File size: 6,355 Bytes
2e70779
 
 
 
 
 
 
 
 
1
2
3
4
5
6
7
8
9
10
ಬೆಂಗಳೂರು: ‘ರಾಜ್ಯದ ತೆರಿಗೆ‌ ಪಾಲಿನ ಹಣ ನೀಡದಿರುವ ಕೇಂದ್ರ ಸರ್ಕಾರಕ್ಕೆ ಮಾನ, ಮಾರ್ಯಾದೆ ಇಲ್ಲ’, ‘ರಾಮನನ್ನು ಇವರೇನು ಗುತ್ತಿಗೆ ಪಡೆದುಕೊಂಡಿದ್ದಾರಾ?’ ಎಂದು ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಚುಚ್ಚಿದ್ದು ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಜಟಾಪಟಿ ತಾರಕಕ್ಕೇರಿ ಅಸಾಂವಿಧಾನಿಕ ಪದಗಳು ಬಳಕೆಯಾಗುತ್ತಿದ್ದಂತೆಯೇ ಸಿಡಿಮಿಡಿಗೊಂಡ ಸಭಾಪತಿ ಬಸವರಾಜ ಹೊರಟ್ಟಿ, ‘ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ’ ಎಂದು ಬಿಜೆಪಿಯ ಕೇಶವಪ್ರಸಾದ್ ಅವರಿಗೆ ಎಚ್ಚರಿಕೆ ನೀಡಿದರು. ವಾಕ್ಸಮರ ನಿಯಂತ್ರಣಕ್ಕೆ ಬಾರದಿದ್ದಾಗ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.
ಮಾತಿನುದ್ದಕ್ಕೂ ಬಿಜೆಪಿ ವಿರುದ್ದ ಟೀಕೆ ಮಾಡಿದ ವೆಂಕಟೇಶ್‌, ‘ಈಗ ಜೆಡಿಎಸ್ ಜೊತೆ ಸೇರಿಕೊಂಡಿದ್ದೀರಾ. ಮುಂದೆ ವಾಷ್ ಔಟ್ ಆಗುತ್ತೀರಾ’ ಎಂದು ಛೇಡಿಸಿದರು. ಅದಕ್ಕೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕ ಎನ್‌. ರವಿಕುಮಾರ್‌, ವೈ.ಎ. ನಾರಾಯಣಸ್ವಾಮಿ, ಭಾರತಿ ಶೆಟ್ಟಿ ಸೇರಿದಂತೆ ಬಿಜೆಪಿ ಸದಸ್ಯರು, ‘ಜೆಡಿಎಸ್ ಅಷ್ಟೇ ಅಲ್ಲ, ಎಲ್ಲರೂ ನಿಮ್ಮ ‘ಇಂಡಿಯಾ’ ಬಿಟ್ಟು ನಮ್ಮ ಜೊತೆ ಬರುತ್ತಿದ್ದಾರೆ’ ಎಂದರು. 
ಆಗ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ‘ನಾವು ಸಂವಿಧಾನಬದ್ಧ ರಾಜಕೀಯ ಮಾಡುತ್ತಿದ್ದೇವೆ. ನಿಮ್ಮಂತೆ ನಾವೂ ಇ.ಡಿ, ಐ.ಟಿ ಬಳಸುತ್ತಿದ್ದರೆ ಇನ್ನೂ ಬೆಳೆಯುತ್ತಿದ್ದೆವು. ನಾವು ವಾಷಿಂಗ್ ಮಷೀನ್‌ನಂತೆ ಕ್ಲೀನ್ ಮಾಡುವವರು. ಬಿಟ್ಟು ಹೋದವರೆಲ್ಲ ಮುಂದೆ ಮರಳಿ ಬರುತ್ತಾರೆ’ ಎಂದು ತಿರುಗೇಟು ನೀಡಿದರು.
ಅದಕ್ಕೆ ಕೇಶವಪ್ರಸಾದ್‌, ‘ಹರಿಪ್ರಸಾದ್ ಇಷ್ಟಬಂದಂತೆ ಮಾತನಾಡುತ್ತಾರೆ. ರೌಡಿ ರೀತಿ ನಡೆದುಕೊಂಡು ಸದನದ ಗೌರವ ಕಾಪಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಹರಿಪ್ರಸಾದ್, ‘ನಾನಲ್ಲ ನೀವು ಗೂಂಡಾಥರ ಆಡಿ ಮಾನ, ಮರ್ಯಾದೆ ಕಳೆಯುತ್ತೀರಿ’ ಎಂದು ಕಿಡಿಕಾರಿದರು. ಸದಸ್ಯರ ನಡೆಗೆ ಸಭಾಪತಿಯವರು ಗರಂ ಆದರು.
‘ಮಂತ್ರಿಯಾಗುವ ಕನಸು ಈಡೇರಿಲ್ಲ ಎಂಬುದು ನಮಗೆ ಗೊತ್ತಿದೆ. ಈ ಬಗ್ಗೆ ವಿಷಾದವಿದೆ’ ಎಂದು ಬಿಜೆಪಿ ಸದಸ್ಯರು ಕೆಣಕಿದಾಗ, ‘ಮಂತ್ರಿ ಆಗುವುದಕ್ಕೆ ನಾನು ಬಂದಿಲ್ಲ. ಆ ಅಜೆಂಡಾ ಇಟ್ಟುಕೊಂಡಿಲ್ಲ. ನಾನು ಹಲವರನ್ನು ಮಂತ್ರಿ ಮಾಡಿದ್ದೇನೆ’ ಎಂದು ಹರಿಪ್ರಸಾದ್‌ ಹೇಳಿದರು. ಅದಕ್ಕೆ ಕೋಟ, ‘ಮಂತ್ರಿಯಾಗುವ ನಿಮ್ಮ ಸಾಮರ್ಥ್ಯ ಜನ ಮತ್ತು ವಿರೋಧ ಪಕ್ಷಕ್ಕೆ ಗೊತ್ತಿದೆ. ಆದರೆ, ಆಡಳಿತ ಪಕ್ಷಕ್ಕೆ ಇಲ್ಲ’ ಎಂದು ಕಿಚಾಯಿಸಿದರು.
‘ಇವರು (ಬಿಜೆಪಿ) ರಾಮನನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರೆಯೇ’ ಎಂದು ಯು.ಬಿ. ವೆಂಕಟೇಶ್ ಪ್ರಶ್ನಿಸುತ್ತಿದ್ದಂತೆಯೇ, ಎನ್‌. ರವಿಕುಮಾರ್, ‘ಗುತ್ತಿಗೆ ಪಡೆದುಕೊಂಡಿದ್ದೇವೆಂದು ಎಲ್ಲಿ ಹೇಳಿದ್ದೇವೆ’ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಹರಿಪ್ರಸಾದ್, ‘ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ಹೋರಾಟ ನಡೆಸಿದ್ದ ಎಲ್.ಕೆ. ಅಡ್ವಾಣಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ’ ಎಂದರು‌. ಅದಕ್ಕೆ ರವಿಕುಮಾರ್, ‘ಸುಪ್ರೀಂ ಕೋರ್ಟ್ ತೀರ್ಪು ಮತ್ತೊಮ್ಮೆ ಓದಿ. ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಳ ಎಂದು ಐವರು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ’ ಎಂದರು.
ಇದು ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಆಗ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.