NLP_Assignment_1 / Kenda Sampige /article_141.txt
CoolCoder44's picture
Upload folder using huggingface_hub
7f4117a verified
raw
history blame
17.1 kB
ಯು.ಎಫ್.ಒ. – ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್- ಎಂದರೆ ಗುರುತು ಸಿಗದ ಹಾರುವ ವಸ್ತುಗಳು. ಇವುಗಳ ಬಗ್ಗೆ ಅನೇಕ ದಶಕಗಳಿಂದ ಜಿಜ್ಞಾಸೆ ನಡೆದಿದೆ. ಆದರೆ ರಹಸ್ಯ ಗಾಢವಾಗುತ್ತಲೇ ಹೋಗಿದೆ. ಬೇರೆ ಗ್ರಹಗಳಿಂದ ಭೂಮಿಗೆ ಭೇಟಿ ಕೊಡುವ ತುಂಬ ಮುಂದುವರಿದ ನಾಗರಿಕತೆಯ ಈ ಹಾರುವ ವಸ್ತುಗಳು (ಅನೇಕ ವೇಳೆ ಹಾರುವ ತಟ್ಟೆಗಳಂತೆಯೇ ಕಂಡಿವೆ; ಫ್ಲೈಯಿಂಗ್ ಸಾಸರ್ಸ್ ಎಂದೂ ಹೆಸರಾಗಿವೆ.) ಬರಿಯ ಕಲ್ಪನೆ ಎಂದು ಅನೇಕರ ವಾದ. ಮನಶ್ಶಾಸ್ತ್ರಜ್ಞ ಯೂಂಗ್ ಪ್ರಕಾರ ಇದು ಸಾಮೂಹಿಕ ಕಲ್ಪನೆ ಅಥವಾ ಭ್ರಮೆ. ಇನ್ನು ಕೆಲವರು ಸಂಶಯವಾದಿ ವಿಜ್ಞಾನಿಗಳ ಪ್ರಕಾರ ವಾಯುಪಡೆಯ ಸಂಶೋಧನೆಗೆಂದು ಹಾರಿಬಿಟ್ಟ ಬಲೂನ್ ಅಥವಾ ಇತರ ರೀತಿಯ ಯಂತ್ರಗಳು.
ವಿಶ್ವದಲ್ಲಿ, ಸೌರವ್ಯೂಹದಾಚೆ- ಈ ಭೂಮಿಗಿಂತ ಲಕ್ಷಾಂತರ ವರ್ಷಗಳು ಮುಂದುವರಿದ ಜೀವಿಗಳಿದ್ದಾರೆ. ಅವರು ಸೌರವ್ಯೂಹದಲ್ಲಿ ಜೀವಿಗಳಿರುವ ಬಹುಶಃ ಏಕಮಾತ್ರ ಗ್ರಹವಾದ ಭೂಮಿಯ ಬಗ್ಗೆ ಗಮನ ಹರಿಸಿ ಇಲ್ಲಿಯ ಜನಜೀವನ ಅರಿಯುವ ಉದ್ದೇಶದಿಂದ ಇಂಥ ಯಂತ್ರ ಕಳಿಸಿದ್ದಾರೆ ಎನ್ನುವವರು, `ಅಮೆರಿಕಾದಂಥ ಸರ್ಕಾರಗಳಿಗೆ ಈ ವಿಚಾರ ಗೊತ್ತು; ಯು.ಎಫ್.ಓ ಭೂಮಿಗೆ ಬಿದ್ದು ಅದರಲ್ಲಿದ್ದ ಜೀವಿಗಳು ಸತ್ತುದನ್ನೆಲ್ಲ ಮುಚ್ಚಿಡಲಾಗಿದೆ’ ಎಂದೂ ಹೇಳುತ್ತಾರೆ. ಎಂದರೆ ಯಾರೂ ನಂಬುವಂಥ ಸಾಕ್ಷ್ಯಗಳನ್ನು ಮುಂದಿಡುವುದಿಲ್ಲ. ಊಹಾ ಪ್ರಪಂಚಕ್ಕೇ ಒತ್ತು.
(ಜೋಗಿ)
ನಮ್ಮ ಕವಿಯೊಬ್ಬರು ಹೇಳುತ್ತಿದ್ದರು: ನೋಡಿ, ಬೇರೆ ಗ್ರಹಗಳ ಜನ ಎಷ್ಟು ಮುಂದುವರಿದಿದ್ದಾರೆಂದರೆ ಭೂಮಿಯವರಿಗೆ ಕಂಡ ಅವರ ಮಹಾಯಂತ್ರಗಳು ಒಂದೂ ಭೂಮಿಗೆ ಬಿದ್ದಿಲ್ಲ. ಅದಕ್ಕೆ ಪ್ರತಿಯಾಗಿ ಸಂದೇಹವಾದಿಗಳು ಹೇಳುತ್ತಿದ್ದುದು- ಏಕೆ ಒಂದು ಯಂತ್ರವೂ ಕೆಳಗೆ ಬಿದ್ದಿಲ್ಲವೆಂದರೆ ಅಲ್ಲಿ ಯಂತ್ರವೇ ಇಲ್ಲ. ಹಾರುವ ಯಂತ್ರ ಇದ್ದರೆ ತಾನೆ ಕೆಳಗೆ ಬೀಳುವುದಕ್ಕೆ! ಅದೆಲ್ಲ ಬರಿಯ ಕಟ್ಟುಕತೆ.
(ಬೆಂಗಳೂರಿನಲ್ಲಿ 1982ರವರೆಗೆ ಜೀವಿಸಿದ್ದ ಯೋಗಿ ಅಂಬರೀಶ್ ವರ್ಮರ ಪ್ರಕಾರ ಯು.ಎಫ್.ಓ. ಪೂರ್ತಿ ನಿಜ. ಕಾಶ್ಮೀರದ ಉತ್ತರ ಪಾಮರ್ ಪ್ರಸ್ಥಭೂಮಿಯಲ್ಲಿ ಯು.ಎಫ್.ಓ.ಗಳ ನಿರ್ಮಾಣ ತಾಣ. ನಮ್ಮ ರಥಗಳ ಆಕಾರಕ್ಕೆ ಯು.ಎಫ್.ಓ.ನ ಆಕಾರವೇ ಆಧಾರ. ಆಕಾಶದಲ್ಲಿ ಕಾಣುವ ಎಲ್ಲ ಬೆಂಕಿ ಉಗುಳುವ ವಿಚಿತ್ರ ವಸ್ತುಗಳೂ ಯು.ಎಫ್.ಓ. ಅಲ್ಲ, `ಡಯಾಗನಲ್’ ನಂತೆ ಓರೆಯಾಗಿ ಹಾರುವ ಬೆಳಕಿನ ವಸ್ತುಗಳು ವಾತಾವರಣ ಸರಿಮಾಡುವ `ಮರುತ್ ಕುಮಾರ’ರ ಯಂತ್ರಗಳು. ಆದರೆ `Astral Travel’ ಮುಂತಾದವುಗಳಲ್ಲಿ ನಿರತರಾಗಿದ್ದ, ಹೆಸರು ಮತ್ತು ಹಣಕ್ಕೆ ಆಸೆ ಪಡದೆ ಇದ್ದ ಈ ವರ್ಮರ ಹೇಳಿಕೆ ಸಮರ್ಥಿಸುವ ಬೇರೆ ಯಾವ ಸಾಕ್ಷ್ಯಗಳೂ ಇತರರಿಗೆ ದೊರೆಯಲಿಲ್ಲ.
ಇಂಥ ವಿಚಾರಗಳಲ್ಲಿ Willing Suspension of disbelief- ಎಂದರೆ ಇದೆಲ್ಲ ಬೊಗಳೆ ಎಂದು ಹೇಳುವುದಕ್ಕಿಂತ ಅಪನಂಬಿಕೆಯನ್ನು ತಾತ್ಕಾಲಿಕವಾಗಿ ಒತ್ತಟ್ಟಿಗೆ ಇಟ್ಟು, ಈ ರಹಸ್ಯದ ಎಳೆಗಳನ್ನು ಅನುಸರಿಸಿ ಶೋಧನೆ ಮುಂದುವರೆಸುವುದು ತೆರೆದ ಮನಸ್ಸಿನ ಲಕ್ಷಣವಾದೀತು, ಆದರೆ ಸ್ಪಷ್ಟ ಸಾಕ್ಷ್ಯ ಸಿಗುವವರೆಗೆ ಯು.ಎಫ್.ಓ. ಅನೇಕ ಲೇಖಕರ ಊಹಾಪ್ರಪಂಚಕ್ಕೆ ಮಾತ್ರವಲ್ಲದೆ, ಸ್ಟೀಲ್‍ಬರ್ಗ್‍ರಂಥ ಸಿನಿಮಾ ತಯಾರಕರಿಗೆ ಒಳ್ಳೆಯ ವಸ್ತುವಾದೀತು.`ಬೋರ್’ `ವೆಲ್’
ಆಂಧ್ರದ ಮಚಲೀಪಟ್ಟಣಂ ಬಳಿಯ ಗ್ರಾಮದಲ್ಲಿ, ಬೋರ್‍ವೆಲ್ ತೋಡುತ್ತಿದ್ದಾಗ ತಿಳಿನೀರಿಗೆ ಬದಲಾಗಿ ಮಂದವಾದ ದ್ರವವೊಂದು ಸಿಕ್ಕಿತು. ಅದರ ಮೇಲೆ ಹಚ್ಚಿದ ಬೆಂಕಿಕಡ್ಡಿ ಎಸೆದಾಗ ಪೆಟ್ರೋಲಿಯಂ ಉತ್ಪನ್ನದಂತೆ ಆ ಬಾವಿಯೇ ಉರಿಯಿತು. ಅಗ್ನಿಶಾಮಕದಳದ ನೆರವಿನಿಂದ ಆ ಜ್ವಾಲೆ ಆರಿಸಬೇಕಾಯಿತು.
ನೀರಿಗೆಂದು ಅಗೆದಾಗ ದ್ರವರೂಪದ ಚಿನ್ನ ಎನ್ನಿಸಿದ ಪೆಟ್ರೋಲ್ ಸಿಕ್ಕರೆ? ಕರ್ನಾಟಕದಲ್ಲಿ ಕಂಡಕಂಡೆಡೆ ಬೋರ್‍ವೆಲ್ ತೋಡುತ್ತಿರುವ ನೀರ್ ಸಾಬರು ಎನ್ನಿಸಿರುವ ನಜೀರ್ ಸಾಬರೂ ಕಡಿಮೆ ಆಗುತ್ತಿರುವ ನೀರಿನ ಮಟ್ಟವನ್ನು ಗಣಿಸದೆ ಬೋರ್‍ವೆಲ್ ತೋಡುವ ಕೆಲಸವನ್ನು ಇನ್ನೂ ಚುರುಕುಗೊಳಿಸಿದರೆ ನೀರಿಗೆ ಬದಲು ನಮಗೂ ಪೆಟ್ರೋಲ್ ಸಿಕ್ಕರೆ ನೀರ್‍ಸಾಬರು ಪೆಟ್ರೋಲ್ ಸಾಬ್ ಆಗಬಹುದು. ಕಾವೇರಿ ಬೇಸಿನ್‍ನಲ್ಲಿ ತೈಲ ಸಿಕ್ಕ ಸುದ್ದಿ ಆಗಾಗ್ಗೆ ಬರುತ್ತಿರುವಾಗ ಕರ್ನಾಟಕಕ್ಕೇಕೆ ಈ ದ್ರವರೂಪದ ಚಿನ್ನ ಬೇಡ?
`ಬೋರ್‍ವೆಲ್’ ತೋಡುವುದು ಹೆಚ್ಚಾಗಬಹುದು. `ಬೋರ್’ `ವೆಲ್’ ಎಂದರೆ ಚೆನ್ನಾಗಿ ಬೋರ್ ಮಾಡು ಎಂದೂ ಅರ್ಥವಾಗುವುದರಿಂದ ಎಲ್ಲ ಸಚಿವರಿಗೂ ಈ `ಬೋರ್’ `ವೆಲ್’ ಚಾನ್ಸ್ ಸಿಕ್ಕೀತೆಂದು ಶ್ರೀಮಾನ್ ಘಾ ಹೇಳುತ್ತಾರೆ.
ನಗದು ನವಾಬರು
ಬ್ರಿಟನ್ನಿನಲ್ಲೂ `ಚೆಕ್‍ಬುಕ್ ಅರಿಸ್ಟೋಕ್ರಾಟ್’ ಎಂಬ ಒಂದು ಹೊಸ ತಂಡ ತಯಾರಾಗಲಿದೆ. `ಲಾರ್ಡ್’, `ಲೇಡಿ’ ಪದವಿಗಳಂಥ `ಟೈಟಲ್’ಗಳು ಮಾರಾಟಕ್ಕಿವೆ. `ಲೇಡಿ ಗೋಡಿವಾ’ ಆಗಬೇಕೆಂದು ಶ್ರೀಮಂತೆ ಆಸೆಪಟ್ಟರೆ ಸಾಕಷ್ಟು ಹಣ ಕೊಟ್ಟು ಆ ಪದವಿ ಪಡೆಯಬಹುದು. ವಂಶಾವಳಿಗಳೇ ಹರಾಜಿಗಿವೆ.
ಪಿ.ಜಿ. ವುಡ್‍ಹೌಸ್‍ರಂಥ ಹಾಸ್ಯಸಾಮ್ರಾಟನ ವಿಡಂಬನೆಗೆ ಮೂಲವಸ್ತು ಎಂದರೆ ಹಣವಾಗಲೀ ತಲೆಯೊಳಗೆ ಮಿದುಳಾಗಲೀ ಇರದ ಲಾರ್ಡ್ ಎಮ್ಸ್‍ವರ್ಥ್‍ರಂಥ ಶ್ರೀಮಂತರು. ಹಳೆಯ `ಕ್ಯಾಸಲ್’ಗಳಿದ್ದರೂ ಅದನ್ನು ನೋಡಿಕೊಳ್ಳಲು ಸಾಕಷ್ಟು ಹಣವಿರದ, ಈಗ ಹೆಸರಿಗೆ ಮಾತ್ರ `ಲಾರ್ಡ್’ ಎನಿಸಿದವರು ವಿದೇಶಿಯರ ಭೇಟಿ ಕೊಡುವ ಪ್ರದರ್ಶನ ಕೇಂದ್ರ ಮಾಡಿ ಹಣ ಗಳಿಸುತ್ತಾರೆ.
ಈ ಹೊಸ `ನಗದು ನವಾಬರು’ ಹೊಸ ಪದವಿ ಪಡೆದು ಏನು ಮಾಡುತ್ತಾರೋ ನೋಡಬೇಕು.
`ಕೊರವಂಜಿ’ಯ ರಾ.ಶಿ. ಹಿಂದೆ ಬರೆದ ಕತೆಯ ಸಾರಾಂಶವಿದು: ಸೋಪಿನ ವ್ಯಾಪಾರ ಮಾಡಿ ಅಪಾರ ಹಣ ಗಳಿಸಿ ಸೋಪಿನ ಶಾಮಿ ಎಂದು ಹೆಸರಾದ ಶಾಮಿಗೆ, ರಾವ್ ಬಹಾದೂರ್, ರಾವ್ ಸಾಹೇಬ್‍ಗಳಂಥ `ಟೈಟಲ್’ ಪಡೆದು ಗೌರವಸ್ಥನಾಗ ಬೇಕೆಂದು ಆಸೆ. ಕಡೆಗೆ ಸರ್ವಪ್ರಯತ್ನಗಳಿಂದ ಆ ಟೈಟಲ್ ಪಡೆಯುತ್ತಾನೆ. ಆದರೆ ಅವನನ್ನು ಎಲ್ಲರೂ ಕರೆಯಲಾರಂಭಿಸಿದ್ದು ರಾವ್ ಬಹಾದ್ದೂರ್ ಸೋಪಿನ ಶಾಮಿ. (ಸೋಪೇ ಜಿಡ್ಡಿನಂತೆ ಅಂಟಿಬಿಟ್ಟಿತ್ತು.)
ತಥಾಸ್ತು- ತಥಾಸ್ತ್ರೀ
ಪುರುಷರೊಡನೆ ಸಮಾನತೆಗೆಂದು ಶುರುವಾದ ನಾರೀ ವಿಮೋಚನಾ ಚಳವಳಿ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದರೆ ಪುರುಷ ವಿಮೋಚನಾ ಚಳವಳಿ ಅಗತ್ಯವಾಗಿದೆ ಎಂದು ಸಿನಿಕರು ಹೇಳಿಯಾರು. ಪುರುಷಪ್ರಧಾನ ಸಮಾಜದಲ್ಲಿ ಪುರುಷನಿಗೆ ಅನ್ವಯವಾದದ್ದು ಸ್ತ್ರೀಗೂ ಅನ್ವಯ ಎಂದು ಭಾವಿಸಿಕೊಂಡೇ ಮುಂದುವರಿಯು ತ್ತಿದ್ದಾಗ(?) ಪ್ರತಿ ಹಂತದಲ್ಲೂ ಸ್ತ್ರೀಗೆ ಸಮಾನ ಸ್ಥಾನ ಬೇಕೆಂದು `ವಿಮೆನ್ಸ್ ಲಿಬ್’ ಅಥವಾ ನಾರೀ ವಿಮೋಚನಾವಾದಿಗಳ ಹೋರಾಟ ಆರಂಭವಾಯಿತು.
ಚೇರ್‍ಮನ್ ಎಂದೇಕೆ? ಚೇರ್‍ವುಮನ್ ಎಂದು ಕರೆಯಿರಿ ಎಂದರು. ಆದರೆ ಈಗ `ಚೇರ್‍ಪರ್ಸನ್’ ಎಂದು ಕರೆದು ಉಭಯ ಲಿಂಗಿಗಳಿಗೂ ಅನ್ವಯಿಸಲಾಗಿದೆ. ಆದರೆ `ಮ್ಯಾನ್’ ಬಂದ ಕಡೆ `ವುಮನ್’ ಎನ್ನಬೇಕಾದರೆ, `ಹಿಸ್’ ಬಂದ ಕಡೆ `ಹರ್’ ಎನ್ನಬೇಕಾದರೆ ಅನೇಕ ವಿನೋದಕರ ಪದಗಳು ಉದ್ಭವಿಸುವುದೆಂದು ತರಲೆಗಳು (ತರಳೆ ಅಲ್ಲ) ಹೇಳುತ್ತಾರೆ. ಹಾಗಾದರೆ `ಮ್ಯಾನ್‍ಡೇಟ್’ `ವುಮನ್‍ಡೇಟ್’ ಆಗಿ, `ಹಿಸ್ಟರಿ’ `ಹರ್‍ಟರಿ’ ಆಗಬೇಕೆ? `ಮ್ಯಾನ್‍ಷನ್’ `ವುಮನ್‍ಷನ್’ ಆಗಬೇಕೆ? ಮ್ಯಾನ್ ಹೋಲ್ ಗತಿ ಏನು?- ಹೀಗೆಲ್ಲ. ಇದೆಲ್ಲ ಇಂಗ್ಲಿಷ್ ಭಾಷೆಯ ತರಲೆ.
ಹಿಂದೆ ಕೈಲಾಸಂ ತಮ್ಮ ಭಾಷಣ ಮುಗಿಸಿ, ಗಂಡಸರ ಕಡೆ ತಿರುಗಿ, `ಆ ಮೆನ್’ -ತಥಾಸ್ತು ಎಂದರು. ಮಹಿಳೆಯರ ಕಡೆ ತಿರುಗಿ `ಆ ವಿಮೆನ್’- ತಥಾಸ್ತ್ರೀ ಎಂದಿದ್ದರು.
`ಕೇಕೆ’ಗೆ ಕತ್ತರಿ
ಜನಶಾಂತಿ ಕದಡುವ ಭಾಷಣ ಕೊಡಬಾರದು; ಧ್ವನಿವರ್ಧಕ ಬಳಸಿ ಮೌನ ಭಂಗ ಮಾಡಬಾರದು- ಇತ್ಯಾದಿ `ಕೂಡದು’ ಆಜ್ಞೆಗಳನ್ನು ಎಲ್ಲ ಸರ್ಕಾರಗಳೂ ಹೊರಡಿಸುತ್ತವೆ. (`ನಗಿ’ ಎನ್ನಲಿಕ್ಕೀ ಪರವಾನಗಿ ಬೇಕಾದೀತು.) ಆದರೆ ನಗಬಾರದು, ಹಾಡಬಾರದು, ಓಡಬಾರದು ಎಂದು ಹೇಳುವಂತೆ ಈಗ ನವಿಲಿನ ಕೇಕೆಗೂ ಜರ್ಮನಿಯ ನ್ಯಾಯಾಲಯ ಕತ್ತರಿ ಹಾಕಿದೆ.
ಅಲ್ಲಿ `ಆಡಾಡು ಬಾ ನವಿಲೆ, ತೆರೆದೆರಡು ಸಾವಿರದೆರಡು ಕಣ್ಣ’ ಎಂದು ಕವಿ ಕೂಗುವಂತಿಲ್ಲ. ಮೇ- ಜೂನ್ ತಿಂಗಳ `ಬೇಟದ ಕೂಟ’ದ ಕಾಲದಲ್ಲಿ ಪ್ರಣಯ ಕಾತರದಿಂದ ನವಿಲು ಹಾಕಿದ ಕೇಕೆ ನಿದ್ರಾ ಗ್ರಾಮದ ನಿದ್ರೆ ಹಾಳುಮಾಡಿತೆಂದು ನ್ಯಾಯಾಲಯಕ್ಕೆ ದೂರು ಬಂದ ಮೇಲೆ, ಮಾನವನ ಕಿವಿಗೆ ಅಪಾಯಕರವಾಗಿ 70 ಡೆಸಿಬಲ್ ಮಟ್ಟದಲ್ಲಿ ಕೇಕೆ ಹಾಕಿ ನವಿಲು ಕೂಗುವಂತಿಲ್ಲ ಎಂದು ಆಜ್ಞೆಯಾಗಿದೆ.
ಭಾರತದ ರಾಷ್ಟ್ರಪಕ್ಷಿ ಮಯೂರದ `ವಾಕ್’ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ನಾಟ್ಯಮಯೂರಿಯ ದೇಶವಾದ ಭಾರತವು ಜರ್ಮನಿಗೆ ರಾಜತಾಂತ್ರಿಕವಾಗಿ ಪ್ರತಿಭಟನೆ ಸಲ್ಲಿಸಬೇಕೆಂದು ಪ್ರಾಣಿದಯಾಸಂಘದವರು ಒತ್ತಾಯ ತಂದಾರೆ? ನಮ್ಮ ನವಿಲೂರಿನ ಕವಿಗಳು ಈ ಪಕ್ಷಿ ಸ್ವಾತಂತ್ರ್ಯದ ಬಗ್ಗೆ ಪದ್ಯ ಬರೆಯಬಹುದೆ? ನಿರೀಕ್ಷಿಸಿ.
ಹೊಸ ಹೆಸರು
ಬೆಂಗಳೂರು ನಗರದಲ್ಲಿ ಅನೇಕ ಬಡಾವಣೆಗಳಿಗೆ ಹೆಸರನ್ನು ಬದಲಾಯಿಸಿ ನೂತನ ನಾಮಕರಣಗಳಾಗಿವೆ. ರಿಚ್‍ಮಂಡ್ ಟೌನ್, ಸರ್ ಮಿರ್ಜಾ ಇಸ್ಮಾಯಿಲ್ ನಗರವಾಗಿದೆ. ಬೆನ್‍ಸನ್ ಟೌನ್ ಕದಂಬ ನಗರವಾಗಿ, ಆಸ್ಟಿನ್ ಟೌನ್ ಕಿಟ್ಟಲ್ ನಗರವಾಗಿ, ದೊಡ್ಡ ಕುಂಟೆ ಸರ್ವಜ್ಞ ನಗರವಾಗಿ, ಆನೆಪಾಳ್ಯ ಗಜೇಂದ್ರ ನಗರವಾಗಿದೆ. ಪಾಳ್ಯ ನಗರವಾಗುವುದರ ಜೊತೆಗೆ ಆನೆ ಸಂಸ್ಕೃತೀಕರಣಕ್ಕೆ ಒಳಗಾಗಿ ಗಜೇಂದ್ರವಾಗಿದೆ.
ಹಿಂದೆ ಬೌರಿಂಗ್ ಪೇಟೆ ಬಂಗಾರು ಪೇಟೆಯಾಗಿ, ಕಾನ್‍ಕಾನ್ ಹಳ್ಳಿ (ಖಾನ್‍ಖಾನ್ ಹಳ್ಳಿ?) ಕನಕಪುರವಾಯಿತು. ಹೆಮ್ಮಡು ಆಳ ಎನ್ನುವ ಸುಂದರ ಕನ್ನಡದ ಹೆಸರು ಸಂಸ್ಕೃತದ ಧಾಳಿಗೆ ಒಳಗಾಗಿ ಹೇಮದಳವಾಯಿತು. ಸಂಸ್ಕೃತದ ಮೋಹ ಕನ್ನಡದ ಮೂಲದ ನಾಮವನ್ನೇ ನಿರ್ನಾಮ ಮಾಡಿತು. `ಕೋಗಿಲೆ, ಕೋಗಿಲೆ ಎಂಥ ಹೆಸರು ಊರಿಗೆ’ ಎಂದು ಮಲೆನಾಡ ಹಳ್ಳಿಗಳ ಹೆಸರಿನ ಮೋಹಕತೆಗೆ ಮಾರುಹೋದ ಮಾಸ್ತಿ ಪದ್ಯ ಬರೆದರು. ಎಳನಡು ಸಿರಿಗಳಲೆ….ಒಂದೇ ಎರಡೇ? ನೂರಾರು. ಮೂಲದ ಸುಂದರ ಕನ್ನಡ ಹೆಸರುಗಳನ್ನು ಮಾರ್ಪಡಿಸುವುದು ಅನಗತ್ಯವಲ್ಲವೇ?
ಕೊನೆ ಸಿಡಿ
ಕಳಲೆ, ಸೋಸಲೆ ಎಂಬ ಊರುಗಳಿಲ್ಲವೇ? `ಕಳಲೆ?’ ಎಂಬುದನ್ನು ಪ್ರಶ್ನೆಯೆಂದು ಪರಿಗಣಿಸಿಯೇ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನದ ಉತ್ತರ ತಯಾರಾಯಿತೆಂದು ಶ್ರೀಮಾನ್ ಘಾ ಹೇಳುವುದು ಶುದ್ಧ ತರಲೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ