File size: 38,400 Bytes
b0c2634 |
1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 |
ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ ಮುದಲ್ ವಿಜಯ್ ಬೆಂಗಳೂರು ಅವರು ಯುವ ಸಾಹಿತಿ ಗಣಪತಿ ಹೆಗಡೆ ಅವರ ಚೊಚ್ಚಲ ಕಾದಂಬರಿ ಮೌನಸೆರೆಗೆ ಮುನ್ನುಡಿಯ ರೂಪದಲ್ಲಿ ನೀಡಿರುವ ಪ್ರಮಾಣ ಪತ್ರ. ಈ ಹಿನ್ನಲೆಯಲ್ಲಿ ಕಾದಂಬರಿ ಮೊದಲಿನಿಂದ ಕೊನೆಯವರೆಗೂ ಯಾವುದೇ ಅಡೆತಡೆಗಳು ಇಲ್ಲದೇ ಓದಿಸಿಕೊಂಡು ಹೋಗುವುದರಿಂದ ಇಲ್ಲಿ ಮುದಲ್ ವಿಜಯ್ ಅವರ ಪ್ರಮಾಣ ಪತ್ರ ಸತ್ಯವಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಸಂವೇದನೆಗಳ ಹಾವಳಿಯಲ್ಲಿ ಕಳೆದು ಹೋಗುತ್ತಿರುವ ಪಾರಂಪರಿಕ ಮಾನವೀಯ ಸೆಲೆಗಳು, ಪತನವಾಗುತ್ತಿರುವ ಸಾಮಾಜಿಕ ನೆಲೆಗಳು, ನಶಿಸಿ ಹೋಗುತ್ತಿರುವ ಕೌಟುಂಬಿಕ ಮೌಲ್ಯಗಳ ನಡುವೆ ಇವೆಲ್ಲವನ್ನು ಪುನರ್ ಸ್ಥಾಪಿಸುವ ಪ್ರಯತ್ನವಾಗಿ ಮೌನಸೆರೆ ಮೂಡಿ ಬಂದಿದೆ. ಈ ಕಾದಂಬರಿಯ ಕಥೆ ಹಳೆಯ ಕಾಲದ ಕೃಷ್ಣಮೂರ್ತಿ ಪುರಾಣಿಕ, ಸಾಯಿ ಸುತೆ ಮುಂತಾದವರು ಬರೆದ ಕೌಟುಂಬಿಕ ಕಾದಂಬರಿಗಳನ್ನು ನೆನಪಿಸಿದರೂ ಕೌಟುಂಬಿಕ ಕಥಾವಸ್ತು ಎನ್ನುವುದು ಕಾಲಾತೀತವಾದದ್ದು. ಮತ್ತು ಪ್ರತಿಕಾಲಕ್ಕೂ ಘಟಿಸುವಂಥದ್ದು. ಕಥೆ ಕೌಟುಂಬಿಕ ವಾಗಿದ್ದರೂ ಕೂಡ ಅದಕ್ಕೆ ಒಂದು ಸಾಮಾಜಿಕ ಆಯಾಮ ತಂದು ಕೊಡುವಲ್ಲಿ, ಲವಲವಿಕೆಯಿಂದ ಕಥೆ ಹೇಳುವಲ್ಲಿ ಲೇಖಕನ ಚಿಂತನೆ ಅನುಭವ ಮತ್ತು ಕೈಚಳಕ ಕೆಲಸ ಮಾಡುತ್ತದೆ. ಈ ದೃಷ್ಟಿಯಲ್ಲಿ ಗಣಪತಿ ಹೆಗಡೆಯವರು ಗೆದ್ದಿದ್ದಾರೆ ಎಂದೇ ಹೇಳಬೇಕು. ಮೌನಸೆರೆ ಇದೊಂದು ಬಡ ಕುಟುಂಬದ ಸುತ್ತ ಹೆಣೆಯಲಾದ ಕಥೆ, ಇದರೊಂದಿಗೆ ಇದಕ್ಕೆ ಪೂರಕವಾದ ಹಲವು ಘಟನೆಗಳು ಕಥೆಗಳು ಹಳ್ಳಕೊಳ್ಳದಂತೆ ಸೇರಿ ಒಂದು ನದಿಯಾಗಿ ಸಮುದ್ರ ಸೇರುವುದೇ ಕಾದಂಬರಿ. ಹಾಗೆಯೇ ಮೌನಸೆರೆ ಸಹ ಮುಖ್ಯವಾದ ಕಥೆಯೊಂದಿಗೆ ಹೊಂದಿಕೊಂಡು ಬೇರೆ ಬೇರೆ ಕುಟುಂಬಗಳ ಘಟನಾವಳಿಗಳ ಬೆರೆಸಿಕೊಂಡು ನದಿಯಾಗಿ ಶಾಂತ ರೀತಿಯಲ್ಲಿ ತಮ್ಮ ಗಮ್ಯ ಸೇರುವಲ್ಲಿ ಯಶಸ್ವಿಯಾಗುತ್ತದೆ. ಮೌನಸೆರೆ ಮುಖ್ಯವಾಗಿ ಒಂದು ಮಹಿಳಾ ಪ್ರಧಾನ ಕಾದಂಬರಿಯಾಗಿದ್ದು, ವೈಶಾಲಿ ಈ ಕಾದಂಬರಿಯ ಮುಖ್ಯ ಭೂಮಿಕೆ. ಭೂಮಿಕೆ ಎನ್ನುವ ಪದ ಈ ಸಂದರ್ಭದಲ್ಲಿ ನನಗೆ ಹೊಳೆಯಲೂ ಕಾರಣವೂ ಇಲ್ಲದಿಲ್ಲ. ವೈಶಾಲಿ ಪಾತ್ರ ಇಲ್ಲಿ ಭೂಮಿಯಂತೆ ಸಹನಾಮೂರ್ತಿ, ತ್ಯಾಗ ಮೂರ್ತಿಯಾಗಿ ಅನಾವರಣಗೊಂಡಿರುವುದು. ಶಂಕರಪ್ಪ ಮತ್ತು ಶಾರದ ಎನ್ನುವ ಕೂಲಿಮಾಡಿ ಬದುಕುವ ದಂಪತಿಗಳ ಹಿರಿಯ ಮಗಳು ವೈಶಾಲಿ. ಬಡತನದ ಕಾರಣ ತನ್ನ ಶಿಕ್ಷಣವನ್ನೂ ಮೊಟಕುಗೊಳಿಸಿ ಆಡಿ ಬೆಳೆಯಬೇಕಾದ ವಯಸ್ಸಿನಲ್ಲಿ ಸಂಸಾರದ ನೊಗ ಹೊರಬೇಕಾಗಿ ಬಂದು.. ಮುಂದೆ ಮುದಿ ತಂದೆ ತಾಯಿಗಳ ಆರೋಗ್ಯ ಆರೈಕೆಯ ಭಾರ, ತಮ್ಮ ವೀರೇಶ ಮತ್ತು ತಂಗಿ ವಿಶಾಲಾಕ್ಷಿಗೆ ಶಿಕ್ಷಣ ಕೊಡಿಸುವ ಸಲುವಾಗಿ ನಡೆಸುವ ತ್ಯಾಗ ಹೋರಾಟದ ಜೀವನ ಕಥೆಯ ಮುಖ್ಯ ಭಾಗವಾದರೂ ಅವಳ ಅಸೆ ಬಯಕೆ ಕನಸು ಪ್ರೇಮಭಾವನೆಗಳೆಲ್ಲ ಮೌನವಾಗಿ ಮುದುಡುವ ಸುಮಗಳಾಗಿ ಹೋಗುವ ದುರಂತ ಸಾರುವುದು ಕಥನದಲ್ಲಿ ವ್ಯಕ್ತವಾಗುವ ವಿಷಾದ ಭಾವ. ಈ ಕುಟುಂಬದ ಕಥೆಯ ಜೊತೆ ಜೊತೆಯಾಗಿ ಸಾಗುವ ಇನ್ನೊಂದು ಕಥೆ ಕಾಳೇಗೌಡ ಕುಟುಂಬದ್ದು. ವೈಶಾಲಿ ತಂದೆ ಶಂಕರಪ್ಪ ಕೂಲಿ ಕೆಲಸಕ್ಕೆ ಹೋಗುವ ಮನೆಯೇ ಕಾಳೇಗೌಡನದು. ಬಡತನದ ಕಾರಣ ವೈಶಾಲಿ ಕೂಡ ಅದೇ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಪರಿಸ್ಥಿತಿ. ಮೊದಲೇ ದರ್ಪ ದರ್ಬಾರ ಅತ್ಯಾಚಾರಗಳಿಂದ ಮೆರೆದ ಗೌಡಕಿ ಮನೆತನ. ಕಾಳೇಗೌಡ ಮತ್ತವನ ಮಗ ಸೋಮೇಗೌಡ ಎಂದರೇನೇ ಜನ ಬೆಚ್ಚಿ ಬೀಳುವಂತಹ ಸಮಯದಲ್ಲಿ ವೈಶಾಲಿ ಅಲ್ಲಿ ಮನೆ ಗೆಲಸಕ್ಕೆ ಸೇರಿಕೊಳ್ಳುವುದು ವೈಶಾಲಿಗೆ ಮುಂದೇನು ಅನಾಹುತ ಕಾದಿದೆಯೋ ಎನ್ನುವ ಆತಂಕ ಓದುಗರಲ್ಲಿ ಮೂಡುವುದು ಸಹಜ. ಆದರೆ ಕಾದಂಬರಿಕಾರ ಇದಕ್ಕೊಂದು ಹೊಸ ತಿರುವು ಕೊಡುವಲ್ಲಿ ಗೆಲ್ಲುತ್ತಾರೆ. “ಯೌವನ ತುಂಬಿದ ಸುರಹೊನ್ನೆಯ ಅವಳ ದೇಹಸಿರಿ, ಚಂದ್ರನ ಬೆಳದಿಂಗಳನ್ನೇ ಹೊದ್ದುಕೊಂಡು ನಿಂತ ಮೈಕಾಂತಿ, ನಕ್ಷತ್ರದಂತೆ ಅರಳಿನಿಂತ ಕಂಗಳು, ಒಪ್ಪ ಓರಣವಾಗಿ ಹೆರಳುಗಳನ್ನು ಸಿಂಗರಿಸಿಕೊಂಡ ಮುಂಗುರುಳಿನ ನರ್ತನ ಸಂಪಿಗೆ ಎಸಳಂತಿರುವ ನಾಸಿಕ, ಕೆಂದುಟಿಯಲ್ಲಿ ಅರಳಿದ ಮಲ್ಲಿಗೆಯಂತಹ ಶುಭ್ರವಾದ ಹೂನಗೆ, ದುಂಡನೆಯ ಮುಖದಲ್ಲಿ ಸಾವಿರ ಸಾವಿರ ನೈದಿಲೆಯ ಸೊಬಗಿನ ಅನಾವರಣ….” ಮೂಲತಃ ಪ್ರಣಯ ಕವಿಯೂ ಆಗಿರುವ ಕಾದಂಬರಿಕಾರರು ಕವಿಯಾಗಿ ಕಥಾನಾಯಕಿಯ ಸ್ವರ್ಗೀಯ ಸೌಂದರ್ಯವನ್ನು ಬಣ್ಣಿಸುವುದು ಹೀಗೆ. ಹೀಗೆ ಕವಿಯಾಗಿ ವೈಶಾಲಿಯ ಸೌಂದರ್ಯವನ್ನು ವರ್ಣಿಸುವ ಕಾದಂಬರಿಕಾರ ಇಡೀ ಕಾದಂಬರಿಯನ್ನು ಕಾವ್ಯಮಯವಾಗಿ ಕಟ್ಟಿರುವುದು ಈ ಕಾದಂಬರಿಯ ಹೆಗ್ಗಳಿಕೆ ಎಂದೇ ಹೇಳಬಹುದು. ಒಂದು ಹೆಣ್ಣನ್ನು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಹಲವಾರು ರೂಪಗಳಲ್ಲಿ ಅವಳ ಪ್ರೇಮ ತ್ಯಾಗ ಬಲಿದಾನಗಳನ್ನು ಈ ಕಾದಂಬರಿ ಅನಾವರಣಗೊಳಿಸಿದೆ. ಬದುಕಲ್ಲಿ ಅದೆಷ್ಟೋ ಹೆಣ್ಣುಗಳೊಂದಿಗೆ ಆಟವಾಡಿ ಬಿಸಾಕಿದ ಸೋಮೇಗೌಡನ ಮನಸ್ಸು ಇಂದು ಮನ್ವಂತರದ ಘಟ್ಟದಲ್ಲಿರುವುದು ಕಾದಂಬರಿಕಾರ ಗುರುತಿಸುವ ಮೂಲಕ ವೈಶಾಲಿಯ ಅಲೌಕಿಕ ಸೌಂದರ್ಯದ ಅನುಭೂತಿ ಮತ್ತು ಅದರ ಪರಿಣಾಮವಾಗಿ ಸೋಮೇಗೌಡನ ಸ್ವಭಾದಲ್ಲಿನ ಬದಲಾವಣೆಯ ಮುನ್ಸೂಚನೆ ನೀಡುತ್ತಾರೆ. ” ವೈಶಾಲಿ ಕಂಡಾಗಿಂದ ಸೋಮೇಗೌಡನ ಮನಸೇಕೋ ಇಂತಹ ಕ್ಷುಲಕ ವಿಚಾರದಿಂದ ಸ್ವಲ್ಪ ಹಿಂದೆ ಸರಿದಂತೆ ಭಾಸವಾಗುತ್ತಿತ್ತು. ಅವನಂತರಂಗವೇಕೋ ನಿಷ್ಕಲ್ಮಶ ಭಾವದ ಕುದುರೆಯೇರಿ ಸಾಗುತ್ತಿತ್ತು ಮನಸೇಕೋ ಹೇಳದೆ ಕೇಳದೆ ವೈಶಾಲಿಯತ್ತ ವಾಲುತ್ತಿತ್ತು. ಅನಿರುದ್ಧ ಸಮಾಜದಲ್ಲಿ ಎಲ್ಲರಂತೆ ತಾನೂ ಸಂಭಾವಿತ ವ್ಯಕ್ತಿಯಾಗಿ ಜೀವನದಲ್ಲಿ ಕ್ರಿಯಾಶೀಲನಾಗಬೇಕು, ಪ್ರೀತಿ ತುಂಬಿದ ಕಂಗಳಾದಾಗ, ಈ ಲೋಕದ ಸೃಷ್ಟಿಯೂ ರಮ್ಯವಾಗಿಯೇ ಕಾಣಬಹುದೇನೋ, ತಾನ್ಯಾಕೆ ಎಲ್ಲರಿಂದಲೂ ವ್ಯತಿರಿಕ್ತವಾದ ಭಾವನೆ ಹೊಂದಿ ಬಾಳಬೇಕು,? ತನಗೊಬ್ಬನಿಗೆ ಹೀಗೇಕೆ, ?ತಾನು ಅರಿಸಿಕೊಂಡ ಈ ಜೀವನ ಕ್ಷಣಿಕ ಎನಿಸಿದರೂ ಶಾಶ್ವತವಾಗಿ ಇಲ್ಲಿಯೇ ಇರುವಂತಹ ದುರಾಸೆ ಏಕೆ,? ಇವೇ ಇತ್ಯಾದಿ ಪ್ರಶ್ನೆಗಳ ಸುರಿಮಳೆ ಸುರಿಯತ್ತಲೇ ಇತ್ತು… “ “ಸೋಮೇಗೌಡನಿಗೆ. ಅದೆಷ್ಟೋ ಹೆಣ್ಣುಗಳ ದೇಹ ರುಚಿಯನ್ನು ಕಂಡು ಅನುಭವವಿದ್ದರೂ ವೈಶಾಲಿಯ ಕಂಡಾಗಿಂದ ಅನುಪಮ ಸೌಂದರ್ಯದ ಜೊತೆಗೆ ಅನುರಾಗದ ಅನುರುಕ್ತದ ಸೆಲೆಯೊಂದು ಮನದಲ್ಲಿ ಸುಳಿದಾಡಿತ್ತು. ಎದೆಯ ತುಂಬೆಲ್ಲ ಅವಳ ಚೆಲುವಿನ ಲತೆ ಹಬ್ಬಿತ್ತು. ಅವಳ ಚೆಲುವೊಂದೇ ಅಲ್ಲದೆ ಅವಳ ಮನೆಯಲ್ಲಿನ ಪರಿಸ್ಥಿತಿ, ಅವಳ ಅಂತರಂಗದ ಬೇಗೆ, ಅವಳ ಕನಸುಗಳಿಗೆ ಆಸರೆಯ ಮರ ತಾನೇಕೆ ಆಗಬಾರದು ಎಂಬುದರ ಪರಿವರ್ತನೆ ಅವನಲ್ಲಿ ಬೆಳದಿಂಗಳ ತಂಪು ಪಸರಿಸಿತ್ತು. ನೊಂದ ಮನಸಿಗೆ ತಂಪಾದ ಶಶಿ ತಾನೇಕೆ ಆಗಬಾರದು ಎನ್ನುವ ಸೋಮೇಗೌಡನ ಬದಲಾವಣೆಯ ಯೋಚನೆ ಮೌನಸೆರೆಯಾಗಿ ಒಂದು ಅದೃಶ್ಯ ಜೀವ ತಂತುವಾಗಿ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ.ವೈಶಾಲಿಯಲ್ಲಿ ಅನುರುಕ್ತನಾಗುವ ಸೋಮೇಗೌಡ ಪ್ರೇಮ ನಿವೇದನೆಯ ಅವಕಾಶಕ್ಕಾಗಿ ಕಾಯುವಾಗಲೇ ಅವನ ಪ್ರೇಮದ ಅನುಭೂತಿಯ ಅನುಭವ ಹೊಂದುತ್ತಾಳೆ. ವೈಶಾಲಿ ಮತ್ತು ಅವನ ಪ್ರೇಮ ನಿವೇದನೆಗಾಗಿ ಮೌನವಾಗಿಯೇ ಹಾತೊರೆಯುತ್ತಾಳೆ. ವೈಶಾಲಿ ಸೋಮೆಗೌಡ ಇಬ್ಬರೂ ಮೌನದಲಿ ಬಂಧಿಯಾಗುತ್ತಾರೆ. ಈ ಮೌನ ಮುರಿದು ಪ್ರೇಮ ನಿವೇದಿಸುವ ಸಂದರ್ಭಕ್ಕಾಗಿ ಇಬ್ಬರೂ ಕಾಯುತ್ತಿರುತ್ತಾರೆ. ಮತ್ತು ಇಂತಹ ಸಂದರ್ಭ ಅವರ ಹತ್ತಿರ ಹತ್ತಿರ ಬರುತ್ತಲೇ ಕೈಜಾರಿ ಹೋಗುವುದು ಮತ್ತು ಸೋಮೆಗೌಡ ತನ್ನ ಮನದಿಚ್ಛೆಯನ್ನು ವೈಶಾಲಿ ಮುಂದೆ ನಿವೇದಿಸಿ ಅವರ ಪ್ರೇಮ ಸಂಗಮವಾಗುವುದೇ ಎನ್ನುವ ಕೌತುಕದ ಪ್ರಶ್ನೆ ಕಾದಂಬರಿ ಕೊನೆಯವರೆಗೂ ಕಾಪಾಡಿಕೊಂಡು ಬಂದ ಒಂದು ಪ್ರೇಮದೆಳೆ ಇಡೀ ಕಾದಂಬರಿ ಮುಗಿಯವವರೆಗೂ ಓದಿಸಿಕೊಂಡು ಹೋಗಲು ಸಹಕರಿಸುತ್ತದೆ. ಸೋಮೇಗೌಡ ಕೆಟ್ಟವೆನೆಂದು ಗೊತ್ತಿದ್ದರೂ ಅವನ ಬಗ್ಗೆ ಯೋಚಿಸುವ ವೈಶಾಲಿ – “ಮನುಷ್ಯ ಎಲ್ಲಾ ಸಮಯದಲ್ಲೂ ಕೆಟ್ಟವನಾಗಲಾರ.. ಎಲ್ಲ ಸಮಯವೂ ಕೆಟ್ಟತನಕ್ಕೆ ಸ್ಪಂದನೆ ನೀಡುವುದಿಲ್ಲ. ಪ್ರತಿ ಮನುಷ್ಯನಲ್ಲಿ ಒಳ್ಳೆಯತನ ಕೆಟ್ಟತನ ಎರಡೂ ನೆಲೆಸಿರುತ್ತವೆ…. ಸಹವಾಸ ದೋಷದಿಂದ ಮನುಷ್ಯ ಒಳ್ಳೆಯತನ ಕೆಟ್ಟತನದ ಪಯಣಿಗನಾಗುತ್ತಾನೆ. ಈ ನಡುವೆ ಒಳಿತನ್ನು ಬಯಸುವ ಮನಸ್ಸು ಮನುಷ್ಯನನ್ನು ಬದಲಾಯಿಸುತ್ತದೆ.. ಎನ್ನುವ ನಿರ್ಧಾರ ಕಾದಂಬರಿಕಾರರು ಸೋಮೆಗೌಡನ ಮುಖಾಂತರ ವ್ಯಕ್ತಪಡಿಸುತ್ತಾರೆ. ಈ ಬದಲಾವಣೆ ಪ್ರಕ್ರಿಯೆಯೇ ಸೋಮೆಗೌಡನಲ್ಲಿ ಆಸಕ್ತಳಾಗಳು ಕಾರಣ ವಾಗುತ್ತದೆ. ಕೊನೆಗಾದರೂ ಸೋಮೇಗೌಡ ತನ್ನ ಪ್ರೇಮ ನಿವೇದಿಸಿದನೇ? ವೈಶಾಲಿ ಮತ್ತು ಸೋಮೇಗೌಡ ಒಂದಾದರೆ? ಎನ್ನುವ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇಡೀ ಕಾದಂಬರಿಯನ್ನು ಓದಲೇಬೇಕು. ತನ್ನ ಕುಟುಂಬಕ್ಕಾಗಿ ಇಡೀ ತನ್ನ ಜೀವನವನ್ನೆ ತ್ಯಾಗ ಮಾಡಿದ ವೈಶಾಲಿಯ ಜೀವನ ಕೊನೆಗೆ ಏನಾಯ್ತು.,? ಪುರುಷ ಪ್ರಧಾನ ಸಮಾಜ ಅವಳನ್ನು ಹೇಗೆ ನಡೆಸಿಕೊಂಡಿತು..? ಕಾದಂಬರಿ ಕಥಾವಸ್ತು ಸ್ತ್ರೀ ಪ್ರಧಾನವೇ ಆದರೂ ವೈಶಾಲಿಯ ತಂದೆ ಶಂಕರಪ್ಪ, ಸೋಮೇಗೌಡ, ಮೈದುನ ಮನೋಜ, ದೂರದ ಸಂಬಂಧಿ ಗೋಪಾಲ.. ನೆರೆಯ ಅಂಕಲ್..ಮತ್ತಿತ್ತರು ಕೆಟ್ಟ ಪುರುಷ ಸಂತತಿಯ ಸಮಾಜದ ನಡುವೆ ಉಪಕಾರಿಗಳಾಗಿ ಮಾನವಂತರಾಗಿ ಭರವಸೆ ಮೂಡಿಸುತ್ತಾರೆ. ಮತ್ತು ಕಥಾನಾಯಕಿಗೆ ಪೂರಕವಾಗಿ ಸಹಾಯಕರಾಗಿ ಪೋಷಕರಾಗಿ ಬರುವಂತೆ ಮಾಡುತ್ತಾರೆ. ಇವುಗಳ ನಡುವೆ ಶ್ರೀಮಂತ ಹುಡುಗನನ್ನ ಪ್ರೀತಿಸಿ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ವಿಶಾಲಾಕ್ಷಿ, ತನಗಾಗಿ ಜೀವ ತೆಯ್ದು ಬದುಕು ಕಟ್ಟಿಕೊಟ್ಟ ಮನೆಯನ್ನು ಮರೆತು ವಿದೇಶದಲ್ಲಿ ಜೀವನ ಆರಂಭಿಸುವ ತಮ್ಮ ವೀರೇಶ.., ಸೋಮೆಗೌಡನ ಪತ್ನಿ ಯಮುನಾ, ಅಶೋಕ ಮುಂತಾದ ಪಾತ್ರಗಳು ತಮ್ಮ ವೈಯಕ್ತಿಕ ಸುಖಕ್ಕಾಗಿ ಏನು ಬೇಕಾದರೂ ಮಾಡಬಹುದು ಎನ್ನುವುದು ನಿರೂಪಿಸುತ್ತವೆ. ಮೊದಲೇ ಹೇಳಿದಂತೆ ಇಡೀ ಕತೆ ಸ್ತ್ರೀ ಪ್ರಧಾನವಾಗಿದ್ದು ಕಥಾನಾಯಕಿಯ ಪ್ರೇಮ ತ್ಯಾಗದ ಸುತ್ತ ಹೆಣೆಯಲ್ಪಟ್ಟಿದ್ದು. ಪುರುಷ ಸಮಾಜದ ಇನ್ನೊಂದು ಕರಾಳ ಮುಖ ಅನಾವರಣಗೊಳಿಸುತ್ತಾರೆ. ಅವಳ ಜೀವನದಲ್ಲಿ ಪ್ರವೇಶ ಮಾಡಿದ ಇನ್ನೊಬ್ಬ ಗಂಡಸು ಅಶೋಕನ ಮುಖಾಂತರ ಮತ್ತು ಇತ್ತ ಸೋಮೆಗೌಡನ ಹೆಂಡ್ತಿಯಾಗಿ ಬರುವ ಚಾರಿತ್ರ ಹೀನ ಯಮುನಾಳಂಥವರು ತಮ್ಮ ಸ್ವಾರ್ಥ ಸಾಧನೆಗೊಸ್ಕರ ತಮ್ಮ ಕೆಟ್ಟ ಗುಣಗಳಿಂದ ಜೀವನವನ್ನು ಹೇಗೆ ನರಕಾಗಿಸುತ್ತಾರೆ ಎನ್ನುವುದು ಲೇಖಕರ ಅಂತರಂಗದ ಪ್ರಶ್ನೆ. ಇತ್ತ ಸೋಮೆಗೌಡ ಅತ್ತ ವೈಶಾಲಿ ಸುಳ್ಳು ಸಂಬಂಧಗಳಲ್ಲಿ ಸಿಲುಕಿ ಜೀವನ ದುರಂತ ಮಾಡಿಕೊಳ್ಳುವುದು ನಮ್ಮ ಕಣ್ಣು ಮುಂದೆ ಕಟ್ಟುವಂತೆ ಹೃದಯಕ್ಕೆ ತಟ್ಟುವಂತೆ ಬರೆಯುತ್ತಾರೆ. ಈ ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟು ದೂರಾಗುವ ಸತಿಪತಿಗಳ ನಡುವೆ ವೈಶಾಲಿ ಮತ್ತು ಸೋಮೇಗೌಡ ಮತ್ತೊಮ್ಮೆ ಒಂದಾಗುವ ಸಾಧ್ಯತೆಯನ್ನು ಹುಟ್ಟು ಹಾಕುತ್ತಾರೆ. ಈಗಲಾದರೂ ಇವರು ಒಂದಾಗಬಹುದಾ ಎನ್ನುವ ಕುತೂಹಲ ಓದುಗರಲ್ಲಿ ಮತ್ತೆ ಚಿಗುರುವಂತೆ ಮಾಡುತ್ತಾರೆ. ಕವಿ ಮೂಲತಃ ಹೆಣ್ಣು ಹೃದಯಿಯಾಗಿರುತ್ತಾನೆ ಎನ್ನುವುದು ಈ ಕಾದಂಬರಿ ಓದಿದಾಗ ಅರ್ಥವಾಗುವ ಮಾತು. ಹೆಂಗರುಳಿನ ಲೇಖಕ ಗಣಪತಿ ಹೆಗಡೆಯವರು ಈ ವೈಶಾಲಿ ಎನ್ನುವ ಹೆಣ್ಣಿನ ಮುಖಾಂತರ ಹೆಣ್ಣು ಕ್ಷಮಯಾ ಧರಿತ್ರಿ ಸಹನಾ ಮೂರ್ತಿ, ತ್ಯಾಗ ಜೀವಿ, ಅವಳ ಹಿರಿಮೆ ಗರಿಮೆಯನ್ನು ಕಾದಂಬರಿಯುದ್ದಕ್ಕೂ ಸ್ತ್ರೀಪರ ಕಾಳಜಿಯಾಗಿ ಒಡಮೂಡಿಸಿರುವುದು ಉದಾಹರಣೆಯಾಗಿ ಈ ಕೆಳಗಿನ ವ್ಯಾಖ್ಯಾನಗಳು ನೋಡಬಹುದು. ಈ ವ್ಯಾಖ್ಯಾನಗಳು. ೧) ಪಟ್ಟ ಈ ಕ್ರೂರ ಸಮಾಜದಲ್ಲಿ ಹೆಣ್ಣಿನ ಅಂತರಂಗದ ಅಳುವಿನಲ್ಲಿ ಪಾಲುದಾರರೇ ಇರುವುದಿಲ್ಲ. ಅವಳೊಂದು ವೈಭೋಗದ ವಸ್ತುವಾಗಿದ್ದು, ಈ ಸಮಾಜದ ದುರಂತವೇ ಅಥವಾ ಒಗ್ಗಟ್ಟಿಲ್ಲದೆ, ತನ್ನ ಮನಸ್ಥಿತಿಯ ಚಂಚಲತೆಯನ್ನು ಉಪಯೋಗಿಸಿಕೊಂಡ ಗಂಡು, ಅವಳನ್ನು ತನ್ನ ಉಪಯೋಗಕ್ಕೆ ಉಪಯೋಗಿಸಿಕೊಂಡನೆ,? ಅಬಲತೆಯ ಪಟ್ಟ ಕಟ್ಟಿ ತಾನು ಬಲಿಷ್ಠ ಎಂಬ ಅಹಂಕಾರದ ಪ್ರಭಾವವೇ, ?ಒಂದೆಲ್ಲ, ಎರಡಲ್ಲ ಎಲ್ಲಿಯವರೆಗೆ ಹೆಣ್ಣು ಹೆಣ್ಣಿಗೆ ಆಸರೆಯಾಗಿ ನಿಲ್ಲಲು ಶುರು ಮಾಡುವುದಿಲ್ಲವೋ, ಅಲ್ಲಿಯವರೆಗೆ ಹೆಣ್ಣು ಅಬಲೆಯೇ. ಈ ಮಾತು ಸ್ವಾತಂತ್ರ್ಯಾ ಪೂರ್ವದ್ದು ಅಂತ ಅನ್ನಿಸಬಹುದು, ಆದರೆ ಇಂದಿನ ಇಂತಹ ಮುಂದುವರೆದ ಸಮಾಜ ಆಧುನಿಕ ವಿಚಾರಗಳ ಹೊತ್ತ ದೈನಂದಿನ ಬದುಕಲ್ಲೂ ಕಾಣುತ್ತಿರುವ ವೈಪರೀತ್ಯಗಳ ಹಾಗೂ ಅಸಂಬದ್ಧ ಘಟನೆಗಳನ್ನು ‘ಕಾಣುತ್ತೇವೆ. ಹೆಣ್ಣಿಗೆ ಎರಡನೇ ಮದುವೆಗೆ ಅವಕಾಶವಿಲ್ಲ. ಒಮ್ಮೆ ಅವಕಾಶವಿದ್ದರೂ ಅದೊಂದು ರೀತಿಯಲ್ಲಿ ಅಸಂಬದ್ಧ ಸಂಪ್ರದಾಯ. ಸಮಾಜದ ಕಟ್ಟಳೆಯನ್ನು ಮೀರಿದವಳು ಎನ್ನಿಸಿಕೊಳ್ಳುವ ದುರಂತ. ಆದರೆ ಅದೇ ಗಂಡು ಅರವತ್ತು ವಯೋವೃದ್ಧನಾದರೂ ಇಪ್ಪತ್ತು ವರ್ಷದ ಕನೈಯನ್ನು ವಿವಾಹವಾದಾಗ ಅವನ ರಸಿಕತೆಯನ್ನು ಈ ಸಮಾಜ ಎತ್ತಿ ಹಿಡಿಯುತ್ತದೆ ಈ ಜನತೆ. ಗಂಡ ಸತ್ತ ಮೇಲೆ ಅಮಂಗಲೆಯವಳು, ಅವಳಿಗೆ ಮಂಗಳ ಕಾರ್ಯಗಳಿಗೆ ಅವಕಾಶವಿಲ್ಲ. ಅದು ಕೂಡಾ ಇನ್ನೊಂದು ಹೆಣ್ಣೆ ಸಮರ್ಥಿಸಿಕೊಂಡಿದ್ದು, ಗಂಡ ಹೆಂಡತಿ ಸತ್ತ ಮೇಲೆ ಇನ್ನೊಂದು ಮದುವೆಗೆ ಅರ್ಹನೇ! ಇಂತಹ ತಾರತಮ್ಯದ ಸಂಬಂಧಗಳ ಅಥವಾ ಪದ್ಧತಿಗಳ ನಡುವೆ ಈ ಸಮಾಜದ ಜನ ಬದುಕುತ್ತಿರುವಾಗ ಇಲ್ಲಿ ಗಂಡು ಪ್ರಧಾನ ಅಥವಾ ಪುರುಷ ಪ್ರಧಾನ್ಯತೆ ಎದ್ದು ಕಾಣುತ್ತಿರುವುದು ವಾಸ್ತವಿಕತೆ. ಇಂತಹ ಅಗೋಚರ ಸಂಬಂಧವೆಲ್ಲವನ್ನು ದಾಟಿ ವೈಶಾಲಿ ಸಾಗಬೇಕಿರುವ ದಾರಿ ಬಹಳ ಉದ್ದವಾಗಿದೆ. ೨) ಹೌದು, ಸಂಸಾರದ ಕಣ್ಣು ಹೆಣ್ಣು, ಅವಳು ಅವನಿಯ ಮನಸಿಗಳು, ಅವರ ಮನಸೊಂದು ಸೂಕ್ಷ್ಮವಾದ ದರ್ಪಣ, ಒಂದು ಚೂರು ಕೈ ತಪ್ಪಿದರೂ ದರ್ಪಣ ಮಾತ್ರ ಚೂರು-ಚೂರು, ಬಾಳಲ್ಲಿ ಕಾಣುವ ಕನಸುಗಳು ಹರಿದು ಹೋಗಿ ದಿಕ್ಕಿಲ್ಲದೆ ಅನಾಥವಾಗಿ ಬಿಡುತ್ತವೆ. ಸಪ್ತಪದಿ ತುಳಿದು ಬರುವ ಹೆಣ್ಣು ಹೊಸ್ತಿಲಿನ ಲಕ್ಷ್ಮಿಯಾಗಿ ಮನೆಯ ಸೇರುತ್ತಾಳೆ. ಹೆತ್ತು ಹೊತ್ತವರನ್ನು ಬಿಟ್ಟು ಅಪರಿಚಿತಳಾಗಿ ಮಾಯಾಂಗನೆ. ತನ್ನ ಕಣ್ಣಿನಿಂದಲೇ ಎಲ್ಲವನ್ನೂ ಮಾತಾಡುವ ಕಲೆ ಅವಳಲ್ಲಿದೆ. ಎಂಥವರನ್ನೂ ಮೋಡಿ ಮಾಡುವ ಚಾಕಚಕ್ಯತೆ ಅವಳ ಅಂತರತದಲ್ಲಿದೆ. ಹಾಗಿರುವ ಹೆಣ್ಣು, ಗಂಡ, ಅತ್ತೆ, ಮಾವ, ಮೈದುನ, ನಾದಿನಿ ಹೀಗೇ ಹೊಸದಾದ ಸಂಬಂಧದಲ್ಲಿ ಕಾಣುವ, ಹೊಂದಿಕೊಂಡು ಬಾಳುವ ಮತ್ತು ಅದರಲ್ಲಿ ತನ್ನ ನೋವು ನಲಿವುಗಳನ್ನು ಗಂಡ ಎನ್ನುವ ಅಪರಿಚಿತನೊಂದಿಗೆ ನಂಬಿಕೆಯಿಟ್ಟು ಸಾಗುವ, ಅವಳು ನಿಜಕ್ಕೂ ಅದ್ಭುತ ಮನಸಿಗಳು. ತನ್ನ ಆಸೆ ಆಕಾಂಕ್ಷೆಗಳನ್ನು ತನ್ನಲ್ಲಿಯೇ ಅದುಮಿಟ್ಟು ನಗುವಿನ ಮುಖವಾಡದೊಂದಿಗೆ ದಿನಗಳನ್ನು ಕಳೆಯುವ ನಿಸ್ವಾರ್ಥಿ ಹೃದಯವಂತಳು. ೩) ಹುಟ್ಟಿದಂದಿನಿಂದಲೇ ಹೆಣ್ಣಿನ ಜನ್ಮಕ್ಕೊಂದು ನಾಚಿಕೆ, ಮುಜುಗರ, ತಾಳ್ಮೆ, ಬಹುಬೇಗನೇ ಉಂಟಾಗುತ್ತವೆ. ಹೊಂದಾಣಿಕೆ, ಅಪ್ಯಾಯತೆ, ಆಪ್ತತೆ, ಮೈಗೂಡಿದಂತಹ ಅಂಶಗಳು, ಅವಳಲ್ಲಿ ಭಾವನಾತ್ಮಕ ಭಾವುಕ ಪರಿಣಾಮಗಳು ಸಂವೇದನಾಶೀಲತೆ ಅತೀ ವೇಗದಲ್ಲಿ ಉಂಟಾಗುವ ಪ್ರಕ್ರಿಯೆ ಅವಳ ಅಂತಃಕರಣದಲ್ಲಿ ಅರಿವಾಗದೆ ಪ್ರೇಮ ಉಂಟಾಗುತ್ತದೆ. ಪ್ರೀತಿ ಉಂಟಾಗುತ್ತದೆ. ಅದು ಬಹುಕಾಲ ಉಳಿದು ಬಿಡುತ್ತದೆ. ಅರಳಿದ ಭಾವನೆಗಳಿಗೆ ಪುಷ್ಟಿ ಕೊಡುವ ಅವಳ ಮನಸ್ಸು ನಿಜಕ್ಕೂ ಕೋಮಲ, ಮೌನದಲ್ಲಿಯ ಭಾವನೆ ಕೆಲವೊಮ್ಮೆ ಮೌನದಲ್ಲಿಯೇ ಕರಗಿ ಹೋಗುವುದೂ ಉಂಟು. ಹೃದಯದಲ್ಲಿ ಬುಗಿಲೆದ್ದ ಆತಂಕಗಳಿಗೆ ಅವಳೇ ಪರಿಹಾರವನ್ನು ಕಂಡುಕೊಳ್ಳುತ್ತಾಳೆ. ತನ್ನ ನೊಂದ ಮನಸ್ಸಿಗೆ ತಾನೇ ಸಾಂತ್ವನ ಹೇಳಿಕೊಳ್ಳುತ್ತಾಳೆ. ಬದುಕು ಡೋಲಾಯಮಾನವಾದರೂ ಅಳುಕದೆ, ಅಂಜದೆ ಎದುರಿಸುವ ಎದೆಗಾರಿಕೆ ಅವಳು ಶತಾಯಗತವಾಗಿ ರೂಢಿಸಿಕೊಳ್ಳುತ್ತಾಳೆ. ತನ್ನ ಸಹಕುಟುಂಬದಲ್ಲಿ ಅಮಾವಾಸ್ಯೆ ಬಂದು ಕವಿದರೂ, ಹುಣ್ಣಿಮೆಯ ಸಂಭ್ರನ ಕಾಣುವ ಅವಳ ಮನಸಿಗೆ ಎಂತಹವನೂ ತಲೆ ಬಾಗಲೇಬೇಕು. ಅವಳ ಧೀರತನ, ಅಂತರಂಗದ ಸೂಕ್ಷ್ಮತೆ, ಹೃದಯವಂತಿಕೆ, ಸಹನೆ ಹೀಗೆ ಪ್ರತಿ ಅಂಶಗಳೂ ಇಲ್ಲಿ ಅಮೂಲಾಗ್ರವಾಗಿ ಜೊತೆಯಾಗುತ್ತವೆ. ಎದೆಯ ಸರೋವರದಲ್ಲಿ ಅವಳ ನೆನಪಿನ ತಾವರೆಗಳು ಅದೆಷ್ಟೋ ಹುಟ್ಟಿ ಬಾಡಿ ಹೋಗುತ್ತವೆಯೋ ಕಾಣುವರಾರು,? ಕನಸುಗಳ ನಡುವೆ ಏಕಾಂತದ ರಾತ್ರಿಗಳೆಷ್ಟೋ, ಅರಿತವರಾರು,? ಕಣ್ಣು ಮುಚ್ಚಿದರೂ ನಿದ್ದೆಯೇ ಬಾರದೆ ಹಾಸಿಗೆಯಲ್ಲಿ ಹೊರಳಾಡುವ ಕ್ಷಣಗಳೆಷ್ಟೋ, ಬಲ್ಲವರಾರು,? ಹೀಗೆ ಅನೇಕ ಕಣ್ಣೀರಿನ ಹನಿಗಳು ಜಾರಿ ಹೋದರೂ ನೋಡದೇ ಹೋದವರೆಷ್ಟೋ,! ಅರಿವಾಗುವುದರಲ್ಲಿಯೇ ಅವಳ ಬದುಕೇ ನಶಿಸಿ ಹೋಗುವಷ್ಟು ಜೀವನ ಸವೆದು ಹೋಗುತ್ತದೆ. ೪) ಹೆಣ್ಣು ಹಾಗೆಯೇ. ಅವಳ ಅಂತರಂಗವೇ ಸೂಕ್ಷ್ಮತಂತು, ಸಹಿಸಿಕೊಳ್ಳುವ ಶಕ್ತಿ ಬಹಳ ಕಡಿಮೆ, ಹಾಗಂತ ತಾಳ್ಮೆಯಿಲ್ಲ ಅಂತ ಅರ್ಥವಲ್ಲ. ಇಂತಹ ಸ್ಥಿತಿಯಲ್ಲಿ ಅವಳ ಕಣ್ಣೀರುಗಳೇ ಅವಳಿಗೆ ಪೂರ್ತಿ ಸ್ವಾಂತನಗೈಯ್ಯುತ್ತವೆ. ೫) ಬದುಕೊಂದು ಹೂವಂತೆ. ಬೇರು ಹಸಿಯಾಗಿದ್ದಾಗ ಗಿಡದ ತುಂಬೆಲ್ಲಾ ಹಸಿರಿನ ತೋರಣ ಹೂವಿನ ಮಾಲೆ, ಆದರೆ ಗಿಡದ ಬೇರು ಸಾವಿನ ದಡದಲ್ಲಿ ನಿಂತು ಚೀರುವಾಗ ಅರಳಿದ ಹೂಗಳು ಬುಡಸಮೇತ ಕೊಂಡಿ ಕಳಚಿಕೊಳ್ಳುತ್ತವೆ. ಅರಳಬೇಕಿದ್ದ ಮೊಗ್ಗುಗಳು ಅಲ್ಲಿಯೇ ಕಮರಿ ಪರಿಮಳದಿಂದ ವಂಚಿತವಾಗುತ್ತವೆ. ನಗಬೇಕಿರುವ ಹೂ ತುಟಿಗಳು ನಗಲಾಗದೇ ಬಿರುಕು ಬಿಟ್ಟಾಗ ಬದುಕು ನೀರಸ ಅನ್ನಿಸಿ ಬಿಡುತ್ತದೆ. ಚೆಲುವಿನ ವನವೆಲ್ಲಾ ಬೋಳಾಗಿ ಸ್ಮಶಾನದ ಗೋರಿಯಂತೆ ಕಾಣುತ್ತವೆ ಆದರೂ ಚಿಕ್ಕ ತಂಪಿನ ಆಸರೆಗಾಗಿ ಮಣ್ಣೊಳಗೆ ಇಳಿಬಿಡುವ ಬೇರು ಎಲ್ಲಾದರೂ ಹನಿ ತಂಪನ್ನು ಹೀರಿ ತನ್ನಿಡೀ ಕುಟುಂಬದ ಪೋಷಣೆಗೆ ದಾರಿ ದೀಪವಾಗುತ್ತದೆ. ೫) ಹೆಣ್ಣು ಕಾಲು ಜಾರಿದರೆ ‘ಜಾರಿಣಿ’ ಎಂಬ ಪಟ್ಟ ಅದೇ ಗಂಡು ಜಾರಿದರೆ ‘ರಸಿಕ’ ಎಂಬ ಬಿರುದು, ಪುರುಷ, ಪ್ರಧಾನವಾದ ಸಮಾಜದಲ್ಲಿ ಹೆಣ್ಣು ಸ್ಪರ್ಧೆಗಿಳಿದು ಎಲ್ಲ ರಂಗದಲ್ಲಿ ಗೆಲ್ಲುತ್ತಿದ್ದರೂ ಅದನ್ನು ಹೆಣ್ಣೇ ಒಪ್ಪದೆ ಇರುವುದು ಕೂಡಾ ಅವಳ ದುರಂತವೇ.! ಸಂಬಂಧಗಳ ಹುಟ್ಟು ಹಾಕುವುದು ಹೆಣ್ಣು, ಬೆಳೆಸುವುದು ಹೆಣ್ಣು, ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಹೊರುವವಳು ಹೆಣ್ಣು, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ಹೆಂಡತಿಯಾಗಿ, ತಾಯಿಯಾಗಿ ಬಾಂಧವ್ಯವ ಕಟ್ಟುವವಳು ಹೆಣ್ಣು. ಆದರೂ ಅವಳ ಕನಸುಗಳು ಮಾತ್ರ ಇರುಳು ಕಾಣದೆ ಕನಸಾಗಿಯೇ ಉಳಿದುಬಿಡುತ್ತವೆ. ಅವಳೊಂದು ಭೋಗದ ವಸ್ತುವಾಗಿ, ದಾಸಿಯಾಗಿ ಬದುಕುವ ದಾರುಣತೆ…. ೬) ಪತಿಯೇ ಪರಮದೈವ ಎಂದು ತಿಳಿಯುವ ಹೆಣ್ಣು ತಾಯಿಯಾಗಿ, ಸತಿಯಾಗಿ ಗಂಡಿನ ಸರ್ವ ಆಸರೆಯ ಮೆಟ್ಟಿಲಾಗಿ, ಬೆನ್ನೆಲುಬಾಗಿ ನಿಂತು ಗಂಡಿನ ಏಳಿಗೆಗೆ ಪ್ರತೀ ಹಂತದಲ್ಲೂ ದಾರಿ ದೀವಿಗೆಯಂತೆ ಬೆಳಗುವವಳು ಹೆಣ್ಣು. ಇಂತಹ ಹೆಣ್ಣು ಇಂದು ಪುರುಷ ಪ್ರಧಾನವಾದ ಸಮಾಜದ ನಿರ್ಮಾಣಕ್ಕೂ ಕೈ ಜೋಡಿಸಿರುವವಳೇ ಭಾರತದಂತಹ ನಾಗರೀಕತೆಯ ಸಮಾಜದಲ್ಲಿ ಹೆಣ್ಣಿನ ಅಮೂಲ್ಯ ಪಾತ್ರ ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಒಂದು ಮನೆಯ ಸಂಪೂರ್ಣ ಜವಾಬ್ದಾರಿ ಹೊರುವ ಅವಳಿಗೆ ಕೊನೆಯಲ್ಲಿ ನಿರಾಸೆ ಅಸಮಾಧಾನದ ಉಡುಗೊರೆ, ಅವಳ ಮೌನದ ರೋದನೆಯಲ್ಲಿ ಕಾಣದ ಕಂಬನಿಗಳೆಷ್ಟೋ, ಅನುರಾಗವನ್ನು ಕಳೆದುಕೊಂಡ ತಬ್ಬಲಿಯ ಭಾವನೆಗಳೆಷ್ಟೋ, ಎಲ್ಲವೂ ಕೇವಲ ಗಂಡಿನಿಂದಲೇ ಅಲ್ಲದೆ ಇನ್ನೊಂದು ಹೆಣ್ಣಿನಿಂದಲೇ ಇವೆಲ್ಲ ಅವಘಡಗಳಿಗೆ ಕಾರಣವಾಗುತ್ತಿರುವುದು ಮಾತ್ರ ಶೋಚನಿಯವೇ. ೭) ಒಟ್ಟಿನಲ್ಲಿ ತುಂಬಿದ ಸಂಸಾರದಲ್ಲಿ ಯಮುನಾಳ ಆಗಮನದಿಂದಾಗಿ ಅಸಂತೋಷದ ಸೆಲೆ ಕಾಣಿಸಿಕೊಂಡಿದ್ದಂತೂ ಸತ್ಯವಾಗಿತ್ತು. ಅಲ್ಲೊಂದು ಅನ್ನೋನ್ಯತೆ ಬೆಳೆಯಬೇಕಾದರೆ ಗಂಡಿನಷ್ಟೇ ಮುಖ್ಯವಾದ ಪಾತ್ರ ಹೆಣ್ಣಿನದೂ ಸಹ. ಅವಳ ಸಹಮತ, ಪ್ರೀತಿ, ಕಾಳಜಿ, ಕಳಕಳಿಯೊಂದಿದ್ದರೆ ಬೇಕಾದ್ದನ್ನೂ ಸಾಧಿಸಬಲ್ಲ ಅವನು. ಇಲ್ಲದಿರೆ ಬೇರು ಕಳಚಿದ ಹೆಮ್ಮರದಂತೆ, ಎಲೆ ಉದುರಿದ ಗಿಡಗಳಂತೆ ಅಂದವಿರುವುದಿಲ್ಲ. ಅನುರಾಗ, ಸಂಪ್ರೀತಿಯ ಕೊಳಗಳಲ್ಲಿ ಸಾಂತ್ವನ ಹೊಂದಾಣಿಕೆಯೆಂಬ ನೈದಿಲೆಗಳು ಅರಳಿದಾಗ ಸಂಸಾರ ಎಂಬ ಚಂದ್ರಬಿಂಬ ಹೊಳೆಯುತ್ತದೆ. ಇಂತಹ ಸಂಸಾರ ನೂರ್ಕಾಲ ಕಳೆದರೂ ಎಂದಿಗೂ ಹೊರ ಪ್ರಪಂಚದಲ್ಲಿ ತಮ್ಮ ಬಲ ಹೀನತೆಯನ್ನು ತೋರ್ಪಡಿಸುವುದಿಲ್ಲ. ಚಿಕ್ಕಪುಟ್ಟ ತಾರತಮ್ಯಗಳಿದ್ದರೂ ಪರಸ್ಪರ ಸಂವೇದನಾತ್ಮಕ ಚರ್ಚೆಯಿಂದ ಬಗೆಹರಿಸಿಕೊಂಡು ಮುನ್ನಡೆಯಬೇಕು. ಪ್ರಾಣಿಗಳು ಎಂದಿಗೂ ತಮ್ಮ ಮಕ್ಕಳೊಂದಿಗೆ ದ್ವೇಷ ಸಾಧಿಸುವುದಿಲ್ಲ. ಒಂದೈದು ನಿಮಿಷ ಕಿತ್ತಾಡಿಕೊಂಡರೂ ನಂತರದ ಕ್ಷಣದಲ್ಲಿ ಅದನ್ನು ಮರೆತು ಮತ್ತೆ ಸಾಮರಸ್ಯ ಬೆಳೆಸಿಕೊಳ್ಳುತ್ತವೆ. ಹಗೆಯನ್ನು ಹಗೆಯನ್ನಾಗಿಯೇ ಮುಂದುವರೆಸಿಕೊಳ್ಳುವುದಿಲ್ಲ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮನುಷ್ಯ ಮಾತ್ರ ಇದಕ್ಕೆ ತದ್ವಿರುದ್ಧವೇ. ಘಟಿಸುವ ಘಟನಾವಳಿಗೆ ಅನುಗುಣವಾಗಿ ಇಂತಹ ಅನೇಕ ಚಿಂತನೆಗಳು ಹರಿ ಬಿಡುವಲ್ಲಿ ಕಾದಂಬರಿಕಾರರ ಶ್ರಮ ಸಾರ್ಥಕತೆ ಪಡೆದಿದೆ. ನಿರೂಪಣಾ ಶೈಲಿ ಮತ್ತು ಪಾತ್ರ ಪೋಷಣೆಯಲ್ಲಿ ಗೆದ್ದಿದ್ದಾರೆ .ಆದರೆ ಕಥೆ ನಡೆಯವ ಪರಿಸರ ಬಹುಶಃ ಉತ್ತರ ಕನ್ನಡ ಭಾಗದ್ದು ಅನಿಸಿದರೂ ಅದಕ್ಕೆ ಒಂದು ಪ್ರಾದೇಶಿಕ ಪರಿಸರ ತಂದುಕೊಡವಲ್ಲಿ ಸ್ವಲ್ಪ ಮಟ್ಟಿಗೆ ಸೋತಿದೆ ಎಂದೆನಿಸುತ್ತದೆ. ಪಾತ್ರಗಳ ಮುಖಾಂತರವಾದರೂ ನೆಲದ ಭಾಷೆಯನ್ನು ಪರಿಸರವನ್ನು ತಂದುಕೊಡುವ ಮೂಲಕ ಕಾದಂಬರಿಯನ್ನು ಇನ್ನೂ ಆಪ್ತವಾಗಿ ನೈಜವಾಗಿ ಕಟ್ಟಿಕೊಡಬಹುದಾಗಿತ್ತು ಅನಿಸುತ್ತದೆ. ಒಟ್ಟಿನಲ್ಲಿ ಒಂದು ಸದುಭಿರುಚಿಯ ಕೌಟುಂಬಿಕ ಕಥೆ ಹೊಂದಿದ ಕಾದಂಬರಿ ಆಕಸ್ಮಿಕ ಘಟನೆಗಳಿಂದ ಅನಿರೀಕ್ಷಿತ ತಿರುವುಗಳಿಂದ ಕುತೂಹುಲ ಮೂಡಿಸುತ್ತ ಓದುಗನನ್ನು ಮೊದಲಿನಿಂದ ಕೊನೆಯವರೆಗೂ ಹಿಡಿದಿಡುತ್ತದೆ. ಕಥಾನಾಯಕಿಯ ಅಂತಿಮ ನಿರ್ಧಾರ ಸರಿ ಅನಿಸಿದರೂ ಓದುಗರಲ್ಲಿ ವಿಷಾದ ಅಲೆಗಳನ್ನು ಎಬ್ಬಿಸುತ್ತದೆ. ಲೇಖಕರ ಅನುಭವದಂತೆ ಆ ಪಾತ್ರ ವಾಸ್ತವತೆಗೆ ಹತ್ತಿರವಾಗಿಯೇ ಇದ್ದರೂ ಕೂಡ ಇನ್ನಷ್ಟು ಅದಕ್ಕೆ ಕಾವು ಕೊಟ್ಟು ಗಟ್ಟಿಗೊಳಿಸಬಹುದಾಗಿತ್ತು. ಕೊನೆಯವರೆಗೂ ಮೌನ ಸೆರೆಯಾಗಿಯೇ ಸರಿದು ಹೋಗುವ ವೈಶಾಲಿಯ ಜೀವನದಲ್ಲಿ ಹೋರಾಟದ ಮನೋಭಾವ ಕಿಚ್ಚು ಬಿತ್ತಿ ಅಶೋಕನಂಥ ದುರುಳರಿಗೆ ಸರಿದಾರಿಗೆ ತರುವ ನಿರ್ಧಾರಕ್ಕೆ ಅಣಿಗೊಳಿಸಬಹುದಾಗಿತ್ತು. ಇವೆಲ್ಲ ನನ್ನ ವೈಯಕ್ತಿಕ ಅಭಿಪ್ರಾಯವಾದರೂ ಲೇಖಕರು ವಾಸ್ತವ ಸ್ಥಿತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಇದು ಗಣಪತಿಯವರ ಮೊದಲ ಕಾದಂಬರಿ ಎಂದು ಎಲ್ಲೂ ಅನಿಸುವುದಿಲ್ಲ. ಒಂದು ಪಳಗಿದ ಲೇಖನಿಯಿಂದ ಮಾಗಿದ ಮನಸ್ಸಿನಿಂದ ಮೂಡಿದ ಕಥಾಹಂದರ ಎಂದು ಹೇಳಿದರೆ ತಪ್ಪಾಗಲಾರದು. ಈ ಕಾರಣಕ್ಕೆ ಅವರನ್ನು ಅಭಿನಂದಿಸುತ್ತ ಪ್ರಸ್ತುತ ಉತ್ತಮ ಕಾದಂಬರಿಗಳ ಕೊರತೆಯ ಕಾಲದಲ್ಲಿ ಇನ್ನಷ್ಟು ಉತ್ತಮ ಕೃಷಿ ಮಾಡುವ ಮೂಲಕ ಅವರ ಹೆಸರು ಅಜರಾಮರವಾಗಲಿ ಎಂದು ಹಾರೈಸುತ್ತೇನೆ. -ಅಶ್ಫಾಕ್ ಪೀರಜಾದೆ |