|
ನಾನು ಸಾಮಾನ್ಯವಾಗಿ ಪ್ರಶ್ನೆಗಳನ್ನು ಕೇಳುತ್ತಾ ಕೂರುವುದಿಲ್ಲ; ಆದರೆ ನನ್ನನ್ನೇ ಕೇಳಿಕೊಳ್ಳುತ್ತಿರುತ್ತೇನೆ. ಸಾಧ್ಯವಾದಷ್ಟೂ ಪ್ರಶ್ನೆಗಳೇ ಹುಟ್ಟದಂತೆ ನೋಡಿಕೊಳ್ಳುತ್ತಿರುತ್ತೇನೆ! ಇದೊಂದು ಸುಖವಾದ ಮತ್ತು ನಿರಾಯಾಸ ಸ್ಥಿತಿ. ಇದಕ್ಕೆ ವಿಶೇಷವಾದ ಜ್ಞಾನವೇನೂ ಬೇಡ; ಎಂಥದೋ ಅಲೌಕಿಕವೋ; ಅಧ್ಯಾತ್ಮಸಿದ್ಧಿಯೋ ಎಂಬಂಥ ಹೆಸರಿಡುವುದೂ ಬೇಡ. ಲೌಕಿಕದಲ್ಲೇ ಇದ್ದು, ಮುಳುಗಿ, ಎದ್ದು ಬದುಕು ನಡೆಸಿದರೂ ಸುಖ ಮತ್ತು ನೆಮ್ಮದಿಯನ್ನು ಹೊಂದಬಹುದು. ಅದಕ್ಕಾಗಿ ಪೂಜೆ, ಪುರಸ್ಕಾರ, ದೇವರು, ಧರ್ಮ, ಅಧ್ಯಾತ್ಮ ಅಂತ ಲೋಕೋತ್ತರಕೆ ಕೈ ಚಾಚುವ ಅಗತ್ಯವಿಲ್ಲ. ಕೈ ಚಾಚಿದರೆ ತಪ್ಪೇನೂ ಇಲ್ಲ. ಅವರವರ ಸ್ವಾತಂತ್ರ್ಯ. ನಿರ್ಬಂಧಗಳಿಗೆ ಒಳಪಟ್ಟ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನವೇ ದಯಪಾಲಿಸಿದೆ. ಹಾಗಾಗಿ ಅವರವರ ಇಷ್ಟಾನಿಷ್ಟವಿದು. ಒಟ್ಟಾರೆ ಲೌಕಿಕದಲಿದ್ದೇ ಲೋಕೋತ್ತರವಾಗುವ ಸಾಧ್ಯತೆಯನ್ನು ನಾವೇ ನಮ್ಮನುಭವದ ಮೂಲಕ ಆವಿಷ್ಕರಿಸಿಕೊಳ್ಳಬೇಕೆಂಬುದು ಇಂಥಲ್ಲಿ ನನ್ನ ಮಾತು. ಪ್ರಶ್ನೆಗಳೇ ಹುಟ್ಟದಂಥ ಸ್ಥಿತಿಗೆ ಕೊಂಡೊಯ್ಯುವಂಥ ಸಾಮರ್ಥ್ಯ ಇರುವುದು ಆಧ್ಯಾತ್ಮಿಕ ಗುರುಗಳಿಗೆ. ಅಂಥ ಅರ್ಹತೆ ಮತ್ತು ಯೋಗ್ಯತೆಗಳನ್ನು ಶಿಷ್ಯರೆನಿಸಿಕೊಂಡವರೂ ಹೊಂದಿರಬೇಕು. ಇರಲಿ. |
|
ಈ ಲೌಕಿಕ ಸುಖ ಮತ್ತು ನೆಮ್ಮದಿಗಳಿಗಾಗಿ ಸ್ವಲ್ಪ ನಮ್ಮೊಳಗನ್ನು ಮತ್ತು ನಮ್ಮನ್ನು ಸುತ್ತುವರಿದ ಸಮುದಾಯವನ್ನು ಅರಿಯಬೇಕು. ಈ ವಿಷಯದಲ್ಲಿ ಮನೋವಿಜ್ಞಾನವು ಸಹಾಯಕ್ಕೆ ಬರಬಹುದು. ನನ್ನ ಆತ್ಮೀಯರೊಬ್ಬರು ಯಾವುದೋ ಸಂಗತಿಯನ್ನು ಕುರಿತು ಮಾತಾಡುತ್ತಾ, ‘ಅದೇ ಸರ್, ನೀವು ಪದೇ ಪದೇ ನಮ್ಮೊಳಗು, ನಮ್ಮಾಳದಲ್ಲಿ, ಒಳಗಿನೊಳಗೇ ಅಂತ ಬರೀತಿರ್ತೀರಲ್ಲಾ, ಆ ಥರ!’ ಎಂದು ಪಾಯಿಂಟೌಟ್ ಮಾಡಿದರು. ಹೌದೆಂದು ಗೋಣಾಡಿಸಿದೆ. ನಮ್ಮಲ್ಲಿ ಸೂಕ್ಷ್ಮತೆ ಇದ್ದರೆ, ಒಂದಷ್ಟು ಏಕಾಂತ ಕಂಡುಕೊಂಡರೆ ನನ್ನೊಳಗಿರುವ ನಾನನ್ನು ಸದೆಬಡಿಯಬಹುದು ಅಥವಾ ಪಳಗಿಸಬಹುದು! ಇದನ್ನೇ ಅಂತರ್ಯಾತ್ರೆ ಎನ್ನುವುದು. ಹೊರಗೆ ಎಷ್ಟೇ ಸುತ್ತಾಡಿದರೂ ಯಾರೊಂದಿಗೆ ಎಷ್ಟೇ ಆಪ್ತವಾಗಿದ್ದರೂ ಕೊನೆಗೂ ಉಳಿಯುವುದು ನಾನೇ! ಹುಟ್ಟಿನಿಂದ ಸಾಯುವವರೆಗೆ ನಾನಷ್ಟೇ ನನ್ನೊಂದಿಗಿರಲು ಸಾಧ್ಯ; ನಾನಷ್ಟೇ ನನ್ನೊಂದಿಗಿರುವವನೊಂದಿಗೆ ಜವಾಬು-ದಾರಿ. ಆತ ಕೇಳುವ ಪ್ರಶ್ನೆಗೆ ಉತ್ತರಿಸುವವ ನಾನೇ. ನನ್ನೆಲ್ಲ ಪ್ರಶ್ನೆ, ಸಮಜಾಯಿಷಿ ಮತ್ತು ಸಮಾಧಾನಗಳು ಅವನೊಂದಿಗಷ್ಟೇ! ಇದಕಾಗಿಯೇ ರಹಸ್ಯದರ್ಶಿಗಳು, ಸಂತರು, ಗುರುಗಳು, ದಾರ್ಶನಿಕರು, ಆತ್ಮಾನುಸಂಧಾನಿಗರು ಧ್ಯಾನಸ್ಥರಾಗುವರು; ಅಂತರಂಗದ ನಿಜ ಪಯಣದಲಿ ದಾರಿ ಹುಡುಕುತ್ತಾ ಸಾಗುವರು. ಕಂಡಷ್ಟನ್ನು ಉಣಿಸುವರು; ಕಂಡುಂಡದ್ದನ್ನು ಕಾಣಿಸುವರು. ಆದರೆ ನಾವು ಜನ್ಮಪೂರ್ತಿ ಇನ್ನೊಬ್ಬರ ಮೆಚ್ಚುಗೆಗೆ, ಅಭಿಪ್ರಾಯಗಳಿಗೆ ಅದರಲ್ಲೂ ಸದಭಿಪ್ರಾಯಗಳಿಗೆ ಕಾಯುತ್ತಾ ಕೂರುತ್ತೇವೆ. One who believes in himself has no need to convince other (ಸ್ಪಷ್ಟತೆಯಲ್ಲಿದ್ದವನು ಇತರರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿಲ್ಲ) ಎಂಬ ಮಾತು ಲಾವೋತ್ಸೆಯದು. ಶತಮಾನಗಳಷ್ಟು ಹಳೆಯದು ಕೂಡ. ಆದರೂ ನಾವು ಲೋಕಸಂಸಾರಿಗಳು. ನಮ್ಮ ಆತ್ಮಸಂತೋಷಕಿಂತ ಇನ್ನೊಬ್ಬರನ್ನು ಮೆಚ್ಚಿಸಲು ಹೊರಡುವುದೇ ಹೆಚ್ಚು. ನಮ್ಮ ಆಧುನಿಕ ಶಿಕ್ಷಣ, ಧ್ಯೇಯ-ಗುರಿ, ಮಾಡುವ ಉದ್ಯೋಗ, ಸ್ಥಾನಮಾನ, ಅಧಿಕಾರ-ಅಹಂಕಾರ, ಪದವಿ, ಪುರಸ್ಕಾರ, ಪ್ರಶಸ್ತಿ ಎಲ್ಲವೂ ಇದನ್ನೇ ಕೇಂದ್ರೀಕರಿಸಿವೆ. ‘ಬಾಸ್ ಅನ್ನು ಒಪ್ಪಿಸಿ, ಅವರ ಮನಸ್ಸಂತೋಷಪಡಿಸುವುದೇʼ ವೃತ್ತಿಯ ಪರಮೋಚ್ಚ ಕಾಯಕವಾಗಿರುತ್ತದೆ. ಇದು ವೃತ್ತಿಯ ಮಾತಾಯಿತು. ಆಮೇಲಾದರೂ ನಾವು ನಮ್ಮೊಂದಿಗಿರುವಾಗ ಸ್ವಲ್ಪ ಹೊತ್ತು ನಮ್ಮದೇ ಆದ ಸ್ವಂತ ಸಮಯ ಎಂಬುದನ್ನು ಕಾಯ್ದಿರಿಸಿಕೊಂಡು, ಆತ್ಮಾವಲೋಕನಕೆ ಇಳಿಯುವ, ಆತ್ಮಾನಂದ ಹೊಂದುವ ರಸಗಳಿಗೆಗೆ ಮನಸು ಮಾಡಬೇಕು. ಆತ್ಮವಂಚನೆಗೈಯದೇ ನನಗೆ ನಾನೇ ಮುಖಾಮುಖಿಯಾಗಬೇಕು. ಇದಕ್ಕೆ ಬಿಡುವೂ ಬೇಕು; ಅಂತರ್ದನಿಯೊಂದಿಗೆ ಸಂವಾದಿಸುವಂಥ ಧೈರ್ಯ-ಸ್ಥೈರ್ಯಗಳೂ ನಮ್ಮಲ್ಲಿರಬೇಕು. ಈ ಹಿನ್ನೆಲೆಯಿಂದ ಜ್ಞಾನೋದಯ ಎಂದರೆ ಏನು? ಎಂಬ ಪ್ರಶ್ನೆ ಮಾತ್ರ ನನ್ನನ್ನು ಚಿಕ್ಕಂದಿನಿಂದ ಕಾಡುತ್ತಲೇ ಇದೆ. |
|
‘ಬೋಧೀವೃಕ್ಷದ ಕೆಳಗೆ ಬುದ್ಧರಿಗೆ ಜ್ಞಾನೋದಯವಾಯಿತು’ ಎಂದು ನಾವೆಲ್ಲರೂ ಚಿಕ್ಕಂದಿನಿಂದಲೂ ಓದಿಕೊಂಡವರು. ಇದನ್ನೇ ಪರೀಕ್ಷೆಯಲ್ಲಿ ಬರೆದೂ ಬಂದವರು. ಆದರೆ ಸ್ನಾತಕೋತ್ತರ ತರಗತಿಯವರೆಗೂ ‘ಜ್ಞಾನೋದಯ ಎಂದರೆ ಏನು?’ ಎಂದು ಯಾವ ಶಿಕ್ಷಕರೂ ನನ್ನನ್ನು ಹಿಡಿದು ನಿಲ್ಲಿಸಿ ಕೇಳಲಿಲ್ಲ. ವಿಚಿತ್ರವಾದರೂ ಸತ್ಯವೆಂದರೆ ನಮಗಾರಿಗೂ ಈ ಒಂದು ಸಾಲಿನ ಪ್ರಶ್ನೆಗೆ ಒಂದೇ ಸಾಲಿನ ಉತ್ತರ ಗೊತ್ತೂ ಇಲ್ಲ! ‘ಆಸೆಯೇ ದುಃಖಕ್ಕೆ ಮೂಲ’ ಎಂಬುದು ಬುದ್ಧರಿಗಾದ ಜ್ಞಾನೋದಯ ಎನ್ನುತ್ತೇವೆ. ಆದರೆ ‘ಈ ಮಾತನ್ನು ಬುದ್ಧದೇವರು ಎಲ್ಲಿಯೂ ಹೇಳಿಯೇ ಇಲ್ಲ; ಇದು ಕೇವಲ ಆತನ ಹೆಸರಿನಲ್ಲಿ ಚಲಾವಣೆಯಾದ ಕಲ್ಪಿತ ವಾಕ್ಯ’ ಎಂಬುದನ್ನು ಬಹುಶ್ರುತ ವಿದ್ವಾಂಸರಾದ ಶ್ರೀ ಎಸ್ ನಟರಾಜ ಬೂದಾಳು ಅವರು ಪ್ರತಿಪಾದಿಸುತ್ತಾರೆ. ಅದು ಏನೇ ಇರಲಿ, ಗೌತಮ ಬುದ್ಧರು ನೀಡಿದ ಪ್ರವಚನಗಳ ಒಟ್ಟು ಮೊತ್ತದ ಸಾರವನ್ನು ಹೀಗೆ ಸಂಗ್ರಹಿಸಿ, ಬಹಳ ಹಿಂದಿನಿಂದಲೇ ಜನಪ್ರಿಯಗೊಳಿಸಿರುವುದಂತೂ ನಿಜ. ನಮ್ಮ ಆಸೆ, ಆಕಾಂಕ್ಷೆ ಮತ್ತು ಸೀಮಿತ ಚಿಂತನೆಗಳೇ ದುಃಖಕ್ಕೆ ಮೂಲ ಎಂಬುದೇ ಆತನ ಉಪದೇಶಾಮೃತದ ಸಾರ. |
|
ಅಂದರೆ, ತನ್ನನ್ನು ತಾನು ಅರಿಯುವುದು ನಿಜವಾದ ಜ್ಞಾನೋದಯ ಎಂದರೆ ಒಪ್ಪುತ್ತದೆ. ‘ತನ್ನ ತಾನರಿದೊಡೆ ನುಡಿಯೆಲ್ಲ ತತ್ತ್ವ ನೋಡಾ’ ಎಂದಿಲ್ಲವೇ ಅಲ್ಲಮಪ್ರಭುಗಳು. ಅಜ್ಞಾನದ ಅರಿವಾದರೆ ಅದೇ ಜ್ಞಾನೋದಯ ಎಂದರೂ ಸರಿಯೇ. ಆದರೆ ಈ ಅಜ್ಞಾನ ಯಾವುದು? ಇದನ್ನು ಅರಿಯಲು ಜ್ಞಾನ ಬೇಕಲ್ಲವೇ? ಅವರವರ ದೃಷ್ಟಿಯಲ್ಲಿ ಅವರವರ ಬದುಕಿನ ಅನುಭವದ ಹಿನ್ನೆಲೆಯಲ್ಲಿ ಜ್ಞಾನೋದಯದ ವ್ಯಾಖ್ಯಾನ ಬೇರೆಯೇ ಆಗಬಹುದು. ಇದನ್ನು ಸಾರ್ವತ್ರಿಕ ಮಾಡಲಾಗದು. ಏಕೆಂದರೆ ನನ್ನ ಹುಟ್ಟು, ಬಾಲ್ಯ, ಪರಿಸರ, ಬೆಳೆಸಿದ ತಾಯ್ತಂದೆಯರು, ಬಂಧು ಬಳಗ, ಕೊಟ್ಟ ಶಿಕ್ಷಣ, ನೆರೆ ಹೊರೆ, ಎದುರಾದ ಅನುಭವಗಳು ಪ್ರತಿಯೊಬ್ಬರಿಗೂ ವಿಭಿನ್ನ. ಅನುಭವ ಮತ್ತು ತಿಳಿವಿನ ಹಿನ್ನೆಲೆಯಲ್ಲಿ ತಮ್ಮದೇ ಆದ ಜೀವನದರ್ಶನವೊಂದನ್ನು ರೂಪಿಸಿಕೊಂಡಿರುತ್ತಾರೆ. ಅವರವರ ಮಟ್ಟಿಗೆ ಅದು ಸರಿಯೇ. |
|
ಇಷ್ಟಕೂ ನಮ್ಮ ಅಭಿಪ್ರಾಯಗಳೂ ಕಾಲಾನಂತರ ಬದಲಾಗಬಹುದು. ಓದುವಾಗ ಇದ್ದ ಮನಸ್ಥಿತಿಯು ದುಡಿಯುವಾಗ ಇಲ್ಲದಿರಬಹುದು. ಅಂತೆಯೇ ಬದುಕಿನ ದೃಷ್ಟಿಕೋನಗಳಾಗಲೀ ಆದ್ಯತೆಗಳಾಗಲೀ ಬದಲಾಗುತ್ತಿರುತ್ತವೆ. ಫ್ಯಾಷನ್ನುಗಳು ಬದಲಾದ ಹಾಗೆ, ಬಾಳುವೆಯ ಪ್ಯಾಷನ್ಗಳೂ ಬದಲಾಗುತ್ತಿರುತ್ತವೆ. ಏನೋ ಆಗಬೇಕೆಂದು ಹೊರಟು ಇನ್ನೇನೋ ಆಗಿರುತ್ತೇವೆ. ನಾವು ಓದಿಕೊಂಡು ಬಂದದ್ದಕ್ಕೂ ಮಾಡುತ್ತಿರುವ ವೃತ್ತಿಗೂ ತಾಳಮೇಳವೇ ಇಲ್ಲದಿರಬಹುದು. ಹುಚ್ಚುಚ್ಚು ಆಸೆ ಆಕಾಂಕ್ಷೆಗಳು ನಮ್ಮನ್ನು ಮುತ್ತಿ, ಅದರ ಈಡೇರಿಕೆಗಾಗಿ ಏನೆಲ್ಲಾ ಕಳೆದುಕೊಂಡಿರಲೂಬಹುದು. ಕಾಲಕ್ರಮೇಣ, ಕಾಲಕಳೆದಂತೆಲ್ಲಾ, ನಾವು ಬದುಕಿನ ನೋವು ನಲಿವುಗಳಿಗೆ ಮುಕ್ತವಾಗಿ ತೆರೆದುಕೊಂಡಂತೆಲ್ಲಾ ಅನುಭವ ಶ್ರೀಮಂತಿಕೆಯಿಂದ ಪಕ್ವಗೊಂಡಂತೆಲ್ಲಾ ‘ಏನೆಲ್ಲ ಭ್ರಮೆಗಳಲ್ಲಿ ಬದುಕನ್ನು ಸವೆಸಿದೆವಲ್ಲಾ!’ ಎಂದು ನೊಂದುಕೊಳ್ಳಲೂ ಬಹುದು; ಅಥವಾ ನಕ್ಕು ಸುಮ್ಮನಾಗಲೂ ಬಹುದು. |
|
ಕಾವ್ಯ, ಕತೆ, ಕಾದಂಬರಿ, ಪ್ರಬಂಧವೊಂದನ್ನು ಹತ್ತಾರು ವರುಷಗಳ ನಂತರ ಮತ್ತೊಮ್ಮೆ ಓದಿದರೆ ನಮಗಾಗುವ ಅನುಭವ ವಿಶೇಷವೇ ಬೇರೆ. ಅದೇ ಕಾದಂಬರಿ ಅಥವಾ ಸಾಹಿತ್ಯಕೃತಿ. ಆದರೆ ಅನಿಸಿದ, ತಿಳಿದ, ರಸಾನಂದ ಪಡೆದ ಸ್ವರೂಪದಲ್ಲಿ ವ್ಯತ್ಯಾಸವುಂಟಾಗುತ್ತದೆ. ಅದೇ ರೀತಿ ಎಷ್ಟೋ ವರುಷಗಳ ನಂತರ ಎರಡನೆಯ ಬಾರಿ ಸಿನಿಮಾ ನೋಡಿದರೂ ಆಗುವ ಅನುಭವದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅಂದರೆ ನಾವು ಬೆಳೆದಂತೆಲ್ಲಾ, ಬದಲಾದಂತೆಲ್ಲಾ ನಮ್ಮ ಬದುಕಿನ ಅನುಭವವೂ ಬೇರೆ ಬೇರೆಯಾಗುವುದು. ತೀರ್ಮಾನಗಳಲ್ಲಿ ಮಾರ್ಪಾಡಾಗಬಹುದು, ತಿದ್ದುಪಡಿಗಳಾಗಬಹುದು. ಸಂಪೂರ್ಣ ತದ್ವಿರುದ್ಧ ಅಭಿಪ್ರಾಯಗಳಲ್ಲಿ ನೆಲೆ ನಿಲ್ಲಬಹುದು. ಹಾಗಾಗಿ, ಜ್ಞಾನೋದಯ ಎಂದರೆ ಏನು? ಎಂಬುದಕ್ಕೆ ಒಂದು ಸಾಲಿನ ಉತ್ತರ ಸಾಧ್ಯವಿಲ್ಲ. ಭ್ರಮೆಗಳನ್ನು ಕಳಚುತ್ತಾ ಸಾಗುವುದು ಸಹ ಜ್ಞಾನೋದಯವೇ ಆಗಬಹುದು. ಆಗ, ಭ್ರಮೆಗಳೆಂದರೆ ಯಾವುವು? ಎಂಬ ಪ್ರಶ್ನೆ ಎದುರಾಗುವುದು. ಆಗಿನದು ಕೇವಲ ಭ್ರಮೆ ಎಂಬ ತಿಳಿವು ಮೂಡುವುದೂ ಜ್ಞಾನೋದಯವೇ! ಇದು ಒಂದು ದಿನದ ಮಾತಲ್ಲ; ಪ್ರತಿ ದಿನವೂ ನಮಗೆ ಹೊಸದೇ. ಹೊಸ ಅನುಭವ ಪ್ರಮಾಣಗಳೇ. ಕನಸು ಕಾಣುವಷ್ಟು ಹೊತ್ತೂ ನಮಗೆ ಅದು ಭ್ರಮೆಯಲ್ಲ; ಆದರೆ ಎಚ್ಚೆತ್ತ ಮೇಲೆ ಕನಸು ಕಂಡದ್ದು, ಅದಷ್ಟನ್ನು ನಿಜವೆಂದು ನಂಬಿದ್ದು ಭ್ರಮೆ ಎನಿಸಿಕೊಳ್ಳುತ್ತದೆ. ತತ್ತ್ವಚಿಂತಕರು ಹೇಳುವಂತೆ, ಈ ಬದುಕನ್ನು ಶಾಶ್ವತವೆಂದುಕೊಳ್ಳುವುದೇ ದೊಡ್ಡ ಭ್ರಮೆ! ನನ್ನದು ಭ್ರಮೆಯೋ? ಅಲ್ಲವೋ? ಎಂದು ಯಾರನ್ನೋ ಹುಡುಕಿಕೊಂಡು ಹೋಗಿ ಕೇಳುವುದು ಇನ್ನೊಂದು ಭ್ರಮೆ. ಹಾಗಾಗಿ, ಸದಾ ನನ್ನಲ್ಲೇ ನೆಲೆಯಾಗಿ ಇರುವ ಇನ್ನೊಬ್ಬನನ್ನು ಏಕಾಂತದಲ್ಲಿ ಕೇಳಿಕೊಳ್ಳಬೇಕು. ಹಾಗೆ ಕೇಳಿಕೊಂಡಾಗ ಲಭಿಸುವ ವಿಶೇಷ ಅನುಭೂತಿಯೇ ಜ್ಞಾನದ ಉದಯ. ಕೆಲವರು ಕಾರು ಓಡಿಸುವಾಗ ನಾನು ವಿಮಾನದ ಪೈಲಟ್ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ರಸ್ತೆಗೆ ಇವರ ಭ್ರಮೆ ಗೊತ್ತಿರುವುದಿಲ್ಲ! ‘ಭ್ರಮೆಗಳೇ ಬದುಕಾಗಬಾರದು ಎಂದೆ; ಕೆಲವರು ಇದನ್ನೂ ಒಂದು ಭ್ರಮೆ ಎನ್ನಬಹುದೇ? ಎಂದರು!’ |
|
ಹುಟ್ಟಿನಿಂದ ಸಾಯುವವರೆಗೆ ನಾವು ನಮ್ಮೊಂದಿಗೆ ಮಾತ್ರ ಇರುತ್ತೇವೆ ಎಂಬುದನ್ನು ಜ್ಞಾಪಿಸಿಕೊಳ್ಳುತ್ತಿರಬೇಕು. ನಾವು ಏನು? ನಮ್ಮ ಬಯಕೆ ಬವಣೆಗಳೇನು? ನಮ್ಮ ತಪ್ಪು ಒಪ್ಪುಗಳೇನು? ನಮ್ಮ ಆರೋಗ್ಯದ ಸ್ಥಿತಿಯೇನು? ನಮಗೇನು ಇಷ್ಟ? ಕಷ್ಟ? ಎಂಬುದು ನಮಗೆ ಮಾತ್ರ ಗೊತ್ತಿರುವಂಥದು. ನಮ್ಮೊಳಗೆ ತುಡಿಯುವ ಮತ್ತು ಮಿಡಿಯುವ ಸಂಗತಿಗಳು ಯಾವುವು? ಎಂಬುದು ನಮಗಲ್ಲದೇ ಇನ್ನಾರಿಗೆ ಗೊತ್ತಾಗಲು ಸಾಧ್ಯ? ನಾವು ಬಾಯಿಬಿಟ್ಟು ಹೇಳಿಕೊಳ್ಳುವತನಕ! ಇಷ್ಟಕೂ ಎಲ್ಲವನೂ ಬಾಯಿಬಿಟ್ಟು ಹೇಳಲಾಗದು! ಹೇಳಿದರೆ ಅದರ ಮಹತ್ವ ಹೊರಟು ಹೋಗುವುದು. ಅಥವಾ ಹೇಳಲು ಆಗದೇ ಒದ್ದಾಡುವುದು. ಇದು ಒಂದಲ್ಲ ಒಂದು ಬಗೆಯಲ್ಲಿ ಎಲ್ಲರಿಗೂ ಆಗಿರುವ ಅನುಭವ. ಹಾಗಿರುವಾಗ ನಮ್ಮ ಶಕ್ತಿ ಸಾಮರ್ಥ್ಯಗಳು ನಮಗಷ್ಟೇ ಗೊತ್ತು; ಹಾಗೆಯೇ ನಂನಮ್ಮ ಇತಿಮಿತಿಗಳು ಕೂಡ! |
|
ತುಂಬ ಸಲ ಅಂದುಕೊಳ್ಳುತ್ತಿರುತ್ತೇನೆ: ‘ಭ್ರಮೆಗಳನ್ನು ಕಳಚುತ್ತಾ ಹೋಗುವುದೇ ನಿಜ ಜ್ಞಾನೋದಯ.’ ಏನೇನೋ ಅಂದುಕೊಂಡದ್ದು, ಅದು ಹಾಗಲ್ಲ ಎಂಬ ವಾಸ್ತವ ಸತ್ಯದ ಅರಿವು. ಇದನ್ನೇ ಜ಼ೆನ್ಮಾರ್ಗವು ಖಾಲಿಯಾಗುವುದು ಎಂದಿದೆ. ತುಂಬಿಸಿಟ್ಟುಕೊಂಡದ್ದನ್ನು ಖಾಲಿಮಾಡಿಕೊಳ್ಳುವುದೇ ನಿಜವಾದ ವಿವೇಕದ ಅರಿವು. ಯಾರೂ ತುಳಿಯದ ಹಾದಿಯಲ್ಲಿ ಅರಳಿದ ಹೂವೊಂದು ತಾನೇ ಮರವೆಂದು ಭಾವಿಸಿದಂತೆ! ಹೂವಾಗಲು ಗಿಡಮರ ಬೇಕು; ಆದರೆ ಹೂವೇ ಮರವಲ್ಲ! ಇದು ಸತ್ಯದ ಸಾಕ್ಷಾತ್ಕಾರ. ಆ ಗಿಡದ, ಆ ಮರದ ಮೂಲಕವೇ ಹೂವರಳಿದರೂ ಅದೇ ಗಿಡವಲ್ಲ; ಹೂವಿನಲ್ಲಿ ಗಿಡದ ಅಂಶಗಳೆಲ್ಲವೂ ಸುಪ್ತವಾಗಿ ಅವಿತಿವೆ. ಹೂವಾಗಲು ಆ ಗಿಡದ ಎಲ್ಲವನೂ ಬಳಸಿಕೊಂಡಿದೆ. ಆ ಗಿಡವೂ ಅಷ್ಟೇ: ಹೂವಿನ ಮೂಲಕ ಗುರುತಿಸಿಕೊಂಡಿದೆ. ಹೂ ಬಿಟ್ಟು ತನ್ನನ್ನು ಕಾಣಿಸಿಕೊಂಡಿದೆ. ಆದರೆ ಹೂವು ಗಿಡವಲ್ಲ ಎಂಬುದೇ ಭ್ರಮೆ ಹರಿದ ವಾಸ್ತವ. ಆ ಹೂವು ಅರಳಿ, ಕಾಯಾಗಿ, ಹಣ್ಣಾಗಿ, ಕೊನೆಗೆ ಗಾಳಿ ತೂಗುವ ಭಾರಕ್ಕೆ ಅಲ್ಲೇ ಬಿದ್ದು, ಅದೇ ಗಿಡಮರಕ್ಕೆ ಗೊಬ್ಬರವಾಗುವಂತೆ ನಮ್ಮೀ ಬದುಕು! ಎಲ್ಲಿಂದ ಬಂದೆವೋ ಅಲ್ಲಿಗೇ ಹೋಗುತ್ತೇವೆ. ಎಲ್ಲಿಗೆ ಹೋಗುತ್ತೇವೆಂಬುದು ಗೊತ್ತಿಲ್ಲದಿದ್ದರೂ ಮತ್ತು ಎಲ್ಲಿಂದ ಬಂದೆವೆಂಬುದು ಸಹ ಗೊತ್ತಿಲ್ಲದಿದ್ದರೂ! ಇದೊಂಥರ ವಿಚಿತ್ರ ಅಧ್ಯಾತ್ಮ. ಅನುಭವಕ್ಕೆ ಬರುತ್ತದೆ; ಆದರೆ ಸ್ಥಿರೀಕರಿಸಲು ಆಗದು. ಅದಕ್ಕೆ ಇದನ್ನು ಅನುಭಾವ ಎಂದದ್ದು. ಇದನ್ನೇ ಬಸವಣ್ಣನವರು ‘ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿ ಲಿಂಗವೆಂಬ ಎಲೆಯಾಯಿತು. ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತು. ಆಚಾರವೆಂಬ ಕಾಯಾಯಿತು. ನಿಷ್ಪತ್ತಿಯೆಂಬ ಹಣ್ಣಾಯಿತು. ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡನು’ ಎಂದು ಕಾವ್ಯಾಧ್ಯಾತ್ಮವನ್ನು ಪ್ರತಿಮಾತ್ಮಕವಾಗಿ ಕಟ್ಟಿ ಕೊಡುತ್ತಾರೆ. |
|
ಇದು ಗಹನವಾದ ತತ್ತ್ವಶಾಸ್ತ್ರೀಯ ನೆಲೆಯ ಜ್ಞಾನೋದಯ ಎನಿಸಬಹುದು. ಸಾಮಾನ್ಯರಿಗೆ ಭಾರವೋ ಹೊರೆಯೋ ಆಗಬಹುದು. ಲೌಕಿಕ ನೆಲೆಯಲ್ಲೂ ಜ್ಞಾನೋದಯವನ್ನು ಅರ್ಥೈಸಬಹುದು. ಉದಾಹರಣೆಗೆ, ಒಂದು ನೂರು ರೂಪಾಯಿಯನ್ನು ಕೊಟ್ಟು ಹೊಟೆಲಿನಲ್ಲಿ ಒಂದು ಸಲ ಊಟ ಮಾಡಿದೆವು ಎಂದಿಟ್ಟುಕೊಳ್ಳೋಣ. ಎಷ್ಟು ಬಗೆಯ ಐಟಂಗಳು, ಅವುಗಳನ್ನು ಸಿದ್ಧಪಡಿಸಲು ಬಳಸಿದ ಆಹಾರ ಪದಾರ್ಥಗಳು, ದವಸ ಧಾನ್ಯಗಳು, ತರಕಾರಿಗಳು, ಹಾಲು, ಮೊಸರು, ತುಪ್ಪ, ಎಣ್ಣೆ ಮೊದಲಾದವುಗಳು. ವಗ್ಗರಣೆಗೆ ಬಳಸಿದ ಸಾಸುವೆ, ಉದ್ದಿನಬೇಳೆ, ಕಡಲೇಬೇಳೆ ಮುಂತಾದ ದಿನಸಿ ಪದಾರ್ಥಗಳು. ಇವನ್ನು ಬೆಳೆದವರು ಯಾರು? ಎಲ್ಲಿ ಬೆಳೆದರು? ಹೇಗೆ ಸಾಗಾಣಿಕೆಯಾಯಿತು? ನಾವೇನಾದರೂ ಆಲೋಚನೆ ಮಾಡುತ್ತೇವೆಯೇ? ‘ಊಟ ಚೆನ್ನಾಗಿತ್ತು; ಕೊಟ್ಟ ದುಡ್ಡಿಗೆ ಮೋಸವಿಲ್ಲ’ ಎಂದುಕೊಂಡು ಜಾಗ ಖಾಲಿ ಮಾಡುತ್ತೇವೆ. ಇದು ನಮ್ಮ ಲೌಕಿಕ ಜೀವನ. ಆದರೆ ನಾವು ಬಿಡುವಾಗಿದ್ದಾಗ, ಲೋಕ ಚಿಂತನೆ ಮಾಡುವಾಗ ಇದನ್ನು ಕೇಳಿಕೊಂಡರೆ ಎಷ್ಟೆಲ್ಲ ಸಂಗತಿಗಳು ಮನದಟ್ಟಾಗುತ್ತವೆ! ಭತ್ತ ಬೆಳೆದ ರೈತ, ಆತನ ಶ್ರಮ, ಭೂಮಿ, ಮಳೆ, ಬೆಳೆ, ಬಿತ್ತನೆ ಬೀಜದಿಂದ ಹಿಡಿದು ನಾಟಿ ಮಾಡುವುದು, ಕಳೆ ಕೀಳುವುದು, ನೀರುಣಿಸುವುದು, ಕಟಾವು ಮಾಡುವುದು, ಅದಕ್ಕೆ ತೊಡಗಿಸಿಕೊಂಡ ಶ್ರಮಜೀವಿಗಳು, ಭತ್ತವನ್ನು ತುಂಬಿ, ರೈಸ್ಮಿಲ್ಲಿಗೆ ಸಾಗಿಸಿ, ಅಲ್ಲಿ ಅಕ್ಕಿಯಾಗಿಸಿ, ಮೂಟೆಗಳಲ್ಲಿ ತುಂಬಿ ಮಾರುಕಟ್ಟೆಗೆ ಸಾಗಿಸುವತನಕ ಹಿಡಿದ ಕೆಲಸಗಳು. ಇನ್ನು ಖಾದ್ಯ ಪದಾರ್ಥ ತಯಾರಿಸಲು ಬಳಸಿದ ತರಕಾರಿಗಳದು ಇನ್ನೊಂದು ಬಗೆಯ ರೋಚ-ಕತೆ. ಈಗಂತೂ ಎಲ್ಲಿಯೋ ಬೆಳೆದದ್ದನ್ನು ಇನ್ನೆಲ್ಲಿಗೋ ಸಾಗಣೆ ಮಾಡುವ ಸಾರಿಗೆ ಸೌಕರ್ಯಗಳಿರುವ ದಿನಮಾನ. ಅಂದರೆ ನಾವು ಒಂದು ಊಟಕ್ಕಾಗಿ ನೂರು ರೂಪಾಯಿಯಷ್ಟು ಹಣವನ್ನು ಕೊಟ್ಟು ಅಥವಾ ತೆತ್ತು (ಇವೆರಡಕ್ಕೂ ಬೇರೆ ಅರ್ಥಗಳಿವೆ.) ಉಂಡು ಬರುತ್ತೇವೆ. |
|
ಆದರೆ ಅದಕ್ಕಾಗಿ ಬಳಕೆಯಾದ ಪದಾರ್ಥಗಳೆಷ್ಟು? ಸಿದ್ಧಪಡಿಸಿದವರ ಶ್ರಮವೆಷ್ಟು? ಹೊಟೆಲಿಗೆ ಬಂಡವಾಳ ಹಾಕಿದ ಮಾಲೀಕನ ಪೂರ್ವಸಿದ್ಧತೆ, ಕಟ್ಟಡ ಬಾಡಿಗೆಗೆ ಕೊಟ್ಟಿರುವ ಮಾಲೀಕ, ಬೋರ್ಡು ಬರೆದು ಕೊಟ್ಟವ, ಅಡುಗೆ ಭಟ್ಟ, ಸಪ್ಲೈಯರು, ಕ್ಲೀನರು, ತರಕಾರಿ ತಂದು ಕೊಡುವವರು ಮತ್ತು ಹೆಚ್ಚುವವರು, ಪಾತ್ರೆ ತೊಳೆಯುವವರು, ಫರ್ನೀಚರು ತಂದಿಟ್ಟವರು, ತ್ಯಾಜ್ಯ ವಿಲೇವಾರಿ ಮಾಡುವವರು – ಹೀಗೆ ಎಲ್ಲದಕ್ಕೂ ಸಂಬಳ, ಸಂಭಾವನೆ ಮತ್ತು ಶುಲ್ಕ ಕೊಡುತ್ತಾರೇನೋ ಸರಿ. ಇದು ವ್ಯಾಪಾರ ಮತ್ತು ವ್ಯವಹಾರ. ಲೋಕ ನಡೆಯುತ್ತಿರುವುದೇ ಹೀಗೆ. ಇದರಲ್ಲೇನು ವಿಶೇಷ? ಎಂದು ನೀವು ಕೇಳಬಹುದು. ಆದರೆ ನನ್ನ ಆಲೋಚನೆಯಿರುವುದು: ಹಣದಾಚೆಗೂ ಇರುವ ಪಾರಸ್ಪರಿಕ ಸಂಬಂಧಗಳಲ್ಲಿ! ನಾವು ದುಡ್ಡು ಕೊಟ್ಟು ತಿಂದು ಬಂದು ಬಿಡುತ್ತೇವೆ; ಒಂದೇ ಮಾತಿನಲ್ಲಿ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಫೀಡ್ಬ್ಯಾಕು ಕೊಟ್ಟು ಬಿಡುತ್ತೇವೆ. ಆದರೆ ಈ ಎಲ್ಲದರ ಪ್ರೋಸೆಸು ಇಷ್ಟು ಸರಳವೇ? ಎಲ್ಲಿಯೋ ಬೆಳೆದ ದವಸ ಧಾನ್ಯ ಪದಾರ್ಥಗಳು ಒಂದು ಕಡೆ ಸೇರಿ, ನಮ್ಮ ಹಸಿವನ್ನೂ ರುಚಿಯನ್ನೂ ತಣಿಸುವ ವಿದ್ಯಮಾನದ ಹಿಂದೆ ಇರುವ ಸದ್ದಿಲ್ಲದ ಪವಾಡಕ್ಕೆ ನಾನು ಮೂಕವಿಸ್ಮಿತ. ಕೇವಲ ದುಡ್ಡು ಕೊಟ್ಟ ಮಾತ್ರಕೇ ಲೋಕದ ವಿದ್ಯಮಾನ ಅರ್ಥವಾಗಿ ಬಿಡುತ್ತದೆಂಬ ದುರಹಂಕಾರದಲ್ಲಿ ನನಗೆ ನಂಬಿಕೆಯಿಲ್ಲ. ಹಣದಾಚೆಗೂ ಇರುವ ಅವಿನಾಭಾವವನ್ನು ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದೇನೆ. ‘ಎತ್ತಣ ಮಾಮರ ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯ! ಬೆಟ್ಟದ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯಾ! ಗುಹೇಶ್ವರಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ!?’ ಎಂದು ಅಲ್ಲಮಪ್ರಭುದೇವರು ಉತ್ತರ ಗೊತ್ತಿದ್ದರೂ ಸೋಜಿಗದಿಂದ ಪ್ರಶ್ನಿಸಿಕೊಳ್ಳುವ ಧಾಟಿಯನ್ನು ಮನದಟ್ಟು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. |
|
ಒಂದು ಪೆನ್ನಿನ ಬೆಲೆ ಹತ್ತು ರೂಪಾಯಿ. ಆದರೆ ಹತ್ತು ರೂಪಾಯಿಯಲ್ಲಿ ನಾನು ಒಂದು ಪೆನ್ನನ್ನು ತಯಾರಿಸಲು ಸಾಧ್ಯವೆ? ಖಂಡಿತಾ ಸಾಧ್ಯವಿಲ್ಲ. ಇಲ್ಲಿಯೇ ಇರುವ ವ್ಯತ್ಯಾಸ: ಪೆನ್ನಿನ ಬೆಲೆಯು ಪೆನ್ನಿನ ಮೌಲ್ಯವಲ್ಲ! ಹತ್ತಲ್ಲ, ನೂರಲ್ಲ, ಸಾವಿರ ರೂಪಾಯಿ ವ್ಯಯಿಸಿದರೂ ನಾನು ಅಂಥದೇ ಪೆನ್ನನ್ನು ತಯಾರಿಸಲು ಸಾಧ್ಯವಾಗದು. ಏಕೆಂದರೆ ಅದಕೊಂದು ತಯಾರಿಕಾ ಘಟಕ ಬೇಕು. ಕಚ್ಚಾವಸ್ತು ಬೇಕು. ಮೌಲ್ಡ್ ಮಾಡುವ ಆಧುನಿಕ ಪರಿಕರಗಳು ಬೇಕು. ಬೇಕಾದರೆ ಇನ್ನೊಂದು ಅಂಗಡಿಗೆ ಹೋಗಿ ಅಂಥದೇ ಪೆನ್ನನ್ನು ಖರೀದಿ ಮಾಡಿ ಬರಬಹುದು. ಆದರೆ ನಾನೇ ಸ್ವತಃ ತಯಾರಿಸಲು ಆಗದು! ಇಲ್ಲಿಯೇ ನಮ್ಮ ತಿಳಿವಿಗೆ ಬರುವುದೆಂದರೆ, ಹತ್ತು ರೂಪಾಯಿಯು ಪೆನ್ನಿನ ವ್ಯಾಪಾರೀ ಬೆಲೆಯೇ ವಿನಾ ಪೆನ್ನಿನ ಮೌಲ್ಯವನ್ನು ಹೇಳುವುದಿಲ್ಲ!! ಎಲ್ಲಿಯವರೆಗೆ ನಾವು ನಮ್ಮ ಬದುಕಿನ ಮೌಲ್ಯವನ್ನು ಅರಿಯುವುದಿಲ್ಲವೋ ಅಲ್ಲಿಯವರೆಗೂ ನಾವು ಅಜ್ಞಾನಿಗಳೇ. ಎಲ್ಲವನ್ನೂ ಹಣದಿಂದ ಅಳೆಯಲು ಹೊರಟ ಲೌಕಿಕನ ದುಃಸ್ಥಿತಿಯಿದು. ಲೋಕವೇ ಸಂತೆಯ ವ್ಯಾಪಾರದಲ್ಲಿ ಮಗ್ನವಾಗಿದೆ; ಮೋಜುಮಸ್ತಿಗಳ ಕತ್ತಲ ಕೂಪದಲ್ಲಿ ನಗ್ನವಾಗಿದೆ. ಮೌಲ್ಯಗಳ ಅರಿವಿಲ್ಲದ ಮಂದಿ, ಬದುಕನ್ನು ಕೇವಲವಾಗಿ ಪರಿಗಣಿಸಿದ್ದಾರೆ. ನಿನ್ನ ಬಳಿ ದುಡ್ಡಿಲ್ಲದಿರುವುದರಿಂದ ಸಂನ್ಯಾಸತ್ವದ ಮಾತಾಡುತ್ತಿರುವೆಯೆಂದು ಅಣಕಿಸುತ್ತಿದೆ. ಎಲ್ಲವೂ ವ್ಯಾಪಾರದ ವಸ್ತುವಾಗಿ, ಸಂಬಂಧಗಳು ಸಡಿಲಾಗಿ, ಯಾವುದನ್ನೂ ಗೌರವಿಸದ ಅತಂತ್ರ ಸ್ಥಿತಿಗೆ ನಮ್ಮ ಇಂದಿನ ವಾಣಿಜ್ಯಮಯ ಜಗತ್ತು ದೂಡಿದೆ. ಈ ಮನಸ್ಥಿತಿಯಿಂದಾಗಿ ಜನ ಮರುಳು, ದುಡ್ಡು ಮಾಡಲು ಹೊರಡುತ್ತದೆ; ನೀತಿಮೌಲ್ಯಗಳನ್ನು ಗಾಳಿಗೆ ತೂರಿ! ದುಡ್ಡಿಲ್ಲದಿದ್ದರೆ ಕಾಲಕಸ ಎಂಬರಿವು ಒಂದು ಕಡೆ; ದುಡ್ಡು ಮಾಡಿ ಎಲ್ಲವನೂ ಕೊಳ್ಳುವ ಹಪಾಹಪಿ ಇನ್ನೊದೆಡೆ. ಇವೆರಡರ ನಡುವೆ ಇರುವ ಅಶಾಶ್ವತ ಬದುಕು ಅಣಕಿಸಿ ನಗುತ್ತಿರುತ್ತದೆ; ಮನುಜ! ನೀನೇ ಗ್ಯಾರಂಟಿಯಿಲ್ಲ. ಬೆಳಗ್ಗೆ ಮನೆ ಬಿಟ್ಟು ಹೋದವನು ಮತ್ತೆ ಮನೆಗೆ ಬರುವುದೇ ಖಚಿತವಿಲ್ಲ. ಎಲ್ಲೆಲ್ಲಿಯೂ ಅಪಘಾತಗಳು, ಅವಘಡಗಳು, ಅನಾಹುತಗಳೇ ವರದಿಯಾಗುತ್ತಿರುವುದರಿಂದ ಕ್ಷೇಮವಾಗಿ ಮನೆ ತಲಪಿದರೆ ಪ್ರತಿದಿನವೂ ಹೊಸ ಜನ್ಮವೇ. ಸುರಕ್ಷಿತವಾಗಿ ಮನೆ ಸೇರಿದರೆ ಅಂದಿನ ದಿನದ ಜನ್ಮ ಸಾರ್ಥಕ ಎಂದಾಗಿದೆ. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನʼ ಎಂದಿಲ್ಲವೇ ಕವಿ ಬೇಂದ್ರೆಯವರು! |
|
ಜೊತೆಗೆ ಎಲ್ಲೆಲ್ಲೂ ಆಡಂಬರವೇ ಮನೆ ಮಾಡಿದೆ. ಸ್ವಪ್ರತಿಷ್ಠೆ ಇನ್ನೊಂದೆಡೆ. ಸರೀಕರ ಮುಂದೆ ತಲೆಯೆತ್ತಿ ನಿಲ್ಲಲು ಹರಸಾಹಸ ಪಡುವ, ಅದಕಾಗಿ ಏನು ಬೇಕಾದರೂ ಮಾಡುವ ಜಾಯಮಾನಕ್ಕೆ ಒಗ್ಗಿ ಹೋಗಿದ್ದೇವೆ. ನಮ್ಮನ್ನು ಇನ್ನೊಬ್ಬರ ಮೂಲಕ ಗುರುತಿಸಿಕೊಳ್ಳುವ ರೋಗವೇ ಎಲ್ಲ ಕಡೆಯಲ್ಲೂ! ಇನ್ನೊಬ್ಬರು ನಮ್ಮನ್ನು ಮೆಚ್ಚಿದರೆ ಖುಷಿ; ಇನ್ನೊಬ್ಬರು ತೆಗಳಿದರೆ ಮಸಿ. ಇನ್ನೊಬ್ಬರಿಂದ ಹೊಗಳಿಸಿಕೊಳ್ಳಲು ನಿರಂತರ ಪ್ರಯತ್ನ ಪಡುತ್ತೇವೆ. ಮೊದಲೇ ಸಾಲ ಮಾಡಿ ಮನೆ ಕಟ್ಟಿಸಿಕೊಳ್ಳುತ್ತಿರುವಾಗ ಮತ್ತೂ ಸಾಲ ಮಾಡಿ ಅಲಂಕಾರಕ್ಕೆ ದುಂದುವೆಚ್ಚ ಮಾಡುತ್ತೇವೆ. ಮನೆಯು ವಾಸಯೋಗ್ಯವಾಗಿರಬೇಕು, ಪ್ರಥಮತಃ ಅನುಕೂಲಕರವಾಗಿರಬೇಕು. ವಾಸಿಸುವ ನಮ್ಮ ಅಗತ್ಯ ಮತ್ತು ಅದ್ಯತೆಗಳಿಗೆ ಅದು ಪೂರಕವಾಗಿರಬೇಕು. ಎಂದೋ ಒಂದು ದಿನ ಬಂದು, ಇದ್ದು ಹೋಗುವ ನೆಂಟರಿಷ್ಟರು ಶ್ಲಾಘಿಸಲೆಂದು ಸಿಂಗಾರ ಬಂಗಾರ ಮಾಡಲು ಹಾತೊರೆಯುತ್ತೇವೆ. ಈ ವೈಭವವು ಕೆಲವೊಮ್ಮೆ ವಿಶೇಷವಾಗಿಯೂ ವಿಚಿತ್ರವಾಗಿಯೂ ಇದ್ದು, ನೋಡಿದವರ ಗಮನ ಸೆಳೆಯುವಂತಿರಬೇಕೆಂದು ಬಯಸುತ್ತೇವೆ. ತರ್ಟೀ ಫಾರ್ಟೀ ಸೈಟಲ್ಲಿ ಮನೆ ಕಟ್ಟಿಕೊಂಡು ವಾಹನ ನಿಲ್ಲಲು ಜಾಗವಿಲ್ಲದಂತೆ ಮಾಡಿಕೊಂಡಿರುತ್ತೇವೆ. ಮನೆಯ ವರಾಂಡದಲ್ಲೇ ದೊಡ್ಡದೊಂದು ಶಿವನ ವಿಗ್ರಹವನಿಟ್ಟು, ತಲೆ ಮೇಲೆ ಗಂಗೆ ತೊಟ್ಟಿಕ್ಕುವಂತೆ ನೋಡಿಕೊಂಡು, ಬಂದವರು ‘ಮನೆಗೆ ಬಂದರೋ? ದೇಗುಲಕ್ಕೆ ಬಂದರೋ’ ತಿಳಿಯದಂತೆ ಪೆಕರು ಮಾಡಿ, ‘ಹೆಂಗೆ ನಾವು?’ ಅಂತ ಹುಬ್ಬು ಕುಣಿಸುತ್ತೇವೆ. ‘ನಿಮ್ಮ ಮನೆಯಲ್ಲಿ ಮೂರು ವಾಹನಗಳಿವೆಯಲ್ಲಾ? ಎಲ್ಲಿ ನಿಲ್ಲಿಸುತ್ತೀರಿ?’ ಎಂದು ಕೇಳಿದರೆ ಮನೆಯ ಮುಂದಿನ ಇನ್ನೊಂದು ಸೈಟಿನತ್ತ ಬೆರಳು ತೋರುತ್ತಾರೆ. ಇಂಥ ಮೂರ್ಖರಿಗೆ ಜ್ಞಾನೋದಯವಾಗುವುದೇ ಇಲ್ಲ. |
|
ನಾವು ಅರಮನೆಯನ್ನೇ ಕಟ್ಟಿಸಿಕೊಳ್ಳಬಹುದು; ಅಥವಾ ಅರಮನೆಯಂತೆಯೇ ಸಿಂಗರಿಸಬಹುದು. ಆದರೆ ಗೃಹಪ್ರವೇಶದಂದು ಬಂದವರು ಉಂಡು, ತಿಂದು, ಮುಟ್ಟಿ, ತಟ್ಟಿ, ಹೊಗಳಿ, ಮುಯ್ಯಿ ಕೈಗಿಟ್ಟು ಹೊರಟು ಬಿಡುತ್ತಾರೆ. ದಿನವೂ ವಾಸ ಮಾಡುವುದು ನಾವು ತಾನೆ? ಅನುಕೂಲವೇ ಇಲ್ಲದಿದ್ದ ಮೇಲೆ ಅಲಂಕಾರ ಕಟ್ಟಿಕೊಂಡು ಏನು ಮಾಡುವುದು? ಒಂದು ದಿನದ ಬಾಳಿಗೆ ವರುಷದ ಕೂಳು ಕಳೆದುಕೊಂಡರು ಎಂಬ ಗಾದೆಯಂತಾಗುವುದು. ಇನ್ನೊಬ್ಬರು ನಲವತ್ತು ಇಂಟು ಅರುವತ್ತರ ಸೈಟಲ್ಲಿ ಮನೆ ಕಟ್ಟಿಕೊಂಡು, ವಾಹನ ನಿಲ್ಲಿಸಲು ಜಾಗ ಮಾಡಿಕೊಳ್ಳದೇ ಪರದಾಡುತ್ತಿದ್ದಾರೆ. ನಾವು ನೂರಾರು ವರುಷ ಬಾಳಿಕೆ ಬರುವಂಥ ಮನೆ ಕಟ್ಟಿಸಿಕೊಳ್ಳಲು ಹೊರಡುತ್ತೇವೆ; ನಾವೇ ನೂರು ವರುಷ ಬಾಳಿಕೆ ಬರುವುದಿಲ್ಲ ಎಂಬುದನ್ನು ಮರೆಯುತ್ತೇವೆ. ಗರಿಷ್ಠವೆಂದರೆ ಹತ್ತು ವರುಷ ವಾಸ ಮಾಡುತ್ತೇವೆ. ಆಮೇಲೆ ಟೆಂಟು ಎತ್ತಿ ಬೇರೆ ಕಡೆ ನೆಲೆಸುತ್ತೇವೆ; ವಲಸೆ ಹೋಗುತ್ತೇವೆ. ಮಕ್ಕಳಿಗಾಗಿ ಎಂದು ಮನೆ ಕಟ್ಟಿಸಿ, ಎರಡೆರಡು ಸೈಟು ತೆಗೆದಿಡುತ್ತಾರೆ. ಮಕ್ಕಳು ಊರು ಬಿಡುವುದಲ್ಲ; ದೇಶವೇ ಬಿಟ್ಟು ಹೋಗಿರುತ್ತಾರೆ. ಅವರಿಗೆ ಬೇಡ; ಇವರಿಗೆ ಬೇಕು. |
|
ಈ ಎಲ್ಲ ನಾಟಕ, ಶೋಕಿ, ಕೃತಕತೆ, ತೋರಿಕೆ, ಅಭಿನಯ, ಸಮಯನಷ್ಟಗಳು ನಮ್ಮನ್ನು ಅಂತರಾವಲೋಕನಕ್ಕೆ ಹಚ್ಚುವುದೇ ಇಲ್ಲ. ಯಾರೋ ಬಂದು ಒಂದು ಕೆಡುನುಡಿಯನ್ನಾಡಿದರೆ ಸಾಕು, ದಿನವೆಲ್ಲಾ ನೆನಪಿಸಿಕೊಂಡು ಕ್ರುದ್ಧರಾಗುತ್ತೇವೆ; ‘ಹಾಗೆ ಅನ್ನಬಹುದಾ?’ ಎಂದು ಕಂಡ ಕಂಡವರ ಬಳಿ ಹೋಗಿ ಸಮಜಾಯಿಷಿ ನಿರೀಕ್ಷಿಸುತ್ತೇವೆ. ನಮಗೆ ಈ ಜನ್ಮಕ್ಕೆ ಬುದ್ಧಿ ಬರುವುದಿಲ್ಲ. ಓದುವ ಡಿಗ್ರಿಗಳೂ ಸಿಲಬಸ್ಸುಗಳೂ ಬದಲಾಗಿರಬಹುದು, ಮಾಡುವ ವೃತ್ತಿಗಳೂ ಬೇರೆಯಾಗಿರಬಹುದು, ಓಡಾಡುವ ವಾಹನಗಳು ಅಪ್ಗ್ರೇಡಾಗಿರಬಹುದು. ಆದರೆ ಮನುಷ್ಯನ ಮನಸ್ಸು ಮಾತ್ರ ಅಂದು ಹೇಗಿತ್ತೋ ಇಂದೂ ಹಾಗೇ ಇದೆ. ಇನ್ನೊಬ್ಬರನ್ನು ಮೆಚ್ಚಿಸಲು ಹೋಗಿ, ಇನ್ನೊಬ್ಬರನ್ನು ಹೊಟ್ಟೆಯುರಿಸಲು ಹೋಗಿ ನಾವೇ ಬತ್ತಲಾಗುತ್ತೇವೆ. ಕತ್ತಲಲಿ ಕೂತು ಯಾರಾದರೂ ಬಂದು ದೀಪ ಹಚ್ಚಬಾರದೇ? ಎಂದು ವ್ಯರ್ಥಾಲಾಪ ಮಾಡುತ್ತೇವೆ. ನಮ್ಮನ್ನು ಇನ್ನೊಬ್ಬರು ಒಳ್ಳೆಯವರೆಂದು ಕರೆಯಲೆಂದು ಆಶಿಸುತ್ತೇವೆ. ಒಳ್ಳೆಯ ಕೆಲಸ ಮಾಡಿದ ಮೇಲೆ ಶ್ಲಾಘನೆ ಬಯಸುತ್ತೇವೆ; ಶ್ಲಾಘಿಸದಿದ್ದರೆ ಸಿಟ್ಟಾಗುತ್ತೇವೆ. ಇನ್ನೊಬ್ಬರನ್ನು ಇಷ್ಟಪಡುತ್ತೇವೆ; ಅವರು ನಮ್ಮನ್ನು ಇಷ್ಟಪಡದಿದ್ದರೆ ದೂರುತ್ತೇವೆ; ಕೃತಘ್ನರು ಎಂದು ಜರಿಯುತ್ತೇವೆ. ನಮ್ಮ ನೋವು ನಲಿವುಗಳನ್ನು ಇನ್ನೊಬ್ಬರ ಮುಖೇನವೇ ಕಂಡುಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಎಂದು ಕೇಳಿಕೊಳ್ಳುವುದೇ ಇಲ್ಲ. ಯಾಕೆ ಆ ಇನ್ನೊಬ್ಬರನ್ನು ಅವಲಂಬಿಸುವುದು? ಯಾಕೆ ಅವರನ್ನು ಮೆಚ್ಚಿಸಲು ಹೊರಡುವುದು? ಜನಾರ್ಧನನನ್ನು ಮೆಚ್ಚಿಸಿದರೂ ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂಬ ಗಾದೆ ನಮಗೆ ಗೊತ್ತಿದ್ದರೂ! |
|
ಈಗಂತೂ ಪ್ರತಿಯೊಂದಕೂ ಪ್ರತಿಯೊಬ್ಬರಿಗೂ ಅಭಿವ್ಯಕ್ತಿಸುವ ತಹತಹ. ಆಧುನಿಕ ಸಂವಹನ ಮಾಧ್ಯಮಗಳಿಂದಾಗಿ ನಾವೆಲ್ಲರೂ ಸುಲಭವಾಗಿ ನಂನಮ್ಮ ಭಾವನೆ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ. ಅದರಲ್ಲೂ ಈ ವಾಟ್ಸಾಪ್ ಯೂನಿವರ್ಸಿಟಿಯಲ್ಲಂತೂ ಎಲ್ಲರೂ ಎರಡೆರಡು ಡಿಗ್ರಿಗಳನ್ನು ಮಾಡಿದವರೇ! ಇನ್ನು ಕೆಲವರಂತೂ ಇಂಥ ವರ್ಚುವಲ್ ವಿವಿಗಳಲ್ಲಿ ಎರಡೆರಡು ಪಿಹೆಚ್ಡಿಗಳನ್ನೂ ಮಾಡಿ, ನೀವೂ ಮಾಡಿ ಎಂದು ಪ್ರೊವೋಕ್ ಮಾಡುವವರೇ! ಸ್ವಂತದ್ದನ್ನು ಬರೆಯಲು ಬರದವರು ಅಥವಾ ಬರೆಯಲು ಇಚ್ಛಿಸದವರು ತಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹೊಂದುವ ಇತರರ ಮಾತು, ಮನಸ್ಸು, ಮಂಥನಗಳನ್ನು ಮೆಚ್ಚಿ ತಮ್ಮಿಷ್ಟದವರಿಗೆ ಕಳಿಸಿ ಬಿಡುವ ಫಾರ್ವರ್ಡು ವೀರರೇ ನಾವಾಗಿದ್ದೇವೆ. ಹೀಗಿರುವಾಗ ಲೈಕು, ಕಮೆಂಟುಗಳಲ್ಲೇ ನಾವು ವ್ಯಕ್ತಿಗಳನ್ನು ಅಳೆದು ಬಿಡುವ, ವ್ಯಕ್ತಿತ್ವಗಳನ್ನು ವಿಮರ್ಶಿಸಿ ಕೈ ತೊಳೆದುಕೊಳ್ಳುವ ಅಪಾಯಕಾರಿ ಬೆಳವಣಿಗೆಯಲ್ಲಿ ಕೈ ಜೋಡಿಸುವವರೇ. ಕಳಿಸಿದ ಮೆಸೇಜು ಮತ್ತು ವಿಡಿಯೋಗಳನ್ನು ಮೆಚ್ಚಿದರೆ ನಮಗವರು ಸ್ನೇಹಿತರು; ಇಲ್ಲದಿರ್ದೊಡೆ ಅಸಹಿಷ್ಣುಗಳು. ನೋಡಿಯೂ ಏನನ್ನೂ ಪ್ರತಿಕ್ರಿಯಿಸದವರನ್ನು ವ್ಯಂಗ್ಯಿಸುವ, ಹಂಗಿಸುವ ಪರಿ ಬೇರೆ. |
|
‘ನಮ್ಮ ಬಗ್ಗೆ ಅವರಿಗೆ ಎಷ್ಟು ಗೊತ್ತು? ಎಷ್ಟು ಸರಿಯಾಗಿ ಗೊತ್ತು? ನಾವೇನು ಎಂಬುದನ್ನೇ ಕಷ್ಟಪಟ್ಟು ಕಂಡುಕೊಂಡಿರುವಾಗ, ಅವರಿಗೆ ಈ ಕಷ್ಟ ಏನು ಗೊತ್ತು?’ ನಮ್ಮ ಜೀವನದ ರುಚಿಯಭಿರುಚಿಯಾಗಲೀ, ಧ್ಯೇಯ ಗುರಿ, ಕನಸು-ಕನವರಿಕೆಗಳಾಗಲೀ ಛಲ-ಬಲಗಳಾಗಲೀ ಅವರಿಗೇ ಗೊತ್ತಿಲ್ಲದಿರುವಾಗ ‘ಅವರೇನು, ನಮ್ಮ ಬಗ್ಗೆ ಕಮೆಂಟಿಸುವುದು?’ ಕಮೆಂಟಿಸಲಿ, ತೊಂದರೆಯಿಲ್ಲ. ಆದರೆ ಅದಕ್ಕೇಕೆ ತಲೆ ಕೆಡಿಸಿಕೊಳ್ಳುವುದು? ಹತ್ತಾರು ವರುಷಗಳ ಕಾಲ ಜೊತೆಯಲ್ಲಿದ್ದವರಿಗೂ ಒಮ್ಮೊಮ್ಮೆ ಅವರು ನಮಗೆ ಮತ್ತು ನಾವು ಅವರಿಗೆ ಅರ್ಥವಾಗಿರುವುದಿಲ್ಲ! ‘ಇದೇಕೆ ಹೀಗೆ? ಇಂದು ಈತ ಅಥವಾ ಈಕೆ ವಿಚಿತ್ರವಾಗಿ ಆಡುತ್ತಿದ್ದಾರೆ?’ ಎಂಬ ಅನುಮಾನ ಬಂದೇ ಬಂದಿರುತ್ತದೆ ಒಂದು ದಿನ, ಆ ಒಂದು ಕ್ಷಣ. ಅಂದ ಮೇಲೆ ಯಾರೋ ನಮ್ಮನ್ನು ಹೇಗೆ ಅರಿತಾರು? ಇಷ್ಟಕೂ ಅವರೇಕೆ ನಮ್ಮನು ಅರಿಯಬೇಕು? ನಮ್ಮನ್ನು ಅರಿಯುವುದೇ ಅವರ ಕೆಲಸವೇ? ಅಲ್ಲವಲ್ಲ. ನಮ್ಮನ್ನು ನೋಡಿದ ಬೇರೆಯವರು ಏನೆಂದುಕೊಳ್ಳುವರೋ? ಎಂದು ಯೋಚಿಸಬಾರದು. ಏಕೆಂದರೆ ಅವರು ನಮ್ಮ ಬಗ್ಗೆ ಯೋಚಿಸದೆಯೂ ಇರಬಹುದು! ಇನ್ನೊಬ್ಬರು ಏನೆಂದುಕೊಳ್ಳುವರೋ ಎಂದೇ ಎಲ್ಲರೂ ಯೋಚಿಸುವುದರಿಂದ ಯಾರೂ ಯಾರ ಬಗ್ಗೆಯೂ ಯೋಚಿಸುತ್ತಿರುವುದಿಲ್ಲ ಎಂಬುದು ತರ್ಕದ ಮಾತು! |
|
ಅಂದರೆ ನಮ್ಮನ್ನು ಇನ್ನೊಬ್ಬರ ಮೂಲಕ ಅರ್ಥಮಾಡಿಕೊಳ್ಳುವ ವ್ಯರ್ಥ ಸಾಹಸವೇ ಎಲ್ಲರ ಪ್ರತಿನಿತ್ಯದ ರೋತೆ. ನಮ್ಮನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಈ ರೋತೆಯು ನಮ್ಮನ್ನು ಕಾಡುವುದಿಲ್ಲ. ಈ ಲೋಕದಲ್ಲಿ ಮತ್ತೊಬ್ಬರನ್ನು ಸಂತೃಪ್ತಿಗೊಳಿಸಿ, ಸಂಭ್ರಮಿಸಿ, ಅವರಿಂದ ಭೇಷ್ ಎನಿಸಿಕೊಳ್ಳಲು ಏನೇನೋ ದುಸ್ಸಾಹಸ ಮಾಡುತ್ತೇವೆ. ಅವರೊಮ್ಮೆ ಆಡಿದ ಕೆಡುನುಡಿಗೆ ವ್ಯಗ್ರರಾಗುತ್ತೇವೆ. ಅಷ್ಟು ಮಾಡಿದೆ, ಇಷ್ಟು ನೀಡಿದೆ ಎಂದು ಹೇಳಿಕೊಂಡು ತಿರುಗುತ್ತೇವೆ. ಇದು ಅಪ್ರಬುದ್ಧತೆ. ನೆನಪಿನಲ್ಲಿಟ್ಟುಕೊಳ್ಳಬೇಕು: ಅಯೋಗ್ಯರೂ ಅನರ್ಹರೂ ಆದವರಿಂದ ಹೊಗಳಿಸಿಕೊಳ್ಳುವುದೂ ಒಂದು ಬಗೆಯ ಡಿಸ್ಕ್ವಾಲಿಫಿಕೇಷನ್ನು ಎಂಬ ಅರಿವನ್ನು! ಯಾವನೋ ಒಬ್ಬ ದುರಾಚಾರಿ ನಮ್ಮನ್ನು ಇಷ್ಟಪಡುತ್ತಾನೆಂದರೆ ಅದು ಅವನ ದೊಡ್ಡತನ; ಆದರೆ ಅದು ನನ್ನ ಅಯೋಗ್ಯತೆ! ದುಷ್ಟರೂ ದುರುಳರೂ ದುರ್ಮಾರ್ಗಿಗಳೂ ಆದವರು ನಮ್ಮನ್ನೇಕೆ ಹೊಗಳಬೇಕು? ಏನಾದರೊಂದು ಸ್ವಾರ್ಥ ಮತ್ತು ಅವಕಾಶವಾದೀತನ ಇದ್ದೇ ಇರುತ್ತದೆಂದರ್ಥ. ನಾವು ಮೋಸಹೋಗುತ್ತಿದ್ದೇವೆಂದೇ ಸರಿಯರ್ಥ. ನೀನು ನನ್ನನ್ನು ಪಾರು ಮಾಡಿದರೆ ನಾನು ನಿನ್ನನ್ನು ಪಾರು ಮಾಡುವೆ ಎಂಬ ಒಳಸೂತ್ರ! ಇದನ್ನೇ ಪಾರಸ್ಪರಿಕ ಒಪ್ಪಂದ ಎಂದು ಕರೆಯುವುದು. ಭ್ರಷ್ಟಾಚಾರದಲ್ಲಿ, ದುಷ್ಟದಂಧೆಗಳಲ್ಲಿ ಇರುವ ಪ್ರಾಮಾಣಿಕತೆ ಮತ್ತು ನಿಯತ್ತುಗಳು ನೇರವಾದ ನ್ಯಾಯಬದ್ಧ ಮಾರ್ಗಗಳಲ್ಲಿ ಇರುವುದಿಲ್ಲ. ಐವತ್ತು ರೂಪಾಯಿ ಹಣ ಪಾವತಿ ಮಾಡಿದ್ದಕ್ಕೆ ರಸೀದಿ ಕೇಳುತ್ತೇವೆ; ಆದರೆ ಅವ್ಯವಹಾರಗಳ ಡೀಲಿಂಗಿಗಾಗಿ ಸಾವಿರ, ಲಕ್ಷಗಳನ್ನು ಯಾರಿಗೂ ಕಾಣದಂತೆ, ಮುಖ ಮುಚ್ಚಿಕೊಂಡು ಕೊಟ್ಟು ಬಂದಿರುತ್ತೇವೆ; ಯಾವ ರಸೀದಿಯನ್ನೂ ಕೇಳದೆ! ಅಂದರೇನಾಯಿತು? ನಮ್ಮದೆಲ್ಲಾ ಅನುಕೂಲ ಸಿಂಧು ಅವಕಾಶವಾದೀ ಬದುಕು; ಸದಾ ಆತ್ಮವಂಚನೆಯಲ್ಲೇ ಕೈ ತೊಳೆವ ಗಲೀಜು ಕೊಳಕು. ಲೋಕ ಇರುವುದೇ ಹೀಗೆ; ಅದರಲ್ಲಿ ನಾನೂ ಒಬ್ಬ ಎಂದುಕೊಂಡು ಸುಮ್ಮನಾಗುತ್ತೇವೆ. ಹತ್ತರಲ್ಲಿ ಹನ್ನೊಂದಾಗುತ್ತೇವೆ. |
|
ನಾವೇಕೆ ಸದಾ ಇನ್ನೊಬ್ಬರನ್ನು ಮೆಚ್ಚಿಸಲು ಹೊರಡುತ್ತೇವೆ? ಇನ್ನೊಬ್ಬರಿಗಾಗಿ ಬದುಕುತ್ತೇವೆ? ಇನ್ನೊಬ್ಬರ ಕಣ್ಣ ಕನ್ನಡಿಯ ಬಿಂಬಕೇ ಏಕೆ ಜೋತು ಬೀಳುತ್ತೇವೆ? ಜೀವನಪರ್ಯಂತ ನಾವು ಅವರೇನನ್ನುತ್ತಾರೆ? ಇವರೇನನ್ನುತ್ತಾರೆ? ಎಂದು ಅಳಲು ಪಡುವುದೇ ಆದರೆ ನಮ್ಮ ಜೀವನದ ಶಿಲ್ಪಿ ನಾವಾಗಿರುವುದಿಲ್ಲ; ಇನ್ನೊಬ್ಬರು ನಮ್ಮ ಜೀವನವನ್ನು ನಿಯಂತ್ರಿಸುವುದಾದರೆ ಆ ಮಟ್ಟಿಗೆ ನಾವು ಬಂಧಿಗಳೇ! ಹೊರಗಿದ್ದೂ ಜೈಲುಪಾಲಾದವರೇ. ಇಲ್ಲೊಂದು ಸಂಗತಿ ಮುಖ್ಯವಾಗುತ್ತದೆ. ಒಳ್ಳೆಯವರು ಮೆಚ್ಚಿದರೆ ಮನಸಿಗೆ ಖುಷಿಯಾಗುತ್ತದೆ. ನಾವು ಹೋಗುತ್ತಿರುವ ದಾರಿ ಸರಿಯಿದೆ ಎಂದು ಖಾತ್ರಿಯಾಗುತ್ತದೆ. ಕೆಟ್ಟವರನ್ನು ಮೆಚ್ಚಿಸಲು ಹೋದರೆ ಘಾಸಿಯಾಗುತ್ತದೆ. ಅವರೊಂದಿಗೆ ನಮ್ಮನೂ ಸೇರಿಸಿ ಲೋಕದ ತಕ್ಕಡಿ ತೂಗುತ್ತದೆ. ಹೂವಿನ ಜೊತೆ ನಾರು ಸ್ವರ್ಗಕ್ಕೆ ಹೋಗುವುದು ಬೇಕೋ? ಹಾವಿನ ಜೊತೆ ಅದನ್ನು ಹೊಡೆದು ಕೊಂದ ಕೋಲೂ ಭಸ್ಮವಾಗಬೇಕೋ? ಇದು ಅಂತಿಮವಾಗಿ ನಮ್ಮದೇ ತೀರ್ಮಾನ. ನಮ್ಮದೇ ಹೊಣೆ ಕೂಡ. |
|
ಉಳಿಯೇಟನ್ನು ಸಹಿಸಿಕೊಂಡ ಕಲ್ಲು ವಿಗ್ರಹವಾದರೆ, ಸಹಿಸಿಕೊಳ್ಳದ ಕಲ್ಲು ದೇಗುಲದ ಮೆಟ್ಟಿಲಾಗುವಂತೆ, ನಾವು ನಮಗೋಸ್ಕರ ಬದುಕಬೇಕು. ‘ನಮಗೋಸ್ಕರ ಬದುಕುವುದು ಯಾವಾಗ?’ ಉತ್ತರ ಸ್ಪಷ್ಟವಿದೆ: ‘ಭ್ರಮೆಗಳನ್ನು ತೊರೆದಾಗ!’ ಲಕ್ಷ ಕೋಟಿ ವರುಷಗಳಿಂದಲೂ ಇರುವ ಈ ಅನಂತ ಅಪಾರ ಅಸೀಮ ವಿಶ್ವದಲಿ ನಮ್ಮ ಸೌರವ್ಯೂಹವಿರುವ ಈ ಬ್ರಹ್ಮಾಂಡ. ಇಂಥ ಬ್ರಹ್ಮಾಂಡಗಳು ಲಕ್ಷ ಕೋಟಿ, ಅಸಂಖ್ಯಾತ ಇವೆ. ಭೂಮಿಗಿಂತಲೂ ಗುರು ದೊಡ್ಡದು. ಗುರುಗ್ರಹಕಿಂತಲೂ ಸೂರ್ಯನೆನಿಸಿಕೊಂಡ ನಕ್ಷತ್ರ ಸಾವಿರ ಪಾಲು ದೊಡ್ಡದು. ಇಂಥ ಸೂರ್ಯನೂ ಇನ್ನಿತರ ಹಲವು ನಕ್ಷತ್ರಗಳಿಗೆ ಹೋಲಿಸಿದರೆ ವಿಪರೀತ ಚಿಕ್ಕದು! ಅಂಥ ಭಾರೀ ನಕ್ಷತ್ರಗಳೇ ವಿಶ್ವ ಎಂದು ಕರೆಯುವ ಆಡುಂಬೊಲದಲಿ ಕೋಟ್ಯನುಕೋಟಿ ಇರುವಾಗ ಕೇವಲ ಐವತ್ತು, ಅರುವತ್ತು ಅಬ್ಬಬ್ಬಾ ಎಂದರೆ ಎಪ್ಪತ್ತು, ಎಂಬತ್ತು ವರುಷಗಳಲಷ್ಟೇ ಜೀವಿಸಿ ಕಂತೆ ಒಗೆಯುವ ನಮ್ಮ ಮನುಷ್ಯ ಜನ್ಮ ಎಷ್ಟು ಕ್ಷಣಿಕ! ಅಖಂಡ ವಿಶ್ವದ ಲೆಕ್ಕದಲ್ಲಿ ನಮ್ಮ ಈ ಅಗಾಧ ಭೂಮಿಯೇ ಒಂದು ಧೂಳಿನ ಕಣವಾಗಿರುವಾಗ ನಮ್ಮದೇನು ಲೆಕ್ಕ!? ಅನಂತ ಕೋಟಿ ಬ್ರಹ್ಮಾಂಡ ನಾಯಕನಟನ ಮುಂದೆ ನಮ್ಮದೇನು ದುಃಖ? ಇದಕಿಂತ ದೊಡ್ಡದೇ ಜೀವನ ನಾಟಕ !? |
|
ಅಹಂಭಾವ, ಅಹಂಕಾರ, ಕ್ಷುದ್ರತೆ, ಕ್ಷುಲ್ಲಕತೆ, ಕತೆವ್ಯಥೆ ಎಲ್ಲವೂ ಅರ್ಥವಿಲ್ಲದ ಬರೀ ವ್ಯರ್ಥ ಎಂಬುದನ್ನು ಕಂಡುಕೊಳ್ಳುವುದೇ ನಿಜವಾದ ಭ್ರಮನಿರಸನ. ನಾನೇ ದೊಡ್ಡವ, ನನ್ನದೇ ಮನೆವಾಳ್ತನ, ನನ್ನಿಂದಲೇ ಎಲ್ಲ, ನಾನಿಲ್ಲದಿದ್ದರೆ ಇಲ್ಲವೇ ಇಲ್ಲ! ಎಂಬುದೇ ನಿಜವಾದ ಭ್ರಮೆ. ಇರುವತನಕ ನಾಕು ದಿನ, ಆತ್ಮೀಯರೆನಿಸಿಕೊಂಡ ನಾಕು ಜನ. ನೀನು ಏನೇನು ಅಂದೆ; ಏನೇನು ತಿಂದೆ! ಇಷ್ಟೇ ಜೀವನ. ಏನೇನು ಅಂದೆ: ಮಾತು, ಧಾತು, ಆಗೇನಾಯ್ತು? ಏನೇನು ತಿಂದೆ: ಮಾವು, ಬೇವು, ದುಗುಡದ ನೋವು! ಭ್ರಮೆ ಕಳಚಿದ ಜೀವನದಲಿ ಕೊನೆಗೂ ಉಳಿಯುವುದಿಷ್ಟೆ: ನನ್ನ ದುಃಖಕೂ ಸಂತಸಕೂ ಕಟ್ಟಿಕೊಂಡು ಒದ್ದಾಡುತಿರುವ ಭ್ರಮಾ ಬದುಕಿಗೂ ನಾನೇ ಜವಾಬು-ದಾರ. ಮಿಕ್ಕಿದ್ದೆಲ್ಲ ಅಷ್ಟಕಷ್ಟೆ! ಬರೀ ಚೇಷ್ಟೆ; ಕುಚೇಷ್ಟೆ!! |
|
ಗೌತಮ ಬುದ್ಧರು ಜ್ಞಾನೋದಯಗೊಂಡ ಮೇಲೆ ಹೇಳಿದ್ದನ್ನು ಸಂಗ್ರಹಿಸಿ ನಿರೂಪಿಸುವುದಾದರೆ, ಜಗತ್ತು ಮಾತ್ರವಲ್ಲ, ವಿಶ್ವದ ಸಕಲವೂ ನಿರಂತರ ಬದಲಾವಣೆ ಮತ್ತು ಬೆಳವಣಿಗೆಗೆ ಒಳಪಟ್ಟಿದ್ದು, ಯಾವುದೂ ತನ್ನ ಮೂಲ ಸ್ವರೂಪದಲ್ಲಿ ಕಾಣ ಸಿಗುವುದಿಲ್ಲ. ಇದನ್ನು ಲೋಕಪ್ರವಾಹವೆಂದೇ ಕರೆಯುವುದು. ಇದನ್ನು ಅರ್ಥ ಮಾಡಿಕೊಳ್ಳಲು ಸೋತಾಗಿನ ಮನಸ್ಥಿತಿಯೇ ದುಗುಡ. ಅರ್ಥ ಮಾಡಿಕೊಂಡು ನಾವೂ ಬದಲಾದರೆ ಆಗ ದುಃಖ, ದುಗುಡಕ್ಕೆ ಎಡೆಯಿಲ್ಲ. ಲೋಕದಲ್ಲಿ ಯಾವುದೂ ತಂತಾನೇ ಸ್ವತಂತ್ರವಲ್ಲ; ಎಲ್ಲವೂ ಸಂಯೋಜಿತಗೊಂಡದ್ದು ಎಂಬುದು ಬುದ್ಧರ ಉಪದೇಶ ಸಾರ. ಇದನ್ನು ಪತಂಜಲಿ ಮುನಿಯೂ ತನ್ನ ಯೋಗಸೂತ್ರಗಳಲ್ಲಿ ವಿವರಿಸಿದ್ದಾರೆ. |
|
ಜೀವನವೆಂಬುದೊಂದು ವಿಕಾಸಶೀಲ ಶಕ್ತಿ, ಇಂಥ ಶಕ್ತಿಗೆ ಅಸ್ತಿತ್ವ ಮತ್ತು ಅನಸ್ತಿತ್ವ ಎಂಬ ಎರಡು ಆಯಾಮಗಳಿವೆ. ಶಕ್ತಿಯು ಅಸ್ತಿತ್ವದಲ್ಲಿ ಬರುತ್ತದೆ ಮತ್ತೆ ಅನಸ್ತಿತ್ವದಲ್ಲಿ ಹೊರಟು ಹೋಗುತ್ತದೆ. ದೀಪ ಶಾಂತವಾದ ಮೇಲೆ ಬೆಳಕು ಎಲ್ಲಿ ಹೋಯಿತು? ಎಲ್ಲಿಂದ ಬಂತೋ ಅಲ್ಲಿಗೆ! ದ್ವಂದ್ವದ ನಡುವೆ ಶಕ್ತಿಯು ವಿಸ್ತಾರಗೊಳ್ಳುವುದು. ಕತ್ತಲು ಮತ್ತು ಬೆಳಕು ಎರಡೂ ಒಂದರಿಂದಲೇ ಉಂಟಾಗಿರುವುದು. ಕತ್ತಲು ಎಂಬುದು ಕಡಿಮೆ ಬೆಳಕಷ್ಟೇ. ಬೆಳಕು ಎಂಬುದು ಕಡಿಮೆ ಕತ್ತಲಿಗಿಟ್ಟಿರುವ ಹೆಸರಷ್ಟೆ. ವಿಜ್ಞಾನದ ಸಹಾಯ ಪಡೆದರೆ ತಿಳಿಯುವುದು: ಕತ್ತಲು ನಮಗೆ, ಪಕ್ಷಿಗಳಿಗಲ್ಲ. ಅವುಗಳ ಕಣ್ಣು ಅಷ್ಟು ಸೂಕ್ಷö್ಮ ಬೆಳಕನ್ನೂ ತಿಳಿಯಬಲ್ಲದು. ಯೋಗ ಹೇಳುವುದು-ಎರಡನ್ನೂ ಅರಿತುಕೊಳ್ಳಿ, ಹಿಡಿಯಬೇಡಿ! ಇದನ್ನೇ ಗೌತಮ ಬುದ್ಧರು ಮಧ್ಯಮಮಾರ್ಗ ಎಂದರು. ಪ್ರತಿಯೊಂದರಲೂ ಎರಡು ತುದಿಗಳಿರುತ್ತವೆ; ಇವು ಅತಿಗಳು ಕೂಡ. ಎರಡು ಅತಿಗಳಲ್ಲೂ ದುಃಖವಿದೆ. ಸೋಲೆಂಬುದು ಜೀವನದ ಒಂದರ ತುದಿಯಾದರೆ, ಗೆಲುವು ಎಂಬುದು ಇನ್ನೊಂದರ ತುದಿ. ಇವೆರಡರಲ್ಲೂ ಆತಂಕ ಮತ್ತು ಭಯಗಳಿವೆ. ಸೋತವರಿಗೆ ಯಾವಾಗ ಗೆಲ್ಲುವೆನೋ? ಎಂಬ ತವಕ; ಗೆದ್ದವರಿಗೆ ಮತ್ತೆ ಯಾವಾಗ ಸೋಲುವೆನೋ? ಎಂಬ ಚಿಂತೆ. ಇವೆರಡರ ಮಧ್ಯ ಯಾವುದು? ಯಾವ ಪಂದ್ಯದಲ್ಲೂ ಭಾಗವಹಿಸದೇ ಇರುವುದು! ಅಥವಾ ಗೆದ್ದರೂ ಸೋತರೂ ನಿರ್ಲಿಪ್ತವಾಗಿರುವುದು. ಅದಕಾಗಿ ಪತಂಜಲಿ ಮುನಿಯು ಹೇಳಿದ್ದು: ಎರಡನ್ನೂ ಅರಿತುಕೊಳ್ಳೋಣ; ಆದರೆ ಆ ಎರಡಕ್ಕೂ ಜೋತು ಬೀಳದಿರೋಣ. |
|
ಚೇತನ ಮತ್ತು ಅಚೇತನಗಳು ಅಸ್ತಿತ್ವದ ಎರಡು ರೂಪಗಳು. ಇವೆರಡೂ ರೂಪಾಂತರಗೊಳ್ಳುತ್ತವೆ. ಚೇತನದಿಂದ ಅಚೇತನ, ಅಚೇತನದಿಂದ ಚೇತನ ಆಗಬಹುದು. ಪ್ರತಿನಿತ್ಯ ಇದಾಗುತ್ತಲೇ ಇದೆ. ಪಂಚಭೂತಗಳಿಂದಾದ ಶರೀರ ಎನ್ನುವುದು ಇದಕ್ಕೇ. ‘ಚೇತನಮೂರ್ತಿಯು ಆ ಕಲ್ಲು; ತೆಗೆ! ಜಡವೆಂಬುದು ಬರಿ ಸುಳ್ಳು!!’ ಎಂದರು ರಸಋಷಿ ಕುವೆಂಪು ಅವರು. ಈ ವಿಶ್ವದ ಪ್ರತಿಯೊಂದೂ ಹೀಗೆ ರೂಪಾಂತರಗೊಳ್ಳುವ ಸಂಯೋಜನೆಯೇ! ಎರಡು ಕಲ್ಲುಗಳಲ್ಲೂ ಬೆಂಕಿಯಿದೆ. ಅವನ್ನು ಘರ್ಷಿಸಿದರೆ ಅದು ಹೊರ ಬರುವುದು. ಹೀಗೆ ಎಲ್ಲದರಲ್ಲೂ ಶಕ್ತಿಯಾಗಲೀ, ಆ ಶಕ್ತಿಯ ಪರಿಣಾಮವಾಗಲೀ ಸುಪ್ತವಾಗಿ ಇರುವುದು. |
|
ಈ ಸೃಷ್ಟಿಯ ಪ್ರತಿಯೊಂದೂ ಅಂತಸ್ಸಂಬಂಧವಿರತಕ್ಕವು. ಒಂದು ಹೂ ಅರಳಿದ್ದರೂ ಅದು ನಮ್ಮೊಂದಿಗೆ ಕೂಡಿದೆ. ಒಬ್ಬ ವ್ಯಕ್ತಿ ನರಳುತ್ತಿದ್ದಲ್ಲಿ ನಾವು ಸಂತೋಷದಿಂದಿರಲಾಗದು. ಪ್ರತಿಯೊಂದೂ ಕೂಡಿದೆ, ನಾವೆಲ್ಲರೂ ಕೂಡಿದ್ದೇವೆ. ಯೋಗವೆಂದರೆ ಕೂಡುವುದು; ಕೂಡಿಸುವುದು. ಯೋಗವಿಜ್ಞಾನವು ಸಕಾರಾತ್ಮಕ ಮತ್ತು ರಚನಾತ್ಮಕ. ಒಡೆಯುವುದು, ನಾಶ ಮಾಡುವುದು ಹಾಗೂ ಬೇರ್ಪಡಿಸುವುದು ಯೋಗವಲ್ಲ. ಇಷ್ಟಕ್ಕೂ ಕೂಡುವ ಅಥವಾ ಬೇರ್ಪಡುವ ಎರಡೂ ಯಾವುದೋ ಒಂದರ ಬೇರೆ ಬೇರೆ ರೂಪಗಳಷ್ಟೇ. ಬೇರೆ ಬೇರೆಯಂತೆ ತೋರುವುದು ನಮ್ಮ ದೃಷ್ಟಿಭ್ರಮೆ, ಕಾಣ್ಕೆಯ ಮಿತಿ. |
|
ಮೇಲ್ನೋಟಕ್ಕೆ ಕಾಣುವ ದ್ವೈತಗುಣವು ಅಂತರಂಗದಲ್ಲಿ ಅದ್ವೈತವೇ ಆಗಿರುತ್ತದೆ. ನಮ್ಮೆಲ್ಲರೊಳಗೆ ನಡೆಯುವ ಚಿಂತನೆಗಳು ನಮ್ಮೆಲ್ಲರವು. ವಿಚಾರಗಳು ತರಂಗಗಳಂತೇ. ನಮ್ಮನ್ನು ನಾವು ಬೇರೆ ಎಂದು ಬೇರ್ಪಡಿಸಿ ನೋಡುವುದು ಮೂರ್ಖತನ. ಆ ಕಾರಣಕ್ಕಾಗಿಯೇ ಹಿರಿಯರು ಕೆಲವು ಸೌಮ್ಯೋಕ್ತಿಗಳನ್ನು ಬಳಸುತ್ತಿದ್ದರು. ಅಪ್ರಿಯ ಸತ್ಯವನ್ನು ಪ್ರಿಯವಾದ ಧಾಟಿಯಲ್ಲಿ ಹೇಳುತ್ತಿದ್ದರು. ಬೈಗುಳವೇ ಶಾಪ; ಹಾರೈಕೆಯೇ ವರ. ಕೆಟ್ಟಹಾರೈಕೆ ಅಥವಾ ಶಾಪವು ಇಡೀ ವಾತಾವರಣವನ್ನೇ ಅಲ್ಲೋಲಕಲ್ಲೋಲ ಮಾಡಬಲ್ಲದು. ನಮ್ಮಿಂದ ಬರುವ ಮಾತಿನ ತೀವ್ರತೆ ಮನಸ್ಸುಗಳನ್ನು ನೇರವಾಗಿ ಪ್ರಭಾವಿಸುವುದು. ಮಾತೇ ಮುತ್ತು; ಮಾತೇ ಮೃತ್ಯು ಎನ್ನುವುದು ಇದಕ್ಕೇ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಸವಣ್ಣನವರು ಹೇಳಿದ್ದು ಈ ದಿಸೆಯಲ್ಲೇ. |
|
ಅಣುವಿನಲ್ಲಿ ಏನಿದೆಯೋ ಅದು ವಿರಾಟದಲ್ಲೂ ಇದೆ. ಕ್ಷುದ್ರದಲ್ಲೇನಿದೆಯೋ ಅದೂ ವಿರಾಟದಲ್ಲಿದೆ. ನೀರಹನಿಯಲ್ಲಿ ಏನಿದೆಯೋ ಅದೇ ಸಾಗರದಲ್ಲೂ ಇದೆ. ಸಾಗರವೆಂಬುದು ಒಂದೊಂದು ಹನಿಯ ಸಂಗ್ರಹವಷ್ಟೇ. ಕೀಳರಿಮೆ ಅಥವಾ ಹೀನಭಾವ ಹುಚ್ಚುತನ, ಅರ್ಧಸತ್ಯ. ತನ್ನನ್ನು ತಾನು ಏನೂ ಅಲ್ಲವೆಂದು ತಿಳಿಯುವುದೂ ಅವಿವೇಕ; ಹಾಗೆಯೇ ತನ್ನನ್ನು ತಾನು ಬಲು ದೊಡ್ಡವನು ಎಂದು ತಿಳಿಯುವುದೂ ಅರ್ಧಸತ್ಯದ ಅವಿವೇಕ! ನಾನು ಸಾಗರವಾಗುವೆನೆಂಬ ಜಂಭ ಕಿಂಚಿತ್ತೂ ನೀರಬಿಂದುವಿಗಿಲ್ಲ; ನಾನು ಸಾಗರವೇ ಎಂದು ಯಾವುದೂ ಸಂಭ್ರಮಿಸಬೇಕಾಗಿಲ್ಲ. ಏಕೆಂದರೆ ಸಾಗರ ಅಂತ ನಾವು ಕರೆದುಕೊಳ್ಳುತ್ತಿರುವುದು ಅಂಥ ಒಂದೊಂದು ನೀರಹನಿಯ ಸಂಗ್ರಹವನ್ನು. |
|
ಕೊಡುವುದೇ ಹೊಂದುವುದಾಗಿದೆ; ಅಳಿಯುವುದೇ ಆಗುವುದಾಗಿದೆ. ನೀರಹನಿ ತನ್ನನ್ನು ತಾನು ಅಂಬುಧಿಗೆ ಅರ್ಪಿಸಿಕೊಂಡಾಗ ಸಾಗರವು ಹನಿಗೆ ದೊರಕಿಬಿಡುವುದು, ತತ್ಕ್ಷಣ ಹನಿಯು ಸಾಗರವಾಗುವುದು. ಸ್ವಯಂಪ್ರಭೆಯಿಂದ ಉರಿಯುವ ಆಕಾಶಕಾಯವೊಂದು ಉರಿದುರಿದು ಬೂದಿಯಾಗುವುದು; ಕಪ್ಪುರಂಧ್ರ ಏರ್ಪಡುವುದು. ಆಮೇಲೇನಾಗುವುದು? ಅನಂತವಿಶ್ವದಲ್ಲಿ ವಿಶ್ವವೇ ಆಗುವುದು. ಅಂದರೆ ಅಳಿಯುವುದೇ ಆಗುವುದಾಗಿದೆ. ಬರಿದಾಗುವುದೇ, ಬಯಲಾಗುವುದೇ ಉಳಿಯುವುದಾಗಿದೆ-ಸಹಜವಾಗಿದೆ. ಹಾಗೆಯೇ ಇನ್ನೊಂದಾಗುವುದೇ ಸೃಷ್ಟಿಪ್ರಕ್ರಿಯೆಯ ಮುಂದುವರಿಕೆಯಾಗಿದೆ. ಓಶೋ ರಜನೀಶರು ಇದನ್ನು ಸ್ಥೂಲವಾಗಿ ‘ವೈರಾಗ್ಯ ಮತ್ತು ಸಾಕ್ಷಿತ್ವʼ ಎಂದು ಕರೆಯುವರು. ವಿರಾಗ ಎಂದರೆ ರಾಗರಹಿತಸ್ಥಿತಿಯಲ್ಲ, ರಾಗಗಳನ್ನು ದೂರವಿಟ್ಟು ವೀಕ್ಷಿಸುವುದು. ನಿರ್ವಾಣ ಎಂದರರ್ಥ: ಮೃತ್ಯು ಯಾರಿಗೆ ಮೃತ್ಯುವಾಗಿ ಉಳಿದಿಲ್ಲವೋ ಅಂಥ ಸ್ಥಿತಿ. ಬದುಕಿನಂಥದೇ ಸ್ಥಿತಿ ಸಾವು. ಸಾವನ್ನು ಬದುಕಿನಷ್ಟೇ ಸರಾಗವಾಗಿ, ಸಾಕ್ಷೀಭಾವದಿಂದ ಸ್ವೀಕರಿಸುವುದು. ಇದೇ ಯೋಗದ ಪರಮಸೂತ್ರ; ಅಂತಿಮಸೂತ್ರ. ಅದಾವ ದಿನ ನಾನು ಎಂಬುದಿಲ್ಲ ಎಂಬುದು ಗೊತ್ತಾಗುವುದೋ ಅದೇ ದಿನ ಗೊತ್ತಾಗುವುದು: ಮೃತ್ಯು ಯಾರದ್ದು? ಸಾಯುವವರು ಯಾರು? ಸಿದ್ಧಾರ್ಥನೆಂಬುವ ಬುದ್ಧತ್ವ ಹೊಂದಿದರೆಂದರೆ ಸಂಪೂರ್ಣಾರ್ಥದಲ್ಲಿ ಯೋಗಿಯಾದರು ಎಂದೇ. ಇದೇ ಬುದ್ಧರಿಗೆ ಜ್ಞಾನೋದಯವಾದ ಸಾರಸರ್ವಸ್ವ: ನಾನು ಎಂಬುದಿಲ್ಲ; ಇರುವುದೇನಿದ್ದರೂ ಸೃಷ್ಟಿ ಸ್ಥಿತಿ ಲಯ. ನಾನೆಂಬುದು ಸೃಷ್ಟಿಯಾದರೆ ಅದು ಜೀವವಿಕಾಸ. ಲಯವಾಗುವತನಕ ಬದುಕುವುದಿದೆಯಲ್ಲ, ಅದೇ ಸ್ಥಿತಿ. ಲಯವೆಂದರೆ ಸಂಪೂರ್ಣ ನಾಶವಲ್ಲ. ಕೇವಲ ರೂಪಾಂತರ ಅಷ್ಟೇ. |
|
ನಾನತ್ವ ಸತ್ತ ಮೇಲೆ ಇನ್ನೆಲ್ಲಿದೆ ಇನ್ನೊಂದು ಮೃತ್ಯು? ನಿಜವಾಗಿ ಸಾಯಬೇಕಾದದ್ದು ಸಾವಲ್ಲ, ಬದುಕಿನುದ್ದಕ್ಕೂ ಕಾಡುವ, ಅಂತರಂಗದಲ್ಲಿದ್ದೇ ಆಟವಾಡುವ ನಾನತ್ವ. ಎಲ್ಲಿಯವರೆಗೆ ಮಂದಿ ಸಾವಿಗೆ ಹೆದರುವರೋ ಅಲ್ಲಿಯವರೆಗೆ ನಾನತ್ವ ಅಳಿಯುವುದಿಲ್ಲ. ಹೀಗೆ ಜ್ಞಾನೋದಯಗೊಂಡಿದ್ದರಿಂದಲೇ ಗೌತಮ ಬುದ್ಧರು, ಅಂಗುಲಿಮಾಲನಂಥ ರಾಕ್ಷಸನ ಎದುರು ನಿರ್ಭೀತಿಯಿಂದ ನಿಂತದ್ದು! ಮೊತ್ತ ಮೊದಲ ಬಾರಿಗೆ ಆ ಅಂಗುಲಿಮಾಲನಿಗೆ ಅಚ್ಚರಿಯೂ ದಿಗಿಲೂ ಆದದ್ದು ಏತಕ್ಕೆಂದರೆ, ಇದುವರೆಗೂ ಯಾರೊಬ್ಬರೂ ಅವನ ಮುಂದೆ ಜೀವದ ಹಂಗು ತೊರೆದು ಸಾವಿನ ಭಯವೇ ಇಲ್ಲದೇ ಎದುರು ನಿಂತವರೊಬ್ಬರೂ ಇರಲಿಲ್ಲ, ಅದಕ್ಕೆ. ಅಂದರೆ ಬುದ್ಧರಿಗೆ ನಾನತ್ವ ಇಲ್ಲದೇ ಇದ್ದುದರಿಂದ ಇದು ಸಾಧ್ಯವಾಯಿತು. ಆ ಜ್ಞಾನೋದಯಗೊಂಡವರ ಬಳಿಯೂ ಸುತ್ತಮುತ್ತಲೂ ಸುತ್ತುತಿದ್ದ ಪ್ರಭಾವಲಯ, ಅದು ಸಕಾರಾತ್ಮಕವಾದ ವರ್ತುಲ! ಅದಕ್ಕೆ ಆ ದುಷ್ಟನು ವಶವರ್ತಿಯಾದ. ಪೂರ್ಣ ಶರಣಾಗತನಾದ. ಆತನ ನಕಾರಾತ್ಮಕ ಸ್ವಭಾವಗಳು ಬುದ್ಧರ ಸಕಾರಾತ್ಮಕ ಅಲೆಗಳ ಮುಂದೆ ಸೋತು ಹೋಯಿತು; ಸತ್ತು ಹೋಯಿತು. |
|
ಇಷ್ಟೇ: ಜ್ಞಾನೋದಯಗೊಂಡವರು ಸುಮ್ಮನಿರುತ್ತಾರೆ. ಸುಮ್ಮನಿರುವುದು ಹೇಗೆಂದು ಅರಿತಿರುತ್ತಾರೆ. ಏಕೆಂದರೆ ಅವರಿಗೆ ಜಗತ್ತು ಮತ್ತು ವಿಶ್ವವು ಅರ್ಥವಾಗಿರುತ್ತದೆ. ಅದರಲ್ಲಿ ತನ್ನ ಸ್ಥಾನ ಶೂನ್ಯ ಎಂಬುದೇ ಈ ಅರಿವು. ಈ ದಿಸೆಯಲ್ಲಿ ಶಂಕರಾಚಾರ್ಯರು ಹೇಳಿದ ಕಿವಿಮಾತನ್ನು ಪರಾಂಬರಿಸಬೇಕು: ನಾನು ಎಂಬುದು ಅಷ್ಟು ಪ್ರಿಯವಾಗಿದ್ದರೆ ಒಂದೋ ಅದನ್ನು ಶೂನ್ಯವಾಗಿಸು; ಅಥವಾ ಇಡೀ ವಿಶ್ವವನ್ನೇ ಆವರಿಸುವಷ್ಟು ಅದನ್ನು ದೊಡ್ಡದಾಗಿಸು!’ ನಿಸ್ಸಂಶಯವಾಗಿ ನಾನು ಎಂಬುದು ಎಲ್ಲರಿಗೂ ಪ್ರಿಯವೇ. ಹಾಗಾಗಿ ಅದನ್ನು ಶೂನ್ಯವಾಗಿಸಬೇಕು ಅಥವಾ ವಿಶ್ವಕ್ಕೇ ಪಸರಿಸಬೇಕು. ಇರುವುದು ಇವೆರಡೇ ದಾರಿ. ಅಧ್ಯಾತ್ಮದಲ್ಲಿ ಇದು ಕೇವಲ ದಾರಿಯಲ್ಲ; ಗುರಿ ಕೂಡ! |
|
ದೈವಸಾಕ್ಷಾತ್ಕಾರ, ಭಗವಂತನ ಚರಣಾರವಿಂದಕ್ಕರ್ಪಿತ, ಲೋಕದಿಂದ ಮುಕ್ತಿ, ಸ್ವರ್ಗದಭಿಲಾಷೆ, ಅಧ್ಯಾತ್ಮಸಿದ್ಧಿ ಎಂಬ ಪದಪುಂಜಗಳೆಲ್ಲ ಅಹಮ್ಮಿನ ಅನ್ಯರೂಪಗಳು; ಅನೂಹ್ಯ ರೂಪಗಳು! ಈ ಕಾರಣದಿಂದಲೇ ಅಲ್ಲಮ ಪೇಚಾಡಿಕೊಳ್ಳುವುದು ‘ಶಬ್ದದ ಲಜ್ಜೆಯ ನೋಡಾ!’ ಇಂಥವನ್ನೆಲ್ಲ ಗೆದ್ದವರು, ಮೀರಿದವರು ಯೋಗಿಗಳು. ಗೆಲ್ಲುವುದೆಂದರೆ, ಮೀರುವುದೆಂದರೆ ಅರಿಯುವುದು. ವಿಶ್ವಸತ್ಯವನ್ನು ಅರಿಯಲು ಸಂನ್ಯಾಸಿಯೇ ಆಗಬೇಕಿಲ್ಲ; ಸಂಸಾರದಿಂದ ವಿಮುಖಗೊಳ್ಳಬೇಕಿಲ್ಲ! ನಮ್ಮ ಕನ್ನಡ ನಾಡಿನ ಶಿವಶರಣರು ಇದನ್ನು ಸಾಧಿಸಿ ತೋರಿದರು. |
|
ಪತಂಜಲಿ ಮುನಿಯು ಯೌಗಿಕ ಪರಿಭಾಷೆಯಲ್ಲೂ ಗೌತಮ ಬುದ್ಧರು ವೈಜ್ಞಾನಿಕ ಪರಿಭಾಷೆಯಲ್ಲೂ ಹೇಳಿದ್ದು ಆಧ್ಯಾತ್ಮಿಕ ಸತ್ಯವನ್ನೇ! ಯಾವುದೂ ಸರ್ವ ಸ್ವತಂತ್ರವಲ್ಲ. ತನಗೆ ತಾನೇ ಸ್ವತಂತ್ರವೆಂದು ಕಾಣುವುದೆಲ್ಲಾ ಇನ್ನೊಂದರ ಸಂಯೋಜನೆ. ಪ್ರತಿಯೊಂದೂ ಅಂತಸ್ಸಂಬಂಧಿತ. ನಿನ್ನಲ್ಲಿ ಕಾಣುವ ಕೆಟ್ಟತನ ನನ್ನದೂ ಹೌದು; ನನ್ನಲ್ಲಿ ನೀನು ಕಾಣುವ ಒಳ್ಳೆಯತನ ನಿನ್ನದೂ ಹೌದು. ಇದೇ ಸಮಭಾವ. ‘ಹಗಲು ಮಾತ್ರ ಪರಮಾತ್ಮನದ್ದಲ್ಲ; ರಾತ್ರಿಯೂ ಆತನದೇ. ಈ ನಿಲವೇ ಧಾರ್ಮಿಕತೆʼ ಎಂದರು ಓಶೋ ರಜನೀಶರು. |
|
ಕೊನೆಗೂ ಹೇಳಬಹುದಾದದ್ದು: ಜ್ಞಾನೋದಯ ಎಂಬುದು ಮಾರಾಟದ ಸರಕಲ್ಲ. ಅಂತಿಮವಾದ ಗಮ್ಯವೂ ಅಲ್ಲ! ಅದೊಂದು ಸಾಕ್ಷಾತ್ಕಾರದ ಹಾದಿ ಮತ್ತು ಸಾಕ್ಷೀಭಾವವೆಂಬ ಸದಾ ಹರಿವ ನದಿ. ದಡದಲ್ಲಿ ನಿಂತು ನೋಡುವುದೋ, ಮಿಂದೇಳುವುದೋ, ಮನಸೋ ಇಚ್ಛೆ ಈಜಾಡುವುದೋ ಅವರವರಿಗೆ ಬಿಟ್ಟದ್ದು. ಒಟ್ಟಿನಲ್ಲಿ ಇದು ಅನುಭಾವದ ಸೆಲೆ. ಅನುಸರಿಸುವ ಅಲೆಯಲ್ಲ. ಯಾರದೋ ಬಲವಂತಕ್ಕೆ ವಶವರ್ತಿಯಾಗುವುದಲ್ಲ. ಗಿಡದಲ್ಲಿ ಹೂ ಅರಳುವಂತೆ, ಪರಿಮಳ ಹೊರಸೂಸುವಂತೆ ಆತ್ಮಕಾಗುವ ವಿವೇಕೋದಯವಿದು. ಗೋಡೆಯೆಂದುಕೊಂಡದ್ದು ಬಾಗಿಲಾಗುವಿಕೆ; ಬಾಗಿಲು ತೆರೆದು ಹೊರಗಣ ನೀಲಾಕಾಶಕ್ಕೆ ಜಿಗಿಯುವಿಕೆ! ಎಲ್ಲರೂ ಹೇಳಿಕೊಟ್ಟ, ಎಲ್ಲರಿಂದ ಬಂಧಿಸಲ್ಪಟ್ಟ ಜೀವನಭ್ರಮೆಗಳನ್ನು ದಾಟುವಿಕೆ. ಒಂದರ್ಥದಲ್ಲಿ ಇನ್ನೊಮ್ಮೆ ತಾಯಗರ್ಭದಿಂದ ಹೊರಬರುವಿಕೆ. ಅಲ್ಲೆಲ್ಲಿಯೋ ಹಿಮಾಲಯದಲಿ, ಇನ್ನೆಲ್ಲೋ ಕಾಶಿ ರಾಮೇಶ್ವರದಲಿ, ಭರತಭೂಮಿ ಬಿಟ್ಟು ಪರಪಂಚ ಸುತ್ತುವಿಕೆಯಲಿ, ಸುಮ್ಮನೆ ಅಲೆಯುತ ಅರಸುತಿರುವಲಿ ಜ್ಞಾನೋದಯವಿಲ್ಲ ಎಂಬ ವಿವೇಕ ಮೂಡುವ ಗಳಿಗೆಯದು. ‘ಬರದೇ ಇರುವುದು ಬರುವುದಿಲ್ಲ; ಬರುವುದು ಬರದೇ ಇರುವುದಿಲ್ಲ!’ ಎಂಬುದೇ ಜ್ಞಾನೋದಯ. ಯಾವುದೂ ನನ್ನ ನಿಯಂತ್ರಣದಲಿಲ್ಲ ಎಂಬುದು ಇನ್ನೊಂದು ಜ್ಞಾನೋದಯ!! ಅಂದರೆ ಎರಡೆರಡು ಜ್ಞಾನೋದಯಗಳಿರುತ್ತವೆಂದಲ್ಲ. ಆಗಾಗ್ಗೆ ಬದುಕಿನ ನಿತ್ಯಸತ್ಯಗಳು ಹೀಗೆ, ಮನಸಿಗೆ ಹಾಗೇ ಅನಿಸುವ ವಿಶ್ವಋತನಿಯಮಗಳು ಅರ್ಥವಾಗುತ್ತಿರುತ್ತವೆ. ಹೀಗೆ ಜ್ಞಾನೋದಯಗೊಂಡವರು ಚರಿತ್ರೆಯ ಪುಟಗಳಲ್ಲಿ ಅಮರರಾಗಿದ್ದಾರೆ. ಒಳಗಣ್ಣು ತೆರೆದು ನೋಡಿದರೆ ನಮ್ಮರಿವಿಗೆ ಬರುವಷ್ಟು ಸುತ್ತಮುತ್ತಲೂ ಇರುತ್ತಾರೆ. ಇದನ್ನು ಕಂಡು ಹಿಡಿಯಬೇಕಿಲ್ಲ; ಕಂಡುಕೊಳ್ಳಬೇಕು. ಇಂಗ್ಲಿಷಿನ ಈ ಮಾತೇ ಇದರ ಮುಕ್ತಾಯ: The Word LISTEN contains the same letters as the word SILENT! |
|
-ಡಾ. ಹೆಚ್ ಎನ್ ಮಂಜುರಾಜ್ |