|
ಯಾವುದೇ ಸಮಾಜ, ಯಾವುದೇ ಸಂಸ್ಕೃತಿ, ಯಾವುದೇ ಭಾಶೆ, ಪ್ರೇಮಕವನಗಳಿಲ್ಲದಿದ್ದರೆ ಅಪೂರ್ಣವೇ ಅನ್ನಬಹುದು. ಸಾಹಿತ್ಯದಲ್ಲಿ ಬಗೆಬಗೆಯ ರುಚಿಯುಳ್ಳ ಶೈಲಿಗಳು ಬರಬಹುದು, ಹೋಗಬಹುದು; ಆದರೆ, ಪ್ರೇಮಕವನ ಒಂದು ಶಾಶ್ವತ ಪ್ರಕಾರ – ಒಂದು ಅರ್ಥದಲ್ಲಿ ಕಾವ್ಯದ ಜೀವಾಳ. ಸಾಹಿತ್ಯ ಚರಿತ್ರೆ, ವಿಮರ್ಶೆ ಈ ಮೂಲಭೂತ ಕಾವ್ಯಪ್ರಕಾರವನ್ನು ಕಡೆಗಣಿಸಿದ್ದರೂ, ಇತಿಹಾಸದುದ್ದಕ್ಕೂ ಜನಜೀವನದ ಅವಿಭಾಜ್ಯ ಭಾಗವಾಗಿರುವ ಸಾಹಿತ್ಯಪ್ರಕಾರಗಳಲ್ಲಿ ಪ್ರೇಮಕವನ ಪ್ರಮುಖವಾದದ್ದು. ಊಟಕ್ಕೆ ಬೇಕಾಗುವ ಉಪ್ಪಿನಕಾಯಿಯಂತೆ ದಿನನಿತ್ಯದ ಬಾಳಿಗೆ ಅವಶ್ಯಕ ಕೊಡುಗೆ ಪ್ರೇಮಕವನದ್ದು.
|
|
|
|
(ಜಬೀವುಲ್ಲಾ ಅಸದ್)
|
|
|
|
ಅತ್ಯುತ್ತಮ ಕವನಗಳೂ ಕೂಡ ಅತ್ಯಂತ ಸಂಕೀರ್ಣವಾಗಿರುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತ”, ಅಥವಾ ಕನಕದಾಸರ ಮುಂಡಿಗೆಗಳು, ಬೇಂದ್ರೆಯವರ “ಜೋಗಿ” ಇಂತಹ ಕವನಗಳನ್ನು ನೋಡಬಹುದು. ಆದರೆ, ಪ್ರೇಮಕವನ ಪ್ರಕಾರದಲ್ಲಿ ಮಾತ್ರ ಇದು ಅಪರೂಪ. ಈ ಮಾತಿಗೆ ಹೊರತು ಎಂದರೆ ನವ್ಯಕಾವ್ಯ ಎನ್ನಬಹುದು, ಯಾಕೆಂದರೆ ನವ್ಯಕವಿಗಳು ವ್ಯಂಗ್ಯಕ್ಕೆ ಎಷ್ಟು ಒತ್ತು ಕೊಡುತ್ತಾರೆ ಅಂದರೆ ಸರಳ ಅಭಿವ್ಯಕ್ತಿಯ ಕುರಿತಾಗಿ ನವ್ಯಕಾವ್ಯದಲ್ಲಿ ಒಂದು ಬಗೆಯ ಅಪನಂಬಿಕೆಯೇ ಇರುವುದನ್ನು ಕಾಣಬಹುದು. ಈ ಅಪನಂಬಿಕೆಯಿಂದಾಗಿಯೇ ನವ್ಯಕವಿಗಳು ಪ್ರೇಮಕವನ ಬರೆದಿದ್ದು ಕಡಿಮೆ ಅಥವಾ ನವ್ಯ ಪದ್ಧತಿಯ ಪ್ರೇಮಕವನದ ರೀತಿಯೇ ಭಿನ್ನ. ಹೀಗೆ, ಪ್ರೇಮಕಾವ್ಯದ ದಾರಿ ಬಿಟ್ಟು ಬರೆಯುವ ವಿಧಾನಕ್ಕೆ ಮೂಲಮಾದರಿ ಒದಗಿಸಿದ ಮಹಾಶಯನೆಂದರೆ ಇಂಗ್ಲೀಷ್ ಕವಿ ಟಿ ಎಸ್ ಎಲಿಯೆಟ್.
|
|
|
|
ಸರಿಸುಮಾರು ನೂರಾ ಹತ್ತು ವರುಷಗಳ ಹಿಂದೆ 1910-11ರಲ್ಲಿ ಟಿ ಎಸ್ ಎಲಿಯೆಟ್ ತನ್ನ ಮೊಟ್ಟ ಮೊದಲ ಕವನ “ದ ಲವ್ ಸಾಂಗ್ ಆಫ್ ಜೆ ಆಫ್ರೆಡ್ ಪ್ರುಫ್ರಾಕ್” ಬರೆದರು. ಕೊಂಚ ಪರಿಷ್ಕರಣೆಗಳಿಗೆ ಒಳಗಾಗಿ ಈ ಕವನ ಮೊದಲು 1915ರಲ್ಲಿ ಪ್ರಕಟವಾಯಿತು. ಮುಂದೆ, 1917ರಲ್ಲಿ ಪ್ರಕಟವಾದ ಅವರ ಮೊದಲ ಕವನ ಸಂಕಲನದ ಮೊದಲ ಕವನವೂ ಇದಾಗಿತ್ತು. ಆಧುನಿಕನೊಬ್ಬನ ಹತಾಶೆ, ಭ್ರಮನಿರಸನ, ಏಕಾಕಿತನ, ಕ್ರಿಯಾಶೂನ್ಯತೆಗಳನ್ನು ವಿಷಯವಾಗಿಸಿಕೊಂಡ ಈ ಕವನ ಪ್ರೇಮಕವನಗಳ ಇಡೀ ಇತಿಹಾಸಕ್ಕೆ ವ್ಯತಿರಿಕ್ತ ರೀತಿಯ ಪ್ರೇಮಕವನವಾಗಿತ್ತು. ಪ್ರೇಮದ ವಿಷಯದಲ್ಲಿ ವ್ಯಂಗ್ಯದ ಬಳಕೆಯ ಮೂಲಕ ಮನುಷ್ಯ ಸಾಧ್ಯತೆಗಳನ್ನೇ ಸಂದೇಹಾತ್ಮಕವಾಗಿ ನೋಡುವ ಈ ಕವನ ಪ್ರತಿನಿಧಿಸುವ ಅಪನಂಬಿಕೆಯ ವಿಧಾನ ಮಾಡರ್ನಿಸ್ಟ್ (ಕನ್ನಡದಲ್ಲಿ ನವ್ಯ) ಎಂಬ ಸಾಹಿತ್ಯ ವಿದ್ಯಮಾನದ ಗುರುತಾಗಿ ಬೆಳೆದಿದ್ದು ನಮಗೆಲ್ಲ ತಿಳಿದೇ ಇದೆ. ನವೋದಯ ಕವಿಗಳ ಪ್ರೇಮಕವನಗಳಲ್ಲಿ ಕಂಡುಬರುವ ಸಹಜ ಧ್ವನಿ, ಭಾಶಿಕ ಸೊಗಸು, ತಿಳಿ ಅಭಿವ್ಯಕ್ತಿ, ಆದರೂ ಗಹನ ವಿಚಾರಕ್ಕೆ ನಮ್ಮನ್ನು ಎತ್ತರಿಸುವ ಅವುಗಳ ಗುಣ ಇವೆಲ್ಲವೂ ಎಲಿಯೆಟ್ ಕಾವ್ಯವಿಧಾನಕ್ಕೆ ವಿಪರೀತವಾದದ್ದು. ಎಲಿಯೆಟ್ ಕಾವ್ಯಮಾದರಿ ಚಾಲ್ತಿಗೆ ತಂದ ಆತ್ಮ-ನಿರೀಕ್ಷಣೆಯ (self-conscious), ಸ್ವ-ನಿರಾಕರಣೆಯ (self-deprecating) ಮತ್ತು ಪರೋಕ್ಷ ಅಭಿವ್ಯಕ್ತಿ ಶೈಲಿ ಪ್ರೇಮಕವನಕ್ಕೆ ಹೊಂದುವಂತದ್ದಲ್ಲ. ಎಲಿಯೆಟ್ ಮಾದರಿಯನ್ನು ಅನುಸರಿಸಿದ ಕಡೆಯೆಲ್ಲ ಸಹಜ ಮತ್ತು ನೇರ ಅಭಿವ್ಯಕ್ತಿಯನ್ನು ಬೇಡುವ ಪ್ರೇಮಕವನ ಬಾಡಿ ಹೋಗಿದ್ದನ್ನು ಕಾಣಬಹುದು. ಕನ್ನಡದ ಅನೇಕ ಮೇರು ಕವಿಗಳು ನವ್ಯೋತ್ತರ ಕಾಲದಲ್ಲಿ ನವ್ಯಕಾವ್ಯದ ಅಭಿವ್ಯಕ್ತಿಯ ಬಿಗಿತನ, ವಿಷಯ ಪ್ರಸ್ತುತಿಯ ಹೃಸ್ವತೆ, ಪ್ರತಿಮೆಗಳ ನಿಖರತೆಗಳನ್ನು ಮುಂದುವರಿಸಿದರೂ ಸಹ, ವ್ಯಂಗ್ಯ ಮತ್ತು ಅಪನಂಬಿಕೆಯ ಬಳಕೆಯನ್ನು ಗೌಣವಾಗಿಸಿದರು. ಆದರೂ, ನವ್ಯಕಾವ್ಯ ಕೊಟ್ಟ ಪೆಟ್ಟಿನಿಂದ ಪ್ರೇಮಕವನ ಸುಧಾರಿಸಿಕೊಂಡಿಲ್ಲ – ಬದಲಿಗೆ ಕನ್ನಡದಲ್ಲಿ ಮುನ್ನೆಲೆಗೆ ಬಂದ ಶ್ರಾವ್ಯಕಾವ್ಯ ಮತ್ತು ಸಿನೆಮಾಗೀತೆಗಳಲ್ಲಿ ತನ್ನ ಜೀವಂತಿಕೆ, ಸೃಜನಶೀಲತೆಯನ್ನು ದರ್ಶಿಸಿದೆ.
|
|
|
|
ಈ ಹಿನ್ನೆಲೆಯಲ್ಲಿ, ವ್ಯಂಗ್ಯ ಮತ್ತು ಸ್ವ-ನಿರಾಕರಣೆಯ ಶೈಲಿಗಳಿಂದ ಬಿಡಿಸಿಕೊಂಡ, ಆತ್ಮ-ನಿರೀಕ್ಷಣೆಯ ಚಪಲಕ್ಕೆ ಬೀಳದೇ ನೇರ ಅಭಿವ್ಯಕ್ತಿಗೆ ಪ್ರಯತ್ನಿಸುವ, ಆಗೀಗ ವಾಚಾಳಿಯಾಗಲು ಹಿಂಜರಿಯದ, ಪ್ರೇಮಕವನಗಳನ್ನು ಓದಿದಾಗ ನನಗೆ ಹೊಸದೇನನ್ನೋ ಓದುತ್ತಿರುವೆ ಅನಿಸುತ್ತದೆ. ಇದು, ಒಂಥರಾ ಯೌವನದ ಅಮಾಯಕತೆಗೆ ಹೊರಳಿದಂತೆ. ಸಾಹಿತ್ಯಜ್ನಾನದಿಂದ ಮುಕ್ಕಾಗಿ ಹೋದ ಸರಳ ಸ್ಪಂದನಶೀಲತೆಯನ್ನು ಮರಳಿ ಕಂಡುಕೊಂಡಂತೆ. ಅದೇನೋ ಭಾರವಾದದ್ದನ್ನು ಹೊತ್ತಿಯೇ ಇರಬೇಕು ಎನ್ನುವ ದಾಕ್ಷಿಣ್ಯಕ್ಕೆ ಬೀಳದೇ, ಹೆಗಲ ಮೇಲಿಂದ ಹೊರೆ ಇಳಿಸಿಕೊಂಡು ಹಗುರವಾದಂತೆ. ಭಾಶೆ, ಭಾವ ಮತ್ತು ಸ್ವರೂಪದ ನೆಲೆಯಲ್ಲಿಯೇ ಕವನದ ಒಟ್ಟೂ ಅನುಭವವನ್ನು ಪಡೆದುಕೊಂಡಂತೆ. ಉರ್ದು ಭಾಶೆಯ ಮುಶೈರಾಗಳು ಸಾವಿರಾರು ಕೇಳುಗರಿಂದ ತುಂಬಿ ತುಳುಕಲು ಕಾರಣ ಪ್ರೇಮಕವನಗಳ ಇದೇ ಸ್ಪಂದನಶೀಲ ಗುಣ ಎನಿಸುತ್ತದೆ.
|
|
|
|
ಹೀಗೆ ನನ್ನನ್ನು ಯೋಚಿಸಲು ಹಚ್ಚಿದ್ದು ಜಬಿವುಲ್ಲಾ ಅಸದ್ ಅವರ “ಪ್ರೇಮಯಾತನ” ಸಂಕಲನದ ಕವನಗಳು. ಈ ಸಂಕಲನದ ಶೀರ್ಷಿಕೆಯಿಂದಲೇ ಮೊದಲಾಗುವ ಕಾವ್ಯಲಕ್ಷಣ ಎಂದರೆ ವ್ಯಂಗ್ಯಾತ್ಮಕತೆ ಇಲ್ಲದ ನೇರ ಶೈಲಿ. ಸವಕಲು, ಜಾಳು, ಅಮೂರ್ತ ಎಂದೆಲ್ಲ ನವ್ಯಪ್ರಣೀತ ವಿಮರ್ಶಾ ಸೂತ್ರಗಳು ಸೂಚಿಸಬಹುದಾದ ಆದರೆ ಪ್ರೇಮಕವನವೆಂಬ ಕಾವ್ಯಮಾದರಿಯಲ್ಲಿ ಅಪೇಕ್ಷಣೀಯ ಆಗಿರುವ ಶೈಲಿ. ಈ ಬಗೆಯ ಅಭಿವ್ಯಕ್ತಿಯ ನೇರತನ, ಸಹಜತೆ, ಮತ್ತು ಸ್ಪಷ್ಟತೆ ಪ್ರೇಮದ ಅನುಭವಕ್ಕೆ ಅತ್ಯಂತ ಸೂಕ್ತ. ಜಬಿವುಲ್ಲಾ ಅವರ ಅನೇಕ ಕವನಗಳು ಈ ಸಹಜ ಲಕ್ಷಣಗಳನ್ನು ಹೊಂದಿದ್ದು, ಪ್ರೇಮ ಎಂಬ ವಿಷಯವನ್ನು ಯಾವುದೇ ಸಂಕೀರ್ಣತೆಗಳಿಗೆ, ಪರೋಕ್ಷ ನುಡಿಗಳಿಗೆ ಒಪ್ಪಿಸದೇ ನೇರಾನೇರವಾಗಿ ಹೇಳುತ್ತವೆ. ಪ್ರೇಮಕ್ಕೆ ಸಂಬಂಧಿಸಿದ ಕವನಗಳನ್ನೇ ಬರೆಯಲು ಹೊರಟಿರುವ ಕವಿ ಪ್ರತಿಯೊಂದು ಕವನದಲ್ಲಿಯೂ ಅದೇ ವಿಷಯವನ್ನು ಬೇರೆ ಬೇರೆ ಬಗೆಯಲ್ಲಿ ನಿರೂಪಿಸ ಬೇಕಾಗುತ್ತದೆ – ಜಬಿವುಲ್ಲಾ ಹಾಗೆಯೇ ಮಾಡುತ್ತಾರೆ. ಅವರು ಇದಕ್ಕಾಗಿ ಬಳಸುವ ಪ್ರತಿಮೆಗಳು, ರೂಪಕಗಳು, ಅವರ ಭಾಶೆ, ಅವರ ಸಾಲುಗಳ ಲಯ, ಇವೆಲ್ಲ ಯಾವುದೇ ಓದುಗನನ್ನೂ ದಣಿಸದೇ ತಣಿಸುವ ರೀತಿಯದಾಗಿವೆ.
|
|
|
|
ಜಬಿವುಲ್ಲಾ ಅವರು ಪ್ರೇಮಕವನಗಳ ವ್ಯಾಕರಣವನ್ನು ಚೆನ್ನಾಗಿ ಅರಿತು ಬರೆದಿರುವ ಕವಿತೆಗಳು ಇವು. ಪ್ರೇಮಪಾಶಕ್ಕೆ ಸಿಲುಕಿದ ಮನಸೊಂದರ ನಿರೂಪಣೆಗಳಾಗಿ ಪ್ರಸ್ತುತವಾಗುವ ಈ ಕವನಗಳು, ಪ್ರೇಮಕ್ಕೆ ಹೊರತಾದ ಅನುಭವ, ಮೌಲ್ಯ, ಭಾವನೆಗಳ ಕಡೆ ಸುಳಿಯುವುದಿಲ್ಲ. ಪ್ರೇಮದ ಭಾವತೀವ್ರತೆ ಜಬಿವುಲ್ಲಾ ಅವರ ಕವನಗಳಲ್ಲಿ ಕಡಿಮೆ. ಹಾಗಾಗಿ ಅವರು ಅತಿಶಯೋಕ್ತಿ ಬಳಸುವುದು ಕಡಿಮೆ. ಇದು ಈ ಸಂಕಲನದ ಕವನಗಳಿಗೆ ವಾಸ್ತವದ ನೆಲೆಯನ್ನು ಒದಗಿಸುತ್ತದೆ. ಇಲ್ಲಿಯ ಅನೇಕ ಸಾಲುಗಳನ್ನು, ನುಡಿಗಟ್ಟುಗಳನ್ನು ನಾವು ಯಾರೇ ಆದರೂ ಯಾವಗಲೇ ಆದರೂ ಬಳಸಬಹುದು:ಸಂತೆಯ ನಡುವೆ ನಿಂತು, ಲೋಕದ ಚಿಂತೆ ಮರೆತುಕೇಳುವ ಕೊಳಲಿನ ನಾದ ಪ್ರೇಮವೆಂದರೆ
|
|
|
|
ಪ್ರೇಮಕವನಗಳನ್ನು ಬರೆಯುವ ಕವಿ ಎದುರಿಸುವ ಮುಖ್ಯ ಸವಾಲು ಅಂದರೆ ಅಭಿವ್ಯಕ್ತಿಯ ಸವಕಲು ಗುಣ. ಅತಿಬಳಕೆಯಿಂದಾಗಿ ಪ್ರೇಮದ ಕುರಿತಾಗಿ ಹೇಳಬಹುದಾದ ಅನೇಕ ಮಾತುಗಳು ತೀರಾ ಸವಕಲಾಗಿ, ಈಗ ಕೃತ್ರಿಮ ಅನಿಸಿಬಿಡುವುದು ಸಹಜ. ಈ ನಿಟ್ಟಿನಲ್ಲಿ ನನಗೆ ಜಬಿವುಲ್ಲಾ ಅವರ ಸೃಜನಶೀಲ ಮರುರೂಪಿಸುವಿಕೆ ಇಷ್ಟವಾಯಿತು. ವ್ಯಾಪಕವಾಗಿ ಬಳಕೆಯಾದ ಭಾವನೆಯೊಂದನ್ನು ಬಳಸುವಾಗ ಅವರು ಅದಕ್ಕೊಂದು ಟ್ವಿಸ್ಟ್ ಕೊಡುತ್ತಾರೆ. ಅವರು ಕೊಡುವ ಈ ತಿರುವು ಆ ಭಾವನೆ ಮತ್ತು ಅಭಿವ್ಯಕ್ತಿಗೆ ಹೊಸ ಚಾಲ್ತಿ ಸಾಧ್ಯವಾಗಿಸುತ್ತದೆ:ಕಂಬನಿಗಳೆಲ್ಲ ನಿನ್ನ ನೆನಪಲ್ಲೆ ಇಂಗಿನೋವು ಹೆಪ್ಪುಗಟ್ಟಿ ಹೃದಯವೇ ಶಿಲೆಯಾಗಿದೆ“ಸಂಗ್-ಎ-ದಿಲ್” ಎಂಬ ಉರ್ದು ಕಾವ್ಯದ, “ಪಥರ್‌ಸಾ ದಿಲ್” ಎಂಬ ಹಿಂದಿ ಕಾವ್ಯದ, “ಕಲ್ಲುಹೃದಯ” ಎಂಬ ಕನ್ನಡದ ನುಡಿಗಟ್ಟನ್ನು ಅವರು ಇಲ್ಲಿ ಮಾರ್ಪಡಿಸಿ ಕೊಂಡಿರುವುದು ವಿಶೇಷವಾಗಿದೆ. “ಮತ್ತೆ ಎಲ್ಲಿ ಸಿಗುವೆ ಸಖಿ” ಎನ್ನುವ ಕವನದಲ್ಲಿ ಜಬಿವುಲ್ಲಾ ಅವರ ನಿರೂಪಕ ತನ್ನ ಸಖಿಗೆ ಹೇಳುವ ಮಾತನ್ನು ಬಳಸಿಯೂ ಈ ಕವಿ ಬಳಲಿದ ನುಡಿಗಟ್ಟುಗಳಿಗೆ ಮರುಜೀವ ಕೊಡುವುದನ್ನು ವರ್ಣಿಸಬಹುದು:ಮತ್ತೆ ಎಂದಾದರೂ ನೀಅವುಗಳ ಬಿಡಿಸಿ ಅಕ್ಷರಗಳನ್ನು ತಾಕಲುಭಾವಸುಮಗಳಿಗೆ ಮತ್ತೆ ಜೀವ ಬಂದುಅರಳಿ ನಕ್ಕು ಘಮ್ ಎನ್ನು(ತ್ತಾವೆ)
|
|
|
|
|
|
|
|
ಜಬಿವುಲ್ಲಾ ಅವರ ನಿರೂಪಕ ಪ್ರೇಮಿ – ಆದರೆ ಆತ ಇಂದಿನ ಸಾರ್ವಜನಿಕ ಸಂಸ್ಕೃತಿ ಎದುರು ಮಾಡಿರುವ ಅತಿಗಂಡಸುತನದ ಗರ್ವಿ, ಹಠಮಾರಿ, ಹಿಂಸಾಚಾರಿಯಾದ “ಸಿಕ್ಸ್ ಪ್ಯಾಕ್” ಪ್ರೇಮಿಯಲ್ಲ. ಬದಲಿಗೆ, ಭಾವನೆಗಳನ್ನು ಅಕ್ಷರಗಳಿಗೆ ಹೋಲಿಸುವಷ್ಟು ಸೂಕ್ಷ್ಮಜೀವಿ; ತನ್ನಂತೆಯೇ ಪ್ರೇಮದ ಅನುಭವ ಎಲ್ಲರಿಗೂ ದಕ್ಕಲಿ ಎನ್ನುವಷ್ಟು ಹೃದಯವಂತಿಕೆಯ ಭಾವಜೀವಿ.ಚೆಂದದ ನೋವಿಗೆಒಲವೆಂದು ಹೆಸರಿಟ್ಟು ಹರಸಿಬದುಕುವ ವರ ಎಲ್ಲರಿಗೂದಕ್ಕುವಂತಾಗಲಿ…ಮನಸಿನ ವೇದನೆಗೆಕೆದಿಗೆಯ ಹೂ ಮುಡಿಸಿದುಃಖವನು ಸಂಭ್ರಮಿಸುವ ಬಯಕೆತಲೆದೂಗುವಂತಾಗಲಿ..
|
|
|
|
“ಪ್ರೀತಿಯ ನವಿಲು ಎದೆಯ ಹಸಿ ನೆಲದ ಮೇಲೆ ರೆಕ್ಕೆ ಬಿಚ್ಚಿ ಕುಣಿದ ಹೆಜ್ಜೆ ಗುರುತುಗಳು” ಈ ಕವನಗಳು ಎಂದು ತಮ್ಮ ಮಾತಿನಲ್ಲಿ ಹೇಳಿಕೊಂಡಿರುವ ಜಬಿವುಲ್ಲಾ ಅವರ ಸಂವೇದನೆ ವೈವಿಧ್ಯಮಯ ಓದಿನಿಂದ ರೂಪುಗೊಂಡಿದೆ ಅಂತ ನನಗೆ ಅನಿಸಿದೆ ಮತ್ತು ಈ ಓದು ಕೇವಲ ಕನ್ನಡ ಪ್ರೇಮಕವನಗಳಿಗೆ ಸೀಮಿತವಾಗಿರದೇ, ಹಿಂದಿ ಮತ್ತು ಉರ್ದು ಭಾಶೆಯ ಪ್ರೇಮಕವನಗಳನ್ನೂ ಒಳಗೊಂಡಿದೆ ಅನಿಸುತ್ತದೆ. ಇನ್ನೊಂದು ವಿಶೇಷ ಲಕ್ಷಣವೆಂದರೆ ಜಬಿವುಲ್ಲಾ ಅವರ ನಿರಾಭರಣ ಅಭಿವ್ಯಕ್ತಿ ವಿಧಾನ. ಅನೇಕ ಕವಿತೆಗಳಲ್ಲಿ ಅನಗತ್ಯ ಅಲಂಕಾರದ ಬಟ್ಟೆ ತೊಡಿಸದೇ ಹೇಳಬೇಕಿರುವುದನ್ನು ಮಗುವಿನಂತೆ ಸಹಜವಾಗಿ ಹೇಳಿಬಿಡುತ್ತಾರೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ “ಅವನು ಬರಬಹುದು” ಎಂಬ ಕವನ. ಅದರ ಕೆಲವು ಚರಣಗಳು ಹೀಗಿವೆ:ತೆರೆದ ಬಾಗಿಲು ತೆರೆದೆ ಇರಲಿಮುಚ್ಚುವುದು ಬೇಡಅವನು ಬರಬಹುದು
|
|
|
|
ಹೂ ಬಾಡುವ ಸಮಯಕ್ಕೆ ಮುಡಿಯಲ್ಲಿಮೊಲ್ಲೆಯೊಂದು ಬಿರಿಯುತ್ತಿದೆಅವನು ಬರಬಹುದು
|
|
|
|
ಮುರಿದ ಕನಸುಗಳಲ್ಲಿಹಕ್ಕಿ ಗೂಡು ಹೆಣೆಯುತ್ತಿದೆಅವನು ಬರಬಹುದು…
|
|
|
|
ಎಲ್ಲಿಂದಲೋ ಬಂದ ಚಿಟ್ಟೆಗಲ್ಲಕೆ ಅರಿಶಿಣ ಹಚ್ಚಿ ಹೋಗಿದೆಅವನು ಬರಬಹುದು
|
|
|
|
ಸುಮ್ಮನೆ ಕೂತಿದ್ದರುಕಾಲ್ಗೆಜ್ಜೆ ಘಲ್ ಎಂದು ಸದ್ದು ಮಾಡುತ್ತಿದೆಅವನು ಬರಬಹುದು
|
|
|
|
ಸುಡುವ ಬಿಸಿಲಲ್ಲಿ ಮಳೆ ಸುರಿದುಭೂಮಿ ಘಮ್ ಎನ್ನುತ್ತಿದೆಅವನು ಬರಬಹುದು
|
|
|
|
(ಕಮಲಾಕರ ಕಡವೆ)
|
|
|
|
ಜಬಿವುಲ್ಲಾ ಅಸದ್ ಅವರ ಕವನಗಳನ್ನು ಫೇಸ್ಬುಕ್‌ನಲ್ಲಿ ಓದಿ ಮೆಚ್ಚಿಕೊಂಡಿದ್ದ ನನಗೆ ಅವರ ಕವನಗಳನ್ನು ಈ ಸಂಕಲನದಲ್ಲಿ ಒಟ್ಟಿಗೇ ಓದುತ್ತ ಖುಶಿಯಾಗಿದ್ದು ನಿಜ. ಭಾಶೆಯ ಬಳಕೆಯಲ್ಲಿ, ಲಯದ ನಿರ್ವಹಣೆಯಲ್ಲಿ, ಪದನಾದ ಹುಡುಕುವುದರಲ್ಲಿ, ಭಾವನೆಗಳಿಗೆ ಸೂಕ್ತ ಪ್ರತಿಮೆ ಬಳಸುವಲ್ಲಿ ಜಬಿವುಲ್ಲಾ ಕಲಾವಂತಿಕೆ ತೋರಿಸುತ್ತಾರೆ. ಕವಿತೆಗಳಿಗೆ ಹೊಂದುವಕಾಲ್ ಕಾಲ್ ಕ್ಚ್ಚ್ ccçರೇಖಾಚಿತ್ರಗಳನ್ನೂ ಸ್ವತಃ ಬಿಡಿಸಿರುವ ಜಬಿವುಲ್ಲಾ ಈಗಾಗಲೇ ಕಲಾವಿದರಾಗಿಯೂ ಹೆಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಕವನಗಳು ನಮ್ಮನ್ನು ಮತ್ತಷ್ಟು ಆವರಿಸುತ್ತಾವೆ, ಕನ್ನಡ ಕಾವ್ಯ ಪರಂಪರೆಯ ಶ್ರೀಮಂತಿಕೆಗೆ ಕೊಡುವ ಕೊಡುಗೆಗಳಾಗುತ್ತಾವೆ ಎಂದು ನಾನು ನಂಬಿದ್ದೇನೆ. ಜಬಿವುಲ್ಲಾ ಅವರ “ಪ್ರೇಮಯಾತನ” ಸಂಕಲನದ ಕವನಗಳು ಕನ್ನಡ ಓದುಗರನ್ನು ತಲುಪಿ ಮುದಗೊಳಿಸಲಿ ಎಂದು ಹಾರೈಸುತ್ತೇನೆ.
|
|
|
|
ಒಂದು ಕವಿತೆ
|
|
|
|
ಮಾತಿಲ್ಲದ ಘಳಿಗೆಹುಟ್ಟುತ್ತದೆ ಒಂದು ಕವಿತೆಕರುಣಾಳ ಬೆಳಕ ಸಂಹಿತೆಸಂಭವಿಸುತ್ತದೆ ಅಂತರಂಗದಬಯಲೊಳಗೆ
|
|
|
|
ಏಕಾಂತದ ಪ್ರಮೆಯಕೆಕಣ್ತೆರೆಯುತ್ತದೆ ಒಂದು ಕವಿತೆಜಗದ ಸಂತೆಯ ನಡುವೆನೋವ ಎಸೆದು ಹಾರುತ್ತದೆಅನಂತತೆಯೆಡೆಗೆ
|
|
|
|
ಸಂಘರ್ಷದ ಸಂಜೆಗೆಜೀವ ಪಡೆಯುತ್ತದೆ ಒಂದು ಕವಿತೆಕೆಂಪು ಆಗಸ ತಂಪಾಗುವ ಮೊದಲೇಕಡಲಾಗಿ ಭೋರ್ಗರೆಯುತ್ತದೆಎಲ್ಲೆಯೊಳಗೆ
|
|
|
|
ಮೊದಲ ಮಳೆಗೆಘಮ್ ಎನ್ನುತ್ತದೆ ಒಂದು ಕವಿತೆಹುಡಿ ಮಣ್ಣಿನ ತಾಜಾ ಅನುಭೂತಿಗೆಸಾಕ್ಷಿಯಾಗಿ ನಿಲ್ಲುತ್ತದೆಅನುಭವದೊಳಗೆ
|
|
|
|
*****
|
|
|
|
ಭಾವ ತರಂಗ
|
|
|
|
ಮನಸ್ಸಿಗೆ ರೆಕ್ಕೆ ಕಟ್ಟಿ ಹಾರಲು ಬಿಡಿಮುಗಿಲನ್ನು ಸೇರಿಕೊಳ್ಳಲಿ…
|
|
|
|
ಮನಸ್ಸನ್ನು ನದಿಯಾಗಿ ಹರಿಯಲು ಬಿಡಿಕಡಲನ್ನು ಹುಡುಕಿಕೊಳ್ಳಲಿ…
|
|
|
|
ಮನಸ್ಸನ್ನು ಅಲೆಮಾರಿ ಆಗಲು ಬಿಡಿಗುರಿಯನ್ನು ಆಯ್ದುಕೊಳ್ಳಲಿ…
|
|
|
|
ಮನಸ್ಸಿಗೆ ಕಣ್ಣುಗಳನ್ನು ಕೊಟ್ಟು ಬಿಡಿಕಾಣದಿರುವುದನ್ನು ಕಂಡುಕೊಳ್ಳಲಿ…
|
|
|
|
ಮನಸ್ಸನ್ನು ಪರವಶಗೊಳ್ಳಲು ಬಿಡಿಅನುಭವ ದಕ್ಕಿಸಿಕೊಳ್ಳಲಿ…
|
|
|
|
ಮನಸ್ಸನ್ನು ಕತ್ತಲಲ್ಲಿ ಕಳೆಯಲು ಬಿಡಿತನ್ನನ್ನು ತಾ ಹುಡುಕಿಕೊಳ್ಳಲಿ…
|
|
|
|
ಮನಸ್ಸನ್ನು ಏಕಾಂತಕ್ಕೆ ಮಾರಿ ಬಿಡಿಲಾಭ ತಂದುಕೊಡಲಿ…
|
|
|
|
ಮನಸ್ಸಿನ ಜೊತೆಕೂತು ಮಾತನಾಡಿ ಬಿಡಿನೋವು ಹಂಚಿಕೊಂಡು ಹಗುರಾಗಲಿ…
|
|
|
|
ಮನಸ್ಸನ್ನು ಧ್ಯಾನಶೂನ್ಯದಲಿ ಕರಗಲು ಬಿಡಿಜ್ಞಾನೋದಯವನ್ನು ಪಡೆದುಕೊಳ್ಳಲಿ…
|
|
|
|
*****
|
|
|
|
ಅಪಸ್ವರ
|
|
|
|
ಬೆಳಕಿಲ್ಲದ ಶೂನ್ಯ ತುಂಬಿದ ಹಾದಿಯಲಿಕತ್ತಲೇ ಎದುರಾಗುವುದುರೆಪ್ಪೆ ಮುಚ್ಚಿದ ಕನಸು ಹುಟ್ಟುವ ಕಣ್ಣಲಿಲೋಕವೇ ಕುರುಡಾಗುವುದು!
|
|
|
|
ಹೃದಯವಿದು ದುಃಖ ತುಂಬಿದ ಖಜಾನೆಕೀಲಿ ಕೈ ಕಳೆದಿಹುದುಕಾಣದ ದೇವರ ಮೇಲಿನ ನಂಬಿಕೆಯನೆಕೈ ಬಿಡದೆ ಕಾಯುತಿಹುದು
|
|
|
|
ಕಲ್ಪನೆಗಳನ್ನು ಕೆತ್ತಿ ಭಾವಗಳಿಗೆರೂಪ ಕೊಡಬಹುದುಬದುಕಿನ ಖಾಲಿ ಬಟ್ಟಲಲ್ಲಿ ಹೇಗೆಅರ್ಥವನ್ನು ತುಂಬಬಹುದು?
|
|
|
|
ನಿತ್ಯವೂ ಬಂದು ರಮಿಸಿಸದ್ದಿಲ್ಲದೆ ಕಾಲ ನಿರ್ಗಮಿಸುತಿಹುದುಆಯುಷ್ಯದ ಕ್ಷಣಗಳನ್ನು ನೋಂದಾಯಿಸಿಎಣಿಸಿ, ಕಳಚಿ, ಕಳೆಯುತಿಹುದು
|
|
|
|
ಅವ್ಯಕ್ತ ಭಾವಗಳ ಅಭೂತ ಪ್ರೇಮಮುಜುಗರವಿಲ್ಲದೆ ಬೆನ್ನಹತ್ತಿಹುದುಬಿಡಿಸಿಕೊಳ್ಳಲೆತ್ನಿಸಿದಷ್ಟು ಸಡಿಸಲಾಗದ ನಿಯಮಬ್ರಹ್ಮಗಂಟಾಗಿ ಪರಿಣಮಿಸುತಿಹುದು
|
|
|
|
ಅಲೆಅಲೆಯಾಗಿ ಅಲೆವ ಕಡಲ ಮೇಲೆಚಂದಿರನ ಬೆಳಕ ನೆರಳ ಹೆಣ ತೇಲುತಿಹುದುವಿಧಿವಶದ ಬಂಡೆಗೆ ಅಪ್ಪಳಿಸುತಲೆಚೂರು ಚೂರಾಗಿ ಮರಳ ಕಣಗಳಲಿ ಕರಗುತಿಹುದು
|
|
|
|
*****
|
|
|
|
ನೀನೆಂಬ ಕಲ್ಪನೆ ನಾನೆಂಬ ವಾಸ್ತವ
|
|
|
|
ನಸುಕಿನ ಮಳೆಯಲ್ಲಿ ತೊಯ್ದು ಗುಬ್ಬಚ್ಚಿಯಾದಕಡಲಿನ ಹೃದಯದ ನೀಲಿ ನಕ್ಷತ್ರ ನೀನು!ಕಾರಿರುಳ ದಟ್ಟ ಕಾಡಿನ ಕಾಡುವ ನಿರವ ಮೌನದಬಿಸಿ ನಿಟ್ಟುಸಿರ ಮೋಹ ನಾನು!
|
|
|
|
ಚಳಿಯ ಘಳಿಗೆ ರಾಗವಾಗುವ ಅಮಲು ಹತ್ತಿದಯೋಗ ನಿದಿರೆಯ ಅರಸಿ ನೀನು!ಹೊಸ್ತಿಲ ಬಾಗಿಲಿಗೆ ಅಂಟಿದ ಹಳದಿ ಬಣ್ಣದಹಳೆಯ ನೊಂದ ನೆನಪಿನ ಕುರುಹು ನಾನು!
|
|
|
|
ಕರಗುವ ಕನಸ ಬಳ್ಳಿಯ ಕನವರಿಕೆಯಆರದ ಸುಗಂಧದ ಅತೀತ ನೀನು!ಕಣ್ಣರೆಪ್ಪೆ ನಿರ್ದಯವಾಗಿ ಕೆಡವಿದ ಅನಾಥಕಂಬನಿಯ ಮುಗುಳ್ನಗೆ ನಾನು!
|
|
|
|
ಹಕ್ಕಿಯ ರೆಕ್ಕೆಯ ಸ್ಪರ್ಶದ ಅನುಭೂತಿಯನೆಮ್ಮದಿಯ ಅನಂತ ಆಗಸ ನೀನು!ಗಾಳಿಗೆ ಪಟಪಟಿಸಿ ಹರಿದು ಚಿಂದಿಯಾಗಿ ದಿಕ್ಕಿಲ್ಲದೆಹಾರಿದ ಧ್ವಜದ ನಿರ್ಗತಿಕ ತುಣುಕು ನಾನು!
|
|
|
|
ಕಡಲ ತೀರದಿ ಕಾಲುಚಾಚಿ ಅಂಗಾತವಾಗಿಮುಗಿಲ ಚುಕ್ಕಿಗಳ ಮಿಡಿಯುವ ಮಾಯೆ ನೀನು!ಹೆಸರಿಲ್ಲದ ಬೀದಿಗಳ ನಡುವೆ ಅಲೆಮಾರಿಯಾಗಿಅಲೆವ ನಿರ್ಗತಿಕ ಒಂಟಿ ನೆರಳು ನಾನು!
|
|
|
|
ಅರಳದ ಮೊಗ್ಗಿನ ದುಂಬಿಯ ದಾಹದಮಧುವಿನ ಶತಮಾನದ ದಾಹ ನೀನು!ಗೀತೆಯ ನಡುವೆ ಅರ್ಥವೆ ಇಲ್ಲದ ಸುಪ್ತವಾದವ್ಯರ್ಥ ಶ್ಲೋಕದ ಸ್ಮೃತಿ ನಾನು!
|
|
|
|
ಮೇಘದ ಹೃದಯಕೆ ಮುತ್ತಾಗುವ ಸಂಭ್ರಮದ ಅಮೃತ ಘಳಿಗೆಯ ಡವ ಡವ ನಿನಾದ ನೀನು!ಒಣಮರದ ತಾಜಾ ಬೇರಿನ ನಿರ್ಲಿಪ್ತ ಭಾವದಹಸಿರು ಧ್ಯಾನದ ಕೊನರೊಡೆದ ಅಂಕುರ ನಾನು!
|
|
|
|
ಬಾಣದ ವೇಗದ ಮೇಲೊಡುವ ಬಿಳಿ ಅಶ್ವದಹೆಜ್ಜೆ ಗುರುತುಗಳ ಮಾರ್ದನಿ ನೀನು!ಬಯಲಲ್ಲಿ ಹಚ್ಚಿದ ಬೆಂಕಿಯ ಮೇಲಿನಸುಟ್ಟ ಕಾವಲಿಯ ಕಳೆಬರ ನಾನು!
|
|
|
|
ಮನದ ಅಲಮಾರಿಯಲ್ಲಿನ ಹೊತ್ತಿಗೆಯಪುಟಗಳ ನಡುವಲ್ಲಿ ಅರಳಿದ ಕುಸುಮ ನೀನು!ಮಸಣದ ಕಣಗಿಲೆ ಗಿಡದ ಬಳಿ ಕೂತುಬಾಳಿನ ಹಾಡು ಹೆಣೆದು ಗುನುಗುವ ಫಕೀರ ನಾನು!
|
|
|
|
ನಗೆಯ ಒಲುಮೆಯ ನಾಚಿಕೆಯ ಉನ್ಮಾದದಸಂಚಲನದ ಉದ್ರೇಕ ಪಿಸುಮಾತು ನೀನು!ಕಾಲದ ಕ್ಷಣಗಳೊಂದಿಗೆ ಕೂಡಿ ಘಟಿಸುವಮೇಣದ ಪ್ರತಿರೂಪದ ಪ್ರತಿಬಿಂಬ ನಾನು!
|
|
|
|
ಮಿಂಚಿನ ಓಟದ ಜಿಂಕೆಯ ಕಣ್ಣಿನ ಹೊಳಪಿನಆಹ್ವಾನದ ರಂಗಿನ ಸಂಚಿಕೆ ನೀನು!ಮರದ ಕೊಂಬೆಯ ಸಂಗ ಕಳಚಿ ಉದುರಿ ಬೀಳುವಹಣ್ಣೆಲೆಯ ನಿಶಾಂತ ಏಕಾಂತ ನಾನು!
|
|
|
|
ಎಂದಿಗೂ ಕಾಣದ, ಸಿಗದ ಗಮ್ಯದ ಗಹನತೆಯಮಹೋನ್ನತ ಅನೂಹ್ಯ ನೀನು!ಕೈಜಾರಿ ಒಡೆದು ಚುರುಚೂರಾದ ಮಡಿಕೆಯಮತ್ತೆ ಅಂಟಿಸಿದ ಅಸ್ಮಿತೆ ನಾನು!
|
|
|
|
*****
|
|
|
|
ಪ್ರೇಮವೆಂದರೆ….
|
|
|
|
ಪರ್ವತದಿಂದ ಜಾರಿ ಪ್ರಪಾತಕ್ಕೆ ಬೀಳುವಾಗಅಚಾನಕ್ಕಾಗಿ ಅಂಗೈಗೆ ಸಿಲುಕಿದ ಹುಲ್ಲುಗರಿಕೆ – ಪ್ರೇಮವೆಂದರೆ…!
|
|
|
|
ಸೂರ್ಯನ ಕಿರಣಕೆ ಶರಣಾಗಿ ಕರಗಿಕಳೆದು ಹೋಗುವ ಮಂಜಿನ ಕನಸು –ಪ್ರೇಮವೆಂದರೆ…!
|
|
|
|
ಸಂತೆಯ ನಡುವೆ ನಿಂತು, ಲೋಕದ ಚಿಂತೆ ಮರೆತುಕೇಳುವ ಕೊಳಲಿನ ನಾದ –ಪ್ರೇಮವೆಂದರೆ…!
|
|
|
|
ಸಾವಿನ ಸೂತಕದ ಶೋಕದ ನಡುವೆಭರವಸೆಯ ವಚನ ನೀಡುವ ಹಣತೆಯ ಬೆಳಕು –ಪ್ರೇಮವೆಂದರೆ…!
|
|
|
|
ಕಾಡುವ ಕತ್ತಲಲಿ, ಅಮ್ಮನ ಮಡಲಲ್ಲಿ ಕೂತಮಗುವಿನ ಕಣ್ಣಲಿ ತೇಲುವ ಚಂದಿರನ ಚೂರು –ಪ್ರೇಮವೆಂದರೆ…!
|
|
|
|
ಶಿಲೆಯ ಕಡೆಯುವ ಕರಕಮಲದ ಹೃದಯದಲ್ಲಿಹೆಪ್ಪುಗಟ್ಟಿದ ಬಿಸಿ ನೆತ್ತರು –ಪ್ರೇಮವೆಂದರೆ…!
|
|
|
|
ಕಡಲ ಮರಳ ಕಿನಾರೆಯಲಿ, ಎಂದಿಗೂ ಮರಳಿ ಬಾರದ ಹಡಗಿಗೆ ಕಾದು ಕುಳಿತ ಲಂಗರು –ಪ್ರೇಮವೆಂದರೆ…!
|
|
|
|
ಹಸಿದ ಕರುಳಿನ ಕಂಬನಿಗಳ ಅರ್ತನಾದಕೆ ಮಿಡಿವರೊಟ್ಟಿಯ ಚೂರಿನ ಸಾಂತ್ವಾನ –ಪ್ರೇಮವೆಂದರೆ…!
|
|
|
|
ಭೂಮಿಯ ಎದೆಗೆ ಬಿದ್ದ ಮಳೆಗೆ ಪುಟಿದೆದ್ದಅನಾಮಿಕ ಹಸಿರು ಮೊಳಕೆಯ ನಗು –ಪ್ರೇಮವೆಂದರೆ…!
|
|
|
|
ಕಾಣದೆ, ತಾಕದೆ, ಮಾತಾಗದೆ, ಅನುಭವಿಸದೆಹೃದಯದ ಹಾದಿಯಲ್ಲಿ ಕೈಪಿಡಿದು ಸಾಗುವ ಸಂಭ್ರಮ – ಪ್ರೇಮವೆಂದರೆ…!
|
|
|
|
*****
|
|
|
|
ಅವನು ಬರಬಹುದು
|
|
|
|
ತೆರೆದ ಬಾಗಿಲು ತೆರೆದೆ ಇರಲಿಮುಚ್ಚುವುದು ಬೇಡಅವನು ಬರಬಹುದು
|
|
|
|
ಹೂ ಬಾಡುವ ಸಮಯಕ್ಕೆ ಮುಡಿಯಲ್ಲಿಮೊಲ್ಲೆಯೊಂದು ಬಿರಿಯುತ್ತಿದೆಅವನು ಬರಬಹುದು
|
|
|
|
ಮುರಿದ ಕನಸುಗಳಲ್ಲಿಹಕ್ಕಿ ಗೂಡು ಹೆಣೆಯುತ್ತಿದೆಅವನು ಬರಬಹುದು…
|
|
|
|
ಎಲ್ಲಿಂದಲೋ ಬಂದ ಚಿಟ್ಟೆಗಲ್ಲಕೆ ಅರಿಶಿಣ ಹಚ್ಚಿ ಹೋಗಿದೆಅವನು ಬರಬಹುದು
|
|
|
|
ಸುಮ್ಮನೆ ಕೂತಿದ್ದರುಕಾಲ್ಗೆಜ್ಜೆ ಘಲ್ ಎಂದು ಸದ್ದು ಮಾಡುತ್ತಿದೆಅವನು ಬರಬಹುದು
|
|
|
|
ಸುಡುವ ಬಿಸಿಲಲ್ಲಿ ಮಳೆ ಸುರಿದುಭೂಮಿ ಘಮ್ ಎನ್ನುತ್ತಿದೆಅವನು ಬರಬಹುದು
|
|
|
|
ವಸಂತವಲ್ಲದಿದ್ದರು ಮಾಮರವೇರಿಕೋಗಿಲೆ ಕೂಹೂ ಕೂಗುತ್ತಿದೆಅವನು ಬರಬಹುದು
|
|
|
|
ಕಡಲ ಅಲೆಗಳೆಲ್ಲ ಸೇರಿ ಒಟ್ಟಾಗಿನಾವೆಯನ್ನು ತೀರ ಮುಟ್ಟಿಸುತ್ತಿವೆಅವನು ಬರಬಹುದು
|
|
|
|
ಇಳೆಯ ಎದೆಗೆ ಬಿದ್ದ ಇಬ್ಬನಿ ಹನಿಗಳಿಗೆಬಯಲಲ್ಲಿ ಗರಿಕೆ ಮೊಳೆಯುತ್ತಿವೆಅವನು ಬರಬಹುದು
|
|
|
|
ಇರುಳು ಸುಳಿವ ಮುನ್ನವೇಚಂದ್ರ ಚುಕ್ಕಿಗಳೆಲ್ಲ ಮಿನುಗುತ್ತಿವೆಅವನು ಬರಬಹುದು
|
|
|
|
ಬೀಸಿದ ಗಾಳಿಗೆ ಉನ್ಮಾದಗೊಂಡುತರುಲತೆಗಳೆಲ್ಲ ತೂಗುತ್ತಿವೆಅವನು ಬರಬಹುದು
|
|
|
|
ಮುಗಿಲ ಮಹಡಿಯ ಮೇಲೆಮೇಘಗಳು ಸೇರಿ ಪಿಸುಗುಟ್ಟುತ್ತಿವೆಅವನು ಬರಬಹುದು
|
|
|
|
ಕಣ್ಣಿಂದ ಮಿಡಿದ ಕಂಬನಿಗಳುಕರಗಿ ಕಾಣೆಯಾಗುತ್ತಿವೆಅವನು ಬರಬಹುದು
|
|
|
|
ನಗೆಯ ದುಂಬಿ ಝೇಂಕರಿಸಿಕುಣಿದು ಹಾಡುತ್ತಿದೆಅವನು ಬರಬಹುದು
|
|
|
|
ಕೊಳಲಿಂದ ಹರಿದ ನಾದ ಸುಧೆವನವನ್ನು ರಮಿಸುತ್ತಿದೆಅವನು ಬರಬಹುದು
|
|
|
|
ಎಂದೂ ಇಲ್ಲದ ಮನವಿಂದುದಾರಿ ಕಾಯುತ್ತಿದೆಅವನು ಬರಬಹುದು
|
|
|
|
ಒಲವಿಗೆ ರೆಕ್ಕೆಗಳ ವರ ದಕ್ಕಿಮತ್ತೆ ಹಾರಲು ಹಾತೊರೆಯುತ್ತಿದೆಅವನು ಬರಬಹುದು
|
|
|
|
ನೆನಪಿರಲಿ,ಅವನು ಬಂದ ಮೇಲೆಮತ್ತೆ ಕದವ ಮುಚ್ಚುವುದನ್ನು ಮರೆಯದಿರುಮರಳಿ ಹೋಗಲು ಬಿಡದಿರು
|
|
|
|
ಈಗಾಗಲೇ,ಅವನು ಹೊರಟಿರಬಹುದುಬರುತ್ತಿರಬಹುದು
|
|
|
|
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ |