ಮುಂಝಾನಿಂದ ಯಾಕೊ ಮನಸ್ಸು ಭಾಳ ತಳಮಳಸ್ಲಿಕತ್ತಿತ್ತು. ಇವತ್ತ ಆಂವಾ ಬರಾಂವ ಇದ್ದಾ. ಯಥಾಪ್ರಕಾರ ಕೈ ತಮ್ಮ ಕೆಲಸಾ ಮಾಡಲಿಕತ್ತಿದ್ವು. ಆದ್ರ ಮನಸ್ಸು ಮಾತ್ರಾ ಆಂವನ್ನ ನೆನಿಕೊಳ್ಳಿಕತ್ತಿತ್ತು. ಆಂವಗ ಇಷ್ಟ ಆಗೊ ಅಡಿಗಿ ಎಲ್ಲಾ ಮಾಡಿದ್ದೆ. ಆಂವಗ ನನ್ನ ಕೈ ಅಡಿಗಿ ಅಂದ್ರ ಭಾಳ ಸೇರತದ. ಊರಾಗ ಇದ್ದಾಗ ಎಷ್ಟ ಹೊತ್ತಾದ್ರು , ಹಸಿವ್ಯಾದ್ರು ಹೊರಗ ಏನು ತಿನ್ನಲಾರದ ಉಪವಾಸ ಮನಿಗೆನ ಊಟಕ್ಕ ಬರತಿದ್ದಾ. ನನ್ನ ಮುಂದ ಕೂಡಿಸಿಕೊಂಡು ನನ್ನ ಜೋಡಿ ಸರಸವಾಡಕೊತ ಊಟಾ ಮಾಡೊದಂದ್ರ ಆಂವಗ ಭಾಳ ಪ್ರೀತಿ. | |
ಆದ್ರ ಹಿಂಗ ಒಂದ ದಿನಾ ಆ ವಿಧಿ ಆಂವನ್ನ ತುಂಬಿದೆಲಿ ಮುಂದಿಂದನ ಕರಕೊಂಡ ಹೋಗಿಬಿಟ್ಟಿತ್ತು. ನನ್ನ ಹಣಿಯ ಶ್ರೀಂಗಾರ ಅಷ್ಟ ಅಲ್ಲಾ ನನ್ನ ಬಾಳಿನ ಚಲುವಿಕೆನ ಸುಧ್ಧಾ ತನ್ನ ಜೊಡಿ ತಗೊಂಡ ಹೋಗಿದ್ದಾ. ಆಂವಾ ಯಾವಾಗಿದ್ರು " ನಿನ್ನ ನೆರಳಿನಂಘ ಯಾವಾಗಿದ್ರು ನಿನ್ನ ಜೋಡಿನ ಇರತೇನಿ " ಅಂತ ಹೇಳತಿದ್ದಾ. ಆದ್ರ ಜೀವನದ ನಡು ಹಾದಿಯೊಳಗ ಅರ್ಧಕ್ಕ ನನ್ನ ಒಬ್ಬಾಕ್ಕಿನ್ನ ಮಾಡಿ ಹೋಗಿ ಬಿಟ್ಟಿದ್ದಾ. ನನಗ ತಿಳುವಳಿಕಿ ಬಂದಾಗಿಂದ ನಾನು ಆಂವನ ಒಡನಾಟದೊಳಗನ ನನ್ನ ಬಾಲ್ಯವನ್ನ ಕಳೆದೆ. ನಮ್ಮ ಬಾಜು ಮನಿಯೊಳಗಿದ್ದ ಅವರ ಕುಟುಂಬಕ್ಕ ಮತ್ತ ನಮ್ಮ ಮನೆಯವರಿಗಿದ್ದ ತುಂಬು ಸ್ನೇಹದ ಸೇತುವೆನ ನಮ್ಮಿಬ್ಬರ ಒಡನಾಟಕ್ಕ ಹಾದಿ ಆಗಿತ್ತು. ಸ್ವಭಾವತಃ ಸೌಮ್ಯ ಆದ ಆಂವನ ಸಾಮಿಪ್ಯ ನಂಗ ಭಾಳ ಸೇರತಿತ್ತು. ಹಿತವಾದ ಗೆಳೆತನದ ಭಾವದೊಳಗ ಹೆಂಗ ದಿನಾ ಕಳೆದು ಬಾಲ್ಯ ಹೋಗಿ ಹರೆಯ ಬಂತೊ ಗೊತ್ತಾಗಲೆ ಇಲ್ಲಾ. | |
ಇಗೀಗ ಆಂವ ನೋಡೊ ನೋಟ ಅದೇನೊ ಒಂಥರ ಮೈ ನವಿರೇಳುವಂಗಿರತಿತ್ತು. ಆವತ್ತು ಹುಣ್ಣಿಮೆಯ ಸಂಜಿಮುಂದ ನಮ್ಮ ಅಮ್ಮನ ಒಂದು ಸಂದೇಶವನ್ನ ಹೊತ್ತು ಅವರ ಮನಿಗೆ ಹೋಗಿ ಬರೊವಾಗ ಅವರ ಅಂಗಳದಾಗಿನ ಪಾರಿಜಾತ ಗಿಡದ ಕಟ್ಟಿಯ ಹತ್ರ ನಿಂತಿದ್ದ ಆಂವ. ಮತ್ತೇರಿಸುವಂತಿದ್ದ ಆ ನೋಟದೊಳಗಿನ ಕರೆಗೆ ಓಗೊಟ್ಟು ಆಂವನ ಹತ್ತಿರ ಹೋದಾಗ ಗಿಡದ ಮರೆಗೆ ನನ್ನ ಕರೆದು ನನ್ನ ತುಟಿಗೆ ಹೂಮುತ್ತು ಕೊಟ್ಟಿದ್ದ. ನಾನು ನಾಚಿ ಓಡುವ ಪ್ರಯತ್ನದಲ್ಲಿದ್ದಾಗ ನನ್ನ ಕೈ ಹಿಡಿದೆಳೆದು ಹಿಂದಿನಿಂದ ಅಪ್ಪಿ ಕಿವಿಯೊಳಗ " ನಾ ನಿನ್ನ ಭಾಳ ಪ್ರೀತಿ ಮಾಡ್ತಿನಿ " ಅಂತ ಪಿಸುಧನಿಯೊಳಗ ಹೇಳಿದ್ದ. ಆ ಕ್ಷಣದ ಸುಖದಮಲನ್ನ ಹೆಚ್ಚಿಸಲಿಕ್ಕಾಗಿ ಪ್ರಕೄತಿ ಮಂದನೆಯ ತಂಗಾಳಿ ಬಿಸಿತ್ತು. | |
ಅಲ್ಲಿಯ ಆ ಪಾರಿಜಾತದ ಹೂವಿನ ಜೋಡಿ ಸಂಜೆ ಅರಳಿದ ನಿತ್ಯಮಲ್ಲಿಗೆಯ ಹೂವಿನ ಸುವಾಸನೆ ಸುತ್ತಲು ಮಾದಕತೆಯನ್ನ ಹರಿಸಿತ್ತು. ಮುಂದ ಎಲ್ಲರ ಒಪ್ಪಿಗೆಯಿಂದ ಬಾಳಸಂಗಾತಿಗಳಾಗಿ ಅದೇಷ್ಟು ರಾತ್ರಿಗಳನ್ನ ನಾವಿಬ್ಬರು ಆ ಪಾರಿಜಾತದ ಗಿಡದ ಕಟ್ಟೆಯ ಮೇಲೆ ಸರಸವಾಡುತ್ತಾ ಕಳೆದೆವೊ ಅದರ ಲೆಕ್ಕ ಆ ಚಂದಪ್ಪಗ ಮಾತ್ರ ಗೊತ್ತದ ಅನಿಸ್ತದ. ನಮ್ಮ ಒಲವಿನಂಗಳದೊಳಗ ನಮ್ಮ ಪ್ರತಿರೂಪದಂತಿರೊ ಎರೆಡು ಹೂಗಳರಳಿದರು ನಮ್ಮ ಒಲವು ಮೊದಲಿನಂಘ ನಾವಿನ್ಯತೆಯಿಂದನ ಇತ್ತು. ಬೆಳದಿಂಗಳರಾತ್ರಿಯೊಳಗ ಪಾರಿಜಾತ ಗಿಡದ ಕಟ್ಟಿಯ ಮ್ಯಾಲೆ ನನ್ನ ಮಡಿಲೊಳಗ ತಲಿ ಇಟ್ಟು ಮಲಗಿ ತುಂಬಿದ ಚಂದ್ರನನ್ನ ನೋಡೊದು ಅಂದ್ರ ಆಂವಗ ಭಾಳ ಖುಷಿ ಆಗತಿತ್ತು. | |
ಎಲ್ಲಾನು ನೆನಪಿಗಿರಲಿ ಅಂತ ಕೊಟ್ಟು ನನ್ನಿಂದ ದೂರ ದೂರ ಹೋದ ಆಂವನ ಬೆನ್ನತ್ತಿ ಹೋಗಿ " ನನ್ನ ಬಿಟ್ಟು ಹೆಂಗ ಹೋದಿ ನೀನು ಮೋಸಗಾರ ಅಂತ ಕೇಳೊಣಂತಾ ಭಾಳ ಸಲಾ ಅನಿಸಿದ್ದದ. ಆದ್ರ ಆಂವನ ಪ್ರತಿರೂಪಧಂಗಿರೊ ಮಕ್ಕಳಿಗಾಗಿ ಬಲವಂತವಾಗಿ ನನ್ನನ್ನ ನಾನು ಜೀವಿಸೊ ಹಂಗ ಮಾಡಿಕೊಂಡೇನಿ. ಇವತ್ತಿಗೆ ಆಂವ ಹೋಗಿ ಒಂದು ವರ್ಷ ಆಗೇದ. ಇವತ್ತ ಆಂವಾ ಬರತಾನ, ನೆನಪಿನ ಬಲಿಯಿಂದ ಹೊರಗ ಬಂದು ಮತ್ತೊಂದ ಸಲಾ ಮಾಡಿದ್ದ ಅಡಿಗಿನೆಲ್ಲಾ ನೋಡಿ ಯಾವದು ಮರೆತಿಲ್ಲಾ ಅಂತ ಖಾತ್ರಿ ಮಾಡಕೊಂಡು, ಆಂವಗ ಬಾಳಿ ಎಲಿಯೊಳಗ ಊಟಾ ಮಾಡೊದಂದ್ರ ಭಾಳ ಸೇರತಿತ್ತು. ಎಲಿಯೊಳಗಂದ್ರ ನಾಲ್ಕ ತುತ್ತು ಜಾಸ್ತಿನ ಊಟಾ ಮಾಡತಿದ್ದಾ. ದೊಡ್ಡದೊಂದು ಕುಡಿಬಾಳಿ ಎಲಿಯೊಳಗ ಮಾಡಿದ್ದ ಅಡಗಿನೆಲ್ಲಾ ಬಡಿಸಿ ಪಾರಿಜಾತದ ಗಿಡದ ಕಟ್ಟಿ ಮ್ಯಾಲೆ ತಂದಿಟ್ಟೆ. ಆಂವನ್ನ ನಾ ಯಾವಾಗಿದ್ರು ಆಂವನ ಹೆಸರು ಹಿಡದು ಏಕವಚನದೊಳಗನ ಕರಿತಿದ್ದೆ. ನಾ ಹಂಗ ಕರೆಯೊದನ ಆಂವಗ ಸೇರತಿತ್ತು. ಮತ್ತ ನಾ ಹಂಗ ಕರಿಲಿ ಅನ್ನೊದ ಆಂವನ ಇಚ್ಛಾನು ಆಗಿತ್ತು. ಆದ್ರ ಇವತ್ತ ತುಂಬಿದೆಲಿ ಬಡಿಸಿಟ್ಟು "ಕಾವ್ ಕಾವ್" ಅಂತ ಕರಿಬೇಕಾದ್ರ ಉಸಿರು ನಿಂಥಂಗನಿಸ್ತಿತ್ತು. ಉಕ್ಕಿ ಬರೊ ಕಣ್ಣಿರನ್ನ ತಡಕೊಂಡು ಆಂವಗಾಗಿ ಕಾಯ್ದೆ. | |
ಸ್ವಲ್ಪ ಹೊತ್ತಿನ್ಯಾಗ ಸದ್ದಿಲ್ಲದಂಘ ಹಾರಿ ಬಂದು ಅಲ್ಲೆ ಇದ್ದ ಕುಂಬಿ ಮ್ಯಾಲೆ ಕೂತು ಹುಳು ಹುಳು ನನ್ನ ಮಾರಿನ ನೋಡಲಿಕತ್ತು. ಅಲ್ಲೆ ಇದ್ದ ಮಕ್ಕಳಿಗೆ ನಮಸ್ಕಾರ ಮಾಡಲಿಕ್ಕೆ ಹೇಳಿ ನಾನು ಸ್ವಲ್ಪ ಮುಂದ ಹೋಗಿ ಬಾ ಅಂತ ಕರೆಯೊಹಂಗ ಎಲಿನ ಮುಂದ ಸರಿಸಿದೆ. ಅದು ಹಾರಿ ಬಂದು ಎಲಿ ಮುಂದ ಕೂತು ಎಲಿಯೊಳಗಿನ ಭಜಿಯನ್ನ ತನ್ನ ಬಾಯೊಳಗ ತಗೊಂಡು ಮತ್ತ ನನ್ನ ಮಾರಿನ ನೋಡಲಿಕತ್ತು. ಹೌದು ಆಂವಗ ಬಟಾಟಿ ಭಜಿ ಅಂದ್ರ ಭಾಳ ಸೇರತಿದ್ವು. ಕಾಡಿಬೇಡಿ ಮ್ಯಾಲಿಂದ ಮ್ಯಾಲೆ ಇಚ್ಛಾ ಪಟ್ಟು ಮಾಡಿಸಿಕೊಂಡು ತಿಂತಿದ್ದಾ. ಕಣ್ಣಿರಿನಿಂದ ಮಸುಕಾದ ದೄಷ್ಠಿಯೊಳಗಿಂದನ ಎಲಿಒಳಗ ತಡಬಡಿಸಿ ಇನ್ನೊಂದು ಭಜಿಯನ್ನ ತಗೊಂಡು ಅದರ ಕೊಕ್ಕಿನ ಮುಂದ ಹಿಡದೆ. ಅದು ಬಗ್ಗಿ ತನ್ನ ಕೊಕ್ಕಿನಿಂದ ಮೃದುವಾಗಿ ನನ್ನ ಬೆರಳನ್ನ ಸ್ಪರ್ಷಿಸುತ್ತಾ ತನಗಿಷ್ಟದ ಭಜಿಯನ್ನ ತಗೊಂಡು ಹಾರಿ ಹೋಯಿತು. ಆ "ಕಾಕ ಸ್ಪರ್ಷ" ದೊಳಗ ಆಂವಾ " ನಾ ಯಾವಾಗಲು ನಿನ್ನ ಹತ್ರ, ನಿನ್ನ ಸುತ್ತಮುತ್ತನ ಇದ್ದೇನಿ ಮತ್ತ ಯಾವಾಗಲು ಇರತೇನಿ ಅಂತ ಹೇಳಲಿಕತ್ತಾನೇನೊ ಅನ್ನೊ ಅನುಭೂತಿ ಇತ್ತು. ಆ ಅಪೂರ್ವ ಅನುಭೂತಿಯಿಂದ ಮನಸ್ಸು ಹೃದಯ ತಪ್ತವಾಗಿ ಹೋತು……. | |
***** |