NLP_Assignment_1 / Prajavani /'ರಾಜಭವನ ವಿರುದ್ಧ ‘ಸರ್ಕಾರಿ’ ಹೋರಾಟ'.txt
CoolCoder44's picture
Upload folder using huggingface_hub
2e70779 verified
raw
history blame
7.35 kB
ಬೆಂಗಳೂರು: ತಮ್ಮ ಮುಂದೆ ಬಾಕಿ ಇರುವ ಇತರ ಪ್ರಕರಣಗಳಲ್ಲೂ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಿ ಇದೇ 31ರಂದು ರಾಜಭವನ ಚಲೋ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುವ ಹಂತದಲ್ಲಿ ಎದಿರೇಟು ನೀಡಿದ್ದ ಸರ್ಕಾರ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ರಾಜಭವನದ ವಿರುದ್ಧ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಅಣಿಯಾಗಿದೆ. 
‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಬೇಕು’ ಎಂದು ಮನವಿ ಮಾಡಲು 31ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿಯಿಂದ ರಾಜಭವನಕ್ಕೆ ಹೋಗುತ್ತೇವೆ. ಮುಖ್ಯಮಂತ್ರಿ, ಎಲ್ಲ ಸಚಿವರು, ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರು ಭಾಗವಹಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಶಿವಕುಮಾರ್, ‘ಕುಮಾರಸ್ವಾಮಿ ವಿರುದ್ಧದ ಗಣಿಗಾರಿಕೆಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿದ ಪ್ರಕರಣದಲ್ಲಿ ಲೋಕಾಯುಕ್ತ 10 ವರ್ಷ ತನಿಖೆ ನಡೆಸಿ ವಿಚಾರಣೆಗೆ ಅನುಮತಿ ಕೋರಿದ್ದರೂ ರಾಜ್ಯಪಾಲರು ಕೊಟ್ಟಿಲ್ಲ. ಕುಮಾರಸ್ವಾಮಿ ಅವರು ಎಂದಿಗೂ ನಕಲಿ ಕೆಲಸ ಮಾಡುವುದಿಲ್ಲ, ಕೇವಲ ಅಸಲಿ ಕೆಲಸ ಮಾಡುವವರು’ ಎಂದು ವ್ಯಂಗ್ಯವಾಡಿದರು.
‘ಬೇರೆ ನಾಯಕರ ವಿರುದ್ಧ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ರಾಜ್ಯಪಾಲರು ನೀಡಿಲ್ಲ. ಆದರೆ, ಯಾವುದೇ ಪ್ರಾಥಮಿಕ ತನಿಖೆ ನಡೆಯದಿದ್ದರೂ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಈ ವಿಚಾರ ಸದ್ಯ ನ್ಯಾಯಾಲಯದಲ್ಲಿದೆ. ಹೀಗಾಗಿ, ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’ ಎಂದರು.
‘ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರಿಂದ ನ್ಯಾಯ ನಿರೀಕ್ಷಿಸಿ ಮತ್ತೆ ಮನವಿ ಸಲ್ಲಿಸುತ್ತೀರಾ’ ಎಂದು ಕೇಳಿದ ಪ್ರಶ್ನೆಗೆ, ‘ತಮ್ಮಿಂದ ಅನ್ಯಾಯ ಆಗಬಾರದು ಎಂಬ ಬುದ್ಧಿಯನ್ನು ಭಗವಂತ ರಾಜ್ಯಪಾಲರಿಗೆ ಕರುಣಿಸಬಹುದು. ಆ ಮೂಲಕ, ತಾವು ಕೊಟ್ಟಿರುವ ಅನುಮತಿಯನ್ನು ಅವರು ಹಿಂಪಡೆಯಬಹುದೆಂದು ನಂಬಿದ್ದೇವೆ’ ಎಂದರು.
‘ಗಣಿಗಾರಿಕೆಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದ ಪ್ರಕರಣದಲ್ಲಿ ನಾನು ಯಾರಿಗೂ ಶಿಫಾರಸು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ, ನಿಮ್ಮ ಸಹಿಯನ್ನು ಬೇರೆಯವರು ನಕಲು ಮಾಡಿದ್ದರೆ ಯಾಕಪ್ಪ ದೂರು ನೀಡಿಲ್ಲ? ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರ ಸಹಿ ನಕಲು ಮಾಡಿದವರ ಮತ್ತು ನಕಲು ಸಹಿ ಆಧಾರದಲ್ಲಿ ಗಣಿಗಾರಿಕೆಗೆ ಜಮೀನು ಮಂಜೂರು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬಹುದಲ್ಲವೇ’ ಎಂದು ಕುಮಾರಸ್ವಾಮಿ ಅವರನ್ನು ಶಿವಕುಮಾರ್‌ ಪ್ರಶ್ನಿಸಿದರು.
‘ಗಣಿಗಾರಿಕೆಗೆ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಜಮೀನು ಮಂಜೂರು ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕುಮಾರಸ್ವಾಮಿ ಜಾಮೀನು ಅರ್ಜಿ ಹಾಕಿಕೊಳ್ಳುತ್ತಾರೆ. ಪ್ರಮಾಣಪತ್ರದಲ್ಲಿ ಅವರು ಈ ಜಮೀನನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಮಂಜೂರು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲೇ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣದ ತನಿಖೆ ಬಾಕಿಯಿದೆ ಎಂದೂ ಒಪ್ಪಿಕೊಂಡಿದ್ದಾರೆ. ‌ನಿಮ್ಮ ಸಹಿ ಅಲ್ಲದಿದ್ದರೆ, ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಆ ಆದೇಶವನ್ನು ನೀವೇ ನೀಡಿರುವುದಾಗಿ ಒಪ್ಪಿಕೊಂಡಿರುವುದು ಏಕೆ’ ಎಂದೂ ಕೇಳಿದರು.
‘ನಿಮ್ಮ ಸಹಿ ಅಲ್ಲದಿದ್ದರೆ ಈಗಲಾದರೂ ದೂರು ನೀಡಿ. ನೀವು ದೊಡ್ಡ ಸರ್ಕಾರದ ಭಾಗವಾಗಿದ್ದೀರಿ. ಆದರೂ, ಯಾಕೆ ದೂರು ನೀಡುತ್ತಿಲ್ಲ’ ಎಂದೂ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.