ಬೆಂಗಳೂರು: 'ಆರ್ಕ್ಟಿಕ್' ಪ್ರದೇಶದಲ್ಲಿ ಆರಂಭವಾಗಿರುವ ಚಳಿಗಾಲದ ಸಂಶೋಧನಾ ಅಭಿಯಾನದಲ್ಲಿ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ವಿಜ್ಞಾನಿಗಳ ಮೊದಲ ತಂಡ ಭಾಗವಹಿಸಿದೆ. ವಿಶ್ವದ ಉಗಮದ ಕುರುಹುಗಳನ್ನು ಪತ್ತೆ ಮಾಡುವುದರಿಂದ ಹಿಡಿದು, ಆಧುನಿಕ ಕಾಲದ ಹವಾಮಾನ ಬದಲಾವಣೆ ಪರಿಣಾಮಗಳೂ ಸೇರಿ ಹಲವು ವಿಷಯಗಳ ಬಗ್ಗೆ ಈ ತಂಡ ಸಂಶೋಧನೆ ಕೈಗೊಳ್ಳಲಿದೆ. | |
ಭೂಮಿಯ ಉತ್ತರ ಧ್ರುವ ಪ್ರದೇಶ ‘ಆರ್ಕ್ಟಿಕ್’ನಲ್ಲಿ ಭಾರತ ತನ್ನದೇ ಆದ ಸಂಶೋಧನಾ ಕೇಂದ್ರವನ್ನು ಹೊಂದಿದ್ದು, ಇದನ್ನು ಹಿಮಾದ್ರಿ ಎಂದು ಕರೆಯಲಾಗುತ್ತದೆ. 2008 ರಿಂದ ಇದು ಕಾರ್ಯ ನಿರ್ವಹಿಸುತ್ತಿದೆ. | |
ಈ ಬಾರಿ ಭಾರತೀಯ ತಂಡದ ನೇತೃತ್ವವನ್ನು ಆರ್‌ಆರ್‌ಐನ ಎಲೆಕ್ಟ್ರಾನಿಕ್ಸ್ ಎಂಜನಿಯರಿಂಗ್ ಗ್ರೂಪ್ ವಿಭಾಗದ ಗಿರೀಶ್ ಬಿ.ಎಸ್ ವಹಿಸಿದ್ದಾರೆ. ಖಗೋಳವಿಜ್ಞಾನ, ಹವಾಮಾನ ಬದಲಾವಣೆ, ವಾತಾವರಣ ವಿಜ್ಞಾನ ಸೇರಿ ಹಲವು ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. | |
ಭಾರತೀಯ ವಿಜ್ಞಾನಿಗಳು ಇದೇ ಮೊದಲ ಬಾರಿ ಆರ್ಕ್ಟಿಕ್‌ನ ಸ್ವಾಲ್ಬರ್ಡ್‌ನಲ್ಲಿ ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದಿಂದ ಖಗೋಳ ವಿಜ್ಞಾನಿಗಳು ಖಗೋಳ ಮಾಪನ ಕಾರ್ಯವನ್ನು ಅತ್ಯಂತ ಕರಾರುವಾಕ್ಕಾಗಿ ನಡೆಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಡಿಮೆ ತರಂಗಾಂತರದ ದೂರದರ್ಶಕವನ್ನು ಸ್ಥಾಪಿಸುವ ಸಾಧ್ಯತೆಯೂ ಇದೆ ಎಂದು ಆರ್‌ಆರ್‌ಐ ತಿಳಿಸಿದೆ. | |
ಮೊದಲ ತಂಡ ತನ್ನ ಕಾರ್ಯವನ್ನು ಮಂಗಳವಾರ ಆರಂಭಿಸಿದ್ದು, ಜನವರಿ 15 ರವರೆಗೆ ಕಾರ್ಯ ನಿರ್ವಹಿಸಲಿದೆ. ಈ ಕಾರ್ಯಕ್ಕೆ ಭೂವಿಜ್ಞಾನಗಳ ಸಚಿವಾಲಯ ಅನುದಾನ ನೀಡಿದ್ದು, ಗೋವಾದಲ್ಲಿರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ ನೋಡಲ್ ಏಜೆನ್ಸಿಯಾಗಿದೆ. | |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. | |