CoolCoder44's picture
Upload folder using huggingface_hub
94fcbe1 verified
raw
history blame
34.9 kB
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ನಾನಾ ಚೌಕದ ಬಳಿ, ನೀಲಿ ಗುಲಾಬಿ ನೇರಳೆಯಾಗಿ ಕಿರು ಬಿಸಿಲಿಗೆ ಮಿನುಗುತ್ತಿರುವ ಬೃಹತ್ ಮರ್ಫಿ ಬೇಬಿಯ ಪೋಸ್ಟರಿನ ಕೆಳಗೆ ಅದರ ಕಂಬಿಗಳನ್ನು ಹಿಡಿದು ಪುಟ್ಟಗೊಂಬೆಯಂತೆ ನಿಂತಿದ್ದ ರೂಪಕ್ ರಾಥೋಡನಿಗೆ ಸಟಸಟ ಎಲ್ಲ ಹೊಳೆದುಹೋಯಿತು. ಹೌದು, ಪಾರ್ಟನರ್‌ನ ನಡತೆ ಶತ ಸುಳ್ಳು. ಅವನಿಗೆ ಖಂಡಿತ ಯಾವುದೋ ಒಂದು ಭರ್ಜರಿ ನೌಕರಿ ಸಿಕ್ಕಿದೆ. ಕೈತುಂಬ ಸಂಬಳ ಬಂದಿದೆ. ಆದರೆ ಆ ವೈಭವ, ಸಂತಸವನ್ನು ಈ ಜುಜುಬಿ ಹಂಗಾಮಿ ಕಾರ್ಮಿಕನಾದ ನನ್ನೆದುರು ಆತ ಆಡಿ ತೋರಿಸಲಾರ. ಅಂತೆಯೇ ಸುಳ್ಳುಸುಳ್ಳೇ ಜೋಲು ಮೋರೆ ಹಾಕಿಕೊಂಡು ಬರುತ್ತಾನೆ. ಮೆಲ್ಲಗೆ ನನ್ನ ಕಣ್ಣುಗಳಿಂದ ತಪ್ಪಿಸಿಕೊಂಡು ತನ್ನದೇ ಒಂದು ಹೊಸ ಅಂತಸ್ತಿಗೆ ತೀರ ಏಕಾಂಗಿಯಾಗಿ, ಸದ್ದಿಲ್ಲದೆ, ಕಿಂಚಿತ್ತೂ ಸುಳಿವು ಕೊಡದೆ ತೇರ್ಗಡೆ ಹೊಂದುತ್ತಿದ್ದಾನೆ.
ಹಠಾತ್ತನೆ ಹೊಳೆದುಹೋದ ಈ ಸಂಗತಿಯಿಂದ ರೂಪಕ್ ರಾಥೋಡ್ ಹಾಯುವ ವಾಹನಗಳಿಂದ ಸುತ್ತುವರೆದ ಆ ಡಿವೈಡರಿನ ಬಿಂದುವಿನಲ್ಲಿ ಇದ್ದಲ್ಲೆ ಉತ್ತೇಜಿತನಾದ. ಒಂದು ಬಗೆಯ ಅರೆಬರೆ ನಿರುದ್ಯೋಗ ಪರ್ವವನ್ನೆ ಕಳೆದ ಒಂದು ವರುಷದಿಂದ ಜತೆಯಾಗಿ ಅನುಭವಿಸಿ, ಹತ್ತು ಚದುರಡಿಯ ಬಾಡಿಗೆ ಕೋಣೆಯನ್ನು ಹಂಚಿಕೊಂಡು ಬಂದಿರುವ ರೂಂಮೇಟ್ ಅಥವಾ ಪಾರ್ಟನರ್, ರೂಪಕನಿಗಿಂತ ಐದಾರು ವರುಷ ದೊಡ್ಡವನೇ ಇದ್ದಾನು. ಆದರೆ ಕೀಚಲು ದನಿಯಿಂದಾಗಿ ಎಳೆಯನೆಂಬ ಭ್ರಾಂತು ಹುಟ್ಟಿಸುತ್ತಾನೆ. ತನ್ನ ಊರು, ಕಸುಬು ಯಾವುದರ ಬಗ್ಗೂ ಏನನ್ನೂ ಆಡದ ಆತ ರೂಪಕನನ್ನೂ ಆ ಕುರಿತು ಕೇಳಿಲ್ಲ. ಅರೆಬರೆ ನೌಕರಿ, ಒಪ್ಪತ್ತು ಊಟ, ಒಂದಿಷ್ಟು ಸ್ಪಷ್ಟ ಸುಂದರ ಹಸಿ ಸುಳ್ಳು ಮತ್ತು ಪಬ್ಲಿಕ್‌ಪಾರ್ಕಿನ ಗೋಡೆಯ ಮೇಲೆ ಉಳಿದಿರುವ ಹರಿದ ಪೋಸ್ಟರುಗಳಂಥ ಕಾಮನೆಗಳು… ಹೀಗೆ ಇಬ್ಬರ ದಿನಚರಿಗಳಲ್ಲಿ ಅಂಥ ವ್ಯತ್ಯಾಸ, ಗುಟ್ಟು, ನಿಗೂಢಗಳು ಇರಲಿಲ್ಲ. ಹಣದ ಕೊಡುಕೊಳದ ಪ್ರಶ್ನೆ ಇರಲಿಲ್ಲ. ಯಾಕೆಂದರೆ ಹಣವೇ ಇರುತ್ತಿರಲಿಲ್ಲ. ಹೀಗೆ ಮಾತಿನ ಭಾರವಿಲ್ಲದ ಹಗುರಾಗಿದ್ದ ಪಾರ್ಟನರ್ ಯಾಕೋ ಒಂದು ವಾರದಿಂದ ಬಿಗಿಯಾಗಿಬಿಟ್ಟಿದ್ದಾನೆ. ಸೂಟ್‌ಕೇಸಿಗೆ ಪುಟ್ಟ ಬೀಗ ಜಡಿದಿದ್ದಾನೆ. ಏನೋ ನೋವಿದ್ದವನಂತೆ ನಟಿಸುತ್ತಾನೆ. ಸಂಬಳ ಎಷ್ಟು ಅಂತ ತಪ್ಪಿಯೂ ಹೇಳಿಲ್ಲ. ಅಲ್ಲಿಗಲ್ಲಿಗೆ ಆಗುತ್ತದೆ ಅಂತಾನೆ. “ಊಟಕ್ಕೆ ನೀನು ಹೋಗಿ ಬಾ, ನನಗೀಗ ಹಸಿವಿಲ್ಲ”- ಎಂದು ತನ್ನನ್ನು ಮೊದಲು ಕಳಿಸಿ, ನಂತರ ತುಂಬ ತಡವಾಗಿ, ಅಂದರೆ ಚೌಪಾಟಿ ಸಮುದ್ರತೀರದ ಕಾಲ ಖಟ್ಟಾ ಶರಬತ್ತಿನ ತಳ್ಳುಗಾಡಿಗಳು ತಮ್ಮ ವ್ಯಾಪಾರ ಮುಗಿಸಿ ಮನೆಗೆ ಮರಳುವ ಅಪರಾತ್ರಿಗೆ- ಒಬ್ಬನೇ ಹೋಗಿ ಬೇಕಾದುದನ್ನೆಲ್ಲ ತಿಂದು ಪಾನ್ ಮೆಲ್ಲುತ್ತ ಬಂದು ಮಲಗುತ್ತಾನೆ. ಸ್ನಾನದ ಸಾಬೂನಿನಲ್ಲೆ ಗಡ್ಡ ಹೆರೆದುಕೊಳ್ಳುತ್ತಿದ್ದನಲ್ಲ, ಈಗ ಕ್ರೀಮ್ ಸಾಬೂನಿನ ಟ್ಯೂಬನ್ನು ತಂದಿದ್ದಾನೆ. ಗಡ್ಡ-ಸ್ನಾನ ಮುಗಿಸಿ ಪಚ ಪಚ ಅಂತ ಮುಖಕ್ಕೆ ನಾಜೂಕಾಗಿ ಎಸೆದುಕೊಳ್ಳುವ ಪರಿಮಳಭರಿತ ಲೋಶನ್ ತಂದಿದ್ದಾನೆ. ಬೇಕಿದ್ದರೆ ನೀನೂ ಹಚ್ಚಿಕೋ. ಬೇಕಿದ್ದರೆ ನೀನೂ ಬಳಸು. ಹೀಗೆ ಹೇಳುತ್ತಾನೆ ಹೊರತು- ತಗೋ ನೀನೂ ಹಚ್ಚು ಎಂದು ಹೇಳುವುದಿಲ್ಲ.
ಹೌದು ಪಾರ್ಟನರ್‌ನ ಜಗತ್ತು ಬದಲಾಗುತ್ತಿದೆ. ಹೊಸದೊಂದು ಉಪಗ್ರಹಕ್ಕೆ ಉಡ್ಡಾಣಗೈಯ್ಯಲು ಆಯಲ್ಪಟ್ಟವನಂತೆ ಅವನು ಕಂಗೆಟ್ಟಿದ್ದಾನೆ. ಅವನ ಮಾತುಗಳು ಹೊಸ ವೇಷಗಳಿಗಾಗಿ ತಡಕಾಡುತ್ತಿವೆ. ತನ್ನೊಡನೆ ಮೊದಲಿನಂತೆ “ತೇರೆಕು, ಮೇರೆಕು, ಅಬೇ ಸೋಜಾ, ತೇರಿ ಮಾಕಿ…” ಎಂದೆಲ್ಲ ಮಾತಾಡಿದರೆ ಹೊಸ ಭೂಮಿಕೆ ಹಾಳಾಗಿ ಹೋಗುತ್ತದೆ ಎಂಬ ಭಯ ಆತನಿಗೆ. ರೂಪಕನಿಗೆ ಏಕ್‌ದಂ ಪಾರ್ಟನರ್‌ನ ಸಂಕಟ ಅರ್ಥವಾಗತೊಡಗಿತು. ಈಗಷ್ಟೆ ಅರ್ಧಗಂಟೆಯ ಮುನ್ನ ನಡೆದಿದ್ದ ಸನ್ನಿವೇಶ ಈಗ ಬೇರೆಯದೇ ಆಗಿ ತೋರತೊಡಗಿತು.
ಸಾಮಾನ್ಯವಾಗಿ ಒಂದು ಶರ್ಟನ್ನು ಮೂರ್ನಾಲ್ಕು ದಿನ, ಪ್ಯಾಂಟನ್ನು ಒಂದು ವಾರ- ಹೀಗೆ ಹಾಕಿಕೊಳ್ಳುತ್ತಿದ್ದ ಆತ ಈವತ್ತು ಸ್ನಾನ ಮುಗಿಸಿ ಬಂದವನೇ, ನಿನ್ನೆ ಹಾಕಿದ್ದ ಶರ್ಟು ಪ್ಯಾಂಟುಗಳನ್ನು ಮೂಲೆಗೆಸೆದು- ಟೈಮ್ಸ್ ಆಫ್ ಇಂಡಿಯಾದ ಹಾಳೆಯಲ್ಲಿ ನೂಲು ಹಾಕಿ ಕಟ್ಟಿಟ್ಟಿದ್ದ ಇಸ್ತ್ರಿಯ ಹೊಸ ಬಟ್ಟೆ ತೆಗೆದು ಹಾಕಿಕೊಂಡ. ರೂಪಕ ‘ಏನಪ್ಪಾ ಏನ್ ಕಥೆ’ ಎಂಬಂತೆ ನೋಡಿದಾಗ, ಹೊಸ ಆವೇಶ ಬಂದವನಂತೆ “ಅರೆ, ಇಲ್ಲೇ ಇಟ್ಟಿದ್ದೆ, ವಾಚು ಎಲ್ಲಿ ಹೋಯಿತು?” ಎಂದು ದೊಡ್ಡದಾಗಿ ಹುಡುಕಲಾರಂಭಿಸಿದ. ಆತ ತನ್ನ ಮೇಲೆ ಬಿಲ್‌ಕುಲ್ ಅನುಮಾನ ಪಡುತ್ತಿಲ್ಲ ಎಂಬುದು ಖಚಿತವಿದ್ದರೂ- ಅವನು ಹೀಗೆ ಹುಯಿಲೆಬ್ಬಿಸಿ ಹುಡುಕುವ ರೀತಿಯಿಂದ ವಿಚಿತ್ರ ಸಂಕಟಪಟ್ಟ ರೂಪಕ ತಾನೂ ಅಲ್ಲಿ ಇಲ್ಲಿ ಹುಡುಕಹತ್ತಿದಾಗ “ನೀನ್ಯಾಕೆ ಹುಡುಕ್ತಾ ಇದ್ದೀ? ಇಟ್ಟಿದ್ದು ನಾನು, ಡ್ಯೂಟಿ ಮುಗಿಸಿ ಬಂದಿದ್ದಿ. ನಿನಗೆ ತೊಂದ್ರೆ ಆಗ್ತಾ ಇದೆ ಅಂತ ಗೊತ್ತು. ಮಲಗು. ಮಲಗು. ವಾಚು. ಹೊಸ ವಾಚು. ಛೆ”- ಎಂದು ಮಂಚದ ಕೆಳಗೂ ಕೂತು, ಅಲ್ಲಿದ್ದ ರದ್ದಿಯನ್ನೆಲ್ಲ ಎಳೆದು ಜಾಲಾಡತೊಡಗಿದ. ಅತ್ತ ಸಲಿಗೆಯೂ ಇರುಸುಮುರುಸಿನಲ್ಲಿ ಕಂಗೆಟ್ಟ ರೂಪಕ ಸೂಕ್ಷ್ಮ ಅವಮಾನವನ್ನು ತಾಳಲಾರದೆ “ಹೊಸಾ ವಾಚಾಗಿದ್ರೆ ಯಾಕೆ ಅಲ್ಲಿ ಇಲ್ಲಿ ಇಡ್ತೀ? ನಿನ್ನ ವಿ‌ಐಪಿ ಸೂಟ್‌ಕೇಸಿನಲ್ಲಿ ಇಡಬೇಕಿತ್ತು”- ಎಂದು ಗೊಣಗಿದ. ಅದಕ್ಕೆ ಪಾರ್ಟನರ್ ಎರಡೂ ಕೈ ಮೇಲೆತ್ತಿ ರಪ್ಪೆಂದು ಮುಗಿದು “ಅಬ್ಬ! ಸೊರೀ…” ಎಂದು ಬೂಟು ಹಾಕಿಕೊಂಡು, ಬಾಗಿಲೆಳೆದುಕೊಂಡೂ ಹೋಗೇಬಿಟ್ಟ.
ಕೋಣೆಯಲ್ಲಿ ಕವಿದ ಮೂರ್ಖ ನಿಶ್ಶಬ್ದವನ್ನು ತಡೆಯಲಾಗದೆ, ಕೆಲ ಸಮಯದ ನಂತರ ಹೊರಬಿದ್ದು ಬಂದ ರೂಪಕನಿಗೆ ಹಾಯುವ ವಾಹನಗಳೆದುರು ಈ ಡಿಪ್ರೆಸರಿನಲ್ಲಿ ನಿಂತು ನೆನೆಸಿಕೊಂಡಾಗ ಪಾರ್ಟನರ್‌ನ ಎಲ್ಲ ಚಹರೆಗಳೂ ಹಾಸ್ಯಾಸ್ಪದವೂ ದಯನೀಯವೂ ಆಗಿ ತೋರತೊಡಗಿದವು. ಮೊನ್ನೆಯೇ ಹೊಸ ಹ್ಯಾಂಗರುಗಳನ್ನು ಪಾರ್ಟನರ್ ತಂದಿದ್ದ. ಕೋಣೆ ತುಂಬ ಅವ ಸುಳಿದಾಡಿದಲ್ಲೆಲ್ಲ ಒಂದು ಪರಿಮಳ ನಿಲ್ಲುತ್ತಿತ್ತು. ಮತ್ತು ಯಸ್, ಬೆಳ್ಳನೆ ಹೊಸ ಹವಾಯಿ ಚಪ್ಪಲ್. ರೂಪಕನ ಬಳಿ ಇಲ್ಲದ ಯಾವ ಹೊಸ ವಸ್ತುವನ್ನು ತರಲೂ ಪಾರ್ಟನರ್‌ಗೆ ವಿಚಿತ್ರ ಅಳುಕು. ಹೀಗಾಗಿ ಆ ಅಳುಕನ್ನು ಮೆಟ್ಟಿ ನಿಲ್ಲುವಂಥ ಮುಳ್ಳು ಠೇಂಕಾರ ಆ ಹವಾಯಿ ಚಪ್ಪಲಂತೂ ಈ ಪುಟ್ಟ ಕೋಣೆಯಲ್ಲಿ ಹಲ್‌ಚಲ್ ಎಬ್ಬಿಸಿಬಿಟ್ಟಿತು. ಕೋಣೆ ತುಂಬ ಅದನ್ನು ಹಾಕಿ ತಿರುಗುವ ಪಾರ್ಟನರ್, ಮೂಲೆಯ ಮೋರಿಯಲ್ಲಿ ಕೈಕಾಲು ತೊಳೆಯುವಾಗ ಅಥವ ನಡುನಿದ್ರೆಯಲ್ಲಿ ಮೂತ್ರ ಹೊಯ್ಯುವಾಗ ಅದನ್ನು ಹಾಕುತ್ತಾನೆ. ಒದ್ದೆಯಾದಾಗ ಅದು ಹೆಚ್ಚು ದಪ್ಪನೆಯ ಟಪ್ ಟಪ್ ಸದ್ದನ್ನು ಹೊರಡಿಸುತ್ತದೆ. ಹೀಗೆ ಇದ್ದ ಪುಟ್ಟ ಕೋಣೆಯಲ್ಲೂ, ತನ್ನ ಜಗತ್ತನ್ನು ಕಿರಿದುಗೊಳಿಸಲು ಪಾರ್ಟನರ್ ನಡೆಸುತ್ತಿರುವ ಘೋರ ಪ್ರಯತ್ನ ಮತ್ತು ಪಡುತ್ತಿರುವ ಸಂಕಟ ಎರಡೂ ಅಸಂಗತವಾಗಿ ರೂಪಕನಿಗೆ ತೋರತೊಡಗಿದವು. ನಿಷ್ಕಾರಣವಾಗಿ ಆತ ಪಡುತ್ತಿರುವ ಒತ್ತಡಕ್ಕೆ ಅಯ್ಯೋ ಅನಿಸಿತು. ಜಾಸ್ತಿ ಕಸಕಸಿ ಮಾಡಿಕೊಳ್ಳದೇ, ಎಣಿಸಿದ್ದಕ್ಕಿಂತ ಸುಲಭವಾಗಿ ಪಾರ್ಟನರ್‌ಗೆ ಸ್ವಾತಂತ್ರ್ಯ ಕೊಟ್ಟು, ಅವನ ಆ ಕೋಣೆಯಿಂದ ಹೊರಬಿದ್ದು ಹೋಗುವುದೇ ವಿಹಿತ ಅಂದುಕೊಂಡ. ಈವತ್ತೇ ಸಂಜೆ, ಆತ ಕೆಲಸದಿಂದ ಮರಳಿದ್ದೇ, ಅವನೆದುರು ಸಹಜವಾಗಿ, ರೂಮು ಬಿಡುತ್ತೇನೆಂದು ಹೇಳಿಬಿಡುವುದು ಎಂದು ನಿರ್ಧರಿಸಿಬಿಟ್ಟ.
ಡಿವೈಡರಿನಿಂದ ಇಳಿದು ರಸ್ತೆ ದಾಟಿದ ರೂಪಕ ಎಂದಿನ ಗುಡ್‌ಲಕ್ ಕಿರಾಣಿ ಅಂಗಡಿಯಲ್ಲಿ ಕೂತು ಮಸ್ಕಾಪಾವ್ ಮತ್ತು ಎರಡು ಕಪ್ ಚಹಾ ಕುಡಿದು ಬೆಕಲ್‌ವಾಡಿಯ ಕೋಣೆಯತ್ತ ಹೊರಟ. ದಾರಿಯಲ್ಲಿ ಕೆನಡೀ ಬ್ರಿಜ್ಜಿನಲ್ಲಿ ಎರಡು ಕ್ಷಣ ನಿಂತು ಕೆಳಗೆ ಹಾಯುವ ಪೀಕ್ ಅವರ್ ಲೋಕಲ್‌ಗಳನ್ನು ಮತ್ತು ಪಕ್ಕದ ಕಟ್ಟಡದಲ್ಲಿನ ಮೊದಲ ಮಜಲಿನ ಪೀಕ್ ಅವರ್ ಅಲ್ಲದ ನಾಚ್‌ವಾಲೀಗಳ ಕೋಣೆಗಳನ್ನು ನೋಡಿದ. ವಿಶಿಷ್ಟ ತಿಳಿಗುಲಾಬಿ ಬಣ್ಣದ ಪರದೆಗಳು, ಪುಟ್ಟ ಪುಟ್ಟ ರೇಶಿಮೆ ಹೊದಿಕೆಯ ಗೋಲ ದಿಂಬುಗಳು, ಕಸೂತಿಯ ಬಟ್ಟೆ ಹೊದಿಸಿಟ್ಟ ತಬಲಾ, ಹಸ್ತಿದಂತದ ಕುಸುರಿ ಕೆತ್ತನೆಯ ಸಾರಂಗಿ… ಎಲ್ಲವೂ ಈಗ ಹಾಡುಹಗಲಲ್ಲಿ ಹಾಳು ಸುರಿಯುತ್ತಿವೆ. ಯಾರೋ ಕಸ ಹೊಡೆಯುತ್ತಿರಬೇಕು ಅಲ್ಲಿ, ಏಕೆಂದರೆ ಬಿಸಿಲ ಕೋಲುಗಳು ಪ್ರಖರಗೊಳ್ಳುತ್ತಿವೆ. ಕೆಳಗೆ ಬೀದಿಯಲ್ಲಿ ಕೆಲ ಹೆಂಗಸರು ಆಮ್ಲೆಟ್ ಗಾಡಿಯವನ ಚೌಕಾಶಿ ಮಾಡುತ್ತಿದ್ದಾರೆ. ಇಬ್ಬರು ಪರಸ್ಪರ ಹೇನು ಹೆಕ್ಕುತ್ತ ಮೆಟ್ಟಿಲಲ್ಲಿ ಕುಳಿತಿದ್ದಾರೆ. ಇವರೇ ರಾತ್ರಿ ಅಲ್ಲಿ ತುಟಿಗೆ ಗುಲಾಬಿ ಮೆತ್ತಿಕೊಂಡು ಕುಣಿಯುತ್ತಾರೆ. ಪಾರ್ಟನರ್ ಮತ್ತು ರೂಪಕ ಎಷ್ಟೋ ಬಾರಿ ರಾತ್ರಿ ಇಲ್ಲಿ ಅಡ್ಡಾಡಲು ಬಂದು ಈ ಬ್ರಿಜ್ಜಿನ ಮೇಲೆ, ಆ ಗುಲಾಬಿ ಪರದೆಗಳು ಮುಚ್ಚಿದ ಕಿಟಕಿಗಳನ್ನೇ ನೋಡುತ್ತ ನಿಂತಿದ್ದಿದೆ. ಪಾಕೀಜಾ, ಮುಕದ್ದರ್ ಕಾ ಸಿಕಂದರ್, ಉಮ್ರಾವ್ ಜಾನ್‌ಗಳ ಹಾಡುಗಳ ತುಣುಕುಗಳು ಅಲ್ಲಿಂದ ಕೇಳಿ ಬರುತ್ತಿರುವಾಗ ಪಾರ್ಟನರ್… “ಅಲ್ಲಿ ಹೋಗೋದಕ್ಕೆ ಕಿಸೇಲಿ ಮಾಲ್ ಬೇಕು ರೂಪಕಾ… ಈಗ ಇಲ್ಲಿಂದಲೇ ಕೇಳೋಣ”- ಅಂತಿದ್ದ. ನಂತರ ಅವನಿಗಷ್ಟೆ ಏನೋ ಕಾಣುತ್ತಿದೆ ಎಂಬಂತೆ ಜತೆಗಿದ್ದ ತನ್ನನ್ನೂ ಮರೆತವನಂತೆ ಪೂರ್ಣ ತಲ್ಲೀನನಾಗಿ ಆ ಪರದೆ ಮುಚ್ಚಿದ ಗುಲಾಬಿ ಕಿಟಕಿಗಳನ್ನೇ ನೋಡುತ್ತಿದ್ದ. ಇವರು ನಿಂತಿದ್ದು ನೋಡಿದ ಕೆಲವರು ತಾವೂ ನಿಂತು ನೋಡುತ್ತಿದ್ದರು. ಏನೂ ಕಾಣುತ್ತಿರಲಿಲ್ಲ. ಆದರೆ ಎಲ್ಲರೂ ಏನೇನನ್ನೋ ಊಹಿಸಿಕೊಂಡು ನೋಡುತ್ತಿದ್ದರು. ಹಾಡುಗಳ ಚೂರು ಪಾರು ಸೊಲ್ಲಿಗೆ ಕಿವಿ ನಿಮಿರಿಸಿ ಕಣ್ಣು ನೆಟ್ಟು ಹಾಗೇ ಮತಿಭ್ರಷ್ಟರಂತೆ ನಿಲ್ಲುತ್ತಿದ್ದರು. ಈಗ ಎಲ್ಲ ಬೇರೆ ತೋರುತ್ತಿದೆ. ಆದರೆ ಜನ ಬೇರೆಯದೇ ಜಾಗದಲ್ಲಿರುವಂತೆ ಅಂಥದೇನೂ ಖಚಿತ ರೂಪವಿಲ್ಲದ ತಮ್ಮಿಬ್ಬರ ನಂಟಿನಂತೆ.
ಮರಳುತ್ತಿದ್ದಂತೆ ಕೋಣೆಯ ಬಾಗಿಲು ತೆಗೆದೇ ಇದ್ದುದು ಕಂಡು ಬೆಚ್ಚಿಬಿದ್ದ. ಓಡುತ್ತ ಒಳಹೊಕ್ಕರೆ ಅಲ್ಲಿ ಹಾಕಿಕೊಂಡಿದ್ದ ಇಸ್ತ್ರಿ ಉಡುಪಿನಲ್ಲೆ ಪಾರ್ಟನರ್ ಹಾಸಿಗೆಯ ಹೊಟ್ಟೆ ಅವಚಿಕೊಂಡು ಬಿದ್ದಿದ್ದಾನೆ. “ಅರೇ… ಏನಾಯ್ತು?” ಎಂದು ಗಾಬರಿಯಿಂದ ಸಮೀಪಿಸಿದ ರೂಪಕನನ್ನು ನೋಡಿ “ಬೇಡಾ, ಮುಟ್ಟಬೇಡಾ. ಹೊಟ್ಟೆ ಭಯಂಕರ ನೋಯ್ತಾ ಇದೆ” ಎಂದು ಕೂಗತೊಡಗಿದ. ಅವನ ಮುಖ ಬಿಳಿಚಿಕೊಂಡಿತ್ತು. ಧಾರಾಕಾರ ಬೆವರುತ್ತಿದ್ದ. ಅಕ್ಕಪಕ್ಕದವರು ಇಬ್ಬರು ಬಂದು ತಕ್ಷಣ “ಡಾಕ್ಟರ್ ಬಳಿ ಒಯ್ಯಿರಿ ಎಂದು ಅವಸರ ಮಾಡಿದ್ದೇ ಒಂದು ಟ್ಯಾಕ್ಸಿ ತಂದು ಅದರಲ್ಲಿ ಕೂರಿಸಿ ಭಾಟಿಯಾ ಆಸ್ಪತ್ರೆಗೆ ಒಯ್ದು ಓ.ಪಿ.ಡಿ.ಯಲ್ಲಿ ಚೀಟಿ ಮಾಡಿಸಿ ತರುವಷ್ಟರಲ್ಲಿ ಬೆಂಚಿನಲ್ಲಿ ಕೂತಲ್ಲೇ ಪಾರ್ಟನರ್ ಗಳಗಳ ಅಳಲಾರಂಭಿಸಿದ. “ಏಯ್, ಹೆದ್ರಬೇಡಾ. ಏನೂ ಆಗೋದಿಲ್ಲ” ಎಂದು ರೂಪಕ ಸಂತೈಸಿದ್ದೇ ಕೈ ಹಿಡಿದುಕೊಂಡು, ತನ್ನ ಕಿಸೆಯಿಂದ ಒಂದಿಷ್ಟು ಹಣ ತೆಗೆದು ಕೊಟ್ಟ. “ಇರಲಿ ಬಿಡೋ ಮಾರಾಯ. ಅದೆಲ್ಲ ನಂತರ ನೋಡಿದರಾಯ್ತು…” ಎಂದು ಬಾಯಲ್ಲಿ ಹೇಳುತ್ತಿದ್ದರೂ, ಖರ್ಚು ಎಷ್ಟು ಆದೀತೋ ಎಂಬ ಅಂದಾಜಿರದ ಭಯದಲ್ಲಿ ರೂಪಕ ಹಣವನ್ನು ತಕ್ಷಣ ತನ್ನ ಕೈಲಿ ಭದ್ರವಾಗಿ ತೆಗೆದುಕೊಂಡು ಅದರ ಕಡೆ ನೋಡುವ ಧೈರ್ಯವಾಗದೆ ಖಾಲಿ ಕಿಸೆಯಲ್ಲಿಟ್ಟ. ಗಾಲಿ ಖುರ್ಚಿಯಲ್ಲಿ ಕೂತು ಮುಂದೆ ಮುಂದೆ ಸಾಗಿದ ಪಾರ್ಟನರ್‌ನನ್ನು ಹಿಂಬಾಲಿಸಬೇಕೋ ಬೇಡವೋ ತಿಳಿಯದೆ ನಿಂತುಬಿಟ್ಟ. ತಳ್ಳುತ್ತಿದ್ದ ನರ್ಸ್ ಹಿಂತಿರುಗಿ ‘ಬನ್ನಿ’ ಎಂಬಂತೆ ಸನ್ನೆ ಮಾಡಿದಳು.
“ತೀವ್ರವಾದ ಅಪೆಂಡಿಸೈಟಿಸ್ ಆಗಿದೆ. ತಕ್ಷಣ ಆಪರೇಷನ್ ಆಗಬೇಕು” ಎಂದ ಡಾಕ್ಟರು ಯಾವುದೊ ಫಾರ್ಮಿಗೆ ಸಹಿ ಹಾಕಲು ಹೇಳಿದಾಗ ಬೆಚ್ಚಿದ. ‘ಬೇಗ ಬೇಗ’ ಎಂದು ಅವಸರಿಸಿದ ಡಾಕ್ಟರು ರೂಪಕ್ ರಾಥೋಡ್- ಎಂಬ ಹೆಸರು ನೋಡಿ ‘ನೈಸ್ ನೇಮ್’ ಎಂದರು. ಗಾಲಿ ಮಂಚದಲ್ಲಿ ಮಲಗಿದ್ದ ಪಾರ್ಟನರ್ ರೂಪಕನನ್ನೇ ನೋಡುತ್ತಿದ್ದ. ನರ್ಸು ಒಂದು ಕಾಗದ ಕೊಟ್ಟು “ಇವಿಷ್ಟು ಮೆಡಿಸನ್ ತನ್ನಿ” ಎಂದಳು. ಮೆಡಿಸಿನ್ ತಗೊಂಡು ಬಂದಾಗ ಗಾಲಿ ಮಂಚ ಆಪರೇಷನ್ ಥೇಟರಿನ ಬಾಗಿಲಲ್ಲಿ ಇತ್ತು. ಚಡ್ಡಿ, ಬನಿಯನ್ನು ಎಲ್ಲವನ್ನು ಇವನ ಕೈಗೆ ಕೊಟ್ಟಳು. ಶರ್ಟಿನಲ್ಲಿದ್ದ ಕೆಲವು ಕಾಗದದ ಚೂರುಗಳು ಕೆಳಬಿದ್ದವು. ಅದನ್ನು ಹೆಕ್ಕಿಕೊಳ್ಳುವಷ್ಟರಲ್ಲಿ ಮಲಗಿದ್ದರಿಂದಲೇ ಮಂಪರುಗಣ್ಣಲ್ಲಿ ನೋಡುತ್ತಿದ್ದ ಪಾರ್ಟನರ್ “ಇಲ್ನೋಡು… ಬೋರಿವಲಿಯಲ್ಲಿ ನನ್ನ ದೂರದ ಸಂಬಂಧಿ ಇದ್ದಾರೆ. ಸ್ಟೇಷನ್ ಹೊರಗೆ ಅವರ ಝೆರಾಕ್ಸ್ ಅಂಗಡಿಯಿದೆಯಂತೆ. ನಾನೂ ನೋಡಿಲ್ಲ ಅವರನ್ನು. ನನ್ನ ತಾಯಿ ಕಡೆ ಸಂಬಂಧ. ಬಕ್ಕ ತಲೆ…” ಎಂದ. ಅವನ ಕೀಚಲು ದನಿ ಈಗ ಇನ್ನೂ ಬೆಳ್ಳಗಾಗಿತ್ತು. “ರೂಪಕ, ಆಪರೇಷನ್ ಆದ ಮೇಲೆ ಕರೆಯೋಣ ಅವರನ್ನು…” ಎಂದದ್ದೇ “ಅಲ್ಲ… ಅಲ್ಲ… ಕರೆಯೋದು ಬೇಡ. ಅವರಿಗೆ ನಾನ್ಯಾರು ಅಂತ ಗೊತ್ತಿಲ್ಲ. ನೀನು ಕರದ್ರೂ ಬರೋದಿಲ್ಲ ಅವರು. ಅದಲ್ಲ. ಆಪರೇಷನ್‌ನಲ್ಲಿ ಏನಾದರೂ ಹೆಚ್ಚುಕಡಿಮೆ ಆದರೆ… ಉಳಿದ ಹಣ. ನನ್ನ ಸಾಮಾನು ಎಲ್ಲ ಅವರಿಗೆ ತಲುಪಿಸಿಬಿಡು” ಎಂದ. ಬಾಗಿಲಲ್ಲಿ ನಿಲ್ಲಿಸಿದ ಹಸಿರು ನಿಲುವಂಗಿಯ ಡಾಕ್ಟರು ಕತ್ತಿನಲ್ಲಿದ್ದ ಚಿನ್ನದ ಚೈನು ತೆಗೆಯಲು ಹೇಳಿದರು. ನರ್ಸು ತೆಗೆಯುವಾಗ ಅದು ಅವನ ತಲೆಯಲ್ಲಿ ಸಿಕ್ಕಿಹಾಕಿಕೊಂಡಿತು. ನರ್ಸು ಮತ್ತು ಡಾಕ್ಟರು ಇಬ್ಬರೂ ಪ್ರಯಾಸಪಟ್ಟು ಅದರ ಕೊಂಡಿ ತೆಗೆದು ಚೈನನ್ನು ರೂಪಕನ ಕೈಗೆ ಕೊಟ್ಟರು. ಹಸಿರು ನಿಲುವಂಗಿಯ ಗಾಲಿ ಮಂಚ ಒಳಗೆ ಹೋಯಿತು.
ಆಪರೇಷನ್ ಮುಗಿಯುವ ತನಕ ಹೊರಗೇ ಇರಬೇಕು ಎಂದು ಹೇಳಿದ್ದರಿಂದ ಅಲ್ಲಿಯೇ ಬೆಂಚಿನ ಮೇಲೆ ಕುಳಿತ. ಪಕ್ಕದಲ್ಲಿ ಕೂತ ಹೆಂಗಸೊಬ್ಬಳು ‘ಸೀರೆ ಬಂಪರ್ ರಿಡಕ್ಷನ್ ಸೇಲ್’ನ ಹ್ಯಾಂಡ್‌ಬಿಲ್ಲನ್ನು ತದೇಕಚಿತ್ತಳಾಗಿ ನೋಡುತ್ತ ಕೂತಿದ್ದಳು. ಚೈನು ತಲೆಯಲ್ಲಿ ಸಿಕ್ಕುಬಿದ್ದಾಗ ವಿಚಿತ್ರವಾಗಿ ತಲೆ ಅಲ್ಲಾಡಿಸಿ ಮಂಪರಿನಲ್ಲಿ ನರಳಿದ ಪಾರ್ಟನರ್‌ನ ಮುಖವೇ ರೂಪಕನ ಕಣ್ಣಿಗೆ ಕವಿಯತೊಡಗಿತು. ಕಿಸೆಯಲ್ಲಿದ್ದ ಚೈನು ತೆಗೆದು ಅಂಗೈಲಿಟ್ಟು ನೋಡಿದ. ಅದು ತುಂಬ ಪುಟ್ಟದಾಗಿ ಪಾಪದ್ದಾಗಿ ತೋರಿತು. ಹೆಂಗಸು “ನನ್ನ ಅಕ್ಕನಿಗೂ ಆಪರೇಷನ್. ಬೆಳಿಗ್ಗೆನೇ ಒಯ್ದಿದ್ದಾರೆ. ಅವಳ ಕೈಬಳೆ ತೆಗೆಯೋಕೇ ಆಗಲಿಲ್ಲ. ನಂತರ ಕಟ್ ಮಾಡಿ ತೆಗೆದರು”– ಎಂದಳು. ಪಾರ್ಟನರ್ ಆಪರೇಷನ್‌ನಲ್ಲಿ ನಿಜವಾಗಲೂ ಸತ್ತುಹೋದರೆ? ಏನಿಲ್ಲ. ನಾನೇನೂ ಅವನ ಸಂಬಂಧಿಯಲ್ಲ. ಕೇವಲ ರೂಂಮೇಟು. ನನಗೆ ಏನೂ ಗೊತ್ತಿಲ್ಲ. ಹೊಟ್ಟೆನೋವು ಅಂದ. ತಂದು ಹಾಕಿದೆ ಅಷ್ಟೆ ಎಂದು ಹೇಳಿ ಹೋಗಿಬಿಡುವುದು. ಆದರೆ ಅದು ಸುಲಭವೆ? ಅಥವಾ ಬೋರಿವಲಿಯಲ್ಲಿ ಆ ಹೆಸರಿಲ್ಲದ ಬಕ್ಕತಲೆಯ ರಕ್ತಸಂಬಂಧಿಯನ್ನು ಹುಡುಕುವುದೇ. ಹೆಂಗಸು, “ನಿಮ್ಮನ್ನು ಕರೀತಿದ್ದಾರೆ” ಎಂದಳು. ನರ್ಸು ಗೇಟಿನಾಚೆಯಿಂದ ಕರೆಯುತ್ತಿದ್ದಳು.
ಮೆಲ್ಲಗೆದ್ದು ರೂಪಕ ಹೋದಾಗ ಅವನನ್ನು ಪರದೆಯ ಮರೆಗೆ ಕರೆದರು. “ನೀವು ಪಾರ್ಟಿ ಅಲ್ಲವೆ?” ಅಂದರು. ನಂತರ ಮುಖದ ಹಸಿರು ಪಟ್ಟಿಯನ್ನು ತೆಗೆದಿದ್ದ ಡಾಕ್ಟರೊಬ್ಬರು ಸಣ್ಣ ಬೆಳ್ಳನೆ ಅಲ್ಯೂಮಿನಿಯಂ ತಟ್ಟೆಯಲ್ಲಿ ಹತ್ತಿಯಲ್ಲಿಟ್ಟಿದ್ದ ರಕ್ತಸಿಕ್ತ ಬೆರಳಿನಂಥದ್ದನ್ನು ತೋರಿಸಿದರು. “ನೋಡಿ, ಇದೇ ಅಪೆಂಡಿಕ್ಸ್, ಸೆಪ್ಟಿಕ್ ಆಗಿತ್ತು” ಎಂದರು. ಮಂಕಾಗಿ ಪಿಳಿ ಪಿಳಿ ನೋಡುತ್ತಿದ್ದ ರೂಪಕನನ್ನು ಎಚ್ಚರಿಸುವಂತೆ “ನೋಡಿದಿರಲ್ಲಾ?” ಎಂದು ಕೇಳಿದರು. ಅವನು ಹೌದು ಅನ್ನುವಂತೆ ತಲೆ ಅಲ್ಲಾಡಿಸಿದ. ತಟ್ಟಂತ ಅವರೆಲ್ಲ ಮತ್ತೆ ಒಳಗೆ ಹೊರಟುಹೋದರು. ನರ್ಸ್ ಮತ್ತೆ ಬಂದು “ಪೋಸ್ಟ್ ಆಪರೇಟಿವ್ ವಾರ್ಡ್‌ನಲ್ಲಿ ಒಂದು ದಿನ ಇಡ್ತಾರೆ. ನಾಳೆಯಿಂದ ಹಣ್ಣಿನ ರಸ ಕೊಡಬಹುದು” ಎಂದು ಮತ್ತಷ್ಟು ಮದ್ದುಗಳನ್ನು ಚೀಟಿಯಲ್ಲಿ ಬರೆದುಕೊಟ್ಟಳು.
ಹೊರಬಂದ ರೂಪಕನಿಗೆ ರಸ್ತೆಯಲ್ಲಿ ಓಡಾಡುತ್ತಿರುವ ಜಗತ್ತು ತನಗೆ ಸಂಬಂಧಪಡದಂತೆ ಕಂಡಿತು. ಸಲೂನ್‌ನಲ್ಲಿ ಹೇರ್‌ಕಟ್ ಆದ ಮೇಲೆ ಹಿಂದೊಂದು ದಿನ ಕನ್ನಡಿಯನ್ನು ಹಿಡಿದು ತೋರಿಸುವಂತೆ ಅವರು ಪಾರ್ಟನರ್‌ನ ಕರುಳಿನ ಆ ಪುಟ್ಟ ಬೆರಳನ್ನು ಬೆಳಕಿಗೆ ಹಿಡಿದು ತೋರಿಸಿದ್ದು, ಮತ್ತೆ ಅದಕ್ಕೆ ತಾನು ತಲೆದೂಗಿ “ಪುರಾವೆ ನೋಡಿದೆ” ಎಂಬಂತೆ ಒಪ್ಪಿಗೆ ಕೊಟ್ಟಿದ್ದು ಬೆಳ್ಳನೆ ಪರದೆಯ ಮೇಲೆ ನೋಡಿದ ಚಿತ್ರದಂತೆ ಮತ್ತೆ ಮತ್ತೆ ಕಂಡಿತು. ಅಮ್ಮ ಅಪ್ಪ ಯಾರೋ, ಎಲ್ಲಿದ್ದಾರೋ, ಅವನ ಕುರಿತು ಏನೇನೋ ಗೊತ್ತಿರದ ತಾನು ಅವನ ಒಳಗಿನ ಕರುಳ ತುಣುಕೊಂದನ್ನು ನೋಡಿದ ಕ್ಷಣ ನೆನೆದು ಮೈಜುಮ್ಮೆಂದಿತು. ಕೈಲಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದು ಶರ್ಟು ಪ್ಯಾಂಟು ಬನೀನುಗಳನ್ನೊಮ್ಮೆ ನೋಡಿದ. ಬಾ ಎಂದು ಕರೆಯುತ್ತಿರುವ ಅಪರಿಚಿತನ ಸನಿಹ ಬರಲು ಹಿಂಜರಿಯುತ್ತಿರುವ ಮಕ್ಕಳ ಕಣ್ಣುಗಳಂತೆ ಕಂಡವು. ರೂಪಕನ ಕೈಗಳಲ್ಲಿ ಈಗ ಅವರು ಭದ್ರವಾಗಿದ್ದವು. ಅವಸರದಲ್ಲಿ ಮುದುಡಿ ತುರುಕಿದ್ದ ಅವುಗಳನ್ನು, ಬೆಂಚಲ್ಲಿ ಕೂತು, ಮತ್ತೆ ಹೊರತೆಗೆದು, ಸರಿಯಾಗಿ ಮಡಚಿ ಇಡತೊಡಗಿದ. ಸೀಸನ್ ಪಾಸು, ಬಾಚಣಿಗೆ, ತುದಿ ಮೊಂಡಾಗಿರುವ ಎಷ್ಟೊಂದು ಕಾಗದದ ಮಡಿಕೆಗಳು. ಪ್ಯಾಂಟಿನ ಕಿಸೆಯಲ್ಲಿ ಏನೋ ಗಟ್ಟಿ ಹತ್ತಿದಂತಾಗಿ ಕೈಹಾಕಿದರೆ ಫಳ ಫಳ ಹೊಸ ವಾಚು ಹೊರಬಂತು. ಬೆಳಿಗ್ಗೆ ಇದು ಕಿಸೆಯಲ್ಲಿದೆ ಅನ್ನೋದನ್ನು ಮರೆತೇಬಿಟ್ಟಿದ್ದನೋ, ಅಥವಾ ಬೇಕೆಂದೇ ಅದನ್ನು ಅಡಗಿಸಿಟ್ಟುಕೊಂಡಿದ್ದನೋ- ಇದ್ಯಾವುದೂ ರೂಪಕನನ್ನು ಬಾಧಿಸಲಿಲ್ಲ. ಏಕೆಂದರೆ, ನಾಗರಿಕ ಅವಿಶ್ವಾಸದ ಪರಮ ರೂಪದಂತೆ, ಅಲ್ಯುಮಿನಿಯಂ ತಟ್ಟೆಯ ಬೆಳ್ಳನೆ ಹತ್ತಿಯಲ್ಲಿ ಕೂತಿದ್ದ ಆ ಪುಟ್ಟ ಅಮಾಯಕ ಕರುಳಿನ ಬೆರಳು, ನಿಗೂಢ ನಂಟೊಂದನ್ನು ಅವನಲ್ಲಿ ಅರಳಿಸಿತ್ತು. ಆಟದಲ್ಲಿ ಮಕ್ಕಳು ಕಿಸೆಯಲ್ಲಿ ಬಚ್ಚಿಟ್ಟು ಮರೆತ ಪುಟ್ಟ ಆಟಿಕೆಯಂತಿತ್ತು. ಈ ವಾಚು ಅಚರ ಟಕ್ ಟಕ್ ಸದ್ದೊಂದೇ ಮುದ್ದಾಗಿ ಕೇಳುತ್ತಿತ್ತು. ಅಲ್ಲೇ ಇದ್ದ ಪಬ್ಲಿಕ್‌ಬೂಥಿನಿಂದ “ನಾಲ್ಕು ದಿನ ಬರಲಾಗುತ್ತಿಲ್ಲ” ಎಂದು ತನ್ನ ಕಾರ್ಖಾನೆಗೆ ಫೋನು ಮಾಡಿ… ಔಷಧಿಗಳನ್ನು ಕೊಂಡು, ಕಿಸೆಯಲ್ಲೀಗ ಎಷ್ಟು ಹಣ ಉಳಿದಿದೆ ಎಂಬುದನ್ನು ಸ್ಪಷ್ಟವಾಗಿ ಎಣಿಸಿ ನೋಡಿ, ಪೋಸ್ಟ ಆಪರೇಟಿವ್ ವಾರ್ಡಿಗೆ ಬಂದಾಗ, ಆಗಷ್ಟೆ ಅಲ್ಲಿಗೆ ತಂದಿದ್ದರು. ರಕ್ತ, ಸಲೈನು, ಇಸಿಜಿ ಹೀಗೆ ಎಷ್ಟೆಲ್ಲಾ ನಳಿಗೆ, ವಯರುಗಳ ಮಧ್ಯ ಹಸಿರು ಹಾಸಿಗೆಯಲ್ಲಿ, ಫ್ರಾಕಿನಂಥ ನಿಲುವಂಗಿಯಲ್ಲಿ, ಪಾರ್ಟನರ್ ನಿರುಪಾಯ ನಿದ್ರೆಯಲ್ಲಿದ್ದ. ಎವೆಯಿಕ್ಕದೇ ನೋಡುತ್ತ ನಿಂತ ರೂಪಕನತ್ತ ಮುಗುಳುನಕ್ಕ ನರ್ಸು “ಎಲ್ಲ ಸರೀಗಿದೆ, ನೀವಿನ್ನು ಊಟಮಾಡಿಕೊಂಡು ಬನ್ನಿ” ಎಂದು ಸನ್ನೆಯಲ್ಲೆ ಹೇಳಿದಳು.
*****
ಕೀಲಿಕರಣ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ
ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು […]
ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […]
ನನ್ನ ಕಾರ್ಖಾನೆ ಬಸ್ಸು ಮಲ್ಲೇಶ್ವರಂ ಸ್ಟಾಪ್ ಬಳಿಗೆ ಬರುತ್ತಿದ್ದಂತೆ ನನ್ನ ಕಣ್ಣುಗಳು ಕಿಟಕಿಯತ್ತ ಹರಿಯುತ್ತವೆ. ಅಲ್ಲಿ ಕಾರ್ಮಿಕರ ಬಸ್ಸಿಗಾಗಿ ಕಾಯುತ್ತಾ ನಿಂತ ರವಿ ಕಾಣುತ್ತಾನೆ. ನನ್ನ ಮುಖ ಕಂಡೊಡನೆ ಮುಗುಳ್ನಗುತ್ತಾನೆ. “ಸಂಜೆ ಸಿಗ್ತೀಯಾ? ಎಲ್ಲಿ? […]
ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ
ಟಿಪ್ಪಣಿ *
ಹೆಸರು *
ಮಿಂಚೆ *
ಜಾಲತಾಣ
ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ.
This site uses Akismet to reduce spam. Learn how your comment data is processed.
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…