NLP_Assignment_1 / Prajavani /'ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ' ಕಿಡಿ ಹಚ್ಚಿದ HDK ಹೇಳಿಕೆ.txt
CoolCoder44's picture
Upload folder using huggingface_hub
2e70779 verified
raw
history blame
12.6 kB
‘ಗ್ಯಾರಂಟಿಗಳಿಂದ ಹಳ್ಳಿಗಳ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ’ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಹಲವರು ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆಯರು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ
ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ಹಾದಿ ತಪ್ಪಿದ್ದಾರೆ ಎಂದು ಕುಮಾರಣ್ಣ ಹೇಳಿಕೆ ನೀಡಿದ್ದಾರೆ. ನೀವು ದಾರಿ ತಪ್ಪಿ ಎಷ್ಟು ವರ್ಷವಾಯಿತು? ಎಲ್ಲಿ ಓಡಾಡಿಕೊಂಡಿದ್ದೀರಿ ಇನ್ನೂ ಒಂದ್ಕಡೆ ಸೇರಿಕೊಂಡಿಲ್ಲವಲ್ಲ? -ಪ್ರಕಾಶ್‌ ರಾಜ್‌ ಚಿತ್ರ ನಟ
ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ದಾರಿ ತಪ್ಪಿದ್ದಾರೆ. ಹೀಗಾಗಿ ಅವರು ಉಳಿದವರೂ ದಾರಿ ತಪ್ಪಿದ್ದಾಗಿ ಹೇಳಿಕೆ ನೀಡಿದ್ದಾರೆ
-ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ
‘ಕ್ಲಬ್‌ಗೆ ಹೋಗುವ ಮಹಿಳೆಯರಿಗೆ ‘ಗ್ಯಾರಂಟಿ’ ಯೋಜನೆಗಳನ್ನು ನೀಡುತ್ತಿಲ್ಲ. ದುಡಿಯುವ ಮಹಿಳೆಯರಿಗೆ ನೀಡುತ್ತಿದ್ದೇವೆ. ದುಡಿಯುವ ವರ್ಗದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದಿರುವುದು ಖಂಡನೀಯ.
-ಕೃಷ್ಣ ಬೈರೇಗೌಡ ಕಂದಾಯ ಸಚಿವ
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲರಾಗುವುದನ್ನು ಕಂಡು ಸಹಿಸಿಕೊಳ್ಳಲಾಗದ ಎಚ್‌.ಡಿ. ಕುಮಾರಸ್ವಾಮಿ ಹಳ್ಳಿಯ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ
-ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಾಂಗ್ರೆಸ್‌ ಉಸ್ತುವಾರಿ
ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ಬೇರೆ ಬೇರೆ ಅರ್ಥಗಳಲ್ಲಿ ಉಲ್ಲೇಖಿಸಿ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಕ್ಷಮೆಯಾಚಿಸುವ ಮೂಲಕ ಘನತೆಯನ್ನು ಉಳಿಸಿಕೊಳ್ಳಬೇಕು
-ಮುಖ್ಯಮಂತ್ರಿ ಚಂದ್ರು ರಾಜ್ಯಾಧ್ಯಕ್ಷ ಆಮ್ ಆದ್ಮಿ ಪಾರ್ಟಿ
ಹೆಣ್ಣುಮಕ್ಕಳ ಕುರಿತ ಮನಃಸ್ಥಿತಿ ಬಯಲಾಗಿದೆ: ಸಿದ್ದರಾಮಯ್ಯ
ಮಡಿಕೇರಿ: ‘ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಿಕ್ಕು ತಪ್ಪಿದ್ದಾರೆ ಎನ್ನುವ ಮೂಲಕ ಎಚ್‌.ಡಿ. ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳ ಬಗ್ಗೆ ಅವರಿಗಿರುವ ಭಾವನೆಯನ್ನು ಹೊರ ಹಾಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ‘ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ? ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಮನಃಸ್ಥಿತಿ ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಈಗಲಾದರೂ ಅರ್ಥವಾಯಿತಾ?  ಆ ರೀತಿ ಮಾತನಾಡಿದರೆ ಜನರು ಸಹಿಸಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು. ದಂಗೆ ಏಳಬಹುದು: ‘ಪ್ರಜಾಧ್ವನಿ –2’ ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ನನಗೆ ಕುಮಾರಸ್ವಾಮಿಯವರ ಕ್ಷಮೆ ಬೇಕಿಲ್ಲ. ಇಡೀ ಮನುಕುಲಕ್ಕೆ ಅಪಮಾನ ಮಾಡಿದ ಅವರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸ್ಮೃತಿ ಇರಾನಿ ನಿರ್ಮಲಾ ಸೀತಾರಾಮನ್ ಖುದ್ದು ಹೇಳಿಕೆ ನೀಡಬೇಕು’ ಎಂದು ಒತ್ತಾಯಿಸಿದರು. ‘ಕುಮಾರಸ್ವಾಮಿ ಹೇಳಿಕೆ ವಿರೋಧಿಸಿ ಹೆಣ್ಣುಮಕ್ಕಳು ದಂಗೆ ಏಳುವ ಪರಿಸ್ಥಿತಿ ಬರಬಹುದು. ನಾನು ಹೋರಾಟವನ್ನು ತಡೆಯುವುದಿಲ್ಲ. ಆದರೆ ಹೋರಾಟ ಗೌರವಯುತವಾಗಿರಬೇಕು’ ಎಂದು ಹೇಳಿದರು.
ಹತಾಶೆಯಿಂದ ಕಾಂಗ್ರೆಸ್‌ ಹೇಳಿಕೆ ತಿರುಚಿದೆ ಎಚ್‌ಡಿಕೆ
ಬೆಂಗಳೂರು: ‘ಗ್ಯಾರಂಟಿಗಳ ಹೆಸರಿನಲ್ಲಿ ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ನಾನು ಹೇಳಿದ್ದೆ. ಆದರೆ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌ ಪಕ್ಷದವರು ಅದನ್ನು ತಿರುಚಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ದೂರಿದರು. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು ‘ಮಹಿಳೆಯರನ್ನು ಅವಮಾನಿಸುವಂತಹ ಮಾತನ್ನು ನಾನು ಹೇಳಿಯೇ ಇಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಮುಗ್ಧ ಜನರು ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ. ಎಚ್ಚರಿಕೆಯಿಂದ ಇರಿ ಎಂಬುದು ನನ್ನ ಮಾತು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಅದಕ್ಕಾಗಿ ನನ್ನ ಹೇಳಿಕೆಯನ್ನು ತಿರುಚಿ ಲಾಭ ಪಡೆಯಲು ಹೊರಟಿದ್ದಾರೆ’ ಎಂದರು. ‘ನಾನಾಗಲಿ ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಕಷ್ಟ ಹೇಳಿಕೊಂಡು ಬರುವ ಮಹಿಳೆಯರಿಗೆ ನೆರವಾಗಿದ್ದೇನೆ. ಅಧಿಕಾರದಲ್ಲಿದ್ದಾಗ ಮಹಿಳೆಯರ ಪರವಾದ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ’ ಎಂದು ಹೇಳಿದರು. ‘ಮಹಿಳೆಯರ ಕೂಗಿಗೆ ಸ್ಪಂದಿಸಿ ಸಾರಾಯಿ ಲಾಟರಿ ನಿಷೇಧಿಸಿದ್ದೇನೆ. ಇದು ಮಹಿಳೆಯರಿಗೆ ನಾನು ನೀಡಿದ ಗೌರವ. ಯಾವತ್ತೂ ಮಹಿಳೆಯರಿಗೆ ಅವಮಾನ ಆಗುವಂತೆ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೇ ತಪ್ಪಾಗಿ ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ತಪ್ಪು ಹೊರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.
ಎಚ್‌ಡಿಕೆ ವಿರುದ್ಧ ಗೋಬ್ಯಾಕ್‌ ಚಳವಳಿ
ಮಂಡ್ಯ: ‘ಜೆಡಿಎಸ್‌– ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್‌ ಮಹಿಳಾ ಘಟಕದ ಕಾರ್ಯಕರ್ತೆಯರು ನಗರದ ಜೆ.ಸಿ.ವೃತ್ತದಲ್ಲಿ ಭಾನುವಾರ ‘ಗೋಬ್ಯಾಕ್‌ ಕುಮಾರಸ್ವಾಮಿ’ ಚಳವಳಿ ನಡೆಸಿದರು. ‘ಮಹಿಳೆಯರ ವಿರುದ್ಧ ಮಾತನಾಡಿರುವ ಅವರು ಕ್ಷೇತ್ರಕ್ಕೆ ಕಾಲಿಡಬಾರದು’ ಎಂದು ಎಚ್ಚರಿಕೆ ನೀಡಿದರು. ‘ಹಿಂದೆಯೂ ಅವರು ಹಲವು ಬಾರಿ ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಸುಮಲತಾ ವಿರುದ್ಧ ಕೆಟ್ಟದಾಗಿ ಮಾತನಾಡಿದ ಕಾರಣದಿಂದ ಅವರ ಪುತ್ರ ಸೋಲಬೇಕಾಯಿತು. ಬೆಳಗಾವಿಯ ರೈತ ಮಹಿಳೆಯನ್ನು ‘ಇಷ್ಟು ದಿನ ಎಲ್ಲಿ ಮಲಗಿದ್ದೆಯಮ್ಮ’ ಎಂದು ಪ್ರಶ್ನಿಸಿದ್ದರು. ಇದು ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ಕೂಡಲೇ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘಟನೆ ಆಕ್ರೋಶ
‘ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂದು ಮಾಜಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ. ‘ಚುನಾವಣೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವ ಭರಾಟೆಯಲ್ಲಿ ನಾಲಿಗೆ ಹರಿಬಿಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಹಿಳೆಯರ ಕುರಿತು ಕನಿಷ್ಠ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ರಾಜ್ಯದ ಮಹಿಳೆಯರಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು’ ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.