NLP_Assignment_1 / Prajavani /'ಗ್ಯಾರಂಟಿ’ಗೆ ₹11 ಸಾವಿರ ಕೋಟಿ ಅನುದಾನ ವಾಪಸ್‌ಗೆ ಪಟ್ಟು.txt
CoolCoder44's picture
Upload folder using huggingface_hub
2e70779 verified
raw
history blame
4.49 kB
ಬೆಂಗಳೂರು: ಪರಿಶಿಷ್ಟ ಜಾತಿ  ಹಾಗೂ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಇರುವ ವಿಶೇಷ ಘಟಕ ಯೋಜನೆ ಅನುದಾನದಲ್ಲಿ (ಎಸ್‌ಸಿಎಸ್‌ಪಿ–ಟಿಎಸ್‌ಪಿ) ₹11 ಸಾವಿರ ಕೋಟಿಯನ್ನು ಕಳೆದ ವರ್ಷ ಐದು ಗ್ಯಾರಂಟಿಗಳ ಜಾರಿಗೆ ಬಳಕೆ ಮಾಡಿಕೊಳ್ಳಲಾಗಿದ್ದು, ಆ ಅನುದಾನವನ್ನು ವಾಪಸ್‌ ನೀಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಮಾದಿಗ ದಂಡೋರ ಸಮಿತಿ ರಾಜ್ಯ ಅಧ್ಯಕ್ಷ ಪಾವಗಡ ಶ್ರೀರಾಮ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಒಕ್ಕೂಟದ ಸಭೆಯಲ್ಲಿ ರಾಜ್ಯದಲ್ಲಿ ನಿರಂತರ ಹೋರಾಟ, ಧರಣಿ ನಡೆಸುವ ನಿರ್ಣಯವನ್ನೂ ಅಂಗೀಕರಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಭಾಗಗಳ ಹೋರಾಟಗಾರರು, ‘ತಕ್ಷಣವೇ ಅನುದಾನ ವಾಪಸ್ ನೀಡದಿದ್ದರೆ, 1 ಲಕ್ಷ ಮಂದಿ ಸೇರಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ‘ವಿಶೇಷ ಘಟಕ ಯೋಜನೆಗೆ ಮೀಸಲಿಟ್ಟ ಹಣದ ದುರುಪಯೋಗ ಹೆಚ್ಚಾಗಿದೆ. ನಿಗದಿತ ಉದ್ದೇಶಕ್ಕೆ ಹಣ ವಿನಿಯೋಗಿಸದ ಅಧಿಕಾರಿಗಳ ವಿರುದ್ಧ ಕ್ರಮವನ್ನೂ ತೆಗೆದುಕೊಂಡಿಲ್ಲ’ ಎಂದು ದೂರಿದರು.
ಸಭೆ ಉದ್ಘಾಟಿಸಿದ ಶ್ರೀರಾಮ್‌ ಮಾತನಾಡಿ, ‘2024–25ನೇ ಸಾಲಿನ ಬಜೆಟ್‌ ಮಂಡಿಸಲಾಗಿದ್ದು ಈ ಬಾರಿಯೂ ಎಸ್‌.ಸಿ/ಎಸ್‌.ಟಿ ಸಮುದಾಯದ ವಿಶೇಷ ಘಟಕ ಯೋಜನೆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಸಂಚು ನಡೆದಿದೆಯೇ ಎಂಬ ಆತಂಕ ಮೂಡಿಸಿದೆ’ ಎಂದು ಹೇಳಿದರು.
‘ಸಮುದಾಯಕ್ಕೆ ಅನ್ಯಾಯವಾಗಿದ್ದರೂ ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ ಯಾವುದೇ ಶಾಸಕರೂ ಪ್ರಶ್ನೆ ಮಾಡುತ್ತಿಲ್ಲ. ಸಚಿವ ಸಂಪುಟ ಸಭೆಯಲ್ಲೂ ಸಮುದಾಯದ ಪರ ಮಾತನಾಡುತ್ತಿಲ್ಲ. ಸಾಮಾಜಿಕ ನ್ಯಾಯ ಕಲ್ಪಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ದ್ರೋಹ ಎಸಗುತ್ತಿದೆ’ ಎಂದು ಹೇಳಿದರು.‌
ಆರ್‌ಪಿಐ ರಾಜ್ಯ ಮುಖಂಡ ಜಿ.ಸಿ.ವೆಂಕಟರಮಣಪ್ಪ ಮಾತನಾಡಿ, ‘ದುಂಡು ಮೇಜಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ವಿಧಾನಸೌಧಕ್ಕೆ ತಲುಪಬೇಕು. ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿದರೆ ಮಾತ್ರ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಹೇಳಿದರು.
ಮೀಸಲು ಕ್ಷೇತ್ರದಿಂದ ಗೆದ್ದ ಶಾಸಕರು ಸಮುದಾಯದ ಹಿತವನ್ನು ರಕ್ಷಿಸಲು ಮುಂದಾಗದಿದ್ದರೆ ಅವರ ವಿರುದ್ಧ ಹೋರಾಟ ನಡೆಸುತ್ತೇವೆ –ಪಾವಗಡ ಶ್ರೀರಾಮ್‌ ರಾಜ್ಯ ಅಧ್ಯಕ್ಷ ಮಾದಿಗ ದಂಡೋರ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.