ಹಿಂದಿನ ಶತಮಾನದ ಎಪ್ಪತ್ತರ ದಶಕದವರೆಗೆ ಮಲೆನಾಡಿನ ನಮ್ಮ ಊರುಗಳಿಗೆ ಬಸ್ಸಿನ ಸವಲತ್ತು ತೀರ ಅಪರೂಪವಾಗಿತ್ತು. ನೆಂಟರ ಮನೆಗೆ ಹೋಗುತ್ತಿದ್ದುದು ಕಾಲ್ನಡಿಗೆಯಲ್ಲಿ ಅಥವಾ ಎತ್ತಿನ ಗಾಡಿಯಲ್ಲಿ. ದ್ವಿಚಕ್ರ ವಾಹನಗಳೂ ಇರದ ಕಾಲವದು. ಸೈಕಲ್‌ಗಳು ಮಾತ್ರ ಇದ್ದವು. ಹಾಗಾಗಿ ಬಂದವರು ಎರೆಡೋ ಮೂರೋ ದಿನಗಳಿದ್ದು ಹೊರಡುತ್ತಿದ್ದರು. ಮನೆಯಲ್ಲಿ ಎತ್ತಿನಗಾಡಿ ಇದ್ದವರು ಅವರನ್ನು ಗಾಡಿಯಲ್ಲಿ ಕಳಿಸುತ್ತಿದ್ದರು. ಆಗೆಲ್ಲ ಮನೆಯಿಂದ ಹೊರಡುವ ಸಂಭ್ರಮವೇ ಸಂಭ್ರಮ. ʻನಿನ್ನ ಹಲ್ತಿಕ್ಕ ಬ್ರಶ್ ತಂಗಂಡ್ಯಾ?, ಒಣಗಿಸಿದ್ದ ಬಟ್ಟೆ ಚೀಲಕ್ಕೆ ಹಾಕಿಯಾತಾ?ʼ ಅಂತ ವಿಚಾರಿಸುತ್ತಿದ್ದರು. ಇನ್ನೇನು ಹೊರಡಬೇಕು ಎನ್ನುವಾಗ ಅವರ ಮನೆ ಅಂಗಳದಲ್ಲೋ ಹಿತ್ತಿಲಿನಲ್ಲೋ ಇದ್ದ ಗುಲಾಬಿ ಕಡ್ಡಿಯೋ, ಮಲ್ಲಿಗೆಯ ಹಂಬೋ, ಡೇರೆಯ ಗಡ್ಡೆಯೋ ನೆನಪಾಗಿ, ʻಅಕ್ಕಯ್ಯ ಆ ಗಿಡ ಬೇಕು ಕೊಡು ಅಂತ ಹೇಳಿದ್ದು ಮರ್ತೇ ಹೋಗಿತ್ತುʼ ಎನ್ನುತ್ತಿದ್ದಂತೆ ಮನೆಯ ಯಜಮಾನಿ ʻಹೌದು ಯಂಗೂ ಮರ್ತೇಹೋತು. ತಡಿ ತಗಂಡು ಬರ್ತಿʼ ಅಂತ ಅದನ್ನು ಕತ್ತರಿಸಿಯೋ ಕಿತ್ತೋ ತರುತ್ತಿದ್ದರು. ಹೀಗೆ ತಂದುದನ್ನು ಪಡೆದು ಅದಕ್ಕೊಂದು ದಾರವನ್ನೋ ಬಳ್ಳಿಯನ್ನೋ ಕಟ್ಟಿ ಅದು ಮನೆಯವರೆಗೆ ತಲುಪುವಂತೆ ಜೋಪಾನವಾಗಿ ಒಯ್ಯುವುದಿತ್ತು. ದೊಡ್ಡವರೊಂದಿಗೆ ನಾವೂ ಗಾಡಿ ಮರೆಯಾಗುವವರೆಗೆ ಅಂಗಳದಲ್ಲಿ ನಿಂತು ಕೈಬೀಸುತ್ತಿದ್ದೆವು. ನಡೆದು ಹೋಗುವುದಾದಲ್ಲಿ ಕೆಲವೊಮ್ಮೆ ಊರಬಾಗಿಲವರೆಗೆ ಅಥವಾ ಕೆರೆಯೋ ಗದ್ದೆಯೋ ತೋಟವೋ ಇದ್ದರೆ ಅಲ್ಲಿವರೆಗೂ ಹೋಗುವುದಿತ್ತು. ಬಸ್ಸಿನ ಸೌಕರ್ಯ ಬಂದ ಮೇಲೆ ಮನೆಯ ಮಕ್ಕಳಿಗೆ ಅವರನ್ನು ಬಸ್ಸಿಗೆ ಹತ್ತಿಸಿ ಬರುವ ಖಯಾಲಿ. ಒಂದೋ ಎರಡೋ ಕಿ.ಮೀ ದೂರವಿರುವ ಬಸ್ ನಿಲ್ದಾಣದತನಕ ಹೋಗಿ ಅವರಿಗೆ ಟಾಟಾ ಮಾಡುವುದು ಮಜಾ ಅನಿಸುತ್ತಿತ್ತು. ಅಲ್ಲೇನಾದರೂ ಅಂಗಡಿ ಇದ್ದರೆ ಅವರ ಕೈಗೆ ಚಾಕ್ಲೇಟೋ, ಪೆಪ್ಪರಮೆಂಟೋ ಬಿಸ್ಕತ್ತೋ ಕಡಲೆಕಾಯಿ ಪೊಟ್ಟಣವೋ ಸಿಗುವುದೂ ಇತ್ತು. ಹಾಗೆ ಪಡೆದು ಮನೆಗೆ ಬಂದ ಮೇಲೆ ಆ ಮಕ್ಕಳು ಮಾಡುವ ಡೌಲು ನೋಡುವಂತಿರುತ್ತಿತ್ತು. ನೆಂಟರ ಜೊತೆಗೆ ಹೋಗದೆ ಇರುವ ಮಕ್ಕಳ ಮುಖ ಬಾಡುತ್ತಿತ್ತು. ಮನೆಗೆ ಮತ್ಯಾರಾದರೂ ಬಂದರೆ ಸಾಕು, ಅವರನ್ನು ಕಳಿಸಿ ಬರಲಿಕ್ಕೆ ಮಕ್ಕಳಲ್ಲಿ ʻನಾ ಮುಂದು ತಾ ಮುಂದು ʼ ಎನ್ನುವ ಸ್ಪರ್ಧೆ ಏರ್ಪಡುತ್ತಿತ್ತು. | |
ಈಗಲೂ ಹಳ್ಳಿಯನ್ನು ಬಿಟ್ಟಬಂದು ನಗರ ಪ್ರದೇಶದಲ್ಲಿ ಉದ್ಯೋಗದಲ್ಲಿರುವವರು ಊರಿಗೆ ಹೋಗಿ ಮರಳಿ ಬರುವಾಗಿನ ಸಂಭ್ರಮವನ್ನು ನೋಡಬೇಕು. ಅದರಲ್ಲಿಯೂ ನಾಲ್ಕು ಚಕ್ರದ ವಾಹನ ಇರುವವರ ವಾಹನದಲ್ಲಿ ಹಿಡಿಸದಷ್ಟು ವಸ್ತುಗಳು ಅಲ್ಲಿ ಆಶ್ರಯ ಪಡೆದಿರುತ್ತವೆ. ಮನೆಯಲ್ಲಿ ಬೆಳೆದ ಸೊಪ್ಪು, ತರಕಾರಿ, ಬಾಳೆಹಣ್ಣು, ಮಾವು, ಹಲಸು, ನಿಂಬೆ ಹೀಗೆ ಆಯಾ ಪ್ರದೇಶದ ಬೆಳೆಗಳನ್ನು ಆಧರಿಸಿ ಮಕ್ಕಳ ಮನೆಗೆ ಕಳುಹಿಸಲು ಹೆತ್ತವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ʻಇದು ಈ ಬಾರಿ ಬಂದ ಹೊಸ ಫಸಲು, ನೀವೂ ತಿನ್ನಿʼ ಎನ್ನುತ್ತ ಇನ್ನಷ್ಟು ತುಂಬುತ್ತಾರೆ. ಹೈನು ಇರುವ ಮನೆಯ ಮಕ್ಕಳಿಗೆ ಕಳುಹಿಸುವ ವಸ್ತುಗಳ ಪಟ್ಟಿಯಲ್ಲಿ ತುಪ್ಪವೂ ಜಾಗವನ್ನು ಪಡೆದುರುತ್ತದೆ. ಹೀಗೆ ಮಾಡುವುದರಲ್ಲಿ ವಸ್ತುಗಳ ಪ್ರಾಧಾನ್ಯಕ್ಕಿಂತ ಮಕ್ಕಳು, ಮೊಮ್ಮಕ್ಕಳ ಮೇಲಿನ ಪ್ರೀತಿ ಮತ್ತು ಮಮಕಾರ ಮುಖ್ಯವಾಗುತ್ತವೆ. ಹಸುವೋ ಎಮ್ಮೆಯೋ ಕರು ಹಾಕಿದಾಗ ಸದ್ಯದಲ್ಲಿಯೇ ಮಕ್ಕಳು ಬರುವವರಿದ್ದಾರೆ ಎಂದಾದರೆ ಗಟ್ಟಿ ಗಿಣ್ಣು ಮಾಡಿ ಫ್ರಿಜ್‌ನಲ್ಲಿಟ್ಟು ಕಾಪಿಡುವ ಅವರ ನಿಷ್ಕಲ್ಮಷ ಪ್ರೀತಿಗೆ ಯಾರಾದರೂ ಸೋಲಲೇಬೇಕು. ಕೆಲವೊಮ್ಮೆ ಮನೆಗೆ ಬಂದರಿವವರ ಮನೆಯ ಯಾರಿಗೂ ಯಾವುದೋ ಪ್ರೀತಿಯೆಂದು ತಮ್ಮಲ್ಲಿರುವುದನ್ನು ಕೊಟ್ಟು ಕಳುಹಿಸುವುದೂ ಇದೆ. ಹೀಗೆ ಕೊಟ್ಟಿರುವುದು ಬೇಡವೆನಿಸಿದರೂ ತೆಗೆದುಕೊಂಡು ಹೋಗಲು ನಿರಾಕರಿಸುವುದು ಕಷ್ಟವಾಗುತ್ತದೆ. | |
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ. |