CoolCoder44's picture
Upload folder using huggingface_hub
b0c2634 verified
ಎಂ ಆರ್‌ ಭಗವತಿಯವರ ನಿರೂಪಣೆ ಮತ್ತು ಸಂಯೋಜನೆ ಇರುವ ಸೋಜಿಗದ ಬಳ್ಳಿ ಮೊನ್ನೆ ಮೊನ್ನೆಯಷ್ಟೇ ನನ್ನ ಕೈ ಸೇರಿತು. ಪುಸ್ತಕವನ್ನು ಒಂದೆರಡು ದಿನಗಳಲ್ಲಿ ಪಟ್ಟು ಹಿಡಿದು ಓದಿ ಮುಗಿಸಿದೆ. ಒಮ್ಮೊಮ್ಮೆ ಕುತೂಹಲದಿಂದಲೂ, ಒಮ್ಮೊಮ್ಮೆ ಆಲಸ್ಯದಿಂದಲೂ, ಒಮ್ಮೊಮ್ಮೆ ನಿದ್ದೆಗಣ್ಣಿನಿಂದಲೂ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಈ ಪುಸ್ತಕದ ಕುರಿತು ಬರೆಯಲೇಬೇಕು ಅನಿಸಿತು. ಆ ಕಾರಣಕ್ಕೆ ಈ ಲೇಖನ. ಸೋಜಿಗದ ಬಳ್ಳಿ ಪುಸ್ತಕ ನನಗೆ ಗಮನ ಸೆಳೆದಿದ್ದು ಅದರಲ್ಲಿ ಮಿಳಿತಗೊಂಡಿರುವ ನವಿರಾದ ಪ್ರೇಮದ ಕಾರಣಕ್ಕೆ. ಅದಕ್ಕೆ ಸಾಕ್ಷಿ ಎಂಬಂತೆ ನವಿರಾದ ಪ್ರೇಮವನ್ನು ಪುಸ್ತಕದ ಮುಖಪುಟದಲ್ಲೇ ಸರಸ್ವತಿ ಮತ್ತು ಚಿ ಶ್ರೀನಿವಾಸರಾಜುರವರ ಕಣ್ಣು ಮತ್ತು ನಗುವಿನಲ್ಲಿ ನಾವು ಕಾಣಬಹುದು. ಇನ್ನೂರು ಪುಟಗಳ ಈ ಪುಸ್ತಕವನ್ನು ಓದುತ್ತಾ ಹೋದಂತೆ ಇವರಿಬ್ಬರ ಪ್ರೇಮದ ವಿವಿಧ ಮಜಲುಗಳು ನಮಗೆ ಓದಲು ಸಿಗುತ್ತವೆ. ಪುಸ್ತಕದ ಮೊದಲ ಪುಟದಲ್ಲೇ “ನೀನೇ ನನ್ನ ಆತ್ಮಕಥೆಯನ್ನು ಬರೆದುಬಿಡು. ಅದು ನಿನ್ನದೂ ಆಗುತ್ತದೆ ನನ್ನದೂ ಆಗುತ್ತದೆ” ಎನ್ನುವ ಚಿ ಶ್ರೀನಿವಾಸರಾಜು ರವರ ಸಾಲು ಪುಸ್ತಕದ ಪ್ರವೇಶಿಕೆಗೆ ಅನುವು ಮಾಡಿಕೊಡುತ್ತದೆ.
ಎಲ್ಲಾ ಆತ್ಮಕಥೆಗಳಂತೆ ಈ ಪುಸ್ತಕವೂ ಸರಸ್ವತಿಯವರ ಬಾಲ್ಯದ ಸಿಹಿ ನೆನಪುಗಳೊಂದಿಗೆ ಶುರುವಾಗುತ್ತದೆ. ಒಂದು ಕಾಲದಲ್ಲಿ ಕಲ್ಲು ಒಡೆಯುವ ಕೆಲಸವನ್ನೂ ಸಹ ಮಾಡಿರುವ ತಾತ ಅಜ್ಜಿಯ ಕಷ್ಟದ ದಿನಗಳು ಹಾಗು ಅವರು ಜೀವನೋಪಾಯಕ್ಕಾಗಿ ಬೇರೆ ಬೇರೆ ಊರುಗಳಲ್ಲಿ ನೆಲೆ ಕಾಣುವ ಕಥೆಗಳೊಂದಿಗೆ ಪುಸ್ತಕ ಶುರುವಾಗಿ, ನಂತರ ಅವರ ತಂದೆಯವರ ಸಾಧನೆಗಳ ಕುರಿತು ಹೇಳುತ್ತಾ ಹೋಗುತ್ತದೆ. ಸರಸ್ವತಿಯವರ ತಂದೆ ಮೊದಲಿಗೆ ಶೂ ಲೇಸು, ಉಡಿದಾರದ ದಾರ, ಹ್ಯಾಂಗರ್‌ ತಯಾರಿಸುವ ಕೆಲಸಕ್ಕೆ ತನ್ನ ತಂದೆಯವರ ಜೊತೆ ಹೋಗುತ್ತಿದ್ದು, ಅದರಿಂದ ಅವರು ಕಲಿತ ಕೆಲಸದ ಅನುಭವಗಳು ಅವರನ್ನು ಒಬ್ಬ ಉದ್ಯಮಿಯನ್ನಾಗಿ ಮಾಡಿದ ಕತೆ ನಿಜಕ್ಕೂ ಮೆಚ್ಚುವಂತಂದ್ದು. ಈಗಿನ ದಿನಗಳಲ್ಲಿ ಸ್ಟಾರ್ಟ್‌ ಅಪ್‌ ಹಾಗು ಸ್ವಂತ ಉದ್ದಿಮೆಯ ಕನಸು ಕಾಣುವ ಅನೇಕರಿಗೆ ಈ ಪುಸ್ತಕದಲ್ಲಿರುವ ಈ ತರಹದ ಸ್ವಂತ ಉದ್ದಿಮೆಯ ಮಾಹಿತಿಗಳು ಸ್ಫೂರ್ತಿದಾಯಕವಾಗಬಹುದು. ಜೊತೆಗೆ ಒಳ್ಳೊಳ್ಳೆಯವರ ಸಹವಾಸ ಹೇಗೆ ಮನುಷ್ಯನನ್ನು ಒಂದು ಮಟ್ಟದಿಂದ ಮತ್ತೊಂದು ಮಟ್ಟಕ್ಕೆ ಕರೆದೊಯ್ಯುತ್ತದೆ ಎನ್ನುವುದನ್ನು ನಾವು ಇಲ್ಲಿ ಕಾಣಬಹುದು.
ಈ ಪುಸ್ತಕದಲ್ಲಿ ಅವರ ತಂದೆಯವರ ಮುದ್ದಿನ ರಾಜಕುಮಾರಿಯಾದ ಸರಸ್ವತಿಯವರ ಬಾಲ್ಯದ ರಸನಿಮಿಷಗಳ ಮೇಲೆ ನಾವು ಕಣ್ಣಾಡಿಸುತ್ತಾ ಹೋದಂತೆ ಒಂದು ಕೂಡು ಕುಟುಂಬದ ಚಿತ್ರಣ ನಮಗೆ ಸಿಗುತ್ತದೆ. ಆ ಕುಟುಂಬ ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಬೆಂಗಳೂರಿನಲ್ಲಿ ನೆಲೆ ಕಂಡು ಬದುಕು ಕಟ್ಟಿಕೊಳ್ಳುವ ರೀತಿ ನಿಜಕ್ಕೂ ಅಧ್ಬುತ. ಬೆಂಗಳೂರಿನ ನಿವಾಸಿಗಳೇ ಆದ ಮೇಲೆ ಅದರ ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ಪರಿಸರ, ಅಲ್ಲಿನ ಕಟ್ಟುಪಾಡು, ಆಚರಣೆಗಳು ಇವೆಲ್ಲಾ ಸೋಜಿಗದ ಬಳ್ಳಿಯಲ್ಲಿ ದಾಖಲಾಗಿವೆ. ಅದನ್ನೆಲ್ಲಾ ಓದುವಾದ ಒಮ್ಮೊಮ್ಮೆ “ಓ ಹೀಗೂ ಇತ್ತಾ ಬೆಂಗಳೂರು” ಎನಿಸಿದರೆ, ಇನ್ನೊಮ್ಮೊ “ಥೂ ಇಂತಹ ಅನಿಷ್ಟ ಪದ್ದತಿಗಳೂ ಸಹ ಬೆಂಗಳೂರಿನಲ್ಲಿ ಇತ್ತಾ” ಎನ್ನುವುದು ಅರಿವಿಗೆ ಬರುತ್ತದೆ. ಅದರಾಚೆಗೂ ಪುಸ್ತಕ ನಮಗೆ ಇನ್ನೂ ಹೆಚ್ಚು ದಕ್ಕುತ್ತಾ ಹೋಗುವುದು ಈ ಪುಸ್ತಕದ ನಾಯಕ ನಾಯಕಿಯ ಭೇಟಿಯ ನಂತರ.
ಪುಸ್ತಕದ ಕಾಲುಭಾಗವನ್ನು ಸರಸ್ವತಿಯವರು ತಮ್ಮ ಬಾಲ್ಯದ ನೆನಪುಗಳಿಗೆ ಮೀಸಲಿಟ್ಟರೆ ಇನ್ನುಳಿದ ಭಾಗದಲ್ಲಿ ಶ್ರೀನಿವಾಸರಾಜುರವರ ಜೊತೆಗಿನ ಬದುಕನ್ನು ಪೂರ್ತಿಯಾಗಿ ಹೇಳಿದ್ದಾರೆ. ಸರಸ್ವತಿಯವರ ತುಂಬು ಜೀವನದ ಆತ್ಮಕತೆಯನ್ನು ಓದುತ್ತಾ ಹೋದಂತೆ ಒಬ್ಬ ಸಾಮಾನ್ಯ ಗೃಹಿಣಿಯ ಕನಸು ಕನವರಿಕೆಗಳು, ಆಸೆ ಆಕಾಂಕ್ಷೆಗಳು, ನಂತರ ಒಬ್ಬ ಅಮ್ಮನಾಗಿ ಅವರು ಮಕ್ಕಳನ್ನು ಬೆಳೆಸುವಲ್ಲಿ ವಹಿಸುವ ಪಾತ್ರ ಎಲ್ಲವೂ ದಾಖಲಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ. “ನನಗೆ ನನ್ನವರೇ ರಂಗಸ್ಥಳ, ಅವರೇ ಮುಖ್ಯ ಕಾರ್ಯಸ್ಥಾನ, ಶ್ರೀರಂಗನ ಹೃದಯದಲ್ಲಿ ನೆಲೆಗೊಳ್ಳುತ್ತಿದ್ದ ದೇವತೆ ನಾನೇ ಆಗಿದ್ದೆ” ಎಂಬ ಸಾಲು ಸರಸ್ವತಿಯವರ ಮನದಲ್ಲಿ ಹುಟ್ಟಲು ಈ ಜೋಡಿಯು ಕೂಡಿ ಬಾಳಿದ ಸೊಗಸು ಅನೇಕ ನವ ವಧುವರರಿಗೆ ಪಾಠ ಅನ್ನಬಹುದು. ಪ್ರತಿಯೊಬ್ಬರಿಗೂ ಒಂದಲ್ಲ ಒಂದರ ಬಗ್ಗೆ ಒಲವು ಇದ್ದೇ ಇರುತ್ತದೆ. ಹಾಗೆಯೇ ಶ್ರೀನಿವಾಸರಾಜು ರವರಿಗೆ ಇದ್ದ ಕನ್ನಡದ ಮೇಲಿನ ಒಲವು, ಅಧಮ್ಯ ಪ್ರೀತಿ ಅವರಿಂದ ಕ್ರೈಸ್ಟ್‌ ಕಾಲೇಜಿನಲ್ಲಿ ಕನ್ನಡ ಸಂಘವನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತದೆ. ಆ ಸಂಘದಿಂದ ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸಿಕೊಡುವುದಲ್ಲದೇ ಅನೇಕ ಲೇಖಕರ ಕೃತಿಗಳು ಬೆಳಕು ಕಾಣುವಲ್ಲಿ ಶ್ರೀನಿವಾಸರಾಜುರವರು ತೆಗೆದುಕೊಂಡ ರಿಸ್ಕ್‌ ದೊಡ್ಡದು. ಹಾಗೆ ರಿಸ್ಕ್‌ ತೆಗೆದುಕೊಂಡ ಪತಿಯ ಜೊತೆ ಕನ್ನಡ ಕಟ್ಟುವ ಕೆಲಸದಲ್ಲಿ ಸರಸ್ವತಿಯವರು ತಾನೂ ಕೂಡ ವಹಿಸಿದ ಪಾತ್ರವೂ ಕಿರಿದೇನಲ್ಲ.
ಸಾಹಿತ್ಯದ ದಿಗ್ಗಜರ ಜೊತೆ, ತನ್ನ ವಿದ್ಯಾರ್ಥಿಗಳ ಜೊತೆ ಅಧ್ಬುತವಾದ ನಂಟು ಹೊಂದಿದ್ದ ಶ್ರೀನಿವಾಸರಾಜುರವರ ನೆನಪುಗಳನ್ನು ಸೋಜಿಗದ ಬಳ್ಳಿಯ ರೂಪದಲ್ಲಿ ಕಟ್ಟಿಕೊಟ್ಟಿರುವ ಸರಸ್ವತಿ ಅವರ ನೆನಪಿನ ಶಕ್ತಿಗೆ ನಮನಗಳು. ಪುಸ್ತಕದಲ್ಲಿ ಕೆಲವು ಪುಟ್ಟ ಪುಟ್ಟ ಘಟನೆಗಳು ಸಹಾ ದಾಖಲಾಗಿವೆ. ಶ್ರೀನಿವಾಸರಾಜುರವರು ಇಲ್ಲವಾದ ನಂತರ ಅವರ ನೆನಪಿನಲ್ಲೇ ಸರಸ್ವತಿಯವರು ಕಟ್ಟಿಕೊಂಡ ಬದುಕು ಅನೇಕ ಹಿರಿಯ ಒಂಟಿ ಜೀವಗಳಿಗೆ ದಾರಿದೀಪವಾಗಬಹುದು. ಪುಸ್ತಕದ ತುಂಬೆಲ್ಲಾ ನಮಗೆ ಕಾಣಸಿಗುವ, ಕೂಡುಕುಟುಂಬ, ಕಷ್ಟಕಾಲದಲ್ಲಿ ಸಹಾಯಹಸ್ತ ಚಾಚುವ ಕೈಗಳು, ಸದಾ ಜೊತೆ ನಿಲ್ಲುವ ಬಹುಕಾಲದ ಗೆಳೆತನಗಳು, ಕನ್ನಡದ ಕಾರ್ಯದಲ್ಲಿ ನಿರತವಾಗಿರುವ ಕನ್ನಡದ ಸಾಹಿತಿಗಳು, ವಿದ್ಯಾರ್ಥಿಗಳು ಅವರ ಜೊತೆಗಿನ ಒಡನಾಟಗಳು, ನೆನಪುಗಳು ನಮ್ಮಲ್ಲಿ ವ್ಯಕ್ತಿಗಳಾಗಿ, ಘಟನೆಗಳಾಗಿ ನೆನಪಿನಲ್ಲಿ ಉಳಿಯುತ್ತವೆ.
ಹೆಚ್ಚಾಗಿ ಲೇಖಕ/ಲೇಖಕಿಯರೇ ತಮ್ಮ ಆತ್ಮಕಥನವನ್ನು ಬರೆದುಕೊಳ್ಳುವುದು ರೂಢಿ. ಅವರು ಹೇಳಿದ್ದನ್ನು ನಿರೂಪಣೆ ರೂಪದಲ್ಲಿ ನೀಡುವುದು ಅಷ್ಟು ಸುಲಭದ ಕೆಲಸವಲ್ಲ. ಈ ಪುಸ್ತಕದ ನಿರೂಪಣೆ ಹೊಣೆ ಹೊತ್ತಿದ್ದ ಎಂ ಆರ್ ಭಗವತಿಯವರು ಸರಸ್ವತಿಯವರ ಆತ್ಮಕಥನಕ್ಕೆ ತಮ್ಮ ಜೀವನದ ಸುಮಾರು ನಾಲ್ಕು ವರ್ಷಗಳನ್ನು ಮೀಸಲಿಟ್ಟು, ತಮ್ಮ ಗುರುಗಳ ಮತ್ತು ಅವರ ಪತ್ನಿಯ ಬದುಕನ್ನು ಸೋಜಿಗದ ಬಳ್ಳಿ ರೂಪದಲ್ಲಿ ಆಪ್ತವಾಗಿ ಕಟ್ಟಿಕೊಟ್ಟಿರುವ ಪರಿಗೆ ನಿಜಕ್ಕೂ ಅಭಿನಂದನೀಯರು. ಅವರೇ ಲೇಖಕಿಯ ಮಾತಿನಲ್ಲಿ ಹೇಳಿಕೊಂಡಂತೆ “ಹೆಸರಿಗಷ್ಟೇ ಇದು ಸರಸ್ವತಿಯವರ ಆತ್ಮಕತೆ, ಇದರ ತುಂಬಾ ಆವರಿಸಿಕೊಂಡಿರುವುದು ರಾಜು ಮೇಷ್ಟ್ರು” ಎಂಬುದು ನಿಜಾ ಕೂಡ. ಪುಸ್ತಕದಲ್ಲಿ ಯಥೇಚ್ಚವಾಗಿ ಬರುವ ವ್ಯಕ್ತಿಗಳ ಹೆಸರುಗಳು ಒಂದು ಕ್ಷಣ ನಮ್ಮನ್ನು ಕಂಫ್ಯೂಜ್‌ ಮಾಡಿದರೂ ಓದಿಕೊಂಡು ಹೋದಂತೆ ಪುಸ್ತಕ ಆಪ್ತವಾಗುತ್ತಾ ಹೋಗುತ್ತದೆ. ಪುಸ್ತಕದಲ್ಲಿ ಘಟನೆಗಳು ಒಮ್ಮೊಮ್ಮೆ ಕಾಲಾನುಕ್ರಮದಲ್ಲಿ ಇಲ್ಲದ ಕಾರಣಕ್ಕೆ ಚೂರು ಗೊಂದಲ ಅನಿಸಿದರೂ ಓದಿಕೊಳ್ಳಲು ಅಂತಹ ಅಡ್ಡಿಯನ್ನೇನು ಮಾಡುವುದಿಲ್ಲ.
ಒಡನಾಡಿ ಬಳಗ ದೊಡ್ಡಬಳ್ಳಾಪುರ ಇವರಿಂದ ಪ್ರಕಟವಾಗಿರುವ ಜಿ.ಪಿ. ಬಸವರಾಜು ರವರ ಬೆನ್ನುಡಿ ಇರುವ ಸೋಜಿಗದ ಬಳ್ಳಿ ಪುಸ್ತಕದ ಹೈಲೈಟ್ಸ್‌ ಎಂದರೆ ಭಗವತಿಯವರ ಚಂದದ ನಿರೂಪಣಾ ಶೈಲಿ, ರಘು ಅಪಾರರವರ ಮುಖಪುಖ ವಿನ್ಯಾಸ, ಲಕ್ಷ್ಮಿ ಮುದ್ರಣಾಲಯದ ಉತ್ಕೃಷ್ಟ ದರ್ಜೆಯ ಪ್ರಿಂಟಿಂಗ್‌, ಮತ್ತು ನೀತು ಗ್ರಾಪಿಕ್ಸ್‌ ರವರ ಒಳಪುಟ ವಿನ್ಯಾಸ. ಕನ್ನಡವೆಂದರೆ ಬದುಕು ಎಂದು ಬದುಕಿದ ಸರಸ್ವತಿ-ಶ್ರೀನಿವಾಸರಾಜು ದಂಪತಿಗಳ ಈ ಆತ್ಮಕಥನವನ್ನು ಓದಲು ಇಚ್ಚಿಸುವವರು ನುಡಿ ಪುಸ್ತಕ ದೂರವಾಣಿ: 8073321430 ಇವರನ್ನು ಸಂಪರ್ಕಿಸಿ. ಕನ್ನಡ ಪುಸ್ತಕಗಳನ್ನು ತಪ್ಪದೇ ಕೊಂಡು ಓದಿ..
ಕೊನೆಯದಾಗಿ, ತಮ್ಮ ಲಗ್ನಪತ್ರಿಕೆಯಲ್ಲಿ ಪುತಿನ ರವರ ಕವಿತೆಯ ಸಾಲುಗಳನ್ನು ಅಚ್ಚು ಹಾಕಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಜು-ಸರಸ್ವತಿ ದಂಪತಿಗಳ ನೆಚ್ಚಿನ ಸಾಲುಗಳು ನಿಮಗಾಗಿ…
ನನ್ನೊಳು ನಾ ನಿನ್ನೊಳು ನೀ
ಒಲವ ಮುಂತಿಂತ ನಾ ನೀ
ನಿನ್ನೊಳು ನಾ ನನ್ನೊಳು ನೀ
ಒಲಿದ ಮೇಲಂತೆ ನಾ ನೀ
ಇದೇ ಒಲವಿನ ಸರಿಗಮಪದನೀ…
-ನಟರಾಜು ಎಸ್‌ ಎಂ.