|
ಬರವಣಿಗೆಯಲ್ಲಿ ನನಗಿರುವ ಆಸಕ್ತಿಯನ್ನು ಬಲ್ಲವರು ಮತ್ತು ನನ್ನ ವಿದೇಶ ಪ್ರವಾಸಗಳ ಪರಿಚಯವಿರುವವರು ಆಗಾಗ್ಗೆ ಒಂದು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ನೀವೇಕೆ ಪ್ರವಾಸ ಕಥನವನ್ನು ಮತ್ತೆ ಬರೆದಿಲ್ಲವೆಂದು? 1995ರಲ್ಲಿ ಮಾನಸ ಸರೋವರಕ್ಕೆ ಪ್ರವಾಸ ಹೋಗಿ 1998ರಲ್ಲಿ ಪ್ರಕಟಿಸಿದ, ಸದ್ದು! ದೇವರು ಸ್ನಾನ ಮಾಡುತ್ತಿದ್ದಾರೆ, ಪ್ರವಾಸ ಕಥನವು ಜನಪ್ರಿಯವಾಗಿರುವುದು ಕೂಡ ಮೇಲಿನ ಪ್ರಶ್ನೆ ಕೇಳುವವರ ಮನಸ್ಸಿನಲ್ಲಿ ಇರುವುದು ನನಗೆ ಗೊತ್ತಿದೆ. 1995ರ ನಂತರವೂ ನಾನು ದೇಶದೊಳಗೆ ಮತ್ತು ಹೊರಗಡೆ ಸಾಕಷ್ಟು ಪ್ರವಾಸ ಮಾಡಿದ್ದೇನೆ. ಆದರೂ ನನಗೆ ಪ್ರವಾಸ ಕಥನವನ್ನು ಬರೆಯಬೇಕೆನಿಸಲಿಲ್ಲ. ಈಗ ಬರೆಯಬೇಕೆನಿಸಿದರೂ ಬರೆಯಬೇಕಾದರೆ ಈ ಕಾಲದ ಪ್ರವಾಸ ಕಥನದ ಸ್ವರೂಪ ಬೇರೆಯದೇ ರೀತಿಯದು ಎನಿಸಿದೆ. ಈ ಹೊಸ ಸ್ವರೂಪದ ಹುಡುಕಾಟ ಕೂಡ ಇಲ್ಲಿನ ಬರವಣಿಗೆಯ ಉದ್ದೇಶಗಳಲ್ಲೊಂದು.
|
|
|
|
(ಕೆ. ಸತ್ಯನಾರಾಯಣ)
|
|
|
|
ಪ್ರವಾಸದ ಸಮಯದಲ್ಲಿ ನಾನು ಯಾವ ರೀತಿಯ ಬರವಣಿಗೆಯನ್ನೂ ಮಾಡುವುದಿಲ್ಲ. ಟಿಪ್ಪಣಿಗಳನ್ನು ಕೂಡ ಮಾಡಿಕೊಳ್ಳುವುದಿಲ್ಲ. ಗಮನ ನೋಡುವುದರ ಕಡೆಗಿರಬೇಕು, ಬರವಣಿಗೆಯ ಕಡೆ ಹೋಗಬಾರದು ಎನ್ನುವ ನನ್ನ ನಂಬಿಕೆ ಕೂಡ ಇದಕ್ಕೆ ಕಾರಣ. ಅದೂ ಅಲ್ಲದೆ ಪ್ರವಾಸ ಹೋಗುವ ದೇಶಗಳ, ನಗರಗಳ ಬದುಕು ನಮ್ಮ ಬರವಣಿಗೆಗೇನು ಕಾದುಕೊಂಡು ಕೂತಿರುವುದಿಲ್ಲ. ಪ್ರವಾಸಿಗಳದ್ದು ಯಾವತ್ತೂ ಮೇಲುಮೇಲಿನ ಅನುಭವ. ಒಂದು ದೇಶದ, ನಗರದ ಬದುಕಿನ ಬಗ್ಗೆ ತಿಳಿಯಬೇಕಾದರೆ, ಕೆಲ ವರ್ಷಗಳಾದರೂ ಅಲ್ಲಿ ವಾಸ ಮಾಡಬೇಕು. ದಿನನಿತ್ಯದ ಜೀವನ, ಸಮಸ್ಯೆಗಳೊಡನೆ ಬೆರೆಯಬೇಕು. ನಾನಾ ರೀತಿಯ ಜನರನ್ನು ಭೇಟಿ ಮಾಡಬೇಕು. ಇದೆಲ್ಲ ಎಲ್ಲ ಸಂದರ್ಭದಲ್ಲೂ ಸಾಧ್ಯವಾಗುವುದಿಲ್ಲ. ಯಾವುದೇ ಗ್ರಾಮವಾಗಲೀ ನಗರವಾಗಲೀ ಪೇಕ್ಷಣೀಯ ಸ್ಥಳವಾಗಿ ಮಾತ್ರ ಅಸ್ತಿತ್ವದಲ್ಲಿರುವುದಿಲ್ಲವಷ್ಟೇ! ಅತಿಥಿಗಳಾಗಿ ನಾವು ನೋಡುತ್ತೇವೆ, ಸಂತೋಷ, ತಿಳುವಳಿಕೆ ಪಡೆಯುತ್ತೇವೆ. ಅಷ್ಟು ಸಾಕು.
|
|
|
|
ಆದರೂ ಕೆಲವು ಅನುಭವ, ನೆನಪು, ಒಡನಾಟಗಳು ಮನಸ್ಸಿನಲ್ಲಿ ಉಳಿಯುತ್ತವೆ, ಊರುತ್ತವೆ. ಇವುಗಳಲ್ಲಿ ಕೆಲವು ಬರವಣಿಗೆಯಲ್ಲೂ ಸೇರಿಕೊಳ್ಳಬಹುದು. 2001ರಲ್ಲಿ ಥಾರ್ ಮರುಭೂಮಿಯ ಪ್ರವಾಸಕ್ಕೆ ಹೋದದ್ದು ಅಂತಹ ಒಂದು ಅನುಭವ. ಕೆಲವು ಮುಖ್ಯ ದೃಶ್ಯಗಳು, ಅಲ್ಲಿ ಕಂಡ ಕೆಲವರ ಮನೋಭೂಮಿಕೆ, “ಕಾಲಜಿಂಕೆ” ಕಾದಂಬರಿಯಲ್ಲಿ, “ಸನ್ನಿಧಾನ” ಕಾದಂಬರಿಯಲ್ಲಿ ಸೇರಿಕೊಂಡು ಬರವಣಿಗೆಯ ಧ್ವನಿಗೆ, ಬಹುಮುಖತೆಗೆ ಕಾರಣವಾಯಿತು. ಅಮೆರಿಕ ಪ್ರವಾಸದ, ವಾಸದ ಅನುಭವ “ಹೀಗಿಲ್ಲಿ ಅಮೆರಿಕ” ಮತ್ತು “ಅಮೆರಿಕನ್ ಮನೆ” ನೀಳ್ಗತೆಗಳ ಬರವಣಿಗೆಯಾಯಿತು. ಎಲ್ಲ ಸಂದರ್ಭಗಳು, ಅನುಭವಗಳ ವಿಷಯದಲ್ಲೂ ಹೀಗಾಗುವುದಿಲ್ಲ. ಹೀಗೆ ಆಗಬೇಕೆಂಬ ಹಠವೂ ನನಗಿಲ್ಲ.
|
|
|
|
ಅಲ್ಲದೆ ನಾನು ಪ್ರವಾಸವನ್ನು ಸಾಮಾನ್ಯ ನಾಗರಿಕನ ನೆಲೆಯಲ್ಲಿ ಅನುಭವಿಸಲು ಇಷ್ಟಪಡುತ್ತೇನೆ. ಕನ್ನಡ ಲೇಖಕನೆಂಬ ದೃಷ್ಟಿಕೋನದಿಂದ ನಾನು ನೋಡುವುದಿಲ್ಲ. ಹೋದ ಕಡೆಯೆಲ್ಲ ನಾನು ಲೇಖಕನೆಂದು ಹೇಳಿಕೊಳ್ಳುವುದು, ಸ್ಥಳೀಯ ಸಂಘ-ಸಂಸ್ಥೆಗಳನ್ನು ಸಂಪರ್ಕಿಸುವುದು ನನ್ನ ಸ್ವಭಾವಕ್ಕೆ ಒಗ್ಗದ್ದು. ಅದೂ ಅಲ್ಲದೆ ಹಾಗೆಲ್ಲ ಸಂಪರ್ಕ ಸಾಧಿಸಿ ಸಂಬಂಧ ಸ್ಥಾಪಿಸಿಕೊಳ್ಳುವಷ್ಟು ಜನಪ್ರಿಯ ಅಥವಾ ಮಹತ್ವದ ಬರಹಗಾರನೂ ನಾನಲ್ಲ. ಇನ್ನೂ ಮುಖ್ಯವಾಗಿ ಸಾಮಾನ್ಯ, ಸಾಧಾರಣ ನಾಗರಿಕನ ನೆಲೆಯಲ್ಲಿ ಪ್ರವಾಸ ಮಾಡಿದಾಗಲೇ ಒಂದು ದೇಶ, ಒಂದು ಜನರೆಲ್ಲ ಚೆನ್ನಾಗಿ ಪರಿಚಯವಾಗುತ್ತದೆ ಎಂಬುದು ನನ್ನ ನಂಬಿಕೆ. ಒಂದು ಆಸಕ್ತಿ, ಒಂದು ಪ್ರವೃತ್ತಿಯವನು ನಾನು ಎಂದು ಗುರುತಿಸಿಕೊಂಡುಬಿಟ್ಟರೆ, ಹೋದ ಕಡೆಯೆಲ್ಲ ಜನ ನಮ್ಮನ್ನು ಹಾಗೇ ನೋಡುತ್ತಾರೆ. ನಾವೂ ಕೂಡ ಸ್ವಘೋಷಿತ ವ್ಯಕ್ತಿತ್ವದ ಆಯಾಮಗಳಿಗನುಗುಣವಾಗಿಯೇ ಅಲ್ಲಿಯವರನ್ನು ನೋಡುತ್ತೇವೆ. ಈ ಎರಡೂ ಅಪಾಯಗಳಿಂದ ತಪ್ಪಿಸಿಕೊಳ್ಳಲು ನನಗೆ ಇಷ್ಟ.
|
|
|
|
ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ. ಗೂಗಲ್ ಸಾಮ್ರಾಜ್ಯದ ಈ ದಿನಗಳಲ್ಲಿ, ಎಲ್ಲ ದೇಶಗಳ, ಸಂಸ್ಕೃತಿಗಳ ಬಗ್ಗೆ ಈಗ ಯಾವುದೇ ಮಾಹಿತಿ, ದೃಶ್ಯವಾದರೂ ಸುಲಭವಾಗಿ ಸಿಗುತ್ತದೆ. ಬೇರೆ ದೇಶಗಳಲ್ಲಿ ನಡೆಯುವ ಕ್ರೀಡಾ ಪಂದ್ಯಗಳು, ರಾಜಕೀಯ-ಸಾಮಾಜಿಕ ಸಮ್ಮೇಳನಗಳು, ವೃತ್ತಿ ಸಂದರ್ಶನ, ಮೀಟಿಂಗುಗಳಲ್ಲಿ ನಾವೆಲ್ಲ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗವಹಿಸುತ್ತಲೇ ಇರುತ್ತೇವೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ಇಷ್ಟವಿದ್ದೋ, ಇಲ್ಲದೆಯೋ, ಯಾವುದೇ ದೇಶದ ಬದುಕು ಕೂಡ ಈಗ ಬೇರೆ ದೇಶಗಳ, ವಿಶೇಷವಾಗಿ ಮುಂದುವರೆದ ದೇಶಗಳ ಆರ್ಥಿಕ, ಸಾಮಾಜಿಕ, ಕೈಗಾರಿಕಾ ಬದುಕಿನೊಡನೆ ತಳುಕು ಹಾಕಿಕೊಂಡಿದೆ. ಹೀಗೆ ತಳುಕು ಹಾಕಿಕೊಂಡಿರುವುದರಿಂದ, ಲಾಭ-ನಷ್ಟ, ಎಷ್ಟು, ಹೇಗೆ ಎಂಬುದು ಬೇರೆ ಪ್ರಶ್ನೆ; ಆದರೆ ಅದು ಈ ಕಾಲದ ಅನಿವಾರ‍್ಯತೆ. ಇಲ್ಲ ಹಾಗೆಂದು ನಮ್ಮನ್ನು ನಂಬಿಸಲಾಗಿದೆ.
|
|
|
|
ಇಂತಹ ಇನ್ನೂ ಎಷ್ಟೋ ಕಾರಣಗಳಿಗಾಗಿ ಈಗ ಹಿಂದಿನಂತೆ ಮಾಹಿತಿ ಪ್ರಧಾನ, ಅನುಭವ ಪ್ರಧಾನ ಪ್ರವಾಸ ಕಥನಗಳನ್ನು ಬರೆಯುವ ಅವಶ್ಯಕತೆಯಿಲ್ಲ. ಬರೆಯುವುದು ಸಾಧ್ಯವೂ ಇಲ್ಲ. ಇನ್ನೂ ಒಂದು ಮುಖ್ಯ ಕಾರಣವೂ ಇದೆ. ಸಿಯಾಟಲ್‌ನಿಂದ ಮುಕ್ಕಾಲು ಘಂಟೆ ಪ್ರಯಾಣದ ದೂರವಿರುವ ಜಲಪಾತವನ್ನು ನೋಡಲು ಕುಟುಂಬದವರೆಲ್ಲ ಹೋಗಿದ್ದೆವು. ನಗರದ ಹೊರವಲಯ, ಕಾಡು, ಗುಡ್ಡ, ಉದ್ಯಾನವನಗಳ ಮಧ್ಯೆ ಇರುವ ಜಲಪಾತವದು. ಒಂದು ಕಾಲಕ್ಕೆ ಅಲ್ಲಿ ಬುಡಕಟ್ಟಿನವರು ಮಾತ್ರ ವಾಸಿಸುತ್ತಿದ್ದರಂತೆ. ನೀರು ಇಲ್ಲಿ ಧುಮುಕುವ ರೀತಿಯಲ್ಲಿ ಒಂದು ವಿಶಿಷ್ಟತೆಯಿದೆ. ಹಿಂದೆ ಇದು ಜನವಸತಿಯಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಜಲಪಾತದ ಕೆಳಗಡೆ ನೀರಿನ ದಂಡೆಯ ಬಳಿ ಮನೆಗಳಿವೆ. ದೋಣಿ ಓಡಾಟಕ್ಕೆ ವ್ಯವಸ್ಥೆಯಿದೆ. ದೃಶ್ಯ ಸೌಂದರ್ಯದ ಶ್ರೀಮಂತಿಕೆಯನ್ನು ಕಣ್ಣು ತುಂಬಿಕೊಳ್ಳಲು ಕಷ್ಟ. ಯಾವ ಎತ್ತರ, ಕೋನದಿಂದ ನೋಡಿದರೂ ಪ್ರತಿ ಕ್ಷಣವೂ ಬೇರೆ ಬೇರೆಯಾಗಿ ಕಾಣುತ್ತದೆ. ನಾನು ಅಸಹಾಯಕನಾಗಿ ಎಲ್ಲ ಕಡೆಯೂ ಓಡಾಡುತ್ತಾ, ಹತ್ತಿ ಇಳಿಯುತ್ತಾ, ಮಗನಿಗೊಂದು ಪ್ರಶ್ನೆ ಕೇಳಿದೆ – ಇದನ್ನೆಲ್ಲಾ ಪದಗಳಲ್ಲಿ ಹಿಡಿಯುವಷ್ಟು ಶಕ್ತಿ ನನಗಿಲ್ಲ. ಕ್ಯಾಮೆರಾ, ವೀಡಿಯೋ ಮೂಲಕ ತೆಗೆದರೂ ಕೆಲ ಕ್ಷಣ, ಕೆಲ ದೃಶ್ಯಗಳು ಮಾತ್ರ ದಾಖಲಾಗುತ್ತವೆ. ಸುಮ್ಮನೆ ಬಂದು ಇಲ್ಲಿರುವುದೇ ನಿಜವಾದ ಪ್ರವಾಸ ಕಥನವಾಗುತ್ತದೆ, ಅಷ್ಟೇ! ನನ್ನ ಮಾತು ಕೇಳಿ ಮಗ ನಕ್ಕ. ನಿನಗೆ ಮಾತ್ರ ಹೀಗನ್ನಿಸುತ್ತಿರಬೇಕು ಅಷ್ಟೆ. ಸುತ್ತಮುತ್ತ ಸ್ವಲ್ಪ ಗಮನಿಸು. ಇಲ್ಲಿಗೆ ಬಂದಿರುವವರ ಗಮನವೆಲ್ಲ ಇದೆನ್ನೆಲ್ಲ ನೋಡಿ ಅನುಭವಿಸುವುದಕ್ಕಿಂತ ಹೆಚ್ಚಾಗಿ ಇದನ್ನು ನಾವು ನೋಡಿದೆವು ಎಂದು ಅಂದುಕೊಳ್ಳುವುದಕ್ಕೆ, ಹಾಗೆ ನೋಡಿದ್ದನ್ನು, ತಿಳಿದುಕೊಂಡದ್ದನ್ನು ಕುರಿತು ಇನ್ನೊಬ್ಬರನ್ನು ನಂಬಿಸಲು ಫೋಟೋ ತೆಗೆದು ಕಳಿಸುವುದಕ್ಕೇ ಸೀಮಿತವಾಗಿದೆ. ಈಗ ಜನರಿಗೆ ಅನುಭವಿಸುವ, ನೋಡುವ ಕುತೂಹಲವಿಲ್ಲ, ಶ್ರದ್ಧೆಯಿಲ್ಲ. ಸುಮ್ಮನೆ ಕ್ಲಿಕ್ಕಿಸುವುದು, ಕ್ಲಿಕ್ಕಿಸಿದ್ದನ್ನು ರವಾನಿಸುವುದು, ಇದರ ಕಡೆಯೇ ಗಮನ. ನೀನು ಸುಮ್ಮನೆ ಪ್ರವಾಸ ಕಥನವನ್ನು ಬರೆಯುವ ವ್ಯರ್ಥ ಪ್ರಯತ್ನ ಮಾಡಬೇಡ. ಅದು ಈ ಕಾಲದ ಪ್ರಕಾರವಲ್ಲ. ಅಲ್ಲದೆ ಇಲ್ಲಿಗೆ ಬರುವ ಪ್ರವಾಸಿಗರು ಕೂಡ ಬರುವ ಮುನ್ನ ಗೂಗಲ್‌ನಲ್ಲಿ, ಗ್ರಂಥಾಲಯಗಳಲ್ಲಿ, ಪುಸ್ತಕಗಳಲ್ಲಿ, ಯೂ-ಟ್ಯೂಬ್‌ನಲ್ಲಿ ಈ ಜಲಪಾತವನ್ನು ಕುರಿತು ಇರುವ ದೃಶ್ಯ ಮಾಹಿತಿಗಳನ್ನು ನೋಡಿಕೊಂಡೇ ಬಂದಿರುತ್ತಾರೆ. ಈಗಾಗಲೇ ನೋಡಿರುವುದನ್ನು ಇನ್ನೊಂದು ಸಲ ಖಚಿತಪಡಿಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ಇನ್ನು ಮುಂದೆ Primary Experienceಎನ್ನುವುದೇ ಕಡಿಮೆಯಾಗುತ್ತದೆ. ಅದರ ಬಗ್ಗೆ ಆಸಕ್ತಿ ಕೂಡ. ಹೀಗಾಗಿ ಪ್ರವಾಸ ಕಥನಗಳ ಅವಶ್ಯಕತೆಯಿಲ್ಲ.
|
|
|
|
ನನ್ನ ಮಗನ ಮಾತು ಸರಿಯಾಗಿಯೇ ಇದೆ. ಆದರೆ ಅವನು ಇದನ್ನು ಹೇಳುತ್ತಿರುವುದು ಮೂರು ವರ್ಷಗಳಿಂದ ಅವನನ್ನು ನೋಡದೇ ಇದ್ದ ತಂದೆ-ತಾಯಿ ಈಗ ಅವನನ್ನು ನೋಡಲು ಪ್ರವಾಸ ಬಂದಿರುವ ಸಂದರ್ಭದಲ್ಲಿ. ಮಗಳ ಎರಡನೆ ಹೆರಿಗೆಗೆಂದು ಹೇಗ್ ಪಟ್ಟಣಕ್ಕೆ ಹೋಗಿ, ಅಲ್ಲಿ ಲಾಕ್‌ಡೌನ್‌ನಲ್ಲಿ ಸಿಕ್ಕಿ ಹಾಕಿಕೊಂಡು ಮೂರು ತಿಂಗಳು ಮನೆಯಲ್ಲೇ ಕಳೆದು, ಮತ್ತೆ ವಾಪಸ್ ಭಾರತಕ್ಕೆ ಹೊರಡುವ ದಿನ ಸುಂಟರಗಾಳಿಗೆ ಸಿಕ್ಕಿ ಹಾಕಿಕೊಂಡು ಪ್ರಯಾಣವೆಲ್ಲ ಅಸ್ತವ್ಯಸ್ತವಾಗಿ, ಬೆಂಗಳೂರಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ, ನಿಮ್ಮನ್ನು ನೋಡಿ ಮೂರು ವರ್ಷವಾಯಿತು, ಬನ್ನಿ ಬನ್ನಿ ಎಂದು ಆತುರಾತುರವಾಗಿ ಹೊರಡಿಸಿದ್ದು ಕೂಡ ಇದೇ ಮಗನೇ! ನಮ್ಮ ಕುಟುಂಬ ಮಾತ್ರವಲ್ಲ, ನಮಗೆ ಪರಿಚತವಿರುವ ಬಂಧುಮಿತ್ರರ ಬಹುತೇಕ ಕುಟುಂಬಗಳಲ್ಲೂ, ಕೋವಿಡ್‌ನಿಂದ ಸ್ವಲ್ಪ ಬಿಡುಗಡೆ ದೊರಕಿದ ನಂತರ ದೇಶದೊಳಗೆ, ದೇಶ ದೇಶಗಳ ನಡುವೆ ಪ್ರವಾಹದ ರೀತಿಯಲ್ಲಿ ಪ್ರವಾಸದ ನಿರಂತರ ಚಟುವಟಿಕೆ. ಮಕ್ಕಳನ್ನು ಮೂರು ವರ್ಷ ನೋಡದೇ ಇರುವುದು, ಹಾಗೆ ನೋಡದೆ ಇರುವುದೇ ಸಹಜವೆಂದು ಮನಸ್ಸು ಒಪ್ಪಿಕೊಂಡ ರೀತಿ, ಅದರಿಂದೆಲ್ಲ ಯಾವ ರೀತಿಯ ಮುಜುಗರ, ಹಿಂಸೆ ಕೂಡ ಮನಸ್ಸಿಗೆ ಆಗದಿರುವುದು, ಇದರಲೆಲ್ಲ ಏನೋ ತಪ್ಪಿದೆ, ನಮ್ಮ ಬದುಕು ಎಲ್ಲೋ ಆಯ ತಪ್ಪಿದೆ ಎಂಬ ಭಾವನೆ ಕೂಡ ಬಂತು.
|
|
|
|
ಪ್ರವಾಸ ಹೋಗದಿದ್ದರೂ ಪ್ರವಾಸದ ಭಾವನೆಗೆ, ಅನುಭವಕ್ಕೆ ಮನಸ್ಸು ಹಪಹಪಿಸುತ್ತಿರುವ ರೀತಿಯನ್ನೇ ಕೆಲವರು ದಾಖಲಿಸಿದ್ದಾರೆ. ಕೋವಿಡ್ ಇನ್ನೂ ಪೂರ್ಣವಾಗಿ ಇಳಿಮುಖವಾಗದಿದ್ದಾಗಲೇ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ, ಯುದ್ಧ, ಹಿಂಸೆ ಕೂಡ ನಡೆಯುತ್ತಲೇ ಇತ್ತು. ಪ್ರವಾಸದ ಸ್ವರೂಪ ದಿಕ್ಕು ದೆಸೆ ಬದಲಾಯಿಸಿರುವುದರಿಂದ ಈಗ ಪ್ರವಾಸ ಬರವಣಿಗೆಯ ಸ್ವರೂಪ ಕೂಡ ಬದಲಾಗಬೇಕಾಗುವುದು. ಜಾಗತೀಕರಣದಿಂದ ಪ್ರಾರಂಭವಾಗಿ, ವಲಸೆ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಮೂಡಿರುವ ಬಿಕ್ಕಟ್ಟು, ಎಲ್ಲವನ್ನೂ ಗಣನೆಗೆ ತೆಗೆದುಕೊಂಡೇ ಹೊಸ ರೀತಿಯ ಪ್ರವಾಸ ಕಥನಗಳು ರೂಪುಗೊಳ್ಳಬಹುದೇನೋ ಎನಿಸಿತು. ಈ ಕುರಿತು ಕೂಡ ವಿಚಾರ ವಿನಿಮಯ ನಡೆಯುತ್ತಿರುವುದು ಸತ್ಯ.
|
|
|
|
|
|
|
|
Best American Travel Writing ಬರವಣಿಗೆಯ ಸರಣಿ ಸಂಪಾದಕರಾದ ಜೇಸನ್ ವಿಲ್ಸನ್, ಈ ಕುರಿತು ಮಂಡಿಸಿರುವ ವಿಚಾರಗಳು ಕುತೂಹಲಕಾರಿಯಾಗಿವೆ. ಹೊಸ ರೀತಿಯ ಪ್ರವಾಸ ಬರವಣಿಗೆಯ ಸ್ವರೂಪ ಅರ್ಥಪೂರ್ಣವಾಗಿರಬೇಕಾದರೆ, ಅಂತಹ ಕಥನ ಅಂತರಂಗದ ಪಯಣ, ತಳಮಳವನ್ನು ಕುರಿತು ಕೂಡ ಇರಬೇಕು. ಇಂತಹ ತಳಮಳಕ್ಕೂ, ನಾವು ಬಾಹ್ಯ ಜಗತ್ತಿನಲ್ಲಿ ಮಾಡುವ ಪ್ರಯಾಣಕ್ಕೂ, ಪ್ರಯಾಣದ ವಿವರ, ಆಸೆ, ಆಕಾಂಕ್ಷೆಗಳಿಗೂ ಇರುವ ಸಂಬಂಧವನ್ನು, ಹೆಣಗಾಟವನ್ನು ಕೂಡ ಬರವಣಿಗೆ ಸೂಚಿಸಬೇಕು. ನಾವು ಹೋಗಲಿರುವ ದೇಶಗಳ, ಜಾಗಗಳ ಬಗ್ಗೆ ನಮಗಿದ್ದ ನಿರೀಕ್ಷೆ, ಕನಸುಗಳೇನು? ನಾವು ಅಲ್ಲಿಗೆ ತಲುಪಿದಾಗ ನಾವು ನಿರೀಕ್ಷಿಸಿದ್ದನ್ನು ಕಂಡೆವೇ? ಅದೆಲ್ಲ ಅಲ್ಲಿ ಯಾವತ್ತೂ ಹಿಂದೆ ಇರಲೇ ಇಲ್ಲವೇ? ಹಾಗಿದ್ದರೆ, ಅಲ್ಲಿಗೆ ತಲುಪಿದಾಗ ಕಾಣುವ ವಾಸ್ತವಕ್ಕೂ, ನಮ್ಮ ನಿರೀಕ್ಷೆಗೂ ಇರುವ, ಇರಬೇಕಾದ ಸಂಬಂಧ ಯಾವ ರೀತಿಯದು? ಇಷ್ಟೆಲ್ಲದರ ನಡುವೆ ಮನೆಯೊಳಗೆ, ದೇಶದೊಳಗೆ ಇರುವಾಗ ನಮ್ಮ ವ್ಯಕ್ತಿತ್ವದ ಸ್ವರೂಪ ಹೇಗಿರುತ್ತದೆ? ಪ್ರವಾಸದ ಗುರಿ ತಲುಪಿದಾಗ ಈ ವ್ಯಕ್ತಿತ್ವಕ್ಕೆ ಏನಾಗುತ್ತದೆ? ಎಂಬುದನ್ನು ಕೂಡ ಪರಿಶೀಲಿಸಬೇಕು. ಸದ್ಯಕ್ಕೆ ಇದು ಬರವಣಿಗೆಯಲ್ಲಿ ಆದರ್ಶದ ಸ್ವರೂಪವನ್ನು ಬಯಸಿದಂತೆ ಎಂದು ಮಾತ್ರ ಹೇಳಬಹುದು.
|
|
|
|
ವಲಸಿಗರಿಗೂ, ಪ್ರವಾಸಿಗರಿಗೂ ಏನೂ ವ್ಯತ್ಯಾಸವಿಲ್ಲ. ಈವತ್ತಿನ ಪ್ರವಾಸಿಗಳು, ನಾಳಿನ ವಲಸಿಗರು. ಹಾಗಾಗಿ ವಲಸಿಗರು ಬರೆಯುವ ಕಥನಗಳಲ್ಲಿ ಯಾವಾಗಲೂ ಪ್ರವಾಸ ಕಥನದ ಅಂಶಗಳು ಇದ್ದೇ ಇರುತ್ತವೆ ಎಂಬ ಒಂದು ವಾದವೂ ಇದೆ. ಏಕೆಂದರೆ, ವಲಸಿಗರಿಗೆ ಶತಮಾನಗಳೇ ಕಳೆದರೂ ಬಿಟ್ಟು ಬಂದ ಮಾತೃಭೂಮಿಯ, ಬೇರುಗಳ ಕಲ್ಪನೆ, ಕನಸುಗಳು, ಹಂಬಲ ಬಾಧಿಸುತ್ತಲೇ ಇರುತ್ತದೆ. ಈ ಅಭಿಪ್ರಾಯಕ್ಕೆ ಉದಾಹರಣೆಯಾಗಿ ವಿ. ಎಸ್. ನೈಪಾಲ್ ಕತೆ, ಕಾದಂಬರಿಗಳ ಪ್ರಕಾರದ ಜೊತೆಗೇ ನಿರಂತರವಾಗಿ ಪ್ರವಾಸ ಕಥನಗಳನ್ನು ಬರೆಯುತ್ತಿದ್ದುದನ್ನು ಉಲ್ಲೇಖಿಸುತ್ತಾರೆ. ವಲಸಿಗರ ಬರವಣಿಗೆಗಳಲ್ಲಿ ಯಾವಾಗಲೂ Wish fulfilment ಹಂಬಲ ಇದ್ದೇ ಇರುತ್ತದೆ. ಈ ಹಂಬಲದಲ್ಲಿ ವಾಸ್ತವ ಪ್ರಜ್ಞೆ ಕೂಡ ಕಡಿಮೆಯಿರಬಹುದು. ಝುಂಪಾ ಲಹರಿಯ ಒಂದು ಕಾದಂಬರಿಯ ನಾಯಕಿ ಅಮೆರಿಕೆಗೆ ಬಂದು ಒಂದು ತಲೆಮಾರು ಕಳೆದು, ಗಂಡನ ಸಾವಿನ ನಂತರ ಮತ್ತೆ ಕಲ್ಕತ್ತೆಗೆ ಹೋಗಿ ಸಂಗೀತ ಕಲಿಯುತ್ತಾಳೆ. ಆದರೆ ನಿಜ ಜೀವನದಲ್ಲಿ ಝುಂಪಾ ಲಹರಿಯೇ ಅಮೆರಿಕದಿಂದ ಇಟಲಿಗೆ ವಲಸೆ ಹೋಗುತ್ತಾಳೆ. ಇಟಾಲಿಯನ್ ಭಾಷೆ ಕಲಿಯುತ್ತಾಳೆ. ಅನುವಾದಿಸುತ್ತಾಳೆ. ಮತ್ತೆ ಅಮೆರಿಕಕ್ಕೆ ವಾಪಸ್ ಬರುತ್ತಾಳೆ. ವಲಸೆ ಹೋಗಿ, ಇನ್ನೊಂದು ದೇಶದಲ್ಲಿ ಬೇರುಬಿಟ್ಟ ಮೇಲೂ ಬರಹಗಾರರು ತಾವು ಬಿಟ್ಟು ಬಂದ ದೇಶದ ಬದುಕು ಕೂಡ ನಿರಂತರವಾಗಿ ಹಸನಾಗಿರಬೇಕೆಂದು ಬಯಸುತ್ತಾರೆ. ಆಫ್ರಿಕಾದಿಂದ ವಲಸೆ ಬಂದ ಕಪ್ಪು ಲೇಖಕರಿಗೆ ಇದೊಂದು ದೊಡ್ಡ ಸಮಸ್ಯೆ. ಮಿತಿಮೀರಿದ ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಕಂಗಾಲಾಗಿರುವ ತಮ್ಮ ದೇಶಗಳ ಆಡಳಿತವನ್ನು ದ್ವೇಷಿಸುತ್ತಾರೆ. ತಮ್ಮ ಇತಿಹಾಸದ ಬಗ್ಗೆ ಗೌರವ, ವರ್ತಮಾನದ ಬಗ್ಗೆ ಅಸಮಾಧಾನ, ನಿರಂತರವಾಗಿ ಇವರನ್ನು ಕಾಡುತ್ತದೆ. ವಲಸಿಗರೇ ಬರೆಯಲಿ, ಪ್ರವಾಸಿಗರೇ ಬರೆಯಲ್ಲಿ, ಅವರ ಕಥನಗಳು ಈ ಅಂಶವನ್ನು ಒಳಗೊಂಡಿರಲೇಬೇಕು, ಎದುರಿಸಲೇಬೇಕು ಎಂದು ಮೀಮಾಂಸಕರು ಹೇಳುತ್ತಾರೆ. ಚಿನುವ ಅಚಿಬೆ ಮತ್ತು ಜೇಮ್ಸ್ ಬಾಲ್ಡ್‌ವಿನ್ ಇಂಥವರ ಉದಾಹರಣೆಗಳನ್ನು ನೀಡುತ್ತಾರೆ.
|
|
|
|
ವಿವೇಕ್ ಬಾಲ್ಡ್ ಅವರ ಪ್ರಕಾರ ವಲಸಿಗರ, ಅನಿವಾಸಿಗಳ ಪ್ರತಿಯೊಂದು ತಲೆಮಾರು ಎದುರಿಸುವ ಸವಾಲುಗಳು, ಸಮಸ್ಯೆಗಳು ಭಿನ್ನವಾಗಿರುತ್ತವೆ. ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಹೋದಾಗಲೂ, ಹೊಸ ಹೊಸ ಆಯಾಮಗಳು ಸೇರಿಕೊಳ್ಳುತ್ತವೆ. ಈ ಸವಾಲು, ಸಮಸ್ಯೆ, ಆಯಾಮಗಳು ಪ್ರವಾಸಿಗರ ಬರವಣಿಗೆ, ಗ್ರಹಿಕೆಯ ಮೇಲೂ ಪರಿಣಾಮ ಬೀರುತ್ತವೆ. ಇನ್ನು ಮೇಲೆ ಯಾವುದೇ ಪ್ರವಾಸ ಕಥನವು ನೂರಕ್ಕೆ ನೂರರಷ್ಟು ಪ್ರವಾಸ ಕಥನವಾಗಿರುವುದಿಲ್ಲ. ಹತ್ತು ಹಲವು ರೀತಿಯ ಸಂಸ್ಕೃತಿ ಕಥನಗಳು ಅನಾಯಾಸವಾಗಿ ಬೆರೆತುಹೋಗಿರುತ್ತವೆ. ಈ ವಿದ್ಯಮಾನಕ್ಕೆ ಅವರು ಬಾಂಗ್ಲಾ ದೇಶದಿಂದ ಬಂದ ಮುಸಲ್ಮಾನ ಕುಟುಂಬಗಳ ಉದಾಹರಣೆ ನೀಡುತ್ತಾರೆ. 1917ರಲ್ಲಿ ಏಷ್ಯ ಖಂಡದಿಂದ ಬರುವ ವಲಸಿಗರ ಮೇಲೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಲಾಯಿತು. ಇದು 1965ರ ತನಕವೂ ಮುಂದುವರೆಯಿತು. 1965ರಲ್ಲಿ ನಿಯಮಗಳನ್ನು ಸಡಿಲಿಸಿದ್ದರಿಂದ ಭಾರತವೂ ಸೇರಿದಂತೆ ಬೇರೆ ಬೇರೆ ಏಷ್ಯ ದೇಶಗಳಿಂದ ವಲಸೆ ಪ್ರಾರಂಭವಾಯಿತು. ತಂತ್ರಜ್ಞಾನದ ಕ್ಷೇತ್ರದಲ್ಲಿ ಮೂಡಿಬಂದ ವ್ಯಾಪಕ ಸಂಖ್ಯೆಯ ಕಾರ್ಮಿಕರ ಬೇಡಿಕೆಗಳಿಗನುಗುಣವಾಗಿ ಈ ನಿಯಮಾವಳಿಗಳು ಮತ್ತಷ್ಟು ಮತ್ತಷ್ಟು ಸಡಿಲವಾಗಿ, ಈವತ್ತು ಅಮೆರಿಕದಲ್ಲಿ ನಲವತ್ತು ಲಕ್ಷಕ್ಕೂ ಮೀರಿದ ಅನಿವಾಸಿ ಭಾರತೀಯರಿದ್ದಾರೆ. ನಿರ್ಬಂಧಗಳು ಕಠಿಣವಾಗಿದ್ದಾಗ ಬಂದ ಎಲ್ಲ ವಲಸಿಗರ ಪ್ರವೇಶ, ವಾಸ, ಕೌಟುಂಬಿಕ ಜೀವನ ಯಾವುದೂ ಕಾನೂನುಬದ್ಧವಾಗಿರಲಿಲ್ಲ. ಇವರೆಲ್ಲ ಅಧಿಕೃತ ನಾಗರಿಕರಾಗಲಿಲ್ಲ. ಅಮೆರಿಕದ ನಾಗರಿಕರ ಸಮಾಜದ ಜೊತೆ ಬೆರೆಯದೆ ತಮ್ಮ ಹಾಗೆಯೇ ನುಸುಳಿಕೊಂಡ ಬಂದು ಸಮಾಜದ, ನಗರಗಳ ಅಂಚಿನಲ್ಲಿ ವಾಸಿಸುತ್ತಿದ್ದ ಬೇರೆ ಬೇರೆ ದೇಶಗಳ ವಲಸಿಗರ ಜೊತೆ ಬೆರೆತರು. ಆ ದೇಶಗಳ ವಲಸಿಗರ ಜೊತೆಯೇ ಅಂತರ್ ಧರ್ಮೀಯ ವಿವಾಹಗಳನ್ನು ಮಾಡಿಕೊಂಡರು. ಆದರೆ ಧಾರ್ಮಿಕವಾಗಿ ಗಂಡಸರಾಗಲೀ, ಹೆಂಗಸರಾಗಲೀ ಪರಿವರ್ತನೆ ಹೊಂದುತ್ತಿರಲಿಲ್ಲ. ಆದರೆ ಮಕ್ಕಳು, ತಾಯಂದಿರ ಧರ್ಮದ ಕಡೆಗೆ, ಅಂದರೆ ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತಗೊಂಡರು. ಆದರೆ ಎಲ್ಲರೂ ಒಟ್ಟಿಗೆ ಸೇರಿ, ಈದ್‌ನಂತಹ ಹಬ್ಬಗಳನ್ನು ಕೂಡ ಆಚರಿಸುತ್ತಿದ್ದರು. ಇವತ್ತು ಎಲ್ಲ ದೇಶಗಳೂ ವಲಸಿಗರ ವಿರುದ್ಧವಾಗಿವೆ. ಆದರೆ ವಲಸಿಗರು ಏಕಕಾಲಕ್ಕೆ ವಿಶ್ವ ಪ್ರಜೆಗಳೂ ಹೌದು, ತಾವು ಬಿಟ್ಟು ಬಂದ ದೇಶದ ಪ್ರಜೆಗಳೂ ಹೌದು, ಹಾಗೆಯೇ ಸ್ಥಳೀಯರೂ ಹೌದು. ಪ್ರವಾಸ ಬರುವವರಲ್ಲೂ ತಾತ್ಕಾಲಿಕವಾಗಿಯಾದರೂ ಈ ಎಲ್ಲ ಅಂಶಗಳು ಕೆಲಸ ಮಾಡುತ್ತಿರುತ್ತವೆ. ಹೊಸ ಕಾಲದ ಪ್ರವಾಸ ಕಥನಗಳು ಈ ಅಂಶಗಳನ್ನೆಲ್ಲ ಪರಿಗಣಿಸಬೇಕಾಗುತ್ತದೆ.
|
|
|
|
|
|
|
|
ಈ ವಿಚಾರಗಳಿಗನುಗುಣವಾಗಿ ಪ್ರಸ್ತುತ ಬರವಣಿಗೆಯಿದೆ ಎಂದು ಹೇಳುವುದು ತಪ್ಪಾಗುತ್ತದೆ. ಈ ಪುಸ್ತಕ ಬರೆಯಬೇಕೆ, ಪ್ರಕಟಿಸಬೇಕೆ ಎಂಬುದರ ಬಗ್ಗೆ ಯೋಚಿಸುತ್ತಿದ್ದಾಗ ಮತ್ತು ಅಮೆರಿಕಕ್ಕೆ ಬರುವಾಗ, ಬಂದ ನಂತರವೂ ಈ ದೇಶದೊಳಗಡೆ ಬೇರೆ ಬೇರೆ ಕಡೆ ಓಡಾಡಿದಾಗ, ಜನರನ್ನು ಭೇಟಿ ಮಾಡುತ್ತಿದ್ದಾಗ, ಇದನ್ನೆಲ್ಲ ಬರೆದುಕೊಳ್ಳುವಾಗ, ಇಂತಹ ವಿಚಾರಗಳೆಲ್ಲ ನನ್ನನ್ನು ಬಾಧಿಸಿತು ಎಂದು ಮಾತ್ರ ಹೇಳಬಹುದು. ನಮ್ಮ ಕಾಲಕ್ಕೆ ಬೇಕಾದ ಪ್ರವಾಸ ಕಥನದ ಹೊಸ ಸ್ವರೂಪವು ಇಲ್ಲಿನ ಬರವಣಿಗೆಗೆ ದಕ್ಕಿದೆಯೇ ಎಂಬ ಪ್ರಶ್ನೆಗೆ ಓದುಗರು ಉತ್ತರ ಹೇಳಬೇಕು. ಹೊಸ ಸ್ವರೂಪದ ಅಗತ್ಯವಿದೆ ಎಂದು ಅವರಿಗೆ ಅನಿಸಿದರೂ, ನನ್ನ ಬರವಣಿಗೆ ಸಾರ್ಥಕವಾದಂತೆ.
|
|
|
|
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ |