತನ್ನ ಮನೆಯ ಕಡೆ ಕಣ್ಣು ಹರಿಬಿಡುವ ಅವನ ಕಣ್ಣುಗಳೇಕೆ ಇಂದು ಇತ್ತ ವಾಲುತ್ತಿಲ್ಲ ಎಂದು ನೀಲಿಗೆ ಸಿಟ್ಟು ಬರತೊಡಗಿತು. ಹೆಂಗೋ ಧೈರ್ಯಮಾಡಿ ಜೋರಾಗಿ ‘ಕಿವುಡಾ’ ಎಂದು ಕಿರುಚಿದಳು.ಆಗ ರಂಗ ಇವಳತ್ತ ಗಮನಿಸದೆ ಕಟಿಗೆ ಒಡೆಯುತ್ತಲೇ ಇದ್ದ. ಇಷ್ಟ ದಿನಾ ಈ ಮೂಳ ನಾ ಬ್ಯಾಡ ಅಂದ್ರೂ ಕಾಡಸ್ತಿದ್ದ ಈಗೇನಾಗೇತಿ ಇಂವದ ದಾಡಿ ಎಂದು ಮನದಲ್ಲಿಯೆ ರಂಗನ್ನು ಬೈಯುತತ್ತಿದ್ದಳು. ಅವಳಿಗೆ ರಂಗನ ಮೊದಲಿನ ಚೆಷ್ಡೆ ಬೇಕಿನಿಸುತ್ತಿತ್ತು. ಮತ್ತೆ ಮತ್ತೆ ಕಿವುಡಾ ಎಂದು ಮೆಲ್ಲನೆ ಗುಣಗಿದಾಗ ರಂಗÀ ಬೆವರು ವರೆಸಿಕೊಳ್ಳುತ್ತ ನೀಲಿಯನ್ನು ನೋಡಿ ಚಿಗುರು ಮೀಸೆ ನೆವರುತ್ತ ನೀಲಿಯನ್ನು ನೋಡಿ ಮುಗುಳ್ನಕ್ಕ. ಆಗ ನೀಲಿ ನವಿಲಾದಳು. ಗರಿಗೆದರಿದಳು. ಅವನನ್ನೇ ನೋಡುತ್ತ ಎಷ್ಷೋ ಹೊತ್ತು ಕುಳಿತಳು. ರಂಗ ಆಗಾಗ ಇವಳತ್ತ ನೋಟ ಹರಿಸುತ್ತಿದ್ದ.ನೀಲಿ ಗಿಳಿಮರಿಯಂತೆ ನಗುತ್ತಿದ್ದಳು. ಮತ್ತೊಮ್ಮೆ ಮೆಲ್ಲಗೆ ಕಿವುಡಾ ಎಂದು ಉಲಿದಾಗ ರಂಗ ಕಣ್ಣು ಹೊಡೆದು ನಕ್ಕ. ಆಗ ನೀಲಿಯ ಮೈಯಲ್ಲಿ ಕರೆಂಟು ಪಾಸಾದಂತೆ ಆಯಿತು. ಬಾಗಿಲ ಹತ್ತಿರ ಬಂದು ಮೇಕೆ ಮರಿಯ ಬೆನ್ನು ಸವರುತ್ತ ರಂಗನಿಗೆ ತಾನೂ ಕಣ್ಣು ಹೊಡೆದು ಪ್ರೀತಿಯ ಗುಡಿಗೆ ದೀಪ ಹಚ್ಚಿಟ್ಟಳು. ******* ಗೌಡ್ರು ಪ್ರತಿ ವರ್ಷವೂ ಭಾರತಾ ಹುಣ್ಣಿಗೊಮ್ಮೆ ಸವದತ್ತಿ ಯಲ್ಲಮ್ಮ ಗುಡ್ಡಕ್ಕ ಎತ್ತಿನ ಬಂಡಿ ಕಟ್ಟಿಕೊಂಡು ಹೋಗುತ್ತಿದ್ದರು. ಹುಣ್ಣಿಮೆ ನಾಳೆ ಇದೆ ಎಂದಾಗ ಅವರ ಎತ್ತಿನ ಬಂಡಿ ಇಂದೆ ಸಜ್ಜಾಗಿ ಹೋಗುವ ತಯಾರಿಯಲ್ಲಿ ಇರುತ್ತಿತ್ತು. ಊರ ಗೌಡ್ರ ಬಂಡಿ ಹೂಡ್ಯಾರಂದ್ರ ನಾವ್ಯಾಕ ಸುಮ್ನಿರುದು ಅಂತ ಊರಾಗಿನ ಮಂದಿನೂ ಬಂಡಿ ಕೊಳ್ಳಗಟ್ಟತ್ತಿದ್ರು. ಇಪ್ಪತ್ತರಿಂದ ಇಪ್ಪತೈದು ಬಂಡಿ ಸಾಲುಗಟ್ಟಿ ಎಲ್ಲಮ್ಮನ ಗುಡ್ಡದ ಹಾದಿ ಹಿಡಿತಿದ್ದವು. ಗೌಡರ ಬಂಡಿ ಪ್ರತಿ ವರ್ಷನೂ ಮುಂದ ಹೋಗಬೇಕು ಅನ್ನುವ ಸಂಪ್ರದಾಯ ಇತ್ತು. ಗೌಡರ ಬಂಡಿ ಹಿಂದ ಸೆಟ್ಟರ ಬಂಡಿ, ಅದರ ಹಿಂದ ಐಗೋಳ ತಿಪ್ಪಯ್ಯನ ಬಂಡಿ, ಕಡೆ ಕಡೆಗೆ ಹೋಲ್ಯಾರು ದಾಸರು ಬಂಡಿಗೋಳು ಬರ್ತಿದ್ದವು. ಎಳ್ಳ ಹಚ್ಚಿದ ಸಜ್ಜಿರೊಟ್ಟಿ, ಹುಳಿಬಾನ, ಗುರೆಳ್ಳ ಹಿಂಡಿ, ಸಿಂಗಾದ ಹಿಂಡಿ, ಹುರದ ಕರಚಿಕಾಯಿ ಒಂದ ವಾರ ಇರಾಕಲೆ ಮನಿಯಾಗ ಹೆಣ್ಣಮಕ್ಕಳು ಸಿದ್ದಮಾಡಕೋತಿದ್ರು.ತೆಳ್ಳಗ ಬಿಳಿಜ್ವಳದರೋಟ್ಟನೂ ಮಾಡಿ ಪುಟ್ಟಿಗಂಟ್ಲೆ ತುಂಬಿ ಇಡತಿದ್ರು.ಬೇಕ ಬ್ಯಾಡಾದ್ದು ಎಲ್ಲವನ್ನು ಕಟ್ಟಿಕೊಂಡು ಇಳಿ ಸಂಜಿ ಹೊತ್ತಿಗೆ ಊರಿಂದ ಬಂಡಿಗೋಳು ಹೋರಡಲು ಸಿದ್ದಾದವು. ಎತ್ತುಗಳ ಮೈ ತೊಳೆದು, ಕೊಂಬು ಸವರಿ, ಬಣ್ಣ ಬಣ್ಣದ ರಿಬ್ಬನ್ನು ಕಟ್ಟಿ, ಕಾಲಿಗೆ ನಾಲು ಕಟ್ಟಿಸಿ, ಮೈತುಂಬ ಜೂಲಾ ಹಾಕಿ ಶೃಂಗಾರ ಮಾಡಿದ್ದರು. ಎತ್ತುಗಳು ಹುರುಪುನಿಂದ ನಲಿಯುತ್ತಿದ್ದವು. ರಂಗನೂ ಎತ್ತುಗಳ ಮೈ ತೊಳೆದು ಕಾರ ಹುಣ್ಣಿಮೆಯಂದು ಅಲಂಕಾರ ಮಾಡಿದಂತೆ ಅಲಂಕಾರ ಮಾಡಿದ್ದ. ಆನೆ ಎತ್ತರದ ಗೌಡರ ಎತ್ತುಗಳು ಊರಿಗೆ ದೊಡ್ಡವು. ಎಲ್ಲರ ಕಣ್ಣುಗಳು ಆ ಎತ್ತಿನತ್ತಲೆ ಇರುತ್ತಾವೆ ಎಂದು ಅವುಗಳ ಕಾಲಿಗೆ ನೆದರು ಆಗಬಾರದೆಂದು ಮುಂಗಾಲಿಗೆ ಕರಿ ದಾರ ಕಟ್ಟಿದ್ದ. ರಂಗ ಗುಡ್ಡಕ್ಕೆ ಹೋಗುವುದು ಕಚಿತ ಪಡಿಸಿಕೊಂಡು ನೀಲಿಯೂ ಗುಡ್ಡದೆಲ್ಲಮನಿಗೆ ನಾನೂ ಹೊಕ್ಕೀನಿ ಎಂದು ನಾಕಾರು ದಿನದಿಂದಲೆ ದುಂಡವ್ವನಿಗೆ ಗಂಟು ಬಿದ್ದಿದ್ದಳು. ದುಂಡವ್ವ ಮುಂದಿನ ವರ್ಷ ಹೋಗೂವಂತೆ ಈ ವರ್ಷ ಬ್ಯಾಡ ಎಂದು ಎಷ್ಟೂ ಹೇಳಿದರೂ ಊಟ ಬಿಟ್ಟು ಹಟಮಾಡಿ ಕುಳಿತಾಗÀ “ಹುಡಗಿ ಅಷ್ಟ ಜಿಂವಾ ತಿಂತೈತಿ ಕಳಿಸಿಕೊಡು, ಬೇಕಾದ್ರ ನಮ್ಮ ಗಾಡ್ಯಾಗ ಬರವಳ್ಳು” ಎಂದು ಗೌಡನ ಹೆಂಡತಿ ದುಂಡವ್ವಗ ಅಂದಾಗ ಗೌಡತಿ ಮಾತ ಮೀರದೆ ದುಂಡವ್ವ ಒಪ್ಪಗೊಂಡ್ಳು. ಹಕ್ಕಿಗಳು ಗೂಡು ಸೇರುವ ಹೊತ್ತಿಗೆ ಊರಿಂದ ಒಂದೊಂದೆ ಗಾಡಿಗಳು ಮೆಲ್ಲಕ ಸಾಗಿದವು. ಗೌಡರ ಬಂಡಿ ಹೊಡೆಯುವ ರಂಗ ಗೌಡರು ತಂದು ಕೊಟ್ಟ ಹೊಸಾ ಬಟ್ಟೆ ತೊಟ್ಟುಕೊಂಡು ರಾಜಕುಮಾರನಂತೆ ಕಾಣುತ್ತಿದ್ದ. ತೆಲೆಯ ಕರಾಪು ನೀಟಾಗಿ ಮಾಡಿಸಿಕೊಂಡು ನೀಲಿಯ ಮುದ್ದಾದ ಕಣ್ಣುಗಳಿಗೆ ಮನ್ಮಥನಂತೆ ಕಾಣುತಿದ್ದ. ಊರ ಬಂಡಿಗೊಳಕಿಂತ ತನ್ನ ಬಂಡಿ ಮುಂದ ಹೊಂಟದ್ದು ರಂಗನಿಗೊಂದು ದೊಡ್ಡ ಹೆಮ್ಮೆ ವತ್ತಟ್ಟಿಗಾದರೆ, ತನ್ನ ಮನದಲ್ಲಿ ದಿನಾಲೂ ನಿದ್ದೆಗೆಡಿಸುವ ದೇವತೆ ನೀಲಿ ತನ್ನ ಬಂಡಿಯಲ್ಲಿ ಬಂದದ್ದು ರಂಗನಿಗೊಂದು ಸಂಭ್ರಮ ತಂದಿತ್ತು. “ಉಧೋ.. ಉಧೋ ಉಧೋ ಎಲ್ಲಮ್ಮ ನಿನ್ನಾಲಕೂಧೋ.. ಜೋಗಳ ಬಾಯಿ ಸತ್ಯವ್ವ ನಿನ್ನಾಲ್ಕೂಧೋ.. ಪರಶುರಾಮಾ ನಿನ್ನಾಲ್ಕೂಧೋ” ಎಂದು ಬಂಡಿಯಲ್ಲಿದ್ದವರು ದೇವಿ ಯಲ್ಲಮ್ಮ ತಾಯಿಯನ್ನು ಭಕ್ತಿಭಾವದಿಂದ ನೆನೆಯುತ್ತಿದ್ದರು. ರಂಗನೂ ಎತ್ತುಗಳ ಬಾಲ ಮುಟ್ಟುತ್ತ ಹುಸ್ಯಾ.. ಹುಸ್ಯಾ.. ಅನ್ನುತ್ತ ಬಂಡಿ ಓಡಿಸುವ ಖುಷಿಯಲ್ಲಿರುತ್ತಿದ್ದ. ಸದಾ ರಂಗನ ದ್ಯಾನದಲ್ಲಿರುವ ನೀಲಿ ರಂಗ ಬಂಡಿ ಹೊಡೆಯುವ ಗತ್ತು, ಎತ್ತುಗಳನ್ನು ಓಡಿಸುವ ರೀತಿ ನೋಡುತ್ತ ಬಂಡಿಯಲ್ಲಿ ಪುಟ್ಟ ಗುಬ್ಬಿಯಂತೆ ಅಡಗಿ ಕುಳತಿದ್ದಳು. ಬಂಡಿಯಲ್ಲಿ ಗೌಡ ಮತ್ತು ಗೌಡತಿ ಇದ್ದದ್ದರಿಂದ ನೀಲಿಯನ್ನು ತಿರುಗಿ ನೋಡುವ ಸಹಾಸ ರಂಗ ಮಾಡುತ್ತಿರಲಿಲ್ಲ. ರಾತ್ರಿಯಾದಗಂತೂ ಹಿಟ್ಟು ಚೆಲ್ಲಿದಂತ ಬೆಳದಿಂದಳ ಬೆಳಕಲ್ಲಿ ಬಂಡಿಗಳು ರಸ್ತೆಯ ಮೇಲೆ ಸಾಲು ಸಾಲಾಗು ಸಾಗುತ್ತಿದ್ದವು. ಎದುರಿಗೆ ಬರುವ ಮೋಟಾರ ವಾಹನ ಬೇಳಕು ಗಾಡಿಯನ್ನು ಪ್ರವೇಶಿಸಿ ಗಾಡಿಯಲ್ಲಿದ್ದವರ ಕಣ್ಣು ಕುಕ್ಕಿಸುತ್ತಿದ್ದವು. ರಂಗನಿಗೆ “ನೀದಾನ ಹೋಗ್ಲೀ ಏನೂ ಅರ್ಜೆಂಟ್ ಇಲ್ಲ” ಎಂದು ಗೌಡ ಆಗಾಗ ಹೇಳುತ್ತಲೇ ಇರುತ್ತಿದ್ದ. ಮೂಡನದಲ್ಲಿ ಬೆಳ್ಳಿ ಚುಕ್ಕಿ ಮೂಡುವ ಹೋತ್ತಿಗೆ ಬಂಡಿಗಳು ಗುಡ್ಡ ಹೊಕ್ಕವು. ಎಲ್ಲರೂ ಬಂಡಿ ಕೊಳ್ಳ ಹರಿದು, ಎತ್ತುಗಳಿಗೆ ಕನಕಿ ಹಾಕಿ, ಜಳಕಾ ಮಾಡಿ ದೇವಿಯ ದರುಶನಕ್ಕೆ ತೈಯಾರಾದರು. ನೀಲಿ ಸೀರಿ ಉಟ್ಟುಕೊಂಡು ಮದುವಣಗಿತ್ತಿಯಂತೆ ತಯಾರಾಗಿ ನಿಂತಾಗ ಎತ್ತಿಗೆ ಕನಕಿ ಹಾಕುತ್ತಿದ್ದ ರಂಗ ಅವಳ ಚಲುವಿಗೆ ಬೆರಗಾಗಿ ಅವಳನ್ನೇ ನೋಡುತ್ತ ನಿಂತು ಕೊಂಡ. ನೀಲಿ ರಂಗನನ್ನು ನೋಡುತ್ತ ಕಣ್ಣು ಸನ್ನೆ ಮಾಡಿ ನೀನೂ ಗುಡಿಗೆ ಬಾ ಎಂದು ಕರೆದಳು. ರಂಗ ಇಲ್ಲ ಅನ್ನುವ ರೀತಿ ಗೋಣು ಅಲ್ಲಾಡಿಸಿದ. ಗೌಡರೊಟ್ಟಿ ಅಂವ ಬರಬಾರದು ಅನ್ನುವ ರೀತಿನೀತಿ ನೀಲಿ ಅರಿತುಕೊಂಡಿದ್ದಳು. ಎಲ್ಲರು ದೇವರ ದರುಷಣ ಪಡೆದು ತಮಗೆ ತೋಚಿದತ್ತ ಅತ್ತಿತ್ತ ಹೋದರು. ನೀಲಿ ಗೌಡತಿಯ ಕಣ್ಣು ತಪ್ಪಿಸಿ ರಂಗನನ್ನು ಹುಡುಕಿಕೊಂಡು ರಂಗನ ಸನಿಹ ಬಯಸಿದಳು. ಎಷ್ಟೋ ಹೊತ್ತು ಕದ್ದು ಮುಚ್ಚಿ ಕೈ ಕೈ ಹಿಡಿದು ಅಡ್ಡಾಡಿದರು. ತಮ್ಮ ಪ್ರೀತಿ ಪ್ರಣಯದ ಸಲ್ಲಾಪದ ಸವಿ ಆ ಜಾತ್ರೆಯಲ್ಲಿಯೇ ಹಿತವಾಗಿ ಅನುಭವಿಸದರು.ತನ್ನ ಪ್ರೀತಿಯ ಸಂಕೇತಕೆಂದು ಹನಮಂತನ ತಾಯಿತವನ್ನು ರಂಗನ ಕೊರಳಿಗೇ ತಾನೇ ಕಟ್ಟಿ ರಂಗನ ಕೆನ್ನೆಗೊಂದು ಮುತ್ತನ್ನು ಒತ್ತಿದಳು. ರಂಗನೂ ಒಂದು ಉಂಗುರ ಅವಳ ಬೆರಳಿಗೆ ತೊಡಿಸಿ ಅವಳ ಕೆನ್ನೆಗೆ ಮುತ್ತಿನ ಮಳೆ ಸುರಿಸಿದನು. ಇವರ ಕಳ್ಳಾಟವನ್ನು ಸೆಟ್ಟರ ಸುಭಾಷಪ್ಪ ಹೇಗೋ ನೋಡಿಬಿಟ್ಟಿದ್ದ. ಊರಿಗೆ ಹೋಗಿ ಈ ಮಗನಿಗೆ ತಕ್ಕ ಚಾಸ್ತಿ ಮಾಡಬೇಕೆಂದು ಮನದಲ್ಲಿಯೇ ತನ್ನ ಕೋಪ ತಾಪವನ್ನು ಅದುಮಿಟ್ಟುಕೊಂಡಿದ್ದ. ಊರಿಗೆ ಬಂದ ಮೇಲೆ ಕುಂತಲ್ಲಿ ನಿಂತಲ್ಲಿ ರಂಗನನ್ನೇ ದ್ಯಾನಿಸತೊಡಗಿದಳು.ದುಂಡವ್ವ ಮಗಳು ಗುಡ್ಡಕ್ಕ ಹೋಗಿ ಬಂದಾಗಿಂದ ಯಾಕೋ ಸಪ್ಪಗ ಆಗ್ಯಾಳ, ನೂರೆಂಟ ಮಂದಿ ಸೆರಗ ತಾಗಿರಬೇಕು. ಇಲ್ಲಂದ್ರ ನೀರಗೀರ ಬದಲಾಗಿ ಮೈಯಾಗ ಸ್ವಲ್ಪ ದುಗಾಡ ಬಂದಂಗ ಆಗೂದ ಸರಳ ಅಂತ ಅರ್ಥೈಸಿಕೊಂಡು ಸುಮ್ಮನಾದಳು. ರಂಗ ಆಗಾಗ ಗೌಡರು ಮತ್ತು ಗೌಡತಿ ಕೊಟ್ಟ ಕೂಡಿಟ್ಟ ಹಣದಲ್ಲಿ ಒಂದು ಮೊಬೈಲ ಕರಿದಿಸಿ ನೀಲಿಗೆ ಗೊತ್ತಾಗುವಂತೆ ನಾನು ಮೊಬೈಲು ಕರಿದಿಸಿದಿನ್ನಿ ನೋಡು ಅನ್ನುವಂಗೆ ದಿಮಾಕಿಲೆ ಕಿವಿ ಮ್ಯಾಲೆ ಇಟಗೊಂದು ಯಾರೊಟ್ಟಿಗೋ ಮಾತಾಡುತ್ತ ಕಲಸ ಬಗಸಿ ಇಲ್ಲದೆ ಗೌಡರ ದನದ ಕೊಟ್ಟಿಗೆಯಲ್ಲಿ ಇರುವುದು ಬಿಟ್ಟು ನೀಲಿಯ ಮನೆಮುಂದು ಹಾದು ಗೌಡರ ಮನಿಯಂಗಳದಲ್ಲಿ ಬಂದು ನಿಂತು ‘ಅವ್ವಾರ.. ಅವ್ವಾರ.. ಅಂತ ಎರಡು ಬಾರಿ ಜೋರಾಗಿ ದನಿ ಮಾಡಿದ. ಒಳಗಿದ್ದ ಗೌಡ್ತಿ ಏನಾತು ಅಂತ ದುಡುದುಡು ಹೋರಗ ಬಂದಳು. ಏನಾರ ಕೆಲಸ ಐತೇನ ಅಂತ ಬಂದ್ಯಾರಿ ಅಂತ ಕೈಯಾಗಿದ್ದ ಮೋಬೈಲ ಗೌಡ್ತಿಗೆ ಕಾಣದಂತೆ ಮರಿ ಮಾಡಿ ಕೇಳಿದ. ಕೆಲಸಿದ್ರ ನಾ ಹೇಳಿ ಕಳಸ್ತದ್ದೀಲ್ಲೇನ, ಬರೂದ ಬಂದಿ ಮನಿಗೆ ನಾಕ ಕೊಡ ನೀರ ತಂದ ಹೋಗು ಅಂತ ಹೇಳುತ್ತ ಗೌಡ್ತಿ ಒಳಗ ನಡದ್ಳು. ಬಾಗಿಲ್ಲಿನಿಂತು ತಲೆ ಬಾಚಿಕೊಳ್ಳುತ್ತಿದ್ದ ನೀಲಿ ಸಂಬ್ರಮದಿಂದ ರಂಗನ್ನು ನೋಡುತ್ತ, ಅವನ ಕೈಯೊಳಗಿರುವ ಮೊಬೈಲ ನೋಡಿ ಖುಷಿಯಾದಳು. ಇನ್ನ ಮ್ಯಾಲ ಎಷ್ಷಬೇಕೋ ಅಷ್ಟ ಪೋನನ್ಯಾಗ ಮಾತಾಡಬಹುದು ಅಂತ ಹಿರಿ ಹಿರಿ ಹಿಗ್ಗಿದಳು. ರಂಗ ನೀರಿಗೆ ಹೋಗುವುದೇ ತಡ ತಾನೂ ಒಂದ ಕೊಡ ತಗಿದುಕೊಂಡು ಬಿರಬಿರನೇ ನಳದತ್ತ ನಡೆದಳು. ನಳದಲ್ಲಿ ಯಾವ ಗುಬ್ಬಿ ಸುಳಿವೂ ಇರಲಿಲ್ಲ. ಏನೋ ರಂಗ ಮೊಬೈಲ ತಗೊಂದಿಯಂತ ಬಾಳ ಜೋರಾತ ಬಿಡು ನಿಂದು ನಂಬರ ಏನೈತಿ ಹೇಳು ಎಂದು ಏರುದನಿಯಲ್ಲಿ ನೀಲಿ ರಂಗನನ್ನು ಸತಾಯಿಸಿದಳು. ನನಗ ಇದರಾಗ ನಂದರ ತಗ್ಯಾಕ ಬರೂದಿಲ್ಲ ನೀನ ತಕ್ಕೋ ಲಾಷ್ಟ ನಂಬರ್ 63 ಐತಿ ನೋಡ ಎಂದು ಹೇಳಿದ. ರಂಗನ ಪೆದ್ದ ತನ ನೋಡಿ ನೀಲಿ ನಸುನಗುತ್ತ ಅವನ ಕೈಯಾಗೀನ ಪೋನು ತಗೊಂಡು ತನ್ನ ಮನಿಯಲ್ಲಿರುವ ನಂಬಿರಗೊಂದು ಮಿಸ್ ಕಾಲ ಮಾಡಿ ಅವನ ಮೋತಿಗೊಂದಿಷ್ಟು ನೀರು ಗೊಜ್ಜಿ ನಕ್ಕೋತ ಮನಿಕಡೆ ಹೊಂಟಳು. ನೀಲಿ ಹೋಗುವುದನ್ನು ತದೇಕಚಿತ್ತದಿಂದ ರಂಗ ನಳದಲ್ಲಿ ನಿಂತೆ ನೋಡತೊಡಗಿದ. ಅವಳ ಮಿನಗುವ ಕಣ್ಣು, ತುಂಬಿದ ಎದೆ, ಬಳಕುವ ಮೈ, ಮಾರೂದ್ದ ಇರುವ ನೀಲಿಯ ಜಡೆ ಅವಳ ಬೆನ್ನ ಹಿಂದೆ ಇರುವ ವಿಶಾಲ ಏರುಗಳಿಗೆ ತಾಗಿದಾಗ ರಂಗನ ಮನಸು ಮಹೋತ್ಸವಕ್ಕೆ ಸಿದ್ದಾಗು ಹುರುಪಿನಲ್ಲಿ ಲೀನವಾಗುತ್ತಿತ್ತು. ಪೋನಿನಲ್ಲಿ ಇಂದು ಏನೇ ಆಗಲಿ ನಿನ್ನ ಅರಮನಿಗೆ ಬರುತ್ತೇನೆ ಎಂದು ಹೇಳಿ ಪೋನು ಕಟ್ಟು ಮಾಡಿಟ್ಟ ನೀಲಿಯ ಮಾತು ಕೇಳಿ ರಂಗನಿಗೆ ಭಯವಾಯ್ತು. ಒಂದು ಕೈ ನೋಡೆ ಬಿಡಬೇಕು ಅಂತ ಅವನ ಮನಸು ಹುರುಪುಗೊಂಡು ಹುಮ್ಮಸದಿ ನಲಿಯುತ್ತಿತ್ತು. ಮಟಮಟ ಮದ್ಯಾನ ಒಂದು ದಿನ ನೀಲಿ ರಂಗನಿರುವ ದನದ ಕೊಟಗಿಯತ್ತ ಹೆಜ್ಜೆ ಹಾಕಿದಳು. ಹಸಿದ ಹುಲಿ ಜಿಂಕೆಯ ದಾರಿಯನ್ನೆ ಕಾಯುವಂತೆ ರಂಗ ಕಾದು ಕುಳತಿದ್ದ. ದೂರದಲ್ಲಿ ಬರುವ ನೀಲಿ ಧೈರ್ಯ ಕಂಡು ಬೆರಗಾದ. ಹೆಣ್ಣು ಮನಸು ಮಾಡಿದರೆ ಏನೆಲ್ಲ ಮಾಡಬಲ್ಲಳು ಅನ್ನುದಕ್ಕೆ ಇವಳೆ ಸಾಕ್ಷಿ ಎಂದು ರಂಗ ನೀಲಿಯನ್ನು ನೋಡುತ್ತಲೇ ಮೈ ಮರತ. ನೀಲಿ ಬಿಸಿಲ್ಲಿ ಬಂದದ್ದಕ್ಕೆ ಅವಳ ಮೈ ಬೆವರುಗೊಂಡು ಅವಳ ಸೌಂದರ್ಯವನ್ನು ದ್ವಿಗುಣಗೊಳಿಸಿತ್ತು. ಆ ಮಟಮಟ ಮದ್ಯಾನದಲ್ಲಿ ಆ ಎರಡು ದೇಹಗಳು ಹಾವುಗಳು ಮೈಮರೆತು ತಳಕು ಬಿದ್ದಂತೆ ಗೌಡರ ದನದ ಕೊಟಗೆಯಲ್ಲಿ ತಳಕು ಬಿದ್ದು ಎಷ್ಷೋ ದಿನ ಎದಿಯಲ್ಲಿ ಅಡಗಿದ ಆಸೆಯನ್ನು ತೀರಸಿಕೊಂಡವು. ನಿನ್ನ ಬಿಟ್ಟು ನಾ ಬದುಕಲಾರೆ ಅನ್ನುವ ನೀಲಿಯ ಮುಗ್ದ ಮಾತಿಗೆ ನಾನೂ ನಿನ್ನ ಬಿಟ್ಟಿರಲಾರೆ ಎಂದು ರಂಗ ಹೇಳುತ್ತ ನೀಲಿಯನ್ನು ತನ್ನ ತೋಳತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ಮುತ್ತಿನ ಅಭಿಷೇಕ ಮಾಡುತ್ತಿದ್ದ. ರಂಗನ ತೆಕ್ಕೆಯಲ್ಲಿ ಗುಬ್ಬು ಮರಿಯಂತೆ ಬೆಚ್ಚಗೆ ಕುಳಿತು ಅವನ ಮುತ್ತಿನ ಗುಟುಕು ಸ್ವಿಕರಿಸುತ್ತ ನೀಲಿ ತನ್ಮಯಗೊಂಡಳು.ಪ್ರತಿಯಾಗಿ ರಂಗನಿಗೂ ಸಾಕುಬೇಕನ್ನುವಷ್ಟು ಮುತ್ತು ಹನಿಸಿದಳು. ರಂಗ ಮತ್ತು ನೀಲಿಯ ಈ ಪ್ರೀತಿಯ ದಿನದಿಂದ ದಿನಕ್ಕೆ ಬೆಳೆದು ಹೆಮ್ಮರವಾಯಿಯು. ಶೆಟ್ಟರ ಸುಭಾಸ ಒಂದು ದಿನ ಗುಟ್ಟಾಗಿ ಗೌಡರ ಕಿವಿಯಲ್ಲಿ ಈ ಸುದ್ದಿ ಊದಿದಾಗ ಗೌಡರ ಮನಸಿಗೆ ಬರಸಿಡಿಲು ಹೊಡದಂತಾಯಿತು. ಇದಕ್ಕೊಂದು ಕೊನೆ ಕಾಣಿಸಬೇಕೆಂದು ಗೌಡ ಆತುರಾತುರವಾಗಿ ನಿರ್ಣಯ ತಗಿದುಕೊಂಡು ಕೈಯಲ್ಲಿದ್ದ ಮೋಬೈಲ್ಲ ಕಿವಿಗೆ ಇಟ್ಟುಕೊಂಡು ತಾಸುಗಟ್ಟಲೆ ಮಾತಾಡಿದ. ಗೂಡರು ಯಾರೊಂದಿಗೆ ಮಾತಾಡುತ್ತಿದ್ದಾರೆ ಎಷ್ಟು ಹೊತ್ತು ಮಾತಾಡುತ್ತಿದ್ದಾರೆ ಎಂದು ಶೆಟ್ಟರ ಸುಭಾಸ ಬೆರಗಾಗಿದ್ದ. ಗೌಡರು ಪೋನು ಇಟ್ಟವರೇ ಸುಭಾಸನತ್ತ ಬಂದು ಈ ವಿಷ್ಯಾ ಯಾರಮುಂದು ಬಾಯ ಬಿಡಬೇಡ ನೀಲಿ ನಮ್ಮ ಸ್ವಂತ ಅಕ್ಕನ ಮಗಳು ಎಂದು ಜೋರಾಗಿ ಸುಭಾಸನೆದರು ಗುಡಗಿದರು. ಸುಭಾಸ ಗೋನಾಡಿಸುತ್ತ ಆಯ್ತು ಅನ್ನುವ ರೀತಿ ತಲೆ ಅಲ್ಲಾಡಿಸಿದ. ಆದರೆ ಊರಲ್ಲಿ ಸಣ್ಣಗೆ ನೀಲಿ ರಂಗನಿಗೆ ಹೊಟ್ಟಿಲೆ ಆಗ್ಯಾಳ ಅನ್ನುವ ಗುಮಾನಿ ಸುದ್ದಿ ಹರಡಿತ್ತು. ಅದು ಸತ್ಯವು ಆಗಿತ್ತು. ಕಿವುಡ ರಂಗ ತನ್ನ ಪ್ರೀತಿಯ ವಿಷಯ ಯಾರಿಗೂ ಗೊತ್ತೆ ಇಲ್ಲ ಅನ್ನುವ ರೀತಿ ರಾಜಾರೋಷವಾಗಿ ಸಿಳ್ಳೆ ಹಾಕುತ್ತ ಊರಲ್ಲಿ ದನಾ ಕಾಯುತ್ತ ಅಡ್ಡಾಡುತ್ತಿದ್ದ. ಅಂದು ಗೌಡರ ದನಗಳು ಹೊಟ್ಟೆ ತುಂಬ ಮೈದು ಅಂಬಾ ಎನ್ನುತ್ತ ಕಿರುಗುಡ್ಡದಿಂದ ಇಳಿದು ಊರ ಹೊಕ್ಕವು. ದನಗಳ ಹಿಂದೆ ಬರುತ್ತಿದ್ದ ಕಿವುಡ ರಂಗ ಬರಲೇ ಇಲ್ಲ. ನೀಲಿ ರಂಗ ಪೋನಿನ ಹಾದಿ ಕಾದು ಕಾದು ಕಣ್ಣೀರಿಟ್ಟಳು. ನೀಲಿಯ ಹೊಟ್ಟೆಯಲ್ಲಿ ಬೆಳಯುವ ಪಿಂಡವನ್ನು ಚಿವುಟು ಹಾಕಿ. ವರ್ಷ ತುಂಬುವುದರೊಳಗೆ ಒಂದು ಗಂಡು ಹುಡುಕಿ ಮದುವೆ ಮಾಡಿದರು. ***** ಗಂಡನ ಗೋರಕಿಯ ಶಬ್ದ ಎಮ್ಮಿ ಕರಾ ಉರಲ ಹಕ್ಕೊಂಡಾಗ ಗೊರ್ ಗೊರ್ ಎಂದು ಮಾಡುವಂತೆ ನೀಲಿಗೆ ಕೇಳಿಸಿದಾಗ ತನಕ್ನ ಅಂಜಿ ಹಾರಿಗೆಡಿಲಿ ಹೆಂಗ ನಿದ್ದಿ ಮಾಡತೈತಿ ನೋಡ ಅಂತ ಒಲೆಯಲ್ಲಿ ಕಟಗಿತುಂಡು ಹಾಕುತ್ತ ಉಪ್ ಉಪ್ ಅಂತ ಒಲೆ ಊದುತ್ತ ಆ ಹುಗಿ ಹಿಡಿದ ಮನೆಯಲ್ಲಿ ಕಿವುಡ ರಂಗನ ನೆನಪು ಅಂದು ಎದೆಯಲ್ಲಿ ಚುಚ್ಚಿದಂತಾಗಿ ನೀಲಿ ಕಣ್ಣೊರಿಸಿಕೊಂಡಳು.