CoolCoder44's picture
Upload folder using huggingface_hub
94fcbe1 verified
raw
history blame
102 kB
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಸು. ಕೃಷ್ಣಾನಂದರ ಎದುರೂ ಕುಕ್ಕರುಗಾಲಿನಲ್ಲಿ ಕುಳಿತು ಅವರಿಂದ ಬೈಸಿಕೊಂಡಿದ್ದನಂತೆ. ಅವನೂ ಕಣ್ಣು ಕಿರಿದು ಮಾಡಿದ. ಕಣ್ಣಂಚಿನಲ್ಲಿ ಸುಕ್ಕು ಮೂಡಿದವು. ತುಟಿಗಳ ಅಂಚನ್ನು ಕೆಳಗಿಳಿಸಿ ಮಾತಾಡಬಯಸುವವನಂತೆ ಆದರೆ ಮಾತಾಡಲಾರದವನಂತೆ ಪೆಚ್ಚಾಗಿ ನಕ್ಕು ಮುಂದೆ ಹೋದ.
ಅರ್ಧದಷ್ಟು ಮೆಟ್ಟಿಲಿಳಿದವನು ಮರದ ತುಂಬ ಕೂತಿದ್ದ. ಹಾರಾಡುತ್ತಿದ್ದ. ಸುಮ್ಮನೆ ನೋಡುತ್ತಿದ್ದ, ಮೈ ಕೆರೆದುಕೊಳ್ಳುತ್ತಿದ್ದ ಕೋತಿಗಳನ್ನು ಸ್ವಲ್ಪ ಹೊತ್ತು ನೋಡಿ ಮತ್ತೆ ಮೆಟ್ಟಿಲು ಹತ್ತಿ ಬಂದೆ. ನಾನು ಕೆಲಸ ಮಾಡುವ ಪ್ರೆಸ್ಸು ಬಾಗಿಲು ಹಾಕಿದೆ. ಗುರುಮಂದಿರದಲ್ಲಿ ಒಬ್ಬರೋ ಇಬ್ಬರೋ ಬಿಕೋ ಅಂತ ಸುಮ್ಮನೆ ಕೂತಿದ್ದಾರೆ. ಗಾಳಿ ಚಳಿಯಾಗಿದೆ. ತುಂತುರು ಬೀಳುತ್ತಿದೆ.
ನಾನು ಚಿಕ್ಕಮ್ಮನ ತಂಗಿಯ ಮದುವೆಗೆ ಗುಬ್ಬಿಗೆ ಹೋಗಿದ್ದೆ. ಆಗಿನ್ನೂ ನನಗೆ ಇಪ್ಪತ್ತು ವರ್ಷ. ಮದುವೆ ಮುಗಿದ ರಾತ್ರಿ. ಬೆಂಗಳೂರು ರಸ್ತೆಯಲ್ಲಿ ಮನೆಯ ಕಡೆ ಹೊರಟಿದ್ದಾಗ ಒಂದು ಲಾರಿ ಬಂತು. ಬೆಳಕು ಕೋರೈಸುತ್ತಿತ್ತು. ಕಣ್ಣು ಮುಚ್ಚಿಕೊಂಡೆ. ಮುಚ್ಚಿಕೊಂಡ ಕಣ್ಣಿನೊಳಗೆ, ರೆಪ್ಪೆಯ ನರಗಳೂ ಕಾಣುವಂತೆ, ಬೆಳಕು ಲಾರಿ ಹೊರಟುಹೋಯಿತು. ಜೋರಾಗಿ ಶಬ್ದ ಮಾಡುತ್ತಾ. ಆಗ ಒಂದು ಕ್ಷಣ ಅನ್ನಿಸಿತು: ನನ್ನ ಮೇಲೇ ಈ ಲಾರಿ ಹೋದರೆ. ಸತ್ತರೆ ಹೇಗಿರುತ್ತೆ? ಕಣ್ಣು ತೆರೆದರೆ ಕತ್ತಲು. ಮುಂದೆ ಹೋಗುತ್ತಿರುವ ಲಾರಿಯ ಬೆಳಕು ದಾರಿ ಪಕ್ಕದ ಆಲದ ಮರದ ಬಿಳಿಲುಗಳ ಮೇಲೆ ಬಿದ್ದು ಅದು ಆಲದ ಮರವೇ ಅಲ್ಲ ಅನ್ನುವ ಹಾಗೆ ಕಾಣುತ್ತಿತ್ತು. ಚಿಕ್ಕಪ್ಪನ ಜೊತೆ ಮಾತನಾಡುತ್ತಾ ಮನೆಗೆ ಬಂದೆ.
ಮನೆಯ ಮುಂದೆ ರಾತ್ರಿ ಬಹಳ ಹೊತ್ತು ಚಿಕ್ಕಮ್ಮನ ತಂಗಿಯರ ಜೊತೆ ಹರಟೆ ಹೊಡೆದು, ತಮಾಷೆ ಮಾಡಿ, ಜೋಕು ಹೇಳಿ ನಕ್ಕು ನಗಿಸಿ ಮಲಗಿಕೊಂಡೆ. ಬೆಳಗಿನ ಜಾವ ಸುದ್ದಿ ಬಂತು. ಫೋನು ಮಾಡಿದ್ದರಂತೆ. ಕೂಡಲೆ ನಾನು ಮೈಸೂರಿಗೆ ಹೋಗಬೇಕಂತೆ.
ಹೋದೆ. ಅಪ್ಪ ಸತ್ತಿರಬಹುದೆ? ಬಸ್ಸಿನಲ್ಲಿ ಯಾರೋ ಕಾಲೇಜು ಹುಡುಗಿಯರು. ಒಬ್ಬ ಮುಸ್ಲಿಂ ಹುಡುಗಿ. ಕಪ್ಪು ದಾವಣಿ ಹಾಕಿಕೊಂಡು ತೊಡೆ ಮೇಲೆ ಎರಡು ನೋಟು ಬುಕ್ಕು ಇಟ್ಟುಕೊಂಡು ಕೂತಿದ್ದಳು. ಅವಳು ನನ್ನ ಪಕ್ಕ ಕೂತಿದ್ದರೆ, ಅವಳ ತೋಳು ನನಗೆ ತಗಲುವಂತಿದ್ದರೆ ಅಂತ ಅಂದುಕೊಳ್ಳುತ್ತ ಅಪ್ಪ ಸತ್ತು ಹೋಗಿದ್ದರೆ ಅಂತ ಆಗಾಗ ಅಂದುಕೊಳ್ಳುತ್ತ-ಬಸ್ಸು ಮೈಸೂರು ತಲುಪಿತು.
ಆಟೋ ನಮ್ಮ ಮನೆಯ ತಿರುವಿಗೆ ಬಂದಿತು. ನಮ್ಮ ಮಹಡಿಯ ಅಂಗಳದ ತುಂಬ, ಗೇಟಿನ ಹತ್ತಿರ ಕೂಡ ಜನ ಸೇರಿದ್ದರು. ಅಪ್ಪ ಸತ್ತಿದ್ದಾರೆ ಅನ್ನಿಸಿತು.
ಎರಡು ದಿನದ ಹಿದೆ ಮದುವೆಗೆ ಹೋಗುವಾಗ ಷಡಕ್ಷರ ಮಹಾಕವಿಯೇ ಅಲ್ಲ ಅಂತ ಅಪ್ಪನ ಜೊತೆ ವಾದ ಮಾಡಿ ಹೋಗಿದ್ದೆ. ನಾನು ಮತ್ತು ಪಂಡಿತಾರಾಧ್ಯ ರಸ್ತೆ ತಿರುವಿನಲ್ಲಿ ಮರೆಯಾಗುವವರೆಗೆ ಅಪ್ಪ ನಮ್ಮನ್ನೇ ನೋಡುತ್ತ ನಿಂತಿದ್ದರು. ಸುಮ್ಮನೆ ಹಿಂದಿರುಗಿದಾಗ ಕಂಡದ್ದು ಅಷ್ಟೆ. ನಾವು ನೋಡಿದೆವೆಂದು ಅಪ್ಪನಿಗೆ ತಿಳಿಯಲೆ ಇಲ್ಲ. ‘ಯಾಕೋ ಅವನು ತಿರುಗಿ ನಮ್ಮತ್ತ ನೋಡಲೇ ಇಲ್ಲ ಕಣೆ’ ಅಂತ ಅಮ್ಮನ ಹತ್ತಿರ ಪೇಚಾಡಿದ್ದರಂತೆ.
ನಾನು ಮತ್ತೆ ಮೆಟ್ಟಿಲಿಳಿದು, ರಸ್ತೆ ದಾಟಿ, ಮತ್ತಷ್ಟು ಮೆಟ್ಟಿಲಿಳಿದು ಗಂಗಾನದಿಯ ದಡಕ್ಕೆ ಹೋದೆ. ನೆಲಕ್ಕೆ ಸಿಮೆಂಟಿನ ಹಾಸು ಇತ್ತು. ಟೇಲಿಫೋನು ಕಂಬದ ವೈರು ಹಿಡಿದು, ಅದರ ಮೇಲೆ ಭಾರ ಬಿಟ್ಟು ಸುಮ್ಮನೆ ನದಿ ನೋಡುತ್ತ ನಿಂತೆ. ರಾಮಝೂಲಾದ ಮೇಲೆ ಜನ ಓಡಾಡುತ್ತಿದ್ದರು. ನನ್ನ ಬೆನ್ನ ಹಿಂದೆ, ಮೇಲೆ, ಆಸ್ಪತ್ರೆಯ ಕಿಟಿಕಿಯ ಹತ್ತಿರ ಲೀಲಾ ನಿಂತಿದ್ದಳು. ಲೀಲಾ ಮಧ್ಯ ಪ್ರದೇಶದ ಯಾವುದೋ ಪುಟ್ಟ ಊರಿನವಳು. ಸ್ಕೂಲಿನಲ್ಲಿ ಮೇಡಂ ಅಂತೆ. ದಿನಾ ಸಂಜೆ ಹದಿನೈದು ದಿಮದಿಂದ ಸಂಜೆಯ ‘ಅನುಭವಾಮೃತ’ದ ತರಗತಿಗಳಲ್ಲಿ ನನ್ನ ಪಕ್ಕದಲ್ಲೇ ಕೂರುತ್ತಿದ್ದಳು. ಜ್ಞಾನದೇವನ ಅನುಭವಾಮೃತದ ಇಂಗ್ಲಿಷ್ ಅನುವಾದ ಅವಳ ಹತ್ತಿರ ಇರಲಿಲ್ಲ. ನನ್ನ ಪುಸ್ತಕವನ್ನೆ ನೋಡುತ್ತಿದ್ದಳು. ಅವಳ ಅಕ್ಷರ ತುಂಬ ಮುದ್ದಾಗಿತ್ತು. ಆಶ್ರಮದಲ್ಲಿದ್ದಷ್ಟು ದಿನ ಅವಳು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಬ್ರಹ್ಮಾನಂದರ ನೇರ ಎದುರಿಗೆ ಮೂಲೆಯಲ್ಲಿ ನನನ್ ಜಾಗ, ನನ್ನ ಪಕ್ಕದಲ್ಲಿ ಲೀಲಾ. ಕೆಲವು ದಿನ ಬ್ರಹ್ಮಾನಂದರ ತರಗತಿಯಲ್ಲಿ ಜನ ಜಾಸ್ತಿ ಆದಾಗ ಚಕ್ಕಂಬಟ್ಟಲು ಹಾಕಿ ಕುಳಿತ ನಮ್ಮ ಮಂಡಿಗಳು ಸ್ಪರ್ಶಿಸುತ್ತಿದ್ದವು. ಅವಳೊಡನೆ ಹೆಚ್ಚು ಮಾತೇ ಆಡಲಿಲ್ಲ. ಆಡಿದ್ದು ಒಂದೇ ದಿನ, ಸಂಜೆ. ಕೃಷ್ಣಾನಂದರೊಡನೆ ಧ್ಯಾನ ಮಾಡಿ ನಮ್ಮ ನಮ್ಮ ಕೋಣೆಗಳಿಗೆ ಹೋಗುವಾಗ ಕೇಳಿದೆ-
“ಇದೇ ಮೊದಲಾ ನೀವು ಇಲ್ಲಿಗೆ ಬಂದದ್ದು?”
“ಹೌದು.”
“ನೀವು?” ಅಂತ ಕೇಳಿದಳು.
“ಇಲ್ಲೇ ಇರುವವನು.”
“ಯಾವ ಊರು?”
“ಬೆಂಗಳೂರು. ನಿಮ್ಮದು?”
ಇಂದೂರಿನ ಹತ್ತಿರ ಒಂದು ಹಳ್ಳಿಯ ಹೆಸರು ಹೇಳಿದಳು.
“ನೀವು ಸ್ಕೀಲಿನಲ್ಲಿ ಮೇಡಂ ಇರಬೇಕು. ಅಲ್ಲವಾ?”
“ಹೌದು. ನೀವು ತುಂಬ ಜಾಣರು” ಅಂದಳು.
ಅಷ್ಟೆ. ಆದರೂ ಅಲ್ಲಿರುವಷ್ಟು ದಿನ ಅವಳನ್ನು ಗಮನಿಸುತ್ತಲೇ ಇದ್ದೆ.
ಈಗ ಲೀಲ ನನ್ನ ಬೆನ್ನ ಹಿಂದೆ. ಅಲ್ಲಿ ಮೇಲೆ, ನಿಂತಿದ್ದಳು. ನನ್ನ ಬೆನ್ನು. ಜೋರಾಗಿ ಬೀಸುವ ಗಾಳಿಗೆ ಹಾರಾಡುವ ನನ್ನ ಕೂದಲು ಇವೆಲ್ಲ ಅವಳಿಗೆ ನನ್ನ, ನಿಶ್ಚಲವಾಗಿ ನಿಂತ ನನ್ನ ಮನಸ್ಸಿನ ವಿಷಾದವನ್ನು ತಲುಪಿಸುತ್ತಿರಬಹುದು ಅಂದುಕೊಂಡೆ. ಇನ್ನೇನು ಈಗ ಸಂಸ್ಕಾರ ಶುರುವಾಗುತ್ತದೆ.
ಹೋದತಕ್ಷಣ ನನಗೆ ಎಲ್ಲರೂ ಜಾಗ ಬಿಟ್ಟರು. ಹಾಲಿನಲ್ಲಿ ನಮ್ಮಪ್ಪ ಮಂಚದ ಮೇಲೆ ಮಲಗಿಬಿಟ್ಟಿದ್ದರು. ಅಮ್ಮ ಅಳುತ್ತಿದ್ದರು. ನಾನು ಅಮ್ಮನ ತೊಡೆಯಲ್ಲಿ ತಲೆ ಇಟ್ಟೆ. ಅಳು ಬರಲಿಲ್ಲ. ಅಥವ ಅಳಲು ಆಗಲಿಲ್ಲ.
ಹೊರಗೆ ಕರೆದುಕೊಂಡು ಬಂದರು. ವರಾಂಡದಲ್ಲಿ ಕೂತೆ. ಕೆಂಪು ಸಿಮೆಂಟಿನ ನೆಲದಲ್ಲಿ ಕೊರೆದಿದ್ದ ಎರಡು ನೇರ ಸರಳರೇಖೆಗಳ ನಡುವಿನ ಜಾಗವನ್ನು ಸುಮ್ಮನೆ ನೋಡುತ್ತ ಕುಳಿತೆ. ವಿಷಾದ ಖಾಲಿ. ನಾನು ಇರಲೇ ಇಲ್ಲವೋ ಏನೋ.
ಆ ಸನ್ಯಾಸಿ ಬಹಳ ಚೆನ್ನಾಗಿ ಹಾಡುತ್ತಿದ್ದನಂತೆ. ಅವನಿಗೆ ಹುಚ್ಚು ಹಿಡಿದಿತ್ತಂತೆ.
ಆಗಾಗ ಹಿಡಿಯುತ್ತಿತ್ತಂತೆ. ಅವನನ್ನು ಮಂಚಕ್ಕೆ ಕಟ್ಟಿಹಾಕಿದ್ದರಂತೆ. ಅವನು ರಾತ್ರಿ ಹೊತ್ತು ತಪ್ಪಿಸಿಕೊಂಡು ಓಡಿಹೋಗುತ್ತಿದ್ದನಂತೆ. ಚೆನ್ನಾಗಿದ್ದಾಗ ಅವನು ಆಸ್ಪತ್ರೆಯ ರೋಗಿಗಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದನಂತೆ. ಅಡುಗೆ ಮನೆಯ ಸ್ಟೋರಿನಲ್ಲೂ ಕೆಲಸ ಮಾಡುತ್ತಿದ್ದನಂತೆ. ಅವನು ಸಾಯಲಿಲ್ಲವಂತೆ. ಅಳುತ್ತಿದ್ದನಂತೆ. ಆತ್ಮಹತ್ಯೆ ಮಾಡಿಕೊಂಡನಂತೆ. ನಾನು ನೋಡದ ಸನ್ಯಾಸಿಯ ಕೇಳಿದ ಬದುಕು. ನಾನು ಹೀಗೆ ಇಲ್ಲೇ ಇದ್ದುಬಿಡಲೇ.
ನಮ್ಮಪ್ಪನಿಗೆ ಕೊನೆಯ ಸ್ನಾನ ಮಾಡಿಸುತ್ತಿದ್ದರು. ಮನೆಯ ಹೊರಗೆ, ಸಾಯಂಕಾಲ. ಪಂಡಿತ ಹೇಳಿದ-“ನಿನಗೆ ಅಪ್ಪಾಜಿ ಸತ್ತುಹೋಗಿರಬಹುದು ಅನ್ನಿಸಿತ್ತಾ?” ಲಾರಿ ಜ್ಞಾಪಕ ಬಂತು ರಾತ್ರಿ ಊಟ ಮಾಡಿ, ಹಾಲು ಕುಡಿದು, ಅಮ್ಮ ವೀಣೆ ನುಡಿಸಿದ್ದು ಕೇಳುತ್ತಾ ಮಲಗಿ ಹಗೇ ಸತ್ತುಹೋದರಂತೆ. ಅಪ್ಪನಿಗೆ ಸ್ನಾನ ಮಾಡಿಸುವುದು ನೋಡಿ ತುಂಬ ಅಳು ಬಂತು. ಪಂಡಿತನ ಭುಜಕ್ಕೆ ಒರಗಿ ಅತ್ತುಬಿಟ್ಟೆ.
ದೋಣಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ನಾಲ್ಕು ಜನ ಸನ್ಯಾಸಿಗಳು ಸತ್ತ ಸನ್ಯಾಸಿಯ ಹೆಣ ಅದರಲ್ಲಿಟ್ತರು. ಗಂಗಾ ನದಿಯಲ್ಲಿ ದೋಣಿ ಡರ್ ರ್ ಮೋಟರು ಸದ್ದು ಮಾಡುತ್ತ ಹೊರಟಿತು. ಗಂಗೆಯಲ್ಲಿ ನೇರ ಹೊರಟು ನಟ್ಟನಡುವೆ ನಾಲ್ಕೋ ಆರೋ ಪ್ರದಕ್ಷಿಣೆ ಹಾಕಿತು. ಇದ್ದಕ್ಕಿದ್ದಂತೆ, ಗಂಗೆಯ ನಟ್ಟನಡುವೆ ಸನ್ಯಾಸಿಯ ಹೆಣವನ್ನು ಡುಬಕ್ಕನೆ ನದಿಗೆ ಹಾಕಿಬಿಟ್ಟರು. ಸ್ವಲ್ಪ ನೀರು ಚಿಮ್ಮಿ ಹೆಣ ಮುಳುಗಿ ಹೋಯಿತು.
ನಾನು ತೀರ ಚಿಕ್ಕವನಿದ್ದಾಗ ಅಪ್ಪನೊಡನೆ ಉಲ್ಲಾಳಕ್ಕೆ ಹೋಗಿದ್ದೆ. ದೋಣಿಯಲ್ಲಿ ಹೋದೆವು. ಹುಟ್ಟುಹಾಕುವ ದೋಣಿ. ನೇತ್ರಾವತಿಯಲ್ಲಿ ಹೋಗುತ್ತಿದ್ದಾಗ ನನ್ನ ಎದುರಿಗೇ ಒಂದು ನಾಯಿಯ ಹೆಣ ತೇಲಿಕೊಂಡು ಬರುತ್ತಿತ್ತು. ಅದರ ತಲೆ ಮುಳುಗಿತ್ತು. ಹಿಂದಿನ ಎರಡು ಕಾಲು ಮಾತ್ರ ನದಿಯ ಮೇಲೆ ಆಕಾಶ ನೋಡುತ್ತ ಎತ್ತಿಕೊಂಡಿದ್ದವು. ನಮ್ಮ ದೋಣಿಯನ್ನು ದಾಟಿ ಸತ್ತ ನಾಯಿ ಸಮುದ್ರದ ಕಡೆ ತೇಲಿಕೊಂಡು ಹೋಯಿತು. ವರ್ಷಗಳೆಷ್ಟೋ ಕಳೆದ ಆಮೇಲೂ ಕನಸಿನಲ್ಲಿ ಶಿವಮೊಗ್ಗೆಯ ತುಂಗೆಯಲ್ಲಿ ಆ ನಾಯಿಯ ಹೆಣ ತೇಲಿಬಂದಂತೆ ಕಂಡದ್ದಿದೆ. ಅವತ್ತು ಸಾಯಂಕಾಲ ಸ್ಮಶಾನದಲ್ಲಿ ಅಪ್ಪನ ತಲೆಯ ಮೇಲೆ ಒಬ್ಬ. ನನ್ನ ವಿದ್ಯಾರ್ಥಿಯೇ ಆಗಿದ್ದ. ಸ್ವಾಮಿಯ ಪಾದಗಳನ್ನು ತೊಳೆಯುವಾಗ ತುಂಬ ಸಿಟ್ಟು ಬಂದಿತ್ತು. ಅವನು ಸ್ವಾಮಿಯಾದರೂ ಯಾವ ಥರದಲ್ಲೂ ಅಪ್ಪನಿಗಿಂತ ದೊಡ್ಡ ಮನುಷ್ಯ ಅಲ್ಲ ಅನ್ನುವ, ಅವನ ಕಾಲು ತೊಳೆಯಬೇಕಲ್ಲ ಅನ್ನುವ ಸಿಟ್ಟು. ಜೊತೆಗೆ ಇನ್ನೆಂದೂ ಅಪ್ಪನ ಮುಖ ನೋಡಲಾರೆ ಅನ್ನುವ ಅಳು.
ನಾನು ಇಲ್ಲೆ ಇದ್ದರೆ ನನ್ನ ಸಾವೂ ಹೀಗೇ ಆದೀತೇನೋ. ಏನೂ ಸಂಬಂಧ ಇಲ್ಲದ ಯಾರೋ ಒಬ್ಬ ಹೀಗೇ ನನ್ನ ಗಂಗೆ ಪಾಲು ಮಾಡುವುದು ನೋಡುತ್ತ ನಿಂತಿರುತ್ತಾನೋ ಏನೋ. ಅವನ ಹಿಂದೆ ಇನ್ನು ಯಾರೋ ಹುಡುಗಿ….
ಅಪ್ಪ ಸತ್ತು ಇಪ್ಪತ್ತು ವರ್ಷ ಆಯಿತು. ತಾನು ಒಪ್ಪದ ಹುಡುಗಿಯನ್ನು ಮದುವೆ ಆದರೆ ಸಾಯುವುದಾಗಿ ಹೆದರಿಸಿದ ಅಮ್ಮ ಮತ್ತು ಅಮ್ಮನನ್ನು ಎದುರಿಸಿ ಮದುವೆಯಾದ ನಾನು ಇನ್ನೂ ಇದ್ದೇವೆ. ನಾನು ಮದುವೆಯಾದ ಹುಡುಗಿ ಈಗ ನಾನು ಇಲ್ಲಿರುವುದು ಗೊತ್ತೇ ಇಲ್ಲದೆ ಅಲ್ಲಿ ಇದ್ದಾಳೆ. ಅವರಿಗೆ ನಾನು ನನಗೆ ಅವರು ಸತ್ತುಹೋಗಿಲ್ಲವೇ? ಇಲ್ಲೇ ಇದ್ದುಬಿಟ್ಟರೆ ಏನಂತೆ? ಇದ್ದರೆ ಆಯಿತು.
ಮತ್ತೆ ಆರನೆಯ ದಿನವೇ ಬರೆದದ್ದು
ಎಂಥ ಕಣ್ಣು ಎಂಥಾ ಕಣ್ಣು ನಿನ್ನವೇ. ಕಣ್ಣುಗಳ ನೆನಪು ನಾಡಿನಲ್ಲಿ ಅಕ್ಷರಶಃ ಮೈಮರೆತು ಅಲೆದಿದ್ದೆ. ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು. ಕಣ್ಣುಗಳು ನನ್ನನ್ನು ಸುಳಿಯಲ್ಲಿ ಮುಳುಗಿಸಿ ಹೀಗೆ ಇಲ್ಲಿ ಹೃಷಿಕೇಶದ ಗಂಗೆಯ ದಡದಲ್ಲಿ ತೇಲಿಸಿವೆ.
ಸುಳ್ಳು. ಅದು ಒಂದು ಕರಣ. ಅದೊಂದು ಕಾರಣ ಅಲ್ಲ. ಕಾರಣ ಅಥವ ಕಾರಣಗಳು ಏನಿದ್ದರೂ ನಾವು ಸುಮ್ಮನಿರಲಾರದೆ ಆಮೇಲೆ ಹುಡುಕಿಕೊಂಡವುಗಳು.
ಗಣೇಶಪುರಿ ಬಂದಿದ್ದಾರೆ. ನಾಳೆ ಬರುತ್ತಾರೆ. ಅಂದಾಗ ಸಾಧಕ ನಿವಾಸದಲ್ಲೆಲ್ಲ ಹುರುಪು. ನನಗೆ ತಳಮಳ ಆಗುತ್ತಿತ್ತು. ಅವರೆದುರು ಏನು ಹೇಳಲಿ ಹೇಗೆ ಹೇಳಲಿ. ಗುಜರಾತಿನ ಮುದುಕ ಸಂತೋಷವಾಗಿದ್ದ. ಸದ್ಯ ನಾಳೆ ಗುರುವಿನ ದರ್ಶನ ಪಡೆದು ಊರಿಗೆ ಹೋಗಬಹುದು. ಮನೆ ಬಿಟ್ಟು, ಅಂಗಡಿ ಬಿಟ್ಟು ತಿಂಗಳಾಯಿತು. ಸದ್ಯ ಈ ಸಾರಿ ಯಾತ್ರೆ ಚೆನ್ನಾಗಿ ಆಯಿತು. ಹೀಗಂದ, ಬಿಳೀ ಸೀರೆ ಉಟ್ಟ ಹೆಂದಸು ತನ್ನ ರೂಮಿನ ಮುಂದೆ ಓಡಾಡುತ್ತಿದ್ದಳು. ದಿನಾ ಊಟ ಅವಳಿದ್ದ ರೂಮಿಗೇ ಹೋಗುತ್ತಿತ್ತು. ಯಾರೋ ಅವಳು. ಆ ಆಶ್ರಮಕ್ಕೆ ತುಂಬ ಹಣ ಕೊಟ್ಟವಳೋ? ತುಂಬ ದುಃಳಿತಳೋ? ಹಣೇಸ್ಗಪುರಿ ಒಪ್ಪಿದರೆ. ನಾನು ಇಲ್ಲೇ ಇರುವಂತಾದರೆ ಅವಳು ನನ್ನ ಬಗ್ಗೆ ಏನೆಂದುಕೊಳ್ಳಬಹುದೋ?
ಒಂದು ವಾರದ ಹಿಂದಷ್ಟೆ ಸಾಧಕನಿವಾಸದಲ್ಲಿ ದೊಡ್ಡ ಭಂಡಾರ. ಅಂದರೆ ವಿಶೇಷ ಊಟ. ಎಂಥದೋ ಪೌರ್ಣಮಿಯ ನೆಪ. ಅಲ್ಲಿದ್ದ ನಮಗೆಲ್ಲ ಒಂದೊಂದು ಕೆಲಸ. ನನಗೆ ನೀರು ಹಂಚುವ ಕೆಲಸವಂತೆ. ಅವರು ಹಿಂದಿಯಲ್ಲಿ ಎಂಥದೋ ಪದ ಬಳಸಿ ಹೇಳಿದರು. ಅರೆಬರೆ ಇಂಗ್ಲೀಷು ಗೊತ್ತಿದ್ದ ಬೊಂಬಾಯಿಯ ಗಡ್ಡದ ಸನ್ಯಾಸಿಯನ್ನು ಕೇಳಿ ಖಚಿತಮಾಡಿಕೊಂಡೆ. ಗೀತಾಜಯಂತಿಯಂತೆ.
ಮಡಕೆಯ ತಟ್ಟೆಗಳು. ಮಣ್ಣಿನ ಕುಡಿಕೆಗಳು. ಸಿಹಿ, ಪೂರಿ, ಪಲ್ಯ, ಅನ್ನ, ಸಾರು. ಹರಿದ್ವಾರದ ಬಹುಶಃ ಎಲ್ಲ ಸನ್ಯಾಸಿಗಳೂ ಸೇರಿದ್ದರು. ಅವರ ಕೈಯಲ್ಲೆಲ್ಲ ಭಂಡಾರದ ಒಂದೊಂದು ಪಾಸು. “ಪಾನೀ, ಪಾನೀ.” ತಪ್ಪು. ಪಾನಿ ಅನ್ನಬಾರದು ನೀರನ್ನು. “ಜಲ” ಅನ್ನಬೇಕಂತೆ. ಮಧ್ಯಾಹ್ನದ ಬಿಸಿಲಿನಲ್ಲಿ ಒಮ್ಮೆಗೆ ಇನ್ನೂರರಂತೆ ನಾಲ್ಕೈದು ಪಂಕ್ತಿ ಊಟ. ಊಟ ಬಡಿಸಲು ಒಬ್ಬೊಬ್ಬರಿಗೆ ಒಂದೊಂದು ಕೆಲಸ. ಎಲ್ಲರಿಗೂ ಜಲ ಕುಡಿಸಿ, ಪೆಕರನಂತೆ ಬಿಸಿಲು ಮಚ್ಚು ಹತ್ತುತ್ತ ಇಳಿಯುತ್ತ ಹತ್ತುತ್ತ ಕೇಳಿದವರಿಗೆಲ್ಲ ನೀರು ಕುಡಿಸುತ್ತ ಸುಸ್ತಾದೆ. ಬಿಳೀ ಸೀರೆಯ ಹೆಂಗಸು ಮಹಿಳೆಯರ ಪಂಕಿಯಲ್ಲಿ ಎದ್ದುಕಾಣುತ್ತಿದ್ದಳು. ನಾನೂ ಅವರ ಮಠದವನೇ ಆಗಿಬಿಟ್ಟೆನೋ. ಕೆಲಸ ಮಾಡುತ್ತಿದ್ದೇನಲ್ಲ ಅಂತ ಆಶ್ಚರ್ಯಪಟ್ಟಹಾಗಿತ್ತು. ಊಟ ಮಾಡಿದವರಿಗೆಲ್ಲ ಹತ್ತು ರೂಪಾಯಿ ತಲಾ ದಕ್ಷಿಣೆ ಹಂಚುತ್ತ ಬಂದರು. ಕೆಲವರಿಗೆ ಐದು. ಕಡಿಮೆ ಸಿಕ್ಕವರು ಜಾಸ್ತಿ ಸಿಕ್ಕಬೇಕೆಂದು ಜಗಳ ತೆಗೆದರು. ಹೊರಗೆ ಭಂಡಾರದ ಪಾಸು ಸಿಗದವರು ನಮಗೆ ಯಾಕೆ ಪಾಸು ಇಲ್ಲ ಅಂತ ಗಲಾಟೆ ಮಾಡುತ್ತಿದ್ದರು. ಇನ್ನೂ ಕೆಲವು ಭಿಕ್ಷುಕರು ಊಟ ಮುಗಿಯುವುದನ್ನು ಕಾಯುತ್ತಿದ್ದರು. ನನಗೆ ಮತ್ತು ಊಟ ಬಡಿಸಿದ ಹುಡುಗರಿಗೆ ಇಪ್ಪತ್ತು ರೂಪಾಯಿ ಕೊಟ್ಟರು. ನಮ್ಮ ಕೆಲಸದ ಋಣ ಬೇಡವೆಂದೆ? ದಕ್ಷಿಣೆ ಎಂದೆ? ಕೂಲಿ ಎಂದೆ? ನನ್ನ ಖರ್ಚಾಗುತ್ತಿದ್ದ ಹಣಕ್ಕೆ ಇಪ್ಪತ್ತು ರೂಪಾಯಿ ಬಂದು ಸೇರಿತಲ್ಲ ಎಂದು ಸಂತೋಷವೂ ಆಯಿತು.
ಗಣೇಶಪುರಿ ಬಂದಿದ್ದಾರೆ. ಬೆಳಗಿನ ಜಾವ ಕಾಣಲಿಲ್ಲ. ಅಲ್ಲಿನ ಪ್ರಧಾನಮಂತ್ರಿಯನ್ನು ಕೇಳಿದೆ. ಎಂಟುಗಂಟೆಗೆ ಬಂದು ನೋಡು ಅಂದ.
ಮತ್ತೆ ಬರವಣಿಗೆಯ ಏಳನೆಯ ದಿನ
ಅದಕ್ಕೇ ಮುಳುಗುವುದಕ್ಕೆ ಭಯ ನನಗೆ. ನೆನಪು ಆಗಿ ಉಳಿದುಕೊಂಡಿದೆ ಎಂದೇ ಗೊತ್ತಿಲ್ಲದಿದ್ದ ಅಸಂಖ್ಯಾತ ವಿವರಗಳು ಒಮ್ಮೆಲೇ, ಅವೆಲ್ಲ ಈಗಲೇ ಆಗುತ್ತಿವೆಯೇನೋ ಎಂಬಂತೆ ಘಾತಿಸುತ್ತವೆ – ಬದರಿಯ ಬಳಿ, ಇಂಡಿಯಾದ ಕೊನೆಯ ಹಳ್ಳಿ ಮಾನಾವನ್ನು ದಾಟಿದಮೇಲೆ ಸಿಗುವ ಭೀಮಫೂಲ್‌ನ ಆರ್ಭಟಿಸುವ, ಆ‌ಆರ್ಭರ್ಭಟಿಸುವ ಪ್ರಚಂಡ ಭಯಂಕರ ವೇಗದ ಜಲಪಾತದ ಹಾಗೆ. ತುಂಬಿ ಮೊರೆಯುವ ನೂರು ಜೋಗ್ ಗಳನ್ನು ನಲವತ್ತು ಅಡಿಯ ಇಕ್ಕಟ್ಟಿನಲ್ಲಿ ಇರುಕಿಸಿದಹಾಗೆ ಅದು.
ಪಾಂಡವರು ಇಲ್ಲಿಂದ ಸ್ವರ್ಗಕ್ಕೆ ಹೋದರಂತೆ. ದಾರಿಗಡ್ಡವಾದ ಜಲಪಾತ. ದ್ರೌಪದಿಯೋ ಮಿಕ್ಕ ಪಾಂಡವರೋ ದಾಟಲೆಂದು ಭೀಮ ಎರಡೂ ದಂಡೆಗೆ ಅಡ್ಡಮಲಗಿದನಂತೆ. ಹಾಗೇ ಕಲ್ಲಾಗಿಬಿಟ್ಟನೋ! ಒಂದು ಕಲ್ಲು ಸೇತುವೆಯ ರೂಪದಲ್ಲಿ ಅಡ್ಡಾದಿಡ್ಡಿಯಾಗಿ ಜಲಪಾತದ ಬಳಿ ಇದೆ. ನಮ್ಮವರೆ ಯಾರೋ ವಿಚಾರಿಸಿ ತಂದ ಮಾಹಿತಿ ಅದು. ಅದು ಸರಸ್ವತಿ ನದಿಯಂತೆ. ಸ್ಫೂರ್ತಿಯೋ ನೆನಪೋ ಅವುಗಳ ದೇವತೆ ಸರಸ್ವತಿಯೋ ಈ ವೇಗದಲ್ಲಿ ಘಾತಿಸಿದರೆ ಗತಿಯೇನು?
ಎರಡೂ ಬದಿಗಳಲ್ಲಿ ಬಂಡೆ. ಬಂಡೆಗಳು. ಕಪ್ಪು ಕಪ್ಪು, ಆನೆ ಬಂಡೆಗಳು. ಭೀಮ ಬಂಡೆಗಳು. ಬೃಹತ್, ಕಠಿಣ, ಕ್ರೂರ, ಬಂಡೆಗಳು. ದುರ್ದಮ್ಯ. ಯಾವುದು? ಕಲ್ಲೋ ನೀರೋ? ತಟ್ಟನೆ ಪ್ರತ್ಯಕ್ಷವಾದಂತೆ ಕಾಣುವ, ನಮ್ಮ ಮೈಯೆಲ್ಲ ಕಂಪಿಸುವ ಕಿವಿಯೇ ಆಗಿಬಿಟ್ಟಿದೆ ಅನಿಸಿಬಿಡುವ, ಗೋಡೆಯಂತ ಬೆಟ್ಟದ ಮೇಲಿಂದ ಬೀಳುವ ವೇಗದಲ್ಲಿ ಕ್ಷಣಕ್ಷಣಕ್ಕೂ ರಭಸ ನೂರ್ಮಡಿಯಾಗುತ್ತ, ಮಣ್ಣನ್ನು ಕೊಚ್ಚಿ, ಬಿಳುಪು ಕೆಂಪಾಗಿ, ಕೆಂಪು ನೀರಿನ ಬಿಳುಪನ್ನು ಪೂರ್ತಿ ಮರೆಮಾಡದೆ, ನಿಷ್ಕರುಣೆಯಿಂದೆಂಬಂತೆ, ಅಲ್ಲ, ಸಹಜವಾಗಿ, ಕರುಣೆ ನಿಷ್ಕರುಣೆಯೇನೇನೂ ಅಲ್ಲದ, ತಾನು ವೇಗ ಮಾತ್ರ, ಬೀಳುತ್ತಿರುವ ನೀರು ಮಾತ್ರ, ಚಿಮ್ಮುವ ಹನಿ ಹೊಗೆ ಮಾತ್ರ, ಆರ್ಭಟ ಮಾತ್ರ ಎಂಬಂತೆ ಧುಮುಕುವ ಜಲದ ಅನಿವಾರ್ಯ ಪತನ ಪತನದ ಆಘಾತ. ಎಷ್ಟು ಲಕ್ಷ ವರ್ಷಗಳಿಂದ ಈ ಬಂಡೆಗಳನ್ನು ಅಪ್ಪಳಿಸಿದೆಯೋ. ನುಗ್ಗಿ ಬಿದ್ದು ನುಗ್ಗಿ ಹರಿಯುವ ದಿಕ್ಕಿಗೆ ವೇಗಕ್ಕೆ ಅನುಗುಣವಾಗಿ ಬಂಡೆಗಳು ಸವೆದು ಸವೆದು ನುಣ್ಣಗಾಗಿ, ಕಲ್ಲೆಲ್ಲ ಬೆಣ್ಣೆಯಾಗಿಬಿಟ್ಟಂತೆ ವಿಚಿತ್ರ ವಿನ್ಯಾಸಗಳು. ತೀರ್ಥಹಳ್ಳಿಯ ಹತ್ತಿರ ನದಿಯಲ್ಲಿ ಬಂಡೆಗಳು ಹೀಗೇ ಹರಿವ ನೀರಿಗೆ ಸಿಕ್ಕಿಬಿದ್ದು ನಮ್ಮ ಮನಸ್ಸಿನ ವಿಚಿತ್ರಗಳಿಗೇ ಆಕಾರ ಕೊಟ್ಟಂತೆ ಆಗಿಬಿಟ್ಟಿವೆಯಲ್ಲ ಅದನ್ನೆ ನೂರು ಪಟ್ಟು ಹೆಚ್ಚಿಸಿ ದೊಡ್ಡ ಭೂತಗನ್ನಡಿಯ ಆಚೆ ಬದಿ ನಿಂತು ನೋಡಿದಂತೆ ಆಗುತ್ತದೆ ಇಲ್ಲಿ. ಘರ್ಷಣೆ ಎಂದರೆ ಇದು. ಲಕ್ಷ ಲಕ್ಷ ವರ್ಷಗಳಿಂದ, ಒಂದು ಅರೆ ಕ್ಷಣವೂ ತಪ್ಪದಂತೆ, ಹೀಗೆ ಇಲ್ಲಿ ಈಗ ಬರೆಯುತ್ತಿರುವ ಹೊತ್ತಿನಲ್ಲೂ ಅಲ್ಲಿ ನಡೆದೇ ಇರುವ ಘರ್ಷಣೆ. ಗೊತ್ತು ಇಲ್ಲದ, ಗುರಿ ಇಲ್ಲದ, ಆಗುತ್ತಿರುವ, ಆಗುತ್ತಲೇ ಇರುವ ಘರ್ಷಣೆ.
ಹೇಮಕುಂಡದ ನೀರು ಪ್ರಶಾಂತವಾಗಿತ್ತು-ಮೇಲೆಲ್ಲ ಹೆಪ್ಪುಗಟ್ಟಿ ಚಳಿಯಲ್ಲಿ ನೀರ ಪದರದ ಮೇಲೆಲ್ಲ ಹಬೆಯಾಡುತ್ತ, ಹಿಮದ ತೆಳು ಹಲಗೆಗಳು ಒಡೆದು ತೇಲುತ್ತ, ನನ್ನ ಬೆರಳು ಮಾತ್ರ ನೀರನ್ನು ಮುಟ್ಟಿದವು. ಬಹುಶಃ ಸುತ್ತ ಇರುವ ಏಳು ಶಿಖರಗಳಷ್ಟೆ ಆಳ ಇದೆಯೋ? ಮುಟ್ಟಲಾಗದ ನೀರು. ಒಳಕ್ಕೆ ಬಾ ಎಂದು ಕರೆಯುವ, ಅಂಚನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಖಾತರಿಯಾಗಿ ಇಲ್ಲವಾಗಿಸಿಬಿಡುವ ಸಾಯಿಸಿಬಿಡುವ ನೀರು.
ಪ್ರವಾಸಿಯಾಗಿ ಹೋಗಿ. ಗೆಳೆಯರೊಡನೆ ನಿಂತು. ಆಹಾ ಅಂದು ಓಹೋ ಅಂದು. ಕ್ಯಾಮರಾದಲ್ಲಿ ಫೊಟೋ ಹಿಡಿದು, ಮಾತಿನಲ್ಲಿ ವಿವರಿಸಿ ತಿಳಿದುಬಿಟ್ಟೆ. ತಿಳಿಸಿಬಿಟ್ಟೆ ಎಂಬುದೆಲ್ಲ ಬರೀ ಭ್ರಮೆ, ಸುಳ್ಳು. ಗೊತ್ತಿದೆ ಗುರಿಯಿದೆ ಅಂತೆಲ್ಲ ನಂಬಿಕೊಂಡಾಗ ಆಗುವುದೇ ಹಾಗೆ. ಸುಮ್ಮನೆ ಇರುವ ಅಗಾಧ ಶಕ್ತಿ ಮತ್ತು ಅದರ ಎದುರಿಗೆ ನಿಶ್ಯಕ್ತ ಮೈ. ನಿಶ್ಯಕ್ತ ಬುದ್ಧಿ, ನಿಶ್ಯಕ್ತ ಮನಸ್ಸು.
ಎರಡು ದಿನದಿಂದ ನೆನಪು ನಿಶ್ಯಕ್ತಿ ತಂದಿದೆ. ಅಥವ ಗೊತ್ತುಗುರಿ ಇಲ್ಲದ ನಿಶ್ಯಕ್ತಿ. ಸ್ವಲ್ಪ ಪಾದ ಮುಳುಗಿದರೂ ಸಾಕು, ಪಾದದ ಬೆರಳು ಸೋಕಿದರೂ ಸಾಕು, ಇಡೀ ಮುಳುಗಿದಂತೆಯೇ. ಇಷ್ಟುವರ್ಷ ಆದಮೇಲೂ ಈಗ ಮೈಗೆಲ್ಲ ನೆನಪು ಮೆತ್ತಿಕೊಂಡು ಒರೆಸಿಕೊಳ್ಳುವುದಕ್ಕೆ ಒಣಗಿಸಿಕೊಳ್ಳುವುದಕ್ಕೆ ಆಗದೆ ಮನಸ್ಸಿನ ಹೊಂಡದಲ್ಲಿ ಸುಮ್ಮನೆ ಬಿದ್ದಿರುವ ಆಸೆ ಆಗುತ್ತಿದೆ.
ಮೈಸೂರಿನಲ್ಲಿ ಸ್ಮಶಾನದಿಂದ ನಡೆದುಕೊಂಡು ಬರುತ್ತಿದ್ದೇನೆ. ಕತ್ತಲಾಗುತ್ತಿದೆ. ಜೊತೆಗೆ ಯಾರೋ ಇದ್ದಾರೆ. ಎದುರಿಗೆ ಇನ್ಯಾರೋ ಸಿಕ್ಕರು. “ಏನು ಈ ಕಡೆ? ನಿಮ್ಮ ತಂದೆಯವರನ್ನು ನೋಡದೆ ಬಹಳ ದಿನ ಆಯಿತು. ಊರಲಿಲ್ಲವೇ?” ಅಂತ ಕೇಳಿದರು. “ಹೋಗಿಬಿಟ್ಟರು” ಅಂದೆ. ಆಘಾತವಾದಂತಾಗಿ ನಿಂತುಬಿಟ್ಟರು. ನಾನೂ ನಿಂತೆ. ಆಮೇಲೆ ಸುಮ್ಮನೆ ಹೋದೆ. ಮನೆಗೆ ಹೋದಮೆಲೆ ಬಿಸಿನೀರಿನ ಸ್ನಾನ ಹಿತ ಅನ್ನಿಸಿತು. ಹುಳಿಯನ್ನದ ರುಚಿ ನಾಲಗೆಗೆ ತಿಳಿಯಿತು. ರಾತ್ರಿ ಒಂದು ಹೊತ್ತಿನಲ್ಲಿ ಅಮ್ಮ ಎದ್ದು ಅಳುತ್ತ ಕೆದರಿದ ತಲೆಗೂದಲನ್ನು ಸರಿಯಾಗಿ ಗಂಟುಹಾಕಿಕೊಂಡಾಗ ಪರವಾಗಿಲ್ಲ, ಮತ್ತೆ ಮಾಮೂಲಾಗುತ್ತಿದ್ದಾರೆ ನಿಧಾನವಾಗಿ ಅಂತ ಸಮಾಧಾನವಾಯಿತು.
ಎಂದಿನಂತೆ ಬೆಳಗಿನ ಜಾವ ನಾಲ್ಕೂವರೆಗೇ ಎಚ್ಚರವಾಯಿತು. ನನ್ನ ಸಹ-ವಾಸಿ, ತಮಿಳುನಾಡಿನ ಕೃಷ್ಣಮೂರ್ತಿ ಇನ್ನೂ ಬಿಗಿಯಾಗಿ ಹೊದ್ದು ಮಲಗಿದ್ದ. ಎಂದಿನಂತೆ. ಹಿಮಾಲಯದ ಚಳಿಗಾಲ. ಆಶ್ರಮದ ಜನರಿಗೆಲ್ಲ ನೀರು ಕಾಯಿಸುವ ಬಚ್ಚಲಮನೆಗೆ ಹೋದೆ. ಒಬ್ಬ ಮನುಷ್ಯ ದಿನಾ ಬೆಳಗಿನ ಮೂರು ಗಂಟೆಗೇ ಬಂದು ನೀರೊಲೆಗೆ ದೊಡ್ಡದಿಮ್ಮಿ ಒಡ್ಡಿ ನೀರು ಕಾಯಿಸುತ್ತ ಕೂತಿರುತ್ತಿದ್ದ. ನೀರೊಲೆಯ ಮುಂದೆ ಬೆಂಕಿಯ ಝಳ ಹಿತವಾಗಿತ್ತು. ಎಂದಿನಂತೆ. ಎಂದಿನಂತೆ ಅಲ್ಲಿ ಸ್ವಲ್ಪ ಹೊತ್ತು ಕೂತು ಸ್ನಾನಕ್ಕೆ ಮೊದಲು ಮೈ ಕಾಯಿಸಿಕೊಂಡೆ. ಆಶ್ರಮದ ಜನರಿಗೆ ಅಡುಗೆ ಮಾಡುವ ತೆಲುಗ ಮುದುಕ ಸ್ತೋತ್ರ ಹೇಳುತ್ತ ಸ್ನಾನ ಮಾಡುತ್ತಿದ್ದ. ಎಂದಿನಂತೆ. ಇನ್ನೊಂದು ಬಕೆಟ್ಟು ಬಿಸಿನೀರು ಕೃಷ್ಣಮೂರ್ತಿಗೆ ಒಯ್ದೆ. ಐದು ಗಂಟೆ. ರಾಧಾಕೃಷ್ಣಾನಂದ ಬೆಳಗಿನ ಧ್ಯಾನಕ್ಕೆ ಗುರುಮಂದಿರಕ್ಕೆ ಬಂದಿದ್ದರು. ಎಂದಿನಂತೆ. ಮಂದಪ್ರಕಾಶದ ಒಂದು ದೀಪ ಉರಿಯುತ್ತಿತ್ತು. ಎಂದಿನಂತೆ. ಕೆನಡಾದ ಮುದುಕ, ಅವನನ್ನು ಎಲ್ಲರೂ ಬಿಲ್ಲಿ ಅನ್ನುತ್ತಿದ್ದರು. ತನ್ನದೇ ಪುಟ್ಟ ಜಮಖಾನ ಹಾಸಿ ಕುಳಿತು ಧ್ಯಾನ ಮಾಡುತ್ತಿದ್ದ. ನಾವು ನಾಲ್ಕೇ ಜನ. ಮೌನ, ನಿಶ್ಯಬ್ಧ, ಕಣ್ಣು ಮುಚ್ಚಿ ಶಾಂತವಾಗಿ ಕೂತಿರುವಾಗ ಹೊರಗೆಲ್ಲ ಚಳಿಗಾಲದ ಬೆಳಗು ಆಗುತ್ತಿರುವುದು. ಕ್ಷಣ ಕ್ಷಣ ಆಗುತ್ತಿರುವ ಬದಲಾವಣೆಗಳು ಗೊತ್ತಿಲ್ಲದಂತೆಯೇ ಗೊತ್ತಾಗುತ್ತಿದ್ದವು. ವಿಶ್ವನಾಥಮಂದಿರದಲ್ಲಿ ಬೆಳಗಿನ ಪೂಜೆಯ ಗಂಟೆ ಬಾರಿಸಿತು. ರಾಜುಗಾರು, ಇನ್ನೊಬ್ಬ ತೆಲುಗು ಹುಡುಗ ಅಶೋಕ, ಹೃದಯ ರೋಗದಿಂದ ನರಳುತ್ತಿರುವ ಚಂಡೀಗಢದ ಮುದುಕಿ ಆಗಲೇ ಬಂದು ಪ್ರದಕ್ಷಿಣೆಹಾಕಿ, ನಮಸ್ಕಾರ ಮಾಡಿ, ಪ್ರಸಾದದ ಮಿಠಾಯಿ ಇಸಿದುಕೊಂಡು ತಿನ್ನುತ್ತಿದ್ದರು. ಎಂದಿನಂತೆ. ಊಟದ ಮನೆಯಲ್ಲಿ ಅವಲಕ್ಕಿ, ಚಹಾ ರೆಡಿಯಾಗಿತ್ತು. ನಕ್ಕು, ತಲೆದೂಗಿ, ಮಾತಾಡಿಸಿ ಒಬ್ಬರನ್ನಿನ್ನೊಬ್ಬರು, ತಿಂಡಿ ತಿಂದು ಎಲ್ಲರೂ ಹಿಂದಿರುಗಿದೆವು. ಎಂದಿನಂತೆ. ಬ್ರಹ್ಮಾನಂದರು ನಡೆಸುವ ಬೆಳಗಿನ ತರಗತಿ ಶುರುವಾಯಿತು. ಜ್ಞಾನದೇವನ ಅನುಭವಾಮೃತ, ನೇರ ಅವರೆದುರಿನ ಗೋಡೆಯ ಮೂಲೆಗೊರಗಿ ಕುಳಿತೆ. ನನ್ನ ಎಂದಿನ ಜಾಗದಲ್ಲಿ. ಲೀಲಾ ಬಂದು ನನ್ನ ಪಕ್ಕ ಕುಳಿತಳು. ಎಂದಿನಂತೆ. ಎಂಭತ್ತರ ಅಂಚಿನ ಬ್ರಹ್ಮಾನಂದರ ಮಾತು, ಕೇಳಿಸಿಕೊಂಡರೆ, ಎಂಥ ಕೆರಳಿದ ಮನಸ್ಸಿಗೂ ಅದ್ಭುತವಾದ ಸೆಡೆಟಿವ್. ಆಮೇಲೆ ನಾನು ಪ್ರೆಸ್ಸಿಗೆ ಹೋದೆ. ಎಂದಿನಂತೆ. ಫ್ರೂಫ್‌ಗಳು ಬಂದಿದ್ದವು, ಎಂದಿನಂತೆ. ಎಂದಿನಂತೆ. ನಿನ್ನೆ ಸತ್ತುಹೋದ ಸನ್ಯಾಸಿ ದೈನಿಕಗಳಲ್ಲಿ ಮರೆತುಹೋಗುತ್ತಿದ್ದ. ಇಡೀ ಆಶ್ರಮ ಅವನು ಇರಲೇ ಇಲ್ಲವೇನೋ ಅನ್ನುವ ಹಾಗೆ ಎಂದಿನಂತೆ ಇನ್ನೊಂದು ದಿನಕ್ಕೆ ಬಂದುಬಿಟ್ಟಿತ್ತು.
ನಮ್ಮ ಮನೆಯ ಹಿಂದೆ ದೊಡ್ಡಕೆರೆಯ ಏರಿ ಇತ್ತು. ಅದರ ಮೇಲೆ ಬೆಳಗಿನ ಜಾವದಲ್ಲಿ, ನಂಜನಗೂಡಿನ ಕಡೆಯಿಂದ ಸಾಲಾಗಿ ಎತ್ತಿನಗಾಡಿಗಳು ಲಾಟೀನು ಹಚ್ಚಿಕೊಂಡು ಬರುತ್ತಿದ್ದವು. ಮನೆಯ ಪಕ್ಕದಲ್ಲಿ ಎಲೆಯ ತೋಟವಿತ್ತು. ಅಲ್ಲಿ ಒಂದು ನಲ್ಲಿ ಇತ್ತು. ನಲ್ಲಿಯ ಮುಂದೆ ಹೆಂಗಸರು ಜಗಳವಾಡುತ್ತಿದ್ದರು. ಎಲ್ಲ ಎಂದಿನಂತೆ. ಅಪ್ಪ ನೆನಪು ಮಾತ್ರ ಆಗಿಬಿಟ್ಟಿದ್ದರು.
ಆಗಾಗ ಅನಿರೀಕ್ಷಿತವಾಗಿ, ನನ್ನ ಕನಸಿನಲ್ಲಿ ಜಡೆಹಾಕಿಕೊಂಡ ಅಪ್ಪನಾಗಿ, ಅಳುವ ಅಪ್ಪನಾಗಿ, ವಾದಮಾಡುವ ಅಪ್ಪನಾಗಿ, ಹೆದರಿಸುವ ಅಪ್ಪನಾಗಿ, ನಗುತ್ತ ಸಮಾಧಾನ ಹೇಳುವ ಅಪ್ಪನಾಗಿ, ಬಂದುಹೋಗುತ್ತಿದ್ದರು. ಮನೆ ಬದಲಾಯಿಸಿದೆವು. ಊರು ಬದಲಾಯಿಸಿದೆವು. ಬೇರೆ ಊರುಗಳಲ್ಲಿ ಬೇರೆ ಬೇರೆ ಮನೆಗಳಿಗೆ ಹೋದೆವು. ಊರು ಬದಲಾಗುತ್ತ, ಮನೆಬದಲಾಗುತ್ತ, ಜನ ಬದಲಾಗುತ್ತ, ನಾನು ಹೃಷಿಕೇಶಕ್ಕೆ ಬಂದೆ.
ಮುಗಿಸಬೇಕೆಂಬ ಆಸೆಯ ಬರವಣಿಗೆ
ಇದೇ ಮೊದಲ ಬಾರಿಗೆ ನನ್ನ ಹಿಮಾಲಯವನ್ನು ಕುರಿತು ನನ್ನದೇ ಕಂಪ್ಯೂಟರಿನಲ್ಲಿ ಬರೆಯುತ್ತಿದ್ದೇನೆ. ಹೃಷಿಕೇಶದಲ್ಲಿ ಆತ್ಮಾನಂದ ಕಲಿಸಿಕೊಟ್ಟ ವಿದ್ಯೆ ಈಗ ಉಪಯೋಗಕ್ಕೆ ಬರುತ್ತದೆ ಅಂದುಕೊಂಡಿರಲಿಲ್ಲ. ಆಗ. ಕೃಷ್ಣಾನಂದರು ನನ್ನ ಮೂರು ದಿನ ಸುಮ್ಮನೆ ಇರಲು ಬಿಟ್ಟು ಆಮೇಲೆ ಕೇಳಿದರು-“ನೀನು ಇಲ್ಲಿದ್ದು ಏನು ಮಾಡುತ್ತೀ?” ನನಗೆ ಉತ್ತರ ಹೇಳಲು ತೋರಲಿಲ್ಲ. ನಾನು ಇಷ್ಟು ವರ್ಷ ಕಲಿತ ವಿದ್ಯೆ. ನನ್ನ ಉದ್ಯೋಗ ಕೊಟ್ಟು, ಸಂಬಳ ಕೊಟ್ಟು, ಒಂದಷ್ಟು ಹೆಸರು ಕೊಟ್ಟು, ನಾನೆಂದರೆ ಏನೇನೋ ಅನ್ನುವ ಭ್ರಮೆ ಹುಟ್ಟಿಸಿದ್ದ ವಿದ್ಯೆ ಈಗ ಏನೇನೂ ಅಲ್ಲ ಅನ್ನಿಸಿಬಿಟ್ಟಿತ್ತು. ಓದು ಬರಹ ಮಾತು-ಇಷ್ಟು ಬಿಟ್ಟು ಇನ್ನೇನು ಮಾಡಬಲ್ಲೆ ನಾನು? ನನ್ನ ವಿದ್ಯಾರ್ಥಿಗಳಿಗೆ ಕಂಡಹಾಗಲ್ಲ. ನಮ್ಮ ಬಾಡಿಗೆ ಮನೆಯ ಯಜಮಾನನಿಗೆ ಕಂಡಹಾಗಲ್ಲ. ನನ್ನ ಹೆಂಡತಿಗೆ ಕಂಡಹಾಗಲ್ಲ. ನನ್ನ ಪ್ರೀತಿಸಿದ ಹುಡುಗಿಗೆ ಕಂಡಹಾಗಲ್ಲ. ನಾನು ಏನೇನೋ ಎಂದು ನನ್ನ ಕಲ್ಪನೆಯಲ್ಲಿ ನನಗೇ ಕಂಡ ಹಾಗೂ ಅಲ್ಲ ಧತ್ ಅಂತ ಪ್ರಶ್ನೆ ಎದುರು ನಿಂತಿತು. ನಾನು ಏನು ಮಾಡಬಲ್ಲೆ? ನಾನು ಮಾತಾಡುವ ಕ್ಷಣದಲ್ಲೇ ನನ್ನ ಉತ್ತರ ಪೆದ್ದು ಅನ್ನಿಸುತ್ತಿದ್ದರೂ, ನನಗೇ ಕೇಳಿಸದಷ್ಟು ದುರ್ಬಲ ಧ್ವನಿಯಲ್ಲಿ. ಏನೇನೂ ವಿಶ್ವಾಸ ಇಲ್ಲದೆ ಹೇಳಿದೆ: “ನನಗೆ ಕನ್ನಡ ಬರುತ್ತೆ, ಇಂಗ್ಲಿಷ್ ಬರುತ್ತೆ, ಇಲ್ಲಿನ ಗುರುಗಳ ಪುಸ್ತಕಗಳು ಇವೆಯಲ್ಲ ಅವನ್ನು ಅನುವಾದ ಮಾಡಬಲ್ಲೆ.” ತಟ್ಟನೆ ಕೇಳಿದರು: “ಯಾರು ಓದುತ್ತಾರೆ ಅವನ್ನೆಲ್ಲ?” ಕೃಷ್ಣಾನಂದರಿಗೆ ಸಂಸ್ಕೃತ, ಕನ್ನಡ, ತಮಿಳು, ಮಲೆಯಾಳಂ, ಇಂಗ್ಲಿಶ್ ಇಷ್ಟೂ ಚೆನ್ನಾಗಿ ಓದಲು, ಮಾತಾಡಲು, ಬರೆಯಲು ಬರುತ್ತಿತ್ತು. ವಿದ್ವಾಂಸ, ಮೊನಚು ಮಾತಿನ ಮೃದು ಹೃದಯದ ಖಂಡಾಖಂಡಿತವಾದ ಆದರೆ ನಿರ್ಲಿಪ್ತವಾದ ವರ್ತನೆಯ ವೃದ್ಧ, ಗುರು. ಹರಿದ್ವಾರದ ಪ್ರೊಫೆಷನಲ್ ಸನ್ಯಾಸಿಗಳಲ್ಲಿ ಇರದ ಏನೋ ಇವರಲ್ಲಿತ್ತು-ಅದು ಪ್ರಾಮಾಣಿಕತೆ, ನೋವು ಕೊಡದ, ನೋವು ಪಡದ ನಿರ್ಲಿಪ್ತ ಕಠಿಣ ಪ್ರೀತಿ.
ಹರಿದ್ವಾರದಿಂದ ಏಟು ತಿಂದ ಬೀದಿನಾಯಿಮರಿಯ ಹಾಗೆ ಹೃಷಿಕೇಶಕ್ಕೆ ಬಂದಿದ್ದೆ. ಗಣೇಶಪುರಿಯವರ ಎದುರಿನಲ್ಲಿ ಮಾತಾಡಲು ಆಗಲಿಲ್ಲ. ಅಥವ ನನ್ನ ಮನಸ್ಸು ಅವರಿಗೆ ತಿಳಿಯಲಿಲ್ಲ. ಅಥವ ಅವರಿಗೆ ನಾನು ಸುಳ್ಳು ಹೇಳಿದೆ. ಗಣೇಶಪುರಿ ಕೇಳಿದರು, ಹಿಂದಿಯಲ್ಲಿ-“ಹೇಳು, ನೀನು ಯಾರು, ಬಂದದ್ದು ಯಾಕೆ, ನಮ್ಮಿಂದ ಏನಾಗಬೇಕು?” “ ನನಗೆ ಹಿಂದಿ ಬರಲ್ಲ. ಮಾತಾಡುವುದು ಕಷ್ಟ” ಅಂದೆ. “ಪರವಾಗಿಲ್ಲ, ಭಾವ್ ಸಮಝ್ ತೇ ಹೈ, ಹೇಳು” ಅಂದರು. ದಿನಾ ಸಂಜೆ ಬೆಳಿಗ್ಗೆ ಬ್ರಾಹ್ಮಣ ಪಂಡಿತರ ಮಾತು ಕೇಳುತ್ತಿದ್ದ ಅಂಗಳದಲ್ಲಿ ಗಣೇಶಪುರಿ, ಅಲ್ಲಿನ ಮುಖ್ಯಮಂತ್ರಿ ಮತ್ತು ನಾನು ಇಷ್ಟೇ ಜನ ಇದ್ದದ್ದು. ಬೆಳಗಿನ ಬಿಸಿಲು ಇತ್ತು. ಚಳಿ ಇತ್ತು. ಇದುವರೆಗೆ ಅಲ್ಲಿನ ಮುಖ್ಯಸ್ಥರಂತಿದ್ದವರೆಲ್ಲ ಈಗ ಗಣೇಶ ಪುರಿ ಹಿಂದಿರುಗಿದ ಮೇಲೆ ಅಡಗಿಕೊಂಡಂತಿದ್ದರು. ಇಡೀ ಆಶ್ರಮ ನಿಶ್ಯಬ್ಧವಾಗಿತ್ತು. ನಾನು ಕಾಯುತ್ತಿದ್ದೇನೆ ಅಂದುಕೊಂಡಿದ್ದ ಕ್ಷಣ ಬಂದುಬಿಟ್ಟಿತ್ತು. ನನಗೆ ನಾನೇ ಹೇಳಿಕೊಂಡಿರದ ಮಾತನ್ನು ಈಗ ಗುರುವಿನ ಎದುರು ಹೇಳುವುದು ಹೇಗೆ? ನಾನು ಯಾರು ಅನ್ನುವುದಕ್ಕೆ ಸುಲಭವಾಗಿ ಇಂಥವನು. ಇಂಥ ಹೆಸರು, ಇಂಥ ಕೆಲಸ ಅಂತ ಹೇಳಿಬಿಟ್ಟೆ. ಯಾಕೆ ಬಂದದ್ದು ಅನ್ನವುದಕ್ಕೆ ತಡವರಿಸಿ, ನೆಲನೋಡಿ, ಮಾತು ಬರದೆ, ನಿಜ ಹೇಳಬೇಕೆನಿಸಿ ಆದರೆ ಹೇಳಲಾರದೆ, ಏನು ಬೇಕು ಎಂದು ತಿಳಿಯದೆ ನನಗೇ ಕೇಳಿಸದಷ್ಟು ಮೆಲ್ಲನೆ ಧ್ವನಿಯಲ್ಲಿ ಮಾತಾಡಿದೆ.
“ನನ್ನ ಹೆಂಡತಿ ನನ್ನ ದೂರ ಮಾಡಿದ್ದಾಳೆ.”
ಸುಳ್ಳು, ಹಾಗೆ ಹೇಳುತ್ತಿರುವ ಕ್ಷಣದಲ್ಲೆ ನನ್ನ ಬಗ್ಗೆಯೇ ಅ-ಸಹ್ಯ ಅನ್ನಿಸಿತು. ನಿಜ ಯಾವಾಗಲೂ ಯಾರಿಗೆ ಬೇಕಾದರೂ ಹೇಳಿಬಿಡುತ್ತೇನೆ ಅಂದುಕೊಂಡಿದ್ದೆ. ಅಲ್ಲ. ಹೇಳಬೇಕಾದ ಕ್ಷಣ ಬಂದಾಗ ಸಮರ್ಥನೆಯ ಗುಟ್ಟಾದ ಆಸೆ ನನ್ನ ತಪ್ಪೇನೂ ಇಲ್ಲ ಅನ್ನುವ ಹಾಗೆ. ನನಗೇ ಅನ್ಯಾಯ ಆಗಿದೆ ಎಂದು ತೋರಿಸಿಕೊಳ್ಳುವ ಹಾಗೆ, ಹೀಗೆ ನುಡಿಸಿಬಿಟ್ಟಿತು.
ಭಾವ ತಿಳಿಯಿತು ಎಂದು ಕಾಣುತ್ತದೆ.
“ಈಗ ಏನು ಮಾಡಬೇಕೆಂದಿದ್ದೀ?”
“ಇಲ್ಲೆ ಇರಬೇಕೆಂದಿದ್ದೇನೆ.”
“ಸಾಧ್ಯ ಇಲ್ಲ.”
“ಏನಾದರೂ ಕೆಲಸ ಮಾಡಿಕೊಂಡಿರುತ್ತೇನೆ.”
“ಇಲ್ಲಿ ನಾವು ಯಾರನ್ನೂ ಕೆಲಸಕ್ಕೆ ಇಟ್ಟುಕೊಳ್ಳಲ್ಲ.”
ಮಾತಾಡದೆ ಸುಮ್ಮನಿದ್ದೆ.
“ನಿನಗೆ ಏನು ಬೇಕು ಎಂದು ನಿನಗೆ ತಿಳಿದಿಲ್ಲ. ಅದು ಸ್ಪಷ್ಟ ಆದಾಗ ಬಾ. ನಮ್ಮಲ್ಲಿ ನಿನಗೆ ಕೊಡಲು ಏನೂ ಕೆಲಸ ಇಲ್ಲ.”
ಮಾತಾಡದೆ ಸುಮ್ಮನಿದ್ದೆ.
ಅವರೂ.
ಅತ್ತ ಇತ್ತ, ಬೆನ್ನಹಿಂದೆ ಕೈ ಕಟ್ಟಿಕೊಂಡು, ಆಗ ತಾನೇ ಸ್ನಾನ ಮಾಡಿಬಂದ ಮೈ ಹೊತ್ತುಕೊಂಡು, ಶತಪಥ ತಿರುಗಿದರು.
“ನೀನು ಈಗಲೇ ಇಲ್ಲಿಂದ ಹೊರಟುಹೋಗು. ಹೃಷಿಕೇಶಕ್ಕೆ ಹೋಗು. ಅದು ನಿನಗೆ ಸರಿಯಾದ ಜಾಗ ಅನ್ನಿಸುತ್ತೆ. ನಿಮ್ಮ ಭಾಷೆ ಮಾತಾಡುವವರು ಅಲ್ಲಿದ್ದಾರೆ. ನಿನಗೆ ಏನುಬೇಕು ಎಂದು ಸ್ಪಷ್ಟವಾಗಿ ತಿಳಿದಾಗ ಇಲ್ಲಿಗೆ ಬಾ.” ಅಂತ ಮಾತು ಮುಗಿಸಿದರು. ಹೃಷಿಕೇಶದಲ್ಲಿ ಯಾರನ್ನು ನೋಡಬೇಕೆಂದು ವಿಳಾಸ ಹೇಳಿದರು.
ಹೋಗು ಎಂದಮೇಲೆ, ಈಗಲೇ ಹೋಗು ಎಂದಮೇಲೆ ಇರುವುದು ಹೇಗೆ. ನಮಸ್ಕಾರ ಮಾಡಿ ಬಂದೆ. ಗುಜರಾತಿನ ಮುದುಕನ ಹತ್ತಿರ ಹೋಗಿ ಸ್ವಾಮಿಗಳ ದರ್ಶನ ಆಯಿತು. ಹೃಷಿಕೇಶಕ್ಕೆ ಹೋಗುವಂತೆ ಹೇಳಿದ್ದಾರೆ. ಹೊರಟೆ ಅಂತಹೇಳಿದೆ. ತಮಗಿಂತ ಮುಂಚೆ ಗುರುವನ್ನು ನಾನು ಅಷ್ಟು ಬೆಳಗ್ಗೆಯೇ ಕಂಡಿದ್ದಕ್ಕೆ ಆಶ್ಚರ್ಯ ಆಗಿತ್ತು ಅವರಿಗೆ.
“ಯಾವಾಗ ಹೋಗುತ್ತೀ?”
“ಈಗಲೇ.”
“ನಾವೂ ಇವತ್ತು ಸ್ವಾಮಿಗಳನ್ನು ನೋಡಿಕೊಂಡು, ಅವರು ಹೇಳಿದ ಮೇಲೆ ಊರಿಗೆ ಹೋಗುತ್ತೇವೆ. ನಮ್ಮ ಊರಿಗೆ ತಪ್ಪದೆ ಬಾ.” ವಿಳಾಸ ಕೊಟ್ಟರು. ಕಳೆದುಬಿಟ್ಟೆ. ಈಗ ಅವರ ನೆನಪು ಇದೆ.
ಹತ್ತು ನಿಮಿಷದಲ್ಲಿ ನನ್ನ ಇದ್ದ ಒಂದು ಚೀಲ ಸಿದ್ಧವಾಯಿತು. ನಾನು ಅಲ್ಲಿಗೆ ಮೊದಲು ಬಂದಾಗ ಸ್ವಾಗತಿಸಿದ್ದ ದಿನಾ ಶಾಂತಿ ಪಾಠ ಹೇಳುತ್ತಿದ್ದ ವೃದ್ಧನನ್ನು ಹುಡುಕಿದೆ. ಗಣೇಶ ಪುರಿ ಹೀಗೆ ಹೃಷಿಕೇಶಕ್ಕೆ ಇಂಥಲ್ಲಿಗೆ ಹೋಗಲು ಹೇಳಿದರು. ಹೋಗಿ ಬರುತ್ತೇನೆ. ನಿಮ್ಮ ಆಶ್ರಮಕ್ಕೆ ಏನಾದರೂ ಕೊಡಬೇಕನ್ನಿಸುತ್ತೆ. ಆದರೆ ಹಣ ಜಾಸ್ತಿ ಇಲ್ಲ. ಈ ಐವತ್ತು ರೂಪಾಯಿ ಇಟ್ಟುಕೊಳ್ಳು ಅಂದೆ. ನಿಮ್ಮ ಬಾಯಲ್ಲಿ ಕೊಡಬೇಕು ಅನ್ನುವ ಮಾತು ಬಂತಲ್ಲ, ಅಷ್ಟು ಸಾಕು. ಕೊಟ್ಟಂತೆಯೇ ಆಯಿತು. ನಿಮ್ಮ ಸಮಯಕ್ಕೆ ಆಗುತ್ತೆ. ನೀವೇ ಇಟ್ಟುಕೊಳ್ಳಿ ಅಂದ. ಆದರೂ ಕೊಟ್ಟೆ, ತೆಗೆದುಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡ. ನಿಮಗೆ ಶಾಂತಿಸಿಗಲಿ. ಹೋಗಿಬನ್ನಿ, ಒಳ್ಳೆಯದಾಗುತ್ತದೆ ಅಂದ.
ತೀರ ಸಂತೋಷವಾಗಿ, ಹೋಗಲು ಇನ್ನೊಂದು ಗುರಿ ಸಿಕ್ಕಿತು ಅಂದುಕೊಂಡು ಬೆಳಗಿನ ಬಿಸಿಲಲ್ಲಿ ಹೊರಟುಬಿಟ್ಟೆ. ಗಂಗೆಯ ಸೇತುವೆ ದಾಟಿದೆ. ಇನ್ನಷ್ಟು ಮೇಲೆ, ಗಂಗೆಯ ತಡಿಯ ಇನ್ನೊಂದು ಊರಿಗೆ, ಹಿಮಾಲಯದ ಬೆಟ್ಟಗಳ ತಪ್ಪಲಿಗೆ. ಅಲ್ಲಿ ಹೀಗೆಲ್ಲ ಇರುತ್ತೇನೆಂದು ಅಂದುಕೊಂಡಿರಲಿಲ್ಲ.
ಮತ್ತೆ ಬರವಣಿಗೆಯ ಎಂಟನೆಯ ದಿನ
ಇನ್ನು ಹದಿನೈದು ಇಪ್ಪತ್ತು ದಿನಗಳಲ್ಲಿ ಬಹುಶಃ ಮತ್ತೆ ಹೃಷಿಕೇಶಕ್ಕೆ ಹೋಗುತ್ತೇನೆ. ಹಾಗಂದುಕೊಂಡಾಗ ಹುಮ್ಮಸ್ಸು, ಉತ್ಸಾಹ, ಅಲ್ಲಿನ ಜನ, ನದಿ, ಮೆಟ್ಟಿಲು, ಮರ, ಕೋತಿ, ಪ್ರೆಸ್ಸು, ಲೈಬ್ರರಿಯ ಮಾತಾಜಿ, ನರಸಿಂಹನ್, ಕೃಷ್ಣಮೂರ್ತಿ, ಜಯಕುಮಾರ, ಬ್ರಹ್ಮಾನಂದ….. ಕೊನೆಯಿಲ್ಲದಂತೆ ಬೆರೆತುಕೊಂಡ ಒಂದರೊಳಗೊಂದರೊಳಗೊಂದು ಚಿತ್ರಗಳು. ನಿಜದಲ್ಲೂ ಕನಸಿನಲ್ಲೂ. ಬೆಂಗಳೂರಿನ ನಮ್ಮ ಮನೆಯಲ್ಲಿ ಪುಸ್ತಕಗಳನ್ನು ಹುಡುಕುತ್ತಿದ್ದೇನೆ, ಕನಸಿನಲ್ಲಿ. ‘ಸ್ಪಿರಿಚ್ಯು‌ಅಲ್ ಇಂಪೋರ್ಟ್ ಆಫ್ ರಿಲಿಜಿಯಸ್ ಫೆಸ್ಟಿವಲ್’ ಪುಸ್ತಕ ಸಿಗುತ್ತಲೇ ಇಲ್ಲ. ಅದರಲ್ಲಿ ಆಶ್ರಮದ ಫೋನು ನಂಬರು ಬರೆದಿಟ್ಟಿದ್ದೇನೆ. ಸಿಗುತ್ತಲೇ ಇಲ್ಲ. ಇನ್ನೊಂದು. ಉದ್ದವಾದ ರೈಲ್ವೆ ಪ್ಲಾಟ್ ಫಾರಂ. ಖಾಲಿ ಕಂಬಿಗಳು. ನಾನು ಹತ್ತಬೇಕಾದ ರೈಲು ಅಲ್ಲಿಲ್ಲ. ಬೇರೆ ಕಡೆ ಬರುತ್ತದಂತೆ. ಓಡಿದೆ. ರೈಲಿನ ಕೊನೆಯ ಬೋಗಿ ಹೋಗುತ್ತಿರುವುದು ಕಾಣುತ್ತಿದೆ, ದೂರದಲ್ಲಿ. ಇನ್ನೊಂದು. ಎರಡೇ ಬೋಗಿಗಳ ರೈಲು. ಹತ್ತಿದರೆ ಮಲಗಲು ಜಾಗವೇ ಇಲ್ಲ. ಇನ್ನೊಂದು. ಇಳಿಜಾರಲ್ಲಿ ಸಾಗುವ ರೈಲು ಕಂಬಿಗಳು. ದೊಡ್ಡ ದೊಡ್ಡ ಬಿಳೀ ಜಲ್ಲಿ ಕಲ್ಲುಗಳು. ಎರಡು ದಿಕ್ಕಿಗೆ ಎರಡು ದಾರಿ. ಹೋಗುತ್ತಿರುವ ರೈಲು ಬಸ್ಸಾಗಿದೆ. ನಾನು ರೈಲಿನೊಳಗಿದ್ದು ಕಂಬಿ, ಜಲ್ಲಿ ನೋಡುತ್ತಿದ್ದಂತೆ ನಾನು ಹೊರಗಿದ್ದು ರೈಲು ಹೋಗಿಬಿಡುತ್ತಿದೆ. ಕನಸು. ಕನಸು. ಸ್ಟೇಷನ್ನು. ರೈಲು ಬದಲಾಯಿಸಬೇಕು. ಟಿಕೀಟುಕೊಡುವವನು ಇಲ್ಲ. ಇದಾನೆ. ನನ್ನ ಮಾತು ತಿಳಿಯುತ್ತಿಲ್ಲ. ಎಷ್ಟೊಂದು ದೊಡ್ಡ ರೈಲು ಬಂದು ಹೊರಟೇ ಬಿಡುತ್ತಿದೆ. ಸಾಯಂಕಾಲ. ಕತ್ತಲಾದರೂ ಕಬ್ಬಿಣದ ಗೇಟಿನ ಹತ್ತಿರ ಟಿಕೀಟು ಕೊಡುವ ಗೂಡನ್ನೇ ನೋಡುತ್ತ ಸುಮ್ಮನೆ ನಿಂತಿದ್ದೇನೆ. ನೀಲಿ ಬಣ್ಣದ ಕಂಬಗಳಿರುವ ಮಾಳಿಗೆ ಮನೆ. ಬೊಚ್ಚುಬಾಯಿ ರಾಜುಗಾರು ಜೊತೆಗೆ ಯಾರುಯಾರೋ ಸ್ವಾಮಿಗಳು. ‘ಕೃಷ್ಣಾನಂದರು ಎಲ್ಲಿ?’ ಅಂದೆ. ಯಾರೂ ಮಾತಾಡಲಿಲ್ಲ. ಹೃಷೀಕೇಶದ ಬೀದಿಗಳಲ್ಲಿ ಅಲೆದೆ. ಗಂಗೆಯ ಆಚೆ ದಡದ ಆಶ್ರಮ. ಹುಲ್ಲುಗಾವಲು. ಕಟ್ಟಡಕ್ಕೆ ದೀಪಮಾಲೆಗಳ ಅಲಂಕಾರ. ಸಾಲು ಸಾಲು ಕೋಣೆಗಳು. ಅಯ್ಯೋ. ಹಾಳಾಗಿಬಿಟ್ಟಿವೆ. ಎಷ್ಟೊಂದು ಜನ. ಯಾವುದೋ ಸಾವಿನ ಮನೆಯ ಥರ? ಯಾರೂ ನನ್ನ ಗುರುತು ಹಿಡಿಯುತ್ತಿಲ್ಲ. ಮಂಚಗಳ ಮೇಲೆ ಕೂತು ಹರಟೆ ಹೊಡೆಯುತ್ತಿದ್ದಾರೆ. ಸ್ನಾನ ಮಾಡಿ ಬರುತ್ತಿದ್ದಾರೆ. ಪ್ರೆಸ್ಸಿನ ಹಳೇ ಟೈಪ್ ರೈಟರ್ ಸುಮ್ಮನೆ ಇದೆ. ಪ್ರೆಸ್ಸಿನ ಪಕ್ಕದ ಗುರುಭವನದ ಮೆಟ್ಟಿಲಿಗೆ ಹಾಕಿರುವ ಹಿತ್ತಾಳೆ ತಗಡು ಬಿಸಿಲಲ್ಲಿ ಫಳಫಳ.
ಕನಸು ಬರೀ ಅನುಭವ. ಅದಕ್ಕೆ ಅರ್ಥದ ಗೊಡವೆ ಇಲ್ಲ. ಎಚ್ಚರದ ನೆನಪಿನಲ್ಲಿ ಒಂದೊಂದಕ್ಕೂ ಎಷ್ಟೊಂದು ಅರ್ಥ ಎಷ್ಟೊಂದು ವ್ಯಾಖ್ಯಾನ. ಎಲ್ಲ ನಿಜ, ಎಲ್ಲ ಸುಳ್ಳು, ಎಲ್ಲ ಹೌದು, ಎಲ್ಲ ಅಲ್ಲ, ಎಲ್ಲವೂ ಎಲ್ಲಾನೂ ಆಗಿರುವಾಗ ಯಾವುದೋ ಒಂದು ಹೌದು ಇನ್ನೊಂದು ಅಲ್ಲ ಅನ್ನುವ ಹಾಗೆ ಮಾತ್ರ ಮಾತಾಡಲು ಸಾಧ್ಯವಿರುವುದು ದುರಂತವೋ ಅತೃಪ್ತಿಯೋ. ಇಂಥದೇ ತೊಡಕು ಅವತ್ತು ಬೆಳಗ್ಗೆ ಎಂಟು ಗಂಟೆಯ ಹೊತ್ತಿನಲ್ಲಿ ಗಣೇಶಪುರಿಯವರ ಎದುರು ನನಗೆ ಎದುರಾಗಿತ್ತು. ಕೃಷ್ಣಾನಂದರ ಇದುರಿನಲ್ಲೂ ಅಷ್ಟೆ.
ಗಣೇಶಪುರಿ ಎತ್ತರವಾದ ಆಳು. ಏನನ್ನೂ ನೋಡದಿರುವಂಥ ಕಣ್ಣುಗಳು. ಸುಮ್ಮನೆ ಬೆನ್ನಹಿಂದೆ ಕೈಕಟ್ಟಿಕೊಂಡು ಓಡಾಡುತ್ತಿದ್ದರು. ಅವರನ್ನು ನೋಡಲೆಂದೆ ನಾನು ಹದಿನೈದು ದಿನ ಕಾದಿದ್ದೆ. ಅವರು ಎದುರು ನಿಲ್ಲುವ ಕ್ಷಣ ಬಂದಿತ್ತು. ಅವರೊಡನೆ ಮಾತಾಡುವ ಮೊದಲೇ ಯಾಕೋ ನಾನು ಅಲ್ಲಿರುವ ದಿನಗಳು ಮುಗಿದವು ಅನ್ನಿಸುತ್ತಿತ್ತು.
ಅಂಜುತ್ತ, ಅವರು ಕೇಳಬಹುದಾದ ನಿರೀಕ್ಷಿತ ಪ್ರಶ್ನೆಗಳಿಗೆ ನಿರೀಕ್ಷಿತ ಉತ್ತರ ಕೊಡಲಾರೆನೆಂದು ಗೊತ್ತಿದ್ದರಿಂದ ಅಳುಕುತ್ತ, ಒಳಗೇ ಕುಗ್ಗಿ, ಮಾತಿನಲ್ಲಿ ವಿವರಿಸಲಾರೆನೆಂದು ಮಾತಿನಲ್ಲಿ ಹೇಳಲಾಗದೆ ಇದ್ದರೆ ನಾನು ಇಲ್ಲವೇ ಆಗುತ್ತೇನೆಂದು ಬೆದರಿ ಅದೃಢನಾಗಿ…..
ಮುಗಿಸಬೇಕೆಂಬ ಅವಸರ, ಎರಡನೆಯ ದಿನ
ನನಗೆ ನೆನಪಿರುವ ಚಿಕ್ಕಂದಿನಿಂದಲೂ ಅಷ್ಟೆ. ನಾನು ಬೇರೆ ಎಲ್ಲೋ ಇರಬೇಕಿತ್ತು. ಬೇರೆ ಯಾವುದೋ ಮನೆಯಲ್ಲಿ ಇರಬೇಕಿತ್ತು. ನನ್ನ ಜೊತೆಯಲ್ಲಿ ಇರುವವರಿಗಿಂತ ಬೇರೆ ಯಾರೋ ನನ್ನ ಜೊತೆಯಲ್ಲಿ ಇರಬೇಕಿತ್ತು ಹೀಗೆಲ್ಲ ಅನ್ನಿಸುತ್ತಿತ್ತು. ಆದರೆ ಹಿಮಾಲಯದಲ್ಲಿ ಮೊದಲ ಬಾರಿ ಹೋದಾಗ, ಇನ್ನೊಮ್ಮೆ ಹೋಗಿ ಇದ್ದಾಗ, ಮತ್ತೆ ಮೂರನೆಯ ಬಾರಿ ಪ್ರವಾಸಿಯಾಗಿ ಕೆಲವೇ ದಿನದ ಮಟ್ಟಿಗೆ ಹೋದಾಗ ಇಲ್ಲಿ ಬಿಟ್ಟು ಇನ್ನೆಲ್ಲೂ ಇರಬಾರದು ಅನ್ನಿಸಿತ್ತು. ಜೊತೆಗೆ ಯಾರೂ ಬೇಡ ಅನ್ನಿಸಿತ್ತು. ಹಸಿವಿಗಷ್ಟು ಅನ್ನ, ನಿದ್ದೆಗಷ್ಟು ಬೆಚ್ಚನೆ ಜಾಗ ಇದ್ದರೆ ಸಾಕು ಅನ್ನಿಸಿತ್ತು. ಈ ಬರೆವಣಿಗೆಯಾದರೂ ಅಷ್ಟೆ. ಇದರಲ್ಲಿ ತೊಡಗಿರುವಷ್ಟು ಹೊತ್ತು ಇದು ಮಾತ್ರ ನಿಜ ಅನ್ನಿಸುತ್ತದೆ. ಸುಮಾರು ಒಂಬತ್ತು ವರ್ಷ ಆಯಿತಲ್ಲ ಬರೆಯಲು ತೊಡಗಿ, ಬರೆದದ್ದು ಕಳೆದು, ಮತ್ತೆ ಬರೆದು, ನಿಲ್ಲಿಸಿ, ಮತ್ತೆ ಹಿಮಾಲಯಕ್ಕೆ ಹೋಗಿ, ಇದ್ದು. ಬಂದು, ಮತ್ತೆ ಬರೆದು ಒಂದಷ್ಟು, ಆಮೇಲೆ ಮತ್ತೆ ಮೂರನೆಯ ಬಾರಿಗೆ ಹೋಗಿ ಬಂದು, ಈಗ ತಿರುಗಿ ಬರೆಯುತ್ತ-ನಾನು ಇದನ್ನು ಮುಗಿಸುವುದೇ ಇಲ್ಲವೇನೋ ಅನ್ನಿಸುತ್ತಿದೆ. ಮುಗಿಸುವುದೆಂದರೆ ಇದಕ್ಕೆ ಒಂದು ಆಕಾರ ಕೊಟ್ಟು ಅಥವ ಕೊಟ್ಟ ಆಕಾರ ಪೂರ್ಣವೆಂದು ಭಾವಿಸಿ, ನನ್ನನ್ನು ಬಲ್ಲ ಅಥವ ಅರಿಯದ ಯಾವುಯಾವುದೋ ಮನಸ್ಸುಗಳಿಗೆ ಒಪ್ಪಿಸುವ ಕೆಲಸ. ಧೈರ್ಯವಿಲ್ಲದೆ ಅದಕ್ಕೆ ಮುಗಿಸಲು ಆಗುತ್ತಿಲ್ಲವೋ ಏನೋ.
ಹೃಷಿಕೇಶಕ್ಕೆ ಬಂದಾಗ ಬೆಳಿಗ್ಗೆ. ಸೀದಾ ಗಣೇಶಪುರಿ ಹೇಳಿದ ವಿಳಾಸಕ್ಕೆ ಹೋದೆ. ಅಲ್ಲಿ ಒಬ್ಬ ಬಿಳಿ ಉಡುಪಿನ, ಕಪ್ಪು ಮುಖದ ಏಸುಕ್ರಿಸ್ತನ ಫೊಟೋತರಹದ ಮುಖ ಮತ್ತು ಉದ್ದಕೂದಲಿನ ಮಲೆಯಾಳಿ ಕುಳಿತಿದ್ದ. “ಏನು ಬೇಕು?” ಅಂದ. ಇಂಗ್ಲಿಷಿನಲ್ಲಿ ಕೇಳಿದ್ದರಿಂದ ಒಂದು ಥರ ಸಮಾಧಾನ ಆಯಿತು. ಹೇಳಿದೆ-ಇಲ್ಲಿ ಉಳಿಯುವುದಕ್ಕೆ ಜಾಗ ಬೇಕು. ಸಾಧ್ಯ ಇಲ್ಲ. ನೀವು ಬರುವುದು ಮೊದಲೇ ತಿಳಿಸಿದ್ದರೆ ಮಾತ್ರ ಉಳಿಯಲು ಜಾಗ ಸಿಗುತ್ತದೆ ಅಂದ. ನಾನು ಹಾಗೆ ಪ್ರವಾಸಕ್ಕೆ ಬಂದಿಲ್ಲ. ಇದ್ದ ಕೆಲಸಕ್ಕೆ ರಾಜಿನಾಮೆ ಕೊಟ್ಟು ಇಲ್ಲೇ ಇರಲು ಬಂದಿದ್ದೇನೆ ಅಂದೆ. ಹಾಗೋ, ನೀವು ಸ್ಪಿರಿಚಿಯಲ್ ಲೈನಿಗೆ ಸೇರಬೇಕೆಂದಿದ್ದೀರಾ? ಅದಕ್ಕೆ ಕೃಷ್ಣಾನಂದರು ಒಪ್ಪಿಗೆ ಕೊಡಬೇಕು. ಅವರನ್ನು ಕಂಡುಬನ್ನಿ ಅಂದ. ಒಂದು ನಿಮಿಷ ವಿಚಿತ್ರವಾದ ಸಿಟ್ಟು, ತಮಾಷೆ ಆತಂಕ ಎಲ್ಲ ಅನ್ನಿಸಿತು. ಸಿನಿಮಾಲೈನು, ಬಿಸಿನೆಸ್‌ಲೈನು ಅನ್ನುವ ಹಾಗೆ ಅವನು ನನ್ನನ್ನು ಆಧ್ಯಾತ್ಮದ ಲೈನಿಗೆ ಬಂಡವಾಳ ಹೂಡಲು ಬಂದವನಂತೆ ಅಥವ ಆಧ್ಯಾತ್ಮದ ಲೈನಿನಲ್ಲಿ ಅಂಗಡಿ ತೆರೆಯಲು ಬಂದವನಂತೆ ನನ್ನ ಮಾತಾಡಿಸಿದಾಗ ಏನೂ ಹೊಳೆಯಲಿಲ್ಲ. ಆದರೂ ಉಳಿಯಲು ಜಾಗ, ಮಾಡಲು ಕೆಲಸ ಬೇಕಿತ್ತಲ್ಲ. ಕೃಷ್ಣಾನಂದರನ್ನು ನೋಡಿಯೇಬಿಡುವುದು ಅಂತ ಹೊರಟೆ.
ಅದು ಆಸ್ಪತ್ರೆ. ಮಹಡಿ ಮೇಲೆ ಕೆಲವು ಬೆಡ್ಡುಗಳ ಮೇಲೆ ಮಲಗಿ ನರಳುತ್ತಿರುವ ರೋಗಿಗಳು. ರೋಗಿಗಳ ವಾರ್ಡು ದಾಟಿದ ನಂತರ ಒಂದು ಪುಟ್ಟ ಪಡಸಾಲೆ. ಅಲ್ಲಿ ಮೂಲೆಗೆ ಒಂದು ಕುರ್ಚಿ. ಖಾಲಿ. ಕುರ್ಚಿಯ ಹಿಂದೆ ಚಚ್ಚೌಕ ಮೆಷ್ಷಿನ ಉದ್ದನೆ ಕಿಟಕಿ. ಒಂದು ಹತ್ತು ಹದಿನೈದು ಜನ ಕಾಯುತ್ತ ನೆಲದ ಮೇಲೆ ಹಾಸಿದ್ದ ಚಾಪೆಗಳಲ್ಲಿ ಕೂತಿದ್ದರು. ಮುದುಕರು, ವಿದೇಶದವರಂತೆ ಕಾಣುವ ಕೆಲವು ಮಧ್ಯವಯಸ್ಕರು, ಸುಮ್ಮನೆ ಗೋಡೆಗೆ ಒರಗಿ ಕಣ್ಣು ಮುಚ್ಚಿದ್ದವರು, ಅವರೆಲ್ಲ ಎಷ್ಟೋ ಕಾಲದಿಂದ ಅಲ್ಲೇ ಇದ್ದುಬಿಟ್ಟವರಂತೆ, ನಿರಿಮ್ಮಳವಾಗಿ ಕೂತಿದ್ದರು. ಕೆಲವು ಕಾವಿ ಹಾಕಿದ ಸನ್ಯಾಸಿಗಳು ಕುರ್ಚಿಯ ಎದುರು ಮುಚ್ಚಿದ್ದ ಬಾಗಿಲನ್ನು ಭಯ ಗೌರವಗಳಿಂದ ತೆಗೆದು ಸ್ವಲ್ಪವೇ ತಲೆ ಒಳಗೆ ಇಣುಕಿಸಿ, ಆಮೇಲೆ ಪೂರ್ತಿ ಒಳಹೊಕ್ಕು ಬರುತ್ತಿದ್ದರು. ನಾನು ಇರುವುದು ನನಗೇ ತಿಳಿಯುವಂತೆ ಆತಂಕದಿಂದ, ಏನು ನಿರೀಕ್ಷಿಸಬೇಕು ತಿಳಿಯದ ಗೊಂದಲದಿಂದ, ಹೇಗೆ ಮಾತಾಡಬೇಕು ಎಂಬ ಸಿದ್ಧತೆ ಇಲ್ಲದ ಖಾಲಿತನದಿಂದ ಚಾಪೆಯ ಡಿಸೈನು, ಮುಚ್ಚಿದ ಬಾಗಿಲ ಚಿಲಕ, ಗೋಡೆಯ ಬಣ್ಣ ಇಂಥವನ್ನು ನೋಡುತ್ತ ಸುಮ್ಮನೆ ಕೂತಿದ್ದೆ. ಆಗ ಅವಳನ್ನು ನೋಡಿದೆ.
ಅಲ್ಲಿದ್ದ ನಾಲ್ಕಾರು ತಿಂಗಳು ಅವಳನ್ನು ದಿನವೂ ನೋಡುತ್ತಿದ್ದೆ. ಅಂಥ ಹೆಂಗಸರು ಬಹಳ ಮಂದಿ ಇರಲಾರರು. ಹರಿದ್ವಾರದಲ್ಲಿ ಬಿಳೀ ಸೀರೆಯ ಹೆಂಗಸಿನ ಮುಖದಲ್ಲಿದ್ದ ನೋವೋ, ಚಿಪ್ಪಿನೊಳಗೆ ಸೇರಿಕೊಂಡು ತನ್ನ ಪಾಡಿಗೆ ತಾನಿದ್ದೇನೆಂಬ ಭ್ರಮೆಯೋ ಇವಳಲ್ಲಿರಲಿಲ್ಲ. ಕಾವಿಯ ಲುಂಗಿ ಉಟ್ಟು ಕಾವಿಯ ಜುಬ್ಬಾ ಧರಿಸಿ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡಿದ್ದಳು. ಅವಳಿಲ್ಲದೆ ಹೃಷಿಕೇಶದ ಆ ಭಾಗವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಹೆಂಗಸರು ಅವಳಷ್ಟು ದೃಢವಾಗಿ ಹೆಜ್ಜೆ ಇಡುವುದನ್ನು ನಾನು ನೋಡಿಲ್ಲ.ಆರೋಗ್ಯವಂತ ಕೆಂಪು ಹದವಾಗಿ ಮಿಶ್ರಗೊಂಡ ಬಿಳಿಯ ಮೈಬಣ್ಣ. ಗಂಟು ಹಾಕಿದ ಕೆಂಚು ಕೂದಲು. ಉದ್ದನೆಯ ಕೈಬೆರಳು. ಅವಳು ಮಾತಾಡಿದ್ದು ಬಹಳ ಅಪರೂಪ. ಆಡಿದರೂ ಕೃಷ್ಣಾನಂದರಿಗೆ ಮಾತ್ರ ಕೇಳುವಷ್ಟು ಮೃದುವಾಗಿ. ಯಾವ ದೇಶದವಳೋ. ಹೆಸರು ಕೂಡ ತಿಳಿಯಲಿಲ್ಲ. ಅವಳ ಮುಖದಲ್ಲಿ ಮುಗುಳು ನಗೆ ಇರುತ್ತಿತ್ತು. ಆದರೆ ಅದು ನನಗೆ ಅನಿಸುತ್ತಿರಲಿಲ್ಲ. ಅವಳು ಸುಮ್ಮನಿದ್ದರೂ ಸುಮ್ಮನಿದ್ದಾಳೆ ಅನ್ನಿಸುತ್ತಿರಲಿಲ್ಲ. ಏನೆಲ್ಲ ತೀರ ಸೂಕ್ಷ್ಮಗಳನ್ನು ಗಮನಿಸಿಯೂ ಎಷ್ಟೊಂದು ನಿರ್ಲಿಪ್ತಳಂತೆ ಸುಮ್ಮನಿರುತ್ತಿದ್ದಳು. ಅವಳಿದ್ದರೂ ಇದ್ದಾಳೆ ಅನ್ನಿಸುತ್ತಿರಲಿಲ್ಲ. ಆದರೆ ಇಲ್ಲದಿದ್ದರೆ ಮಾತ್ರ ಅವಳು ಇಲ್ಲ ಅಂತ ಥಟ್ಟನೆ ಗೊತ್ತಾಗಿಬಿಡುತ್ತಿತ್ತು. ಅವಳು ಎಲ್ಲಿದ್ದರೂ ಏನು ಮಾಡುತ್ತಿದ್ದರೂ ಕೃಷ್ಣಾನಂದರೇ ಅವಳ ಮನಸ್ಸಿನಲ್ಲಿ ತುಂಬಿದ್ದಾರೆ ಅನ್ನಿಸುತ್ತಿತ್ತು. ಕೃಷ್ಣಾನಂದರ ಕಾಲಬಳಿ, ನೆಲದ ಮೇಲೆ ಸ್ಥಿರವಾಗಿ ಚಕ್ಕಂಬಟ್ಟಲು ಹಾಕಿ, ಕೈಗಳನ್ನು ಮಡಿಲಲ್ಲಿ ಒಂದರಮೇಲೊಂದು ಇಟ್ಟುಕೊಂಡು, ಕತ್ತನ್ನು ತುಸುವೇ ಎತ್ತಿ, ಕಣ್ಣನ್ನು ಯಾವ ಸಂಕೋಚವೂ ಇಲ್ಲದೆ ಪೂರ್ಣವಾಗಿ ತೆರೆದು, ಕೃಷ್ಣಾನಂದರನ್ನೇ ಎವೆ ಇಡದೆ ನೋಡುತ್ತ ಕೂರುತ್ತಿದ್ದಳು. ಅವರನ್ನು ಕಾಪಾಡುವವಳಂತೆ, ಅವರ ಮನಸ್ಸಿನಲ್ಲಿ ಮೂಡಬಹುದಾದ ಯಾವುದೇ ಕೋರಿಕೆಯನ್ನು ಅದು ಮೂಡುತ್ತಿದ್ದಂತೆಯೇ ಗಮನಿಸಿಕೊಳ್ಳಲು ಸಿದ್ಧವಾಗಿರುವವಳಂತೆ, ತನ್ನ ಮಗುವಿಗೆ ಯಾವ ಭಾವ ಭಂಗಿಯೂ ಗಮನದಿಂದ ತಪ್ಪಿಸಿಕೊಂಡು ತನ್ನ ಭಾವಸಂಪತ್ತಿಗೆ ನಷ್ಟಮಾಡಿಕೊಳ್ಳಲು ಬಯಸದ ಹೊಸ ತಾಯಿಯಂತೆ, ತನ್ನ ಆರಾಧ್ಯ ದೈವದ ಸಾಮೀಪ್ಯ ಸದಾ ಸಾಮೀಪವಾಗೇ ಇರಬೇಕೆಂದು ಬಯಸುವವಳಂತೆ-ಸರಿ, ಇದೆಲ್ಲ ನನಗೆ ಅನ್ನಿಸಿದ್ದು. ಜೊತೆಗೇ ಕೆಲವು ಬಾರಿ ಯಾಕೋ ಅವಳು ಹುಲಿ. ತನ್ನನ್ನ ಪಳಗಿಸಿಕೊಂಡು ಸಾಕಿದ ಬೆಕ್ಕು ಆಗಿದ್ದಾಳೆ ಅಂತಲೂ ಅನ್ನಿಸುತ್ತಿತ್ತು. ಅಲ್ಲ, ಅವಳು ಓಡಾಡುವ ನಿರ್ಭಯ ಮೌನ ಅನ್ನಿಸುತ್ತಿತ್ತು. ತನ್ನದೇ ಲೋಕ ಕಟ್ಟುಕೊಂಡು ಇದ್ದಾಳೆಯೋ? ಬಹುಶಃ ಇಲ್ಲ. ಹಾಗಿದ್ದಿದ್ದರೆ ಅವಳು ಸಹಸ್ರಾರು ಜನ ಹೆಣ್ಣುಗಳಲ್ಲಿ ಒಬ್ಬಳಾಗಿರುತ್ತಿದ್ದಳು. ಹರಿದ್ವಾರದಲ್ಲಿದ್ದವಳು ಅಂತವಳು. ತನ್ನನ್ನು ಗಮನಿಸಲಿ ಲೋಕ ಎಂಬ ಆಸೆ ಇದೆಯೋ? ಬಹುಶಃ ಇಲ್ಲ, ಹಾಗಿದ್ದಿದ್ದರೂ ಅಸಂಖ್ಯಾತ ಹೆಣ್ಣುಗಳಲ್ಲಿ ಒಬ್ಬಳಾಗಿರುತ್ತಿದ್ದಳು. ತನ್ನ ಸುತ್ತಲ ಲೋಕ ನೋಡುತ್ತ, ಆದರೆ ಅದರಿಂದ ತನಗೇನೂ ಆಗಬೇಕಾಗಿಲ್ಲವೆಂಬಂತೆ, ತಾನು ಮಾಡಬೇಕಾದ ಯಾವುದನ್ನು ಮಾಡಲೂ ಇಷ್ಟಿಷ್ಟೂ ಹಿಂಜರಿಯದೆ, ಯಾರಿಂದಲೂ ಏನೂ ಬಯಸದೆ, ಈಗಿರುವುದನ್ನೆಲ್ಲ ಬೇಕಾದರೆ ಈಗಲೇ ಬಿಟ್ಟು ಹೊರಡಲು ಸಿದ್ಧವಾದವಳಂತೆ, ಗುರುವಿಗೆ ಪೂರ್ಣ ಶರಣಾದವಳಂತೆ ಆದರೆ ಸಂಪೂರ್ಣ ಸ್ವತಂತ್ರಳಂತೆ,-ಯಾವ ನಂಬಿಕೆ, ಯಾವ ಸಾಧನೆ, ಅದೇನು? ತಾನು ಹೀಗೆ ಇರಬೇಕೆಂದು ಹಂಬಲಿಸಿ ಬಯಸಿ ಹೀಗಾಗಿದ್ದಾಳೋ? ಎಷ್ಟೋ ದಿನದ ನಂತರ ಕೃಷ್ಣಾನಂದರ ಸಮೀಪದ ಜಯಕುಮಾರ ನನಗೆ ಪರಿಚಿತನಾಗಿ ಅಕಸ್ಮಾತ್ತಾಗಿ ಹೇಳಿದ ಒಂದು ವಾಕ್ಯ ನೆನಪಿದೆ, ಕಾಡು ಬೆಕ್ಕಿನ ಹಾಗಿದ್ದಳು. ಕೃಷ್ಣಾನಂದರು ಅವಳನ್ನು ಈ ಸ್ಥಿತಿಗೆ ತಂದ ಮಹಾತ್ಮರು. ಗೊತ್ತಿಲ್ಲ. ಅವಳೊಳಗಿನದೇ ಸ್ವಭಾವದ ಸಾಧ್ಯತೆ ಅರಳಿಕೊಂಡು ಹಿಗಾಗಿದ್ದಾಳೋ ಏನೋ. ನಾನು ಅಂಥವಳೊಬ್ಬಳನ್ನು ಕಂಡೇನು ಅಂದುಕೊಂಡಿರಲಿಲ್ಲ. ಹಿಮಾಲಯಕ್ಕೆ ನಮಸ್ಕಾರ.
ಮುಗಿಸಬೇಕೆಂಬ ಅವಸರ, ಮೂರನೆಯ ದಿನ
ಸಮರ್ಥನೆಯಲ್ಲದ ರೀತಿಯಲ್ಲಿ ನನ್ನ ಬಗ್ಗೆ ನಾನು ಹೇಳಿಕೊಳ್ಳುವುದು ಹೇಗೆ? ಗಣೇಶಪುರಿ ನನ್ನ ಮಾತಾಡಿಸಿದ ರೀತಿ ನಾನು ಅವರಿಗೆ ಉತ್ತರ ಹೇಳಿದ ರೀತಿ ಬೇರೆ, ಹ್ಯಾನ್ಸ್ ನೊಡನೆ ಹೇಳಿಕೊಂಡದ್ದು ಬೇರೆ. ರಾಮು ಜೊತೆ ಹೇಳುವುದೇ ಬೇರೆ. ಕೃಷ್ಣಾನಂದರು ನನ್ನ ಹಾಗೆ ಮಾತಾಡಿಸುತ್ತಾರೆ. ನಾನು ಹಾಗೆ ಹೇಳಿಕೊಳ್ಳುತ್ತೇನೆ ಅಂತ ಗೊತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದ್ದವರಿಗೆ ತೀರ ಕಡಿಮೆ ಮಾತಿನಲ್ಲಿ, ಸಾಧ್ಯವಿದ್ದಷ್ಟೂ ರೂಕ್ಷವಾಗಿ ಹೇಳಿಬಿಡುವುದೇ ಒಳ್ಳೆಯದೆಂದು. ವಿವರಗಳನ್ನೆಲ್ಲ ಅವರೇ ತುಂಬಿಕೊಳ್ಳುತ್ತಾರೆ. ಅಯ್ಯೋ ನಾನು ಹೀಗೆ ಹೀಗೆ ಮಾಡಿದ್ದಕ್ಕೆ ಇಂಥ ಇಂಥ ಕಾರಣ ಇದೆ, ಅರ್ಥ ಆಗುತ್ತೋ ಇಲ್ಲವೋ, ಹೇಗೆ ಹೇಳಲಿ ಎಂದು ಹೇಳುವ ರೀತಿಯ ಬಗ್ಗೆಯೇ ಯೋಚನೆಮಾಡಿದಷ್ಟೂ ಮಾತು ಸುಳ್ಳು ಮತ್ತಷ್ಟು ಸುಳ್ಳು ಆಗುತ್ತ ಹೋಗುತ್ತದೆ.
ಕೃಷ್ಣಾನಂದರು ಬಂದರು. ಕುಳ್ಳದೇಹ. ವಯಸ್ಸಾದ ಹಣ್ಣಾದ ಮೈ. ತೆಳ್ಳನೆ ಕಾವಿ ಪಂಚೆ, ಕಾವಿಯ ಮೇಲು ಹೊದಿಕೆ, ತಟ್ಟನೆ ಕೂತವರೆಲ್ಲ ಎದ್ದು ನಿಂತರು. ನೆಲಕ್ಕೆ ಹಣೆ ಮುಟ್ಟಿಸಿ ನಮಸ್ಕಾರ ಮಾಡಿದರು. ನಾನೂ, ಕಡಿಮೆ ಎತ್ತರದ ಕುರ್ಚಿಯ ಮೇಲೆ, ಕಾಲುಗಳನ್ನು ಮಡಿಸಿಕೊಂಡು ಕುಳಿತರು. ಸುಮ್ಮನೆ ಇದ್ದರು. ಕಣ್ಣು ಮುಚ್ಚಿದ್ದರು. ಮೌನ, ಬಹಳ ಹೊತ್ತು. ನನ್ನ ಸುತ್ತಲೂ ಇದ್ದವರು ಕಣ್ಣು ಮುಚ್ಚಿ ಕುಳಿತಿದ್ದರು. ನಾನೂ ಕಣ್ಣು ಮುಚ್ಚಿ ಕುಳಿತೆ. ತುಂಬ ಹೊತ್ತು ಹಾಗಿರಲು ಆಗಲಿಲ್ಲ. ಕಣ್ಣು ಬಿಟ್ಟೆ. ಕೃಷ್ಣಾನಂದರೂ ಉಳಿದವರೂ ಇನ್ನೂ ಸುಮ್ಮನೆ ಕಣ್ಣು ಮುಚ್ಚಿಯೇ ಕುಳಿತಿದ್ದರು. ನಾನೂ ಮತ್ತೆ ಕಣ್ಣು ಮುಚ್ಚಿದೆ, ತೆರೆದೆ. ಸುಮ್ಮನೆ ಕೂತೆ. ಕೃಷ್ಣಾನಂದರು ನಿಧಾನವಾಗಿ ಕಣ್ಣುತೆರೆದರು. ಸುಮ್ಮನೆ ಎಲ್ಲರನ್ನೂ ನೋಡಿದರು. ಹಿಂದಿಯಲ್ಲಿ ಮಾತಾಡಿದರು.
“ಅಲ್ಲಿ. ಕೆಂಪು ಉಲ್ಲನ್ ಟೋಪಿ, ಯಾರು ಅದು?”
ನನ್ನನ್ನೆ ಕುರಿತದ್ದು ಎಂದು ನನಗೆ ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. “ನಾನೇ?” ಅಂದೆ.
“ಹೌದು, ನೀನೇ. ಯಾರು?”
ನನ್ನ ಹೆಸರು ಹೇಳಿದೆ.
“ಎಲ್ಲಿಂದ ಬಂದೆ?”
“ಬೆಂಗಳೂರು.”
“ನಿನ್ನ ಮಾತು ಕೇಳಿಸಲ್ಲ. ಬಾ ಇಲ್ಲಿ.”
ಹತ್ತಿರ ಹೋದೆ. ಅವರ ಮುಂದೆ ಕುಳಿತೆ. ಆಮೇಲೆ ಬೇರೆ ಯಾರನ್ನೋ ಏನೇನೋ ಕೇಳಿದರು. ಉತ್ತರ ಕಾಶಿಯಲ್ಲಿ ಭೂಕಂಪಕ್ಕೆ ಸಿಕ್ಕವರಿಗೆ ಏನೋ ನೆರವು ಕೊಡಲು ಹೋದವರು ಬರಲಿಲ್ಲವೇ ಅಂತ ಇರಬೇಕು. ಇನ್ನು ಯಾರನ್ನೋ ಇವತ್ತಿನ ಪೇಪರಿನಲ್ಲಿ ಏನು ಸುದ್ದಿ? ಒಳ್ಳೆಯದು ಏನೂ ಇಲ್ಲವೆ? ಯಾಕೆ ಓದುತ್ತೀರಿ ಹಾಗಾದರೆ ಪೇಪರನ್ನು ಅಂತ ಅಂದರು. ಆಮೇಲೆ ತಟ್ಟನೆ ನನ್ನ ಕುರಿತು
“ಯಾಕೆ ಬಂದದ್ದು?” ಎಂದು ನಿರೀಕ್ಷಿತ ಪ್ರಶ್ನೆಯನ್ನು ಅನಿರೀಕ್ಷಿತವಾಗಿ, ಖಚಿತ ಉತ್ತರ ಬಯಸುವ ಹಾಗೆ. ಚಾಟಿ ಏಟಿನ ದನಿಯಲ್ಲಿ, ಇಂಗ್ಲಿಷಿನಲ್ಲಿ ಕೇಳಿದರು.
“ನಾನು….ಕಾಲೇಜಿನಲ್ಲಿ….ಮೇಷ್ಟರಾಗಿದ್ದೆ….ಇಪ್ಪತ್ತು ವರ್ಷ ….ಕೆಲಸಮಾಡಿದೆ.” ಸುಮ್ಮನಾದೆ. ಹೊಳೆಯಲಿಲ್ಲ.
ಅವರೂ ಸುಮ್ಮನಿದ್ದರು. ಮತ್ತಷ್ಟು ಕಠಿಣ ದನಿಯಲ್ಲಿ “ಯಾಕೆ ಬಂದದ್ದು?”
“ಈಗ ಮನೆ ಬಿಟ್ಟು ಬಂದುಬಿಟ್ಟಿದ್ದೇನೆ.”
“ಯಾಕೆ?”
“ಬೇಜಾರಾಯಿತು.”
“ಯಾಕೆ?”
“ನಾನು ಪುಸ್ತಕ ಬರೆದೆ….ಹೆಸರು ಮಾಡಿದೆ….ಬಹುಮಾನಗಳು ಬಂದವು….ಕಾಂಪಿಟೀಷನ್ನು ಇಂಥವೆಲ್ಲ ನನಗೆ ಬೇಜಾರಾಯಿತು….”
“ಕಾಂಪೀಟ್ ಮಾಡು ಅಂತ ಯಾರು ಹೇಳಿದರು?”
ಸುಮ್ಮನಿದ್ದೆ.
ನಾನು ನಿಜ ಹೇಳುತ್ತಿಲ್ಲ ಎಂದು ತಿಳಿಸರೆಂಬಂತೆ ಕೇಳಿದರು.
“ಮದುವೆ ಆಗಿದೆಯಾ?”
“ಹೌದು.”
“ಮಕ್ಕಳು?”
“ಇಲ್ಲ.”
“ಕಾಲೇಜಿನಲ್ಲಿ ಏನು ಕಲಿಸುತ್ತಿದ್ದೆ?”
“ಇಂಗ್ಲಿಷು.”
“ಮನೆಯಲ್ಲಿ ಇನ್ನು ಯಾರಿದ್ದಾರೆ?”
“ಅಮ್ಮ.”
“ತಂದೆ?”
“ಇಲ್ಲ. ತೀರಿಹೋದರು.”
“ಅಣ್ಣ, ತಮ್ಮ?”
“ಯಾರೂ ಇಲ್ಲ.”
“ನೀನು ಮನೆ ಬಿಟ್ಟು ಬಂದಿದ್ದಕ್ಕೆ ನಿಮ್ಮ ಅಮ್ಮ, ನಿನ್ನ ಹೆಂಡತಿ ಇವರಿಗೆಲ್ಲ ದುಃಖ ಆಗಲ್ಲವಾ? ಕಷ್ಟ ಆಗಲ್ಲವಾ?”
“ಬೇಜಾರಾಗತ್ತೆ, ಕಷ್ಟ ಬಹುಶಃ ಆಗಲಾರದು. ಹೆಂಡತಿ ಕೆಲಸದಲ್ಲಿದ್ದಾಳೆ. ಇರುವುದಕ್ಕೆ ಸ್ವಂತ ಮನೆ ಇದೆ. ದುಃಖ ಆಗತ್ತೆ. ಆದರೆ ನಾನು ಅವರೆಲ್ಲರ ಜೊತೆ ಇರಲು ಆಗಲ್ಲ ಅನ್ನಿಸಿತು. ಹಾಗಂತ ಸನ್ಯಾಸಿ ಆಗೋಕೆ ಇಷ್ಟ ಇಲ್ಲ.”
ಅವರಿಗೆ ತುಂಬ ಸಿಟ್ಟು ಬಂತು. ಷಟ್ ಅಪ್ ಅನ್ನಲಿಲ್ಲ ಆದರೆ ಅದೇ ಧ್ವನಿಯಲ್ಲಿ, ಗದರಿಸುವಂತೆ “ಹಾಗೆಲ್ಲ ಮಾತಾಡಬಾರದು. ನೀನು ಬಂದದ್ದು ಯಾಕೆ?”
ಸಂಕೋಚದಿಂದ ತಲೆ ಬಗ್ಗಿಸಿ. ದನಿ ಕುಗ್ಗಿ ಹೇಳಿದೆ “ನಾನು ತಪ್ಪು ಮಾಡಿದೆ.”
“ಏನು ತಪ್ಪು?” ತಟ್ಟನೆ ಕನ್ನಡದಲ್ಲಿ ಕೇಳಿದರು. ಸುಮ್ಮನಿದ್ದೆ.
“ಹೇಳಬೇಕು.”
ಆಜ್ಞೆಯಂಥ ದನಿ.
ನನಗೂ ಕೇಳಿಸದಷ್ಟು ಮೆಲುವಾಗಿ ಹೇಳಿದೆ “ಬಹುಶಃ ಹೆಂಡತಿ ಒಪ್ಪಿಕೊಳ್ಳಲಾರದಂಥ ತಪ್ಪು.”
ತಲೆ ತಗ್ಗಿಸಿದ್ದೆ. ಬಹುಶಃ ನನ್ನ ನೋಡುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ “ಸರಿ. ಮೂರು ದಿನ ಇಲ್ಲಿರಿ. ನೋಡೋಣ. ದಿನಾ ಬೆಳಿಗ್ಗೆ ಸಂಜೆ ಬಂದು ನನ್ನ ನೋಡುತ್ತಿರಿ” ಅಂದು ಯಾರಿಗೋ ಫೋನು ಮಾಡಿ, “ಹೋಗಿ, ಕೆಳಗೆ ಮೈಕಲ್ ಅಂತ ಇದ್ದಾರೆ. ಅವರನ್ನು ನೋಡಿ. ನಿಮಗೆ ಇರಲು ಜಾಗ ಕೊಡುತ್ತಾರೆ ಅಂದು ಮಾತು ಮುಗಿಸಿದರು.
ಮುಗಿಸಬೇಕೆಂಬ ಆಸೆ, ನಾಲ್ಕನೆಯ ದಿನ
ಎಲ್ಲರೂ ಏನಾದರೂ ಕೆಲಸದಲ್ಲಿ ತೊಡಗಿರುವ, ನನ್ನ ನನ್ನ ಪಾಡಿಗೇ ಬಿಟ್ಟಿದ್ದಂತೆ, ಆದರೆ ನನ್ನ ಅಗತ್ಯಗಳನ್ನು ಗಮನಿಸಿಕೊಳ್ಳುತ್ತಿದ್ದ ಆಶ್ರಮದಲ್ಲಿ ಒಂದು ವಾರ ಸುಮ್ಮನೆ ಇದ್ದೆ. ಸುಮ್ಮನೆ ಇರುವುದು ಎಷ್ಟು ಕಷ್ಟ ಎಂದು ತಿಳಿಯಿತು.
ಸುಮ್ಮನಿರುವುದು ಎಷ್ಟು ಕಷ್ಟ. ಮನಸ್ಸು ಹಿಡಿದುಕೊಳ್ಳಲು ಏನಾದರೂ ಸಿಕ್ಕೀತೆ ಎಂದು ಬಯಸುತ್ತಿತ್ತು. ಹುಡುಕುತ್ತಿತ್ತು, ಹಂಬಲಿಸುತ್ತಿತ್ತು. ನೆನಪು, ನೋವು, ಸಮರ್ಥನೆ, ಹಿಂಜರಿಕೆ, ದೈನ್ಯ ಇಂಥವೆಲ್ಲ ಆಗ ನನ್ನ ಮನಸ್ಸಿನಲ್ಲಿ ಬಂದು ಹೋಗುತ್ತಿದ್ದಿರಬಹುದೆಂದು ಈಗ ಅನ್ನಿಸುತ್ತದೆ. ಆಗ. ಆಯಾ ಕ್ಷಣವನ್ನು ತುಂಬಿಕೊಳ್ಳಲು ಏನಾದರೂ ಸರಿ ಅನ್ನಿಸಿತ್ತು. ಓದುತ್ತಿದ್ದೆ. ಮೊದಲು ಉದ್ಯೋಗಕ್ಕೆ ಓದಿದ ಹಾಗಲ್ಲ. ಕೆಲಸ ಸಿಕ್ಕಮೇಲೆ ಓದುವುದೇ ಕೆಲಸವಾಯಿತಲ್ಲ. ಹಾಗೂ ಅಲ್ಲ. ನನಗೇ ಸ್ಪಷ್ಟವಾಗಿರದಿದ್ದ ಪ್ರಶ್ನೆಗೆ ಖಚಿತ ಉತ್ತರ ಸಿಗಬೇಕೆಂಬ ಅಪೇಕ್ಷೆಯ ಓದು. ಆದರೆ, ಬುದ್ಧಿ ಓದಿದ್ದನ್ನೆಲ್ಲ ಅಭ್ಯಾಸ ಬಲದಿಂದ ಪ್ರಶ್ನಿಸುತ್ತ ತಿರಸ್ಕರಿಸುತ್ತ ಅಹಂಕಾರವನ್ನು ಇನ್ನಷ್ಟು ಬೆಳೆಸುತ್ತಿತ್ತೆಂದು ಕಾಣುತ್ತದೆ. ಮನಸ್ಸು ನೊಣದ ಹಾಗೆ ಕೆಲವೇ ನೆನಪುಗಳ ಸುತ್ತ ಹಾರಿ ಹಾರಿ ಕೂರುತ್ತ. ನಾನು ನಡೆದುಕೊಂಡ ರೀತಿಗೆ ಬುದ್ಧಿ ಸಮರ್ಥನೆ ನೀಡಲೆಂದು ಬಯಸುತ್ತಿತ್ತೆಂದು ಕಾಣುತ್ತದೆ. ನನ್ನಮೈ ದಿನ ದಿನ ಹೊತ್ತಿಗೊತ್ತಿಗೆ ಸಿಗುವ ಊಟ ನಿದ್ದೆಗಳಿಗೆ ಹೊಂದಿಕೊಳ್ಳುತ್ತ ನಿಧಾನವಾಗಿ ಹಿತವಾಗಿ ಸಡಿಲಾಗಲು ಸಿದ್ಧವಾಗುತ್ತಿತ್ತು. ನಾನು ನನ್ನದೇ ಆದ ಒಂದು ಥಿಯರಿ ರೂಪಿಸಿಕೊಂಡೆ: ನನ್ನ ಬುದ್ಧಿ. ಮನಸ್ಸು ಮತ್ತು ದೇಹ ಬೇರೆ ಬೇರೆ ಅಪೇಕ್ಷೆಗಳನ್ನು ಹೊಂದಿವೆ, ಅವಕ್ಕೆ ತಾಳ-ಮೇಳ ಇಲ್ಲ. ಯಾಕೆ ಹೀಗೆ ಅಂತ ತಿಳಿಯುವುದೇ ನನ್ನ ಗುರಿ ಅಂತ. ಆದರೆ ಕೆಲವು ದಿನಗಳ ಪರಿಚಯದ ನಂತರ ಕೃಷ್ಣಾನಂದರ ಡ್ರೈವರಾಗಿದ್ದ ಜಯಕುಮಾರನ ಬಳಿ ಹೀಗೆಂದಾಗ ಅವನು ಜೋರಾಗಿ ನಕ್ಕು ನನ್ನ ಥಿಯರಿಯನ್ನು ಉಫ್ ಅಂದುಬಿಟ್ಟ. “ನಿಮ್ಮಲ್ಲಿ ಅಂಥ ಸ್ಪ್ಲಿಟ್ ಇದ್ದಿದ್ದರೆ ನೀವು ಒಂದು ಕ್ಷಣವೂ ಬದುಕಿರುತ್ತಿರಲಿಲ್ಲ. ನೀವು ತಿಳಿದದ್ದು ಜೀರ್ಣ ಆಗುತ್ತಿರಲಿಲ್ಲ. ಮೈ. ಮನಸ್ಸು, ಬುದ್ಧಿಗಳ ಸಂಬಂಧ ಅಷ್ಟು ಸುಲಭವಾಗಿ ಬೇರ್ಪಡುವುದಿಲ್ಲ.”
ಮುಗಿಸಬೇಕೆಂಬ ಆಸೆ ಐದನೆಯ ದಿನ
ತಿರುವನಂತಪುರದ ರೇಲ್ವೇ ಸ್ಟೆಷನ್ನಿನಲ್ಲಿ ಅವತ್ತು ರಾತ್ರಿ ಮಲಗಿದ್ದೆ. ಆಗಿನ್ನೂ ನಾನು ಹಿಮಾಲಯಕ್ಕೆ ಹೀಗೆ ಹೋಗಿ ಆಶ್ರಯ ಪಡೆದೇನು ಎಂದು ಗೊತ್ತಿರಲಿಲ್ಲ. ಡಾರ್ಮಿಟರಿ ಮಹಡಿಯ ಮೇಲೆ ಇತ್ತು. ನೈಟುಗೌನು ಹಾಕಿಕೊಂಡ ಒಬ್ಬ ಮಹಿಳೆ ಬೆತ್ತದ ಕುರ್ಚಿಯಮೇಲೆ ಸುಮ್ಮನೆ ರಾತ್ರಿ ಹತ್ತುಗಂಟೆಯ ನಿಯಾನ್ ಬೆಳಕಿನ ಸ್ಟೇಷನ್ ಆಚೆಯ ರಾತ್ರಿಯನ್ನು ನೋಡುತ್ತಿದ್ದಳು-ನನ್ನ ಹಾಗೇ.
ನನಗೆ ಕನ್ಯಾಕುಮಾರಿಗೆ ಹೋಗಬೇಕೆನಿಸಿತ್ತು. ತೀರ ಎಳವೆಯ ಅಪ್ಪ. ಅಮ್ಮನೊಡನೆ ಅಲ್ಲಿಗೆ ಹೋಗಿದ್ದೆ. ಆಗ ಅದು ಪುಟ್ಟ ಹಳ್ಳಿ. ವಿಶಾಲವಾದ ಮರಳ ಹಾಸು. ಎಲ್ಲಿಂದ ನೋಡಿದರೂ ಕಾಣುತ್ತಿದ್ದ ಕೆಂಪುಬಿಳಿ ಪಟ್ಟೆಗಳ ದೇವಸ್ಥಾನದ ಗೋಡೆ. ಒಂದು ಪುಟ್ಟ ಗಾಂಧಿ ಸ್ಮಾರಕ. ದಕ್ಷಿಣದ ನೆಲದ ತುದಿ ಸಮುದ್ರದ ಮೊರೆತ ಬಿಟ್ಟರೆ ಉಳಿದಂತೆ ನಿರ್ಜನ, ನಿಶ್ಯಬ್ಧ. ದೂರದಲ್ಲಿ ಇನ್ನೂ ವಿಕಾರ ಆಕಾರದ ಸ್ಮಾರಕ ಭವನ ಕಟ್ಟಿಕೊಳ್ಳದೆ, ಅಥವ ಅಂಥ ಅಪೇಕ್ಷೆಯೂ ಜನರಲ್ಲಿ ಮೂಡದೆ. ಅಗೋ ಅದು ವಿವೇಕಾನಂದ ತಪಸ್ಸು ಮಾಡಿದ ಕಲ್ಲು ಅಂತ ಬಾಯಿಮಾತಿನಲ್ಲಿ ಅವರಿವರು ತೋರುತ್ತಿದ್ದ ಸಹಜ ಬಂಡೆ. ಕನ್ಯಾಕುಮಾರಿಯ ನೆನಪು ಉಳಿದದ್ದು ಅಂದು ತುಂಬ ನಿರ್ಮಲ. ತುಂಬ ಪ್ರಶಾಂತ ಅನ್ನಿಸಿದ್ದಕ್ಕೆ ಮತ್ತು ಅಲ್ಲಿ ಭಯವಾಗಿದ್ದಕ್ಕೆ ಮತ್ತು ಅಲ್ಲಿ ಧುಃಖ ಅಲ್ಲ ನೋವು ಆಗಿದ್ದಕ್ಕೆ.
ಸಂಜೆ ಸೂರ್ಯ ಮುಳುಗಿದ ಮೇಲೆ ನಾನು, ಅಪ್ಪ ಮತ್ತು ಅಮ್ಮ ಮಾತ್ರ ಬರುತ್ತಿದ್ದೆವು. ಬೆಳಕು ಮಬ್ಬಾಗಿತ್ತು. ಸಮುದ್ರದ ಅಲೆಗಳಿಗೆ ಉಕ್ಕು ಬಂದಿತ್ತು. ಎತ್ತರಕ್ಕೆ ಹಾರಿ, ಮಬ್ಬಿನಲ್ಲಿ ಇಷ್ಟೆ ಹೊಳೆಯುವ ಬಿಳುಪು ನೊರೆಯ ಉದ್ದ ದಪ್ಪಗೆರೆಯಾಗಿ, ಅಲೆಯ ನೀಲಿ ಆಗುತ್ತಿರುವ ಕತ್ತಲ ಬಣ್ಣದ ಜೊತೆ ಬೆರೆತು. ಏರಿದ ಅಲೆಯ ಶಿಖರ ನೆಲಕ್ಕೆ ಆರ್ಭಟಿಸಿ ಬಡಿದು ನೀರಿನ ವಕ್ರಗೆರೆಗಳ ವಿನ್ಯಾಸವಾಗಿ ಮುಂದೆ ಬರುತ್ತಿದ್ದಂತೆಯೇ ಹಿಂದೆಸರಿಯುತ್ತ ಸರಿಯುವ ಮೊದಲೇ ಇನ್ನೊಂದಿ‌ಉ ಅಲೆಯ ಆರ್ಭಟ ಕಿವಿ ತುಂಬಿ, ಕಣ್ಣಿಗೆ ಒಂದರ ಹಿಂದೊಂದೊಂದು ಬರುತ್ತಲೇ ಇರುವ ಅಲೆಗಳ ಸಾಲು ಕಂಡು, ಬಿಳಿಯಾಗಿದ್ದ ಅಪ್ಪನ ತಲೆಗೂದಲು, ಗಾಳಿಗೆ ಹಾರಾಡುತ್ತಿದ್ದ ಬಿಳಿಯ ಪಂಚೆ, ಬಿಳಿಯದಾಗುತ್ತಿದ್ದ ಅಮ್ಮನ ಜಡೆ, ಯಾರ ಮಾತೂ ಕೇಳಿಸದ ಸಮುದ್ರದ ಮೊರೆತ, ಹೆಚ್ಚುತ್ತಿದ್ದ ಮಬ್ಬು ಎಲ್ಲ ಸೇರಿ ನನಗೆ ತುಂಬ ಭಯವಾಗಿತ್ತು. ಅವತ್ತು ರಾತ್ರಿ ದೇವಾಲಯದ ಮೆಟ್ಟಿಲು ಏರುವಾಗ ಬೆಳದಿಂದಳಿದ್ದರೂ ಆಬೆಳಕಿನಲ್ಲಿ ಸಮುದ್ರದ ಭಯ ಹೆಚ್ಚಾಯಿತು. ಅದು ಕಣ್ಣಿಗೆ ಬೀಳದಂತೆ ಪಾವಟಿಗೆಯ ಗೋಡೆ ಮಗ್ಗುಲಲ್ಲಿ ಅಂಬೆಗಾಲಿಡುವವನಂತೆ ಬಗ್ಗಿ. ಕಿವಿ ಮುಚ್ಚಿಕೊಂಡು ನಡೆದಿದ್ದೆ. ಕನ್ಯಾಕುಮಾರಿಯ ಎಲ್ಲರೂ ಸುಂದರವೆಂದು ಕರೆಯುವ ವಿಗ್ರಹದ ನೆನಪು ನನಗೆ ಉಳಿದೇ ಇಲ್ಲ. ಯಾಕೆಂದರೆ ನಾನು ಅದನ್ನು ನೋಡಲೇ ಇಲ್ಲ. ದೇವಸ್ಥಾನದಲ್ಲಿ ಇದ್ದರೂ ನನ್ನ ಗಮನವೆಲ್ಲ ಅಪ್ಪನ ಮೇಲಿತ್ತು. ಅವರು ತುಂಬ ಅಳುತ್ತಿದ್ದರು. ಯಾಕೆಂದು ತಿಳಿಯಲಿಲ್ಲ. ಅವರು ಆಡಿದ ಮಾತಿನ ತುಣುಕಿನಲ್ಲಿ ‘ಗರಗಸ’ ಅನ್ನುವುದು ಮಾತ್ರ ಉಳಿದಿದೆ. ಅಮ್ಮನನ್ನು ಹಾಗೆಂದರೆಂದು ನನಗೆ ಅನ್ನಿಸಿತು. ಅಪ್ಪನ ಕಣ್ಣಿರು ನೋಡಿ ನನಗೆ ದುಃಖಕ್ಕಿಂತ ನೋವು ಬಹಳ ಆಯಿತು.
ಮತ್ತೆ ಅದೆ ಕನ್ಯಾಕುಮಾರಿಗೆ ಸಾಕಷ್ಟು ಬೆಂದು ಹೋಗುತ್ತಿದ್ದೇನೆ. ನಾಳೆ ಬೆಳಿಗ್ಗೆ. ಈಗ ತಿರುವನಂತಪುರದ ಸ್ಟೇಷನ್ನಿನ ಮಹಡಿ ಮೇಲೆ ನಿಂತು ಸುಮ್ಮನೆ ನೋಡುತ್ತಿದ್ದೆ. ನೈಟ್ ಗೌನಿನ ಮಹಿಳೆಯ ಮಗಳು ಬಂದು ತಾಯಿಯ ಪಕ್ಕ ಕುಳಿತಳು. ಸ್ವಲ್ಪ ಹೊತ್ತಿನ ನಂತರ ಎದ್ದು ಹೋದರು. ತಿರುವನಂತಪುರ ಮಲಗುತ್ತಿತ್ತು. ಕೆಲವರು ಹೊಸದಾಗಿ ಎದ್ದಿದ್ದರು. ನಾನು ನಿಂತ ಎರಡನೆಯ ಮಹಡಿಯಿಂದ ಕಳ್ಳತನದಿಂದೆಂಬಂತೆ ಬಂದು ನಿಲ್ಲುವ ಟ್ಯಾಕ್ಸಿಗಳು. ಟ್ಯಾಕ್ಸಿಯಿಂದ ಸೊಂಟಕ್ಕೆ ಮೇಲೆತ್ತಿ ಕಟ್ಟಿದ ಬಿಳಿಪಂಚೆಯ ಒಬ್ಬ-ಇಬ್ಬ ಗಂಡಸರು. ಸೈಕಲ್ಲು ತಳ್ಳಿಕೊಂಡು ಬರುವ ಟೀ ಷರ್ಟಿನೊಡನೆ ಬರುವ ಹೆಂಗಸರು. ಇನ್ನೆಲ್ಲೊ ಕಂಬಕ್ಕೆ ಒರಗಿ ನಿಂತ ಹೆಂಗಸರು. ಒಬ್ಬನೇ ಒಬ್ಬ ಹೂ ಮಾರುವವ. ಕುದುರುವ ಕುದುರದಿರುವ ವ್ಯಾಪಾರ. ಗಟ್ಟಿಯಾಗಿಬಿಡುವ ದನಿಯನ್ನು ಪ್ರಯತ್ನ ಪೂರ್ವಕವಾಗಿ ಮೆಲುವಾಗಿಸುವ ಯತ್ನ. ಯಾರ ಮುಖವೂ ಕಾಣದೆ ಕೇವಲ ಗಂಡು-ಹೆಣ್ಣು ಆಕಾರಗಳ ಚಲನೆಯನ್ನು ಮಾತ್ರ ಕಾಣುತ್ತ ಬೆನ್ನಹಿಂದಿನ ಸ್ಟೇಷನ್ನಿನಲ್ಲಿ ನಿರಂತರವಾಗಿ ಕೇಳುತ್ತಲೇ ಇದ್ದ ದಡಕ್ ದಡಲ್ ದಡದಡಕ್ ಕ್ರೀಚ್-ಮನಸ್ಸಿನಲ್ಲಿ ಮುಖವಿಲ್ಲದ ಬತ್ತಲೆ ಗಂಡುಹೆಣ್ಣುಗಳು.
ಅಂದು ರಾತ್ರಿ ನನ್ನ ಜೊತೆಗಾರನಾಗಿದ್ದವನು ಕೇಳಿದ: “ಏನು, ನೀವು ತೀರ್ಥಯಾತ್ರೆ ಹೋಗುತ್ತಿದ್ದೀರಾ?” ಹೌದೆಂದು ಉತ್ತರಿಸಿ ಮಲಗಿದೆ. ಗಾಢವಾದ ನಿದ್ರೆ ಬಂದಿತು. ಮಧುರೆಯಿಂದ ಕ್ವಿಲಾನಿಗೆ ಬರುವಾಗ ಕಂಡ ದಟ್ಟಕಾಡು, ಬಿಸಿಲಿಗೆ ಹೊಳೆವ ದೊಡ್ಡ ಒದ್ದೆ ಬಂಡೆಗಳು. ಜಟಿಲ ಆಕಾರದ ನಿಬಿಡ ವೃಕ್ಷಗಳು, ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಕುಟುಂಬದ ಪುಟ್ಟ ಹುಡುಗಿ, ತಮಿಳುಮಾತುಗಳು, ಕ್ವಿಲಾನಿನಲ್ಲಿ ಇಲ್ಲಿಗೆ ಬರುವ ಇನ್ನೊಂದು ರೈಲಿಗಾಗಿ ಸುಮ್ಮನೆ ಖಾಲಿ ಪ್ಲಾಟ್ ಫಾರ್ಮಿನಲ್ಲಿ ಕಾದು ಕಳೆದ ಮೂರು ಗಂಟೆಗಳು, ಬಂದ ರೈಲಿನ ತುಂಬ ಇದ್ದ ಆಫೀಸು ಮಹಿಳೆಯರು, ಕಿಟಿಕಿಯಾಚೆಯ ಕಡಲ ಹಿನ್ನೀರ ದಡದ ಒಂದರ ನಂತರ ಒಂದು ಬಂದೇ ಬರುವ ಹಳ್ಳಿಗಳು, ಮನಸ್ಸಿಗೆ ಇಳಿಯದ ಸಾವಿರದೆಂಟು ಮುಳಗಳು ಬಹುಶಃ ಆಯಾಸ. ಗಾಢವಾದ ನಿದ್ದೆ.
ಯಾವಾಗಲೋ ಒಮ್ಮೆ ತಟ್ಟನೆ ಎಚ್ಚರ. ಎಚ್ಚರವಾದ ಕ್ಷಣ ಇನ್ನೂ ಮುಂದುವರಿದಿದೆ ಅನ್ನಿಸುವಂತ ಗಾಢವಾದ ಕನಸು. ನೆನಪಿಗೆ ಬಂದಿತೋ ಅಥವ ನಿಜವೇ ಅನ್ನಿಸಿತೋ ಗೊತ್ತಿಲ್ಲ. ಅವಳ ಮನೆ, ಶಿವಮೊಗ್ಗದ ಪುಟ್ಟ ಮನೆ, ಪುಟ್ಟದಾದ್ದರಿಂದಲೇ ಬಟ್ಟೆಯಲ್ಲಿ ಒತ್ತಿ ಒತ್ತಿ ಒರೆಸಿದ ನೆಲದ ನೀರು ವಾಸನೆ, ಬಚ್ಚಲ ಬಳಿ ಅಂಗಳದಲ್ಲಿ ಒಗೆದು ಒಣ ಹಾಕಿದ ಉಡುಪುಗಳ ಸೋಪುನೀರು ಮಿಶ್ರಿತ ವಾಸನೆ, ಅಡುಗೆ ಮನೆಯಲ್ಲಿ ಅವಳು ಮಾಡುತ್ತಿರುವ ಅಡುಗೆಯ ವಾಸನೆ, ಸ್ಟೀಲಿನ ಪಾತ್ರೆಗಳು ಪರಸ್ಪರ ತಗುಲಿದ, ಒಲೆಯ ಮೇಲಿಟ್ಟ, ನೆಲದ ಮೇಲಿಟ್ಟ ಸದ್ದುಗಳು. ಮೂಲೆಯಲ್ಲಿ ಸಾಲಿಡೆರ್ ಕಪ್ಪು ಬಿಳುಪು ಟಿವಿ. ಸೋಫಾದಮೇಲಿನ ಸ್ವಲ್ಪ ಜಾರಿದ ಹೊದಿಕೆ ಬೆಡ್ ಶೀಟು. ದುಂಡನೆ ಬೆತ್ತದ ಕುರ್ಚಿ. ಅಂಗಳದ ತುಂಬ ಪ್ರೀತಿಯಿಂದ ಬೆಳೆಸುತ್ತಿರುವ ತೆಂಗಿನ, ಪರಂಗಿಯ, ಗೊರಟೆ ಹೂವಿನ, ಹೀರೆಯ ಸಸಿಗಳ ಕಂಪು, ನನ್ನೊಡನೆ ಮಾತಾಡುವಾಗಲೆಲ್ಲ ಉತ್ಕಂಠಿತವಾಗುತ್ತಿದ್ದ ಅವಳ ದನಿ, ಬೆಚ್ಚಗಾಗುತ್ತಿದ್ದ ಅವಳ ನೋಟ, ನನ್ನನ್ನು ಇನ್ನು ಯಾರೂ ಕರೆಯದಷ್ಟು ಮೃದುವಾದ ಅಕ್ಕರೆ ತುಂಬಿದ ಎಳೆಯದನಿಯಲ್ಲಿ ‘ಮಾವಾ ಮಾವಾ’ ಅಂತ ಮಾತು ಮಾತಿಗೆ ಕರೆದು ಮಾತನಾಡುತ್ತ, ದಿನವೆಲ್ಲ ನಡೆದದ್ದನ್ನೆಲ್ಲ ಹೇಳುತ್ತ, ಪುಟ್ಟ ಮೃದು ತೋಳುಗಳಲ್ಲಿ ಆಗಾಗ ನನ್ನ ತೋಳು ಬಳಸುತ್ತ, ಹೊಸದಾಗಿ ಕಲಿತ ಹಾಡು ಹಾಡಿ ತೋರುತ್ತ, ಚಿಗರೆ ಹಾಗೆ ಚಿಮ್ಮಿ ಓಡಿಬಂದು ನನ್ನ ಕೈಹಿಡಿದು ನನ್ನ ಕೈಹಿಡಿದು ಮನೆಗೆ ಕರೆಯುತ್ತ, ನನ್ನ ಪುಟ್ಟ ಮಗಳೇ ಎಂಬಂತೆ ಪ್ರೀತಿಯನ್ನು ತೋರುತ್ತಿದ್ದ ಅವಳ ಮಗಳು.
ಕನಸೋ ಎಚ್ಚರವೋ. ಅವಳ ಮನೆಯಂಗಳದಲ್ಲಿ ಬೆಳದಿಂಗಳಿತ್ತು. ಮೆಟ್ಟಿಲ ಮೇಲೆ ಚಂದ್ರ ಮತ್ತು ಅವಳು ಮಾತನಾಡುತ್ತ ಕೂತಿದ್ದರು. ನಾನು ಬಂದೆ. ಉಣುಗೋಲು ತೆಗೆದೆ. ದುಂಡನೆಯ ಬೆತ್ತದ ಕುರ್ಚಿಯ ಮೇಲೆ ಕುಳಿತೆ. ಟಿವಿಯಲ್ಲಿ ಚಿತ್ರಗೀತೆ ಬರುತ್ತಿತ್ತು. ಮಗಳು ಲೆಕ್ಕ ಮಾಡುತ್ತಿದ್ದಳು. ತುಂಬ ಸಂತೋಷದಿಂದ ಮಾತನಾಡಿದೆವು. ಚಂದ್ರಳಿಗೆ ತಿಳಿಯದಂತೆ ಅವಳು ನನ್ನಬಳಿ ಬಂದು ತುಟಿಗಳ ಮೇಲೆ ಒದ್ದೆಯ ತೇವದ ಬೆಚ್ಚನೆಯ ಒತ್ತು ಮುತ್ತು ಕೊಟ್ಟಳು. ನನ್ನ ಎದೆಯಮೇಲೆ ಹಿತವಾದ ಮೃದು ಭಾರ.
ನೆನಪಿನಲ್ಲಿ ಉಳಿಯುವ ಈ ಇನ್ನೊಂದು ಕನಸನ್ನು ಜೋಪಾನ ಮಾಡಿಕೊಂಡು ಕನ್ಯಾಕುಮಾರಿಗೆ ಹೋದೆ. ಒಂದು ದಿನವೂ ಉಳಿಯದೆ ಇದು ನಾನು ಬಯಸಿದ ಕನ್ಯಾಕುಮಾರಿಯಲ್ಲ ಎಂದು ಹಿಂದಿರುಗಿಬಿಟ್ಟೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿ. ಸಿಟಿ ಮಾರ್ಕೆಟ್ಟಿನ ಬಳಿ ಫುಟ್ ಪಾತಿನ ಮೇಲೆ ಇರುವಂಥ ಅಸಂಖ್ಯಾತ ಡಬ್ಬದಂಗಡಿಗಳು; ವ್ಯಾಪಾರಕ್ಕಿಟ್ಟ ವಿವೇಕಾನಂದ; ಸಮುದ್ರಭಯವನ್ನೂ ಹುಟ್ಟಿಸದೆ, ನೋವೂ ಕೊಡದೆ, ಪ್ರೀತಿಯನ್ನೂ ಮೂಡಿಸದೆ ಯಾರದೋ ಪಿಕ್ನಿಕ್ಕಿನಲ್ಲಿ ಅನಾಹ್ವಾನಿತನಾಗಿ ಇಲ್ಲಿಗೇಕೆ ಬಂದೆ ಅಂತನ್ನಿಸಿ ತಟ್ಟನೆ ಹಿಂದಿರುಗಿಬಿಟ್ಟೆ.
ಆತ್ಮಾನಂದ ನನಗೆ ಒಬ್ಬ ಗುರುವಾದ. ಕನ್ನಡ ಇಂಗ್ಲಿಷು ಹಿಂದಿಯನ್ನೆಲ್ಲ ಒಂದೇ ಭಾಷೆಯೆಂಬಂತೆ ಬೆರೆಸಿ ಸಹಜವಾಗಿಮಾತನಾಡುವ, ಮನಸ್ಸು ತುಂಬಿದ್ದಾಗ ಹಾರ್ಮೋನಿಯಂ ಹಿಡಿದು, ತಲೆ ಎತ್ತಿ, ಕಣ್ಣು ಅರ್ಧಮುಚ್ಚಿ, ಮನಸ್ಸನ್ನೇ ಹಾಡಾಗಿಸಿಬಿಡುವ, ಯಂತ್ರಗಳ ಭಾಷೆಯನ್ನು ಯಂತ್ರಗಳಿಗಿಂತ ಚೆನ್ನಾಗಿ ಬಲ್ಲ, ತೆಳ್ಳನೆಯ ಮೈಯ, ತಾನೇ ಉದುರಿಸಿಕೊಂಡ ಮುಂದಿನೆರಡು ಹಲ್ಲುಗಳನ್ನು ಕಟ್ಟಿಸಿಕೊಂಡು ಬೇಕೆಂದಂತೆ ಅವನ್ನು ನಾಲಗೆಯಿಂದ ಹೊರದಬ್ಬಿ ಒಳಗೆ ನುಂಗಿ ತಮಾಷೆ ಮಾಡುವ, ಕಪ್ಪು ದಟ್ಟ ಉದ್ದ ಕೂದಲ, ಗಡ್ಡದ ಹಳದಿ ಉಡುಗೆಯ ಯುವ ಬ್ರಹ್ಮಚಾರಿ ಪರಿಣಿತ. ಮೂರು ದಿನ ನಾಲ್ಕುದಿನ ನಿದ್ದೆಯಿಲ್ಲದೆ, ಊಟ ನೀರು ಏನೂ ಬಯಸದೆ ಸುಮ್ಮನೆ ದುಡಿಯುತ್ತಲೇ ಇರುವ ಅಥವ ನಾಲ್ಕುದಿನ ಮೈಮೇಲೆ ಎಚ್ಚರವೇ ಇಲ್ಲದೆ ಮಲಗಿಬಿಡುವ ಮನುಷ್ಯ, ಆಶ್ರಮದ ಯಾವ ಹಿರಿಯನನ್ನೂ ಅವನ ವರ್ತನೆ ಹಿಡಿಸದಿದ್ದರೆ ಮುಲಾಜಿಲ್ಲದೆ ಟೀಕಿಸುತ್ತಿದ್ದ. ಯಾರಾದರೂ ಭಯವಾಗುವುದಿಲ್ಲವೇ ಅಂದರೆ “ಮನೆಯನ್ನೇ ಬಿಟ್ಟುಬಂದವನಿಗೆ ಆಶ್ರಮ ಬಿಟ್ಟು ಹೋಗುವುದಕ್ಕೆ ಎಂಥ ಭಯ?” ಅನ್ನುತ್ತಿದ್ದ.
“ನೀನು ಸುಮ್ಮನೆ ಪ್ರಸ್ಸಿನಲ್ಲಿ ಯಾಕೆ ಫೂಫು ತಿದ್ದುತ್ತ ಕೂಡುತ್ತೀ? ನನ್ನ ಜೊತೆ ಬಾ. ನಿನಗೆ ಕಂಪ್ಯೂಟರ್ ಕಲಿಸುತ್ತೇನೆ.” ಅಂದ. ಹ್ಞೂಂ ಅಂದೆ. ಪ್ರಸ್ಸಿನ ದೇವಾನಂದರೂ ಕೃಷ್ಣಾನಂದರೂ ಒಪ್ಪಿದರು. ಕಂಪ್ಯೂಟರ್ ರೂಮಿಗೆ ಬಂದೆ.
ಮುಂದುವರೆಯುವುದು
ಕೀಲಿಕರಣ: ಸೀತಾಶೇಖರ್
ಮತ್ತೆ ಬರವಣಿಗೆಯ ಎರಡನೆಯ ದಿನ ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ […]
ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ […]
ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […]
ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ
ಟಿಪ್ಪಣಿ *
ಹೆಸರು *
ಮಿಂಚೆ *
ಜಾಲತಾಣ
ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ.
This site uses Akismet to reduce spam. Learn how your comment data is processed.
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…