File size: 6,152 Bytes
2e70779
 
 
 
 
 
 
1
2
3
4
5
6
7
8
ಬೆಂಗಳೂರು: ನೀಲಗಿರಿಯ ನಿಸರ್ಗದ ಮಡಿಲಲ್ಲಿ ಪವಡಿಸಿರುವ ಊಟಿಗೆ ನೀವು ಹೋಗಿ ಬಂದಿರಬಹುದು. ಆದರೆ, ಅಲ್ಲಿಯ ನೈಜ ಸೌಂದರ್ಯವನ್ನು ನೀವು ಆಸ್ವಾದಿಸಿದ್ದೀರಾ? ಈ ಗಿರಿಶ್ರೇಣಿಯ ಮೂಲನಿವಾಸಿಗಳ ಕುರಿತು ನಿಮಗೆ ಗೊತ್ತಾ? ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಗಿರಿಧಾಮದ ಚರಿತ್ರೆಯನ್ನು ತಿಳಿದುಕೊಂಡಿದ್ದೀರಾ? ಹೋಗಲಿ, ನೀಲಗಿರಿಯ ಜೇನ್ನೊಣಗಳನ್ನು ಕಂಡಿದ್ದೀರಾ?
ಪಶ್ಚಿಮಘಟ್ಟ ಶ್ರೇಣಿಯ ‘ನೀಲಗಿರಿ’ ಕುರಿತ ನಿಮ್ಮೆಲ್ಲ ಕುತೂಹಲವನ್ನು ತಣಿಸುವಂತಹ ಕಾರ್ಯಕ್ರಮವನ್ನು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಫೆ. 23ರಿಂದ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ‘ನೀಲಗಿರಿಯ ನೀಲಿ ಬೆಟ್ಟಗಳು’ ನಿಮಗೆ ಬೆಂಗಳೂರಿನಲ್ಲಿಯೇ ಗೋಚರಿಸಲಿವೆ!
ತೋಡರು, ಶೋಲಾ ನಾಯಕರು, ಇರುಂಬರು, ಕುರುಬರು, ಕೋಟ ಮತ್ತು ಕಣಿ ಜನಾಂಗದವರ ಬೀಡಾಗಿದ್ದ ನೀಲಗಿರಿಯಲ್ಲಿ ಊಟಿ ನಗರವನ್ನು ಅಷ್ಟು ದೊಡ್ಡದಾಗಿ ಬೆಳೆಸಿದವರು ಮದ್ರಾಸ್ ಪ್ರಾಂತ್ಯದ ಅಂದಿನ ಗವರ್ನರ್ ಆಗಿದ್ದ ಜಾನ್ ಸುಲಿವನ್. ಸಮುದ್ರ ಮಟ್ಟದಿಂದ ಸುಮಾರು 7,350 ಅಡಿ ಎತ್ತರದಲ್ಲಿರುವ ಈ ಪ್ರದೇಶ ಅರ್ಧ ಚಂದ್ರಕಾರದಲ್ಲಿದ್ದು, ಇಲ್ಲಿ ಸುಲಿವನ್ 1823ರಲ್ಲಿ ಹಿಲ್‌ ಸ್ಟೇಷನ್‌ (ಗಿರಿಧಾಮ) ಸ್ಥಾಪಿಸಿದರು.
ಊಟಿಯ ಅಂದವನ್ನು ಹೆಚ್ಚಿಸಿದ ಸೇಂಟ್ ಸ್ಟೀಫನ್ ಚರ್ಚ್, ಹೋಲಿ ಟ್ರಿನಿಟಿ ಚರ್ಚ್, ಸೇಕ್ರೆಡ್ ಹಾರ್ಟ್ ಚರ್ಚ್, ಸೇಂಟ್ ಥೆರೇಸಾ ಚರ್ಚ್, ಸೇಂಟ್ ಮೇರಿಸ್ ಚರ್ಚ್‌ ಕಟ್ಟಿದರು. ಇಂಗ್ಲಿಷ್ ಮಿಷನರಿಗಳನ್ನು ಸ್ಥಾಪಿಸಿ ಸ್ಥಳೀಯರಿಗೂ ಒಳ್ಳೆಯ ವಿದ್ಯಾಭ್ಯಾಸ ಸಿಗುವಂತೆ ನೋಡಿಕೊಂಡರು. ಸರ್‌ ಫೆಡ್ರಿಕ್‌ ಪ್ರೈಸ್‌, ನೀಲಗಿರಿಯ ಈ ‘ಕಂದ’ನ ಚರಿತ್ರೆಯನ್ನು ಸೊಗಸಾಗಿ ನಿರೂಪಿಸಿದ್ದಾರೆ.
ಇಂತಹ ನೀಲಗಿರಿಯ ನೀಲಿ ಬೆಟ್ಟಗಳ ಕಥೆಗಳನ್ನು ಹೇಳುವ ಕಾರ್ಯಕ್ರಮ ಫೆ. 23ರಂದು ಸಂಜೆ 7ಕ್ಕೆ ನಡೆಯಲಿದೆ. ಪ್ರೊ. ಶಾರದಾ ಶ್ರೀನಿವಾಸನ್‌, ಅಲ್ಲಿನ ಸಂಸ್ಕೃತಿ, ಚಿನ್ನಾಭರಣ, ಲೋಹದ ಪಾತ್ರೆ, ಹೂವು ಮತ್ತು ಸಸ್ಯಗಳ ಲೋಕವನ್ನು ಕೇಳುಗರ ಮುಂದೆ ತೆರೆದಿಡಲಿದ್ದಾರೆ. ಅಲ್ಲಿಯೇ ಕ್ಷೇತ್ರಕಾರ್ಯ ಮಾಡಿರುವ ತರುಣ್‌ ಛಬ್ರಾ ಅವರು ಅಲ್ಲಿಯ ಮೂಲನಿವಾಸಿಗಳ ಕುರಿತು ಮಾತನಾಡಲಿದ್ದಾರೆ. ನೀಲಗಿರಿಯ ಜೇನು ಕುರುಬ ಸಮುದಾಯದ ಜಾನಕಿಯಮ್ಮ ಮತ್ತು ಪಿ.ಚಂದ್ರನ್‌ ಅವರೊಂದಿಗೆ ರಂಜನಿ ಪ್ರಸಾದ್‌ ಮತ್ತು ಫೈಸಲ್‌ ರೆಹಮಾನ್‌ ಅವರು ಸಂವಾದ ನಡೆಸಲಿದ್ದಾರೆ. ಸಮುದಾಯದ ಚಟುವಟಿಕೆಗಳು ಮತ್ತು ಜೇನು ಸಂಗ್ರಹದ ವಿಧಾನಗಳ ಮೇಲೆ ಅವರು ಬೆಳಕು ಚೆಲ್ಲಲಿದ್ದಾರೆ.
ನೀಲಗಿರಿ ಬೆಟ್ಟಗಳ ಕುರಿತು ಫೆ. 23ರಿಂದ 26ರವರೆಗೆ ಚಿತ್ರ ‍ಪ್ರದರ್ಶನವನ್ನೂ ಏರ್ಪಡಿಸಲಾಗಿದ್ದು, 300ಕ್ಕೂ ಅಧಿಕ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಈ ಚಿತ್ರಗಳು ನೀಲಗಿರಿ ಬೆಟ್ಟಗಳ ಚರಿತ್ರೆ, ಸಸ್ಯಸಿರಿ ಹಾಗೂ ಅಲ್ಲಿನ ಪ್ರಾಕೃತಿಕ ಸೌಂದರ್ಯ ಲೋಕದಲ್ಲಿ ಸುತ್ತಾಡಿಸಲಿವೆ. ವಸಾಹತು ಕಾಲದ ಛಾಯಾಗ್ರಾಹಕರು ತೆಗೆದ ಅತ್ಯಪೂರ್ವ ಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ. ಇದೇ ಅವಧಿಯಲ್ಲಿ ‘ನೀಲಗಿರಿಯ ಜೋನ್ನೊಣಗಳು’ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ನೀಲಗಿರಿಯ ನಿಸರ್ಗದತ್ತವಾದ ಜೇನು, ಆ ಜೇನನ್ನು ಸಂಗ್ರಹಿಸಿ ತರುವ ಕುರುಬ ಸಮುದಾಯದ ಜಗತ್ತು ನೋಡುಗರ ಮುಂದೆ ಅನಾವರಣಗೊಳ್ಳಲಿದೆ ಎಂದು ಬಿಐಸಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.