NLP_Assignment_1 / Kenda Sampige /article_105.txt
CoolCoder44's picture
Upload folder using huggingface_hub
7f4117a verified
raw
history blame
5.6 kB
‘ನೆಲದ ಮೇಲಣ ನಕ್ಷತ್ರಗಳು’ ಶಿಕ್ಷಕ ಸಾಹಿತಿ ವೀರೇಶ ಬ. ಕುರಿ ಸೋಂಪೂರ ಅವರ ಸಾಹಿತ್ಯ ಕೊಡುಗೆಯಾಗಿದ್ದು ‘ಧರೆಗೆ ಮೆರುಗು ತಂದವರು’ ಎಂಬ ಉಪಶೀರ್ಷಿಕೆಯೇ ಈ ಸಂಕಲನದ ಮಹತ್ವವನ್ನು ಪೂರ್ತಿಯಾಗಿ ಅರಿವಾಗಿಸುತ್ತದೆ. ಈ ನೆಲದ ಮೇಲೆ ಸವೆದು ಹೋದ ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರಿಂದ ಪ್ರಾರಂಭಿಸಿ ತನ್ನನ್ನು ತಿದ್ದಿದ ಗುರುಗಳು, ಮಠಾಧೀಶರು ಮತ್ತು ಹೆತ್ತ ತಂದೆತಾಯಿಗಳವರೆಗೂ ಅವರು ಕಂಡುಂಡ ವ್ಯಕ್ತಿಚಿತ್ರಣವನ್ನು ಕವನರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ವೀರೇಶರದ್ದು.
(ವೀರೇಶ ಬ. ಕುರಿ ಸೋಂಪೂರ)
ಶಾರ್ಟ್‌ ಹ್ಯಾಂಡ್ ಬರಹದಲ್ಲಿ ವಿಸ್ತಾರ ಸ್ವರೂಪವನ್ನು ಹೇಗೆ ಸಂಕೇತರೂಪದಲ್ಲಿ ಚಿಕ್ಕದಾಗಿ ದಾಖಲಿಸಿಕೊಳ್ಳುತ್ತಾರೋ ಹಾಗೆಯೇ ಇಲ್ಲಿ ವೀರೇಶರು ನಿಜ ಸಾಧಕರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಓದುಗರಿಗೆ ಬೇಸರವಾಗದಿರಲೆಂದು ಪ್ರಾಸ ಬಳಕೆಗೆ ಒತ್ತು ನೀಡಿರುವ ವೀರೇಶರು ತಮ್ಮ ಕವನಗಳನ್ನು ಶಾಲಾ ಮಕ್ಕಳೂ ಸಂತಸದಿಂದ ಕಲಿತು ಹಾಡಲು ಅನುಕೂಲವಾಗುವಂತಾಗಿಸಿರುವುದು ಅವರ ಹೆಗ್ಗಳಿಕೆ. ಅದಕ್ಕೆ ಕೆಲವು ಉದಾಹರಣೆಗಳನ್ನು ಹೇಳುವುದಾದರೆ ಪುನೀತ್ ರಾಜಕುಮಾರರ ಬಗ್ಗೆ ಬರೆದ ಕವನದಲ್ಲಿ
ಮುತ್ತಂತೆ ನೀನು ಬದುಕಿದೆ ಅಪ್ಪುಹೊತ್ತೊಯ್ದು ‘ವಿಧಿ’ ಮಾಡಿತು ತಪ್ಪು.
ಎಂಬುವ ಸಾಲುಗಳಾಗಲೀ, ವಿಜಯಪುರದ ಜ್ಞಾನ ಯೋಗಾಶ್ರಮದ ಸಂತ ಶ್ರೀ ಸಿದ್ದೇಶ್ವರರ ಕುರಿತಾದ ಪದ್ಯದಲ್ಲಿನ
‘ಕಿಸೆಯಿರದ ಅಂಗಿಯ ನಸುನಗುವ ಸಂತಇತಿಹಾಸದ ಪುಟಗಳಲಿ ಶಾಶ್ವತ ನೆಲೆ ನಿಂತ’
ಸಾಲುಗಳೂ ಹಾಗೂ ಸಾಲುಮರದ ತಿಮ್ಮಕ್ಕಳ ಕುರಿತಾದ
‘ಶರಣು ಶರಣು ತಿಮ್ಮಕ್ಕಮರಣವಿರದ ನಮ್ಮಕ್ಕ’
ಎಂಬ ಪ್ರಾಸಬದ್ಧ ಸಾಲುಗಳು ಮಕ್ಕಳಿಂದಿಡಿದು ವೃದ್ಧರವರೆಗೂ ರಂಜನೀಯವೆನಿಸಿವೆ ಮತ್ತು ಸಾಧಕರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರ ಕುರಿತಾದ ‘ದೀನರ ಬಾಳಿನ ದಿನಕರ’ ಹಾಗೂ ನಟ ಶಂಕರ್‌ನಾಗರ ಕುರಿತಾದ ‘ಸಾಗರ ವಿದ್ಯೆಯ ಸಿನಿಸರದಾರ’ ಎಂಬ ಉಪಮೆಗಳು ವೀರೇಶರು ತಾವು ಆಯ್ದುಕೊಂಡ ಸಾಧಕರ ಬಗ್ಗೆ ಆಳ ಅಧ್ಯಯನವನ್ನು ನಡೆಸಿರುವುದರ ಕುರುಹುಗಳಾಗಿವೆ.
ಸಂಕಲನಕ್ಕೆ ಮುನ್ನುಡಿಯನ್ನು ಬರೆದಿರುವ ಖ್ಯಾತ ವಿಮರ್ಷಕ ಡಾ. ಹೆಚ್ ಎಸ್ ಸತ್ಯನಾರಾಯಣರವರು ತಿಳಿಸಿದಂತೆ ವೀರೇಶರು ಇಲ್ಲಿ ಕಾವ್ಯವನ್ನು ವ್ಯಕ್ತಿ ಚಿತ್ರಣದ ಹೂಮಾಲಿಕೆಯಾಗಿಸಿಕೊಂಡು ಆದರಣೀಯ ವ್ಯಕ್ತಿತ್ವಗಳ ಬಿಡಿ ಬಿಡಿ ಹೂಗಳನ್ನು ಪೋಣಿಸಿ ಅಂದದ ಹೂಮಾಲಿಕೆಯನ್ನು ಹೆಣೆದಿದ್ದಾರೆ. ಪ್ರತೀ ಕವನಕ್ಕೂ ಅಂದದ ರೇಖಾಚಿತ್ರಗಳನ್ನು ರಚಿಸಿರುವ ಸಂತೋಷ ಸಸಿಹಿತ್ಲುರವರ ಬದ್ಧತೆ ಶ್ಲಾಘನೀಯ. ಇಂತಹ ಹತ್ತಾರು ಕೊಡುಗೆಗಳು ವೀರೇಶರ ಲೇಖನಿಯಿಂದ ಒಡಮೂಡಲಿ ಎಂಬ ಆಶಯ ನಮ್ಮದು.
ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ.