ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ‘ಪದ್ಮಶ್ರೀ’ ಪುರಸ್ಕೃತ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆಬಾವಿ ಕೊರೆಯಲು ಭೂಗರ್ಭ ವಿಜ್ಞಾನಿಗಳು ಭಾನುವಾರ ಸೂಕ್ತ ಜಾಗ (ಪಾಯಿಂಟ್) ಗುರುತಿಸಿದರು. | |
ಆದಿ ಜಾಂಬವ ನಿಗಮ ಕಳೆದ ವರ್ಷ ಮುನಿವೆಂಕಟಪ್ಪ ಅವರಿಗೆ ಕೊಳವೆಬಾವಿ ಮಂಜೂರು ಮಾಡಿತ್ತು. ಆದರೆ ಒಂದೂವರೆ ವರ್ಷವಾದರೂ ಅವರಿಗೆ ಈ ಸೌಲಭ್ಯ ದೊರೆತಿರಲಿಲ್ಲ. ಈ ಹಿರಿಯ ಕಲಾವಿದ ನಿಗಮದ ಕಚೇರಿಗೆ ಅಲೆಯುತ್ತಲೇ ಇದ್ದರು. ಈ ಬಗ್ಗೆ ಗಂಗಾ ಕಲ್ಯಾಣಕ್ಕೆ ‘ತಬರ’ನಾದ ಕಲಾವಿದ ಎಂದು ಭಾನುವಾರ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. | |
ವರದಿಯಿಂದ ಎಚ್ಚೆತ್ತುಕೊಂಡ ಆದಿ ಜಾಂಬವ ನಿಗಮದ ಅಧಿಕಾರಿಗಳು ಭಾನುವಾರ ಬೆಳಗ್ಗೆಯೇ ಮುನಿವೆಂಕಟಪ್ಪ ಅವರ ಮನೆಗೆ ಧಾವಿಸಿ ಮಾಹಿತಿ ಪಡೆದರು. ಮಧ್ಯಾಹ್ನದ ವೇಳೆಗೆ ಭೂಗರ್ಭ ವಿಜ್ಞಾನಿಗಳನ್ನು ಕರೆಯಿಸಿ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಲು ಸೂಕ್ತ ಜಾಗ (ಪಾಯಿಂಟ್) ಗುರುತಿಸಿದರು. | |
‘ಭಾನುವಾರ ರಾತ್ರಿ ಅಥವಾ ಸೋಮವಾರ ಕೊಳವೆಬಾವಿ ಕೊರೆಸಲು ಲಾರಿ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಮುನಿವೆಂಕಟಪ್ಪ ಅವರ ಪುತ್ರ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು. | |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. | |