NLP_Assignment_1 / Prajavani /'ಮೈದಾನ್' ಸಿನಿಮಾ ಪ್ರದರ್ಶನ ನಿರ್ಬಂಧದ ಆದೇಶಕ್ಕೆ ಹೈಕೋರ್ಟ್ ತಡೆ.txt
CoolCoder44's picture
Upload folder using huggingface_hub
2e70779 verified
raw
history blame
4 kB
ಬೆಂಗಳೂರು: ಕೃತಿಚೌರ್ಯದ ಆರೋಪದಡಿ, ಬಾಲಿವುಡ್ ನಟ ಅಜಯ್ ದೇವಗನ್ ಪ್ರಧಾನ ಭೂಮಿಕೆಯಲ್ಲಿರುವ "ಮೈದಾನ್" ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಿದ್ದ ಮೈಸೂರು ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಇದರಿಂದ ಸಿನಿಮಾ ಬಿಡುಗಡೆಗೆ ಇದ್ದ ವಿಘ್ನ ನಿವಾರಣೆಯಾದಂತಾಗಿದೆ.
ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಶೇಷ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಪುರಸ್ಕರಿಸಿದೆ.
ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸಜನ್ ಪೂವಯ್ಯ, “ಚಿತ್ರದ ನಿರ್ಮಾಣ ಕಾರ್ಯ 2019ರಲ್ಲೇ ಆರಂಭವಾಗಿತ್ತು. ಆದರೆ, ಕೋವಿಡ್ ಪರಿಣಾಮ ವಿಳಂಬವಾಗಿತ್ತು. ಆದರೆ, ಈಗ ಪ್ರತಿಬಂಧಕ ಆದೇಶ ನೀಡಿರುವ ಕಾರಣ, ಜಗತ್ತಿನಾದ್ಯಂತ ಮತ್ತು ಒಟಿಟಿ ವೇದಿಕೆಗಳಲ್ಲಿ "ಮೈದಾನ್" ಸಿನಿಮಾ ಬಿಡುಗಡೆಯಾಗಲು ತೊಡಕುಂಟಾಗಿದೆ. ಅರ್ಜಿದಾರರಿಗೆ ಅಪಾರ ಹಾನಿಯಾಗಿದೆ” ಎಂದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತು. ಪ್ರತಿವಾದಿ ಸಿ.ಆರ್.ಅನಿಲ್ ಕುಮಾರ್ ಮತ್ತು ಇತರರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು.
ಪ್ರಕರಣವೇನು?: ಭಾರತೀಯ ಫುಟ್ಬಾಲ್‌ಗೆ ಸಂಬಂಧಿಸಿದಂತೆ ನಾನು ಬರೆದಿದ್ದ ಕಥೆಯ ಮೂಲ ಸಂಭಾಷಣೆ ಮತ್ತು ಚಿತ್ರಕಥೆ ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ" ಎಂದು ಆರೋಪಿಸಿ ಅನಿಲ್ ಕುಮಾರ್ ಮೈಸೂರು ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದರು.
ಈ ದಾವೆ ವಿಚಾರಣೆ ನಡೆಸಿದ್ದ, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ ಅವರು, ಮೈದಾನ್ ಚಿತ್ರವನ್ನು ಯಾವುದೇ ಭಾಷೆ ಅಥವಾ ಒಟಿಟಿ, ಎಲೆಕ್ಟ್ರಾನಿಕ್ಸ್ ಮತ್ತು ಮ್ಯಾಗ್ನೆಟಿಕ್ ರೂಪದಲ್ಲಿ ಬಿಡುಗಡೆ ಮಾಡಲು ನಿರ್ಬಂಧಿಸಲಾಗಿದೆ" ಎಂದು ಇದೇ 8ರಂದು ಆದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.